ದ ಗ್ರೇಟ್ ಬ್ರಿಟನ್ ನಲ್ಲಿ 1840 ರಲ್ಲಿ ಶುರುವಾದ ಕೈಗಾರಿಕಾ ಕ್ರಾಂತಿಯು ಜಾಗತಿಕ ಮಟ್ಟದಲ್ಲಿ ಬೃಹತ್ ಸಂಚಲನವನ್ನು ಸೃಷ್ಟಿಸಿತು. ಮಾನವನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಕ್ರಾಂತಿಯು ಮಾನವನ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಸಾರಿಗೆ ಇವುಗಳನ್ನೇ ಮುಖ್ಯವಾಗಿಸಿಕೊಂಡು ಕಾರ್ಯಗತವಾಗಿದ್ದು. ಕೃಷಿಗೆ ಬೇಕಾಗಿರುವ ಹೊಸ ರಾಸಾಯನಿಕಗಳ ಉತ್ಪಾದನೆ, ಕಬ್ಬಿಣದ ಉತ್ಪಾದನೆ, ನೀರಿನ ಶಕ್ತಿ ಮತ್ತು ಉಗಿಶಕ್ತಿಯ ಬಳಕೆ ಯಂತ್ರೋಪಕರಣಗಳ, ಅಭಿವೃದ್ಧಿ ಮತ್ತು ಯಾಂತ್ರಿಕೃತ ಕಾರ್ಖಾನೆ ವ್ಯವಸ್ಥೆ ಏರಿಕೆ ಸೇರಿವೆ. ಜವಳಿ ಉದ್ಯಮವು ಆಧುನಿಕತೆ, ಉತ್ಪಾದನೆ, ಹೂಡಿಕೆ, ವ್ಯಾಪಾರ ಮತ್ತು ಅಭಿವೃದ್ಧಿಗೆ ಪ್ರಪಂಚದಾದ್ಯಂತ ಶುರುವಾಗಲು ನಾಂದಿಯಾಯಿತು.
ಭಾರತವು ಕೂಡ ಈ ಕೈಗಾರಿಕಾ ಕ್ರಾಂತಿಯಿಂದ ಹೊರತಾಗಿಲ್ಲ. 19ನೇ ಶತಮಾನದಲ್ಲಿ ಬರಗಾಲ, ಅನಕ್ಷರತೆ, ಬ್ರಿಟಿಷ್ ಆಳ್ವಿಕೆಯಿಂದ ಉಂಟಾದ ಆರ್ಥಿಕ ಸ್ಥಗಿತದ ಕಾರಣ ಮೊದಮೊದಲು ಅಷ್ಟಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದ ನಾವು ಸ್ವತಂತ್ರ ನಂತರ ದೇಶವು ನಿಧಾನಗತಿಯಲ್ಲಾದರೂ, ಈಗ ಕಡಿವಾಣವಿಲ್ಲದ ಅಭಿವೃದ್ಧಿಯನ್ನು ಹೊಂದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಯಾವ ಅಭಿವೃದ್ಧಿ ಇಲ್ಲವಾದರೂ,ವಾತಾವರಣದ ಗಾಳಿ ಕೇವಲ ವಿವಿಧ ಅನಿಲಗಳನ್ನು ಮಾತ್ರ ಹೊಂದಿತ್ತು. ಆದರೆ ನಂತರದಲ್ಲಿ ಕೈಗಾರಿಕೆಗಳಿಂದ, ವಾಹನಗಳ ಅತ್ಯಧಿಕ ಬಳಕೆಯಿಂದ ಗಾಳಿಯಲ್ಲಿ ಅನಿಲಗಳ ಜೊತೆಗೆ ವಿಷ ಅನಿಲಗಳನ್ನು ಹೊಂದಿದೆ. 1980ರ ದಶಕದಲ್ಲಿ ಅತಿಯಾದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಪಂಚದ ವಿವಿಧ ಸ್ಥಳಗಳಲ್ಲಿ ಪರಿಸರವು ಹಾಳಾಗುವುದರ ಜೊತೆಗೆ ಮಾನವನ್ನು ಜೀವಿಸಲು ಬೇಕಾಗಿರುವ ಯೋಗ್ಯತೆಯನ್ನು ಕಳೆದುಕೊಳ್ಳತೊಡಗಿತು. ಕೈಗಾರಿಕಾ ಕ್ರಾಂತಿ ಮತ್ತು ಸಾರಿಗೆಯು ಅನೇಕ ಸಕಾರಾತ್ಮಕ ಪರಿಣಾಮಗಳ ಜೊತೆಗೆ ಪರಿಸರದ ಮೇಲೆ ಬೀರಿದ ಹಾನಿಯು ಅತ್ಯಂತ ದೊಡ್ಡ ನಕಾರಾತ್ಮಕ ಪರಿಣಾಮಗಳಲ್ಲಿ ಒಂದಾಗಿದೆ. ಇದು ಜೀವದ ಜೊತೆಗೆ ಆಡುವ ಅಭಿವೃದ್ಧಿಯ ಆಟವಾಗಿದೆ.
ಕೈಗಾರಿಕೆಗಳಿಂದ ಬರುವ ದಟ್ಟ ಹೊಗೆಯು ಒಂದು ಬಗೆಯ ಮಂದ ವಾತಾವರಣವನ್ನು ಸೃಷ್ಟಿಸುತ್ತದೆ. ಇದರಲ್ಲಿ ಕಾರ್ಬನ್ ಡಯಾಕ್ಸೈಡ್, ಕಾರ್ಬನ್ಮೋಕ್ಸಿಡ್, ಮೀಥೇನ್, ಸಲ್ಫರ್ ಆಕ್ಸೈಡ್, ಅಮೋನಿಯಂ, ಕ್ಲೋರಿನ್, ನೈಟ್ರೋಜನ್ ಆಕ್ಸೈಡ್, ಆರ್ಗನ್ ನಂತಹ ವಿಷಕಾರಕ ಅನಿಲಗಳನ್ನು ಒಳಗೊಂಡಿರುತ್ತದೆ. ಈ ಅನಿಲಗಳು ವಾತಾವರಣದ ತೇವಾಂಶವನ್ನು ಹೀರಿಕೊಂಡು ತಾಪವನ್ನು ಹೆಚ್ಚಿಸುತ್ತವೆ. ಹೀಗೆ ವಾತಾವರಣದ ಏರಿಕೆಯಾದ ತಾಪಮಾನವು "ಹಸಿರು ಮನೆ ಪರಿಣಾಮ"ವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ O3 ಅಂದರೆ ಓಝೋನ್ ಪದರವು ಕ್ಷೀಣವಾಗ ತೊಡಗುತ್ತದೆ. ಭೂಮಿಯ ಮೇಲ್ಪದರೂ ಹಾನಿಗೊಂಡಾಗ ಸೂರ್ಯನ ಪ್ರಖರ ನೆರಳಾತೀತ ವಿಕಿರಣಗಳು ಪರಿಸರ ಮತ್ತು ಪ್ರಾಣಿಗಳಿಗೆ ಇನ್ನಷ್ಟು ಹಾನಿ ಆಗುವಂತೆ ಮಾಡುತ್ತವೆ. CFC's ಹೊರ ಸೂಸುವ, ಎಸಿ, ರೆಫ್ರಿಜರೇಟರ್ಗಳ ಬಳಕೆ, ಕೃಷಿ ರಾಸಾಯನಿಕಗಳ ಬಳಕೆ ಓಝೋನ್ ಪದರವು ಹಾಳಾಗಲು ಮತ್ತೊಂದಿಷ್ಟು ಕಾರಣಗಳಾಗಿವೆ.
ಅತ್ಯಧಿಕ ರಾಸಾಯನಿಕ ಬಳಕೆಯಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ನಿಸ್ಸಾರವಾಗುತ್ತಿದೆ. ತಿನ್ನುವ ಅನ್ನಕ್ಕೆ ವಿಷ ಹಾಕಿ ಬೆಳೆಸುತ್ತಿದ್ದೇವೆ. ಕುಡಿಯುವ ನೀರು ಕೂಡ ಕಾರ್ಖಾನೆಗಳ ತ್ಯಾಜ್ಯವನ್ನು ಹೊತ್ತುಕೊಂಡು, ಹೊಂದಿಕೊಂಡು ಸಾಗುತ್ತಿದೆ. ಕುಡಿಯುವ ನೀರು, ಉಳುವ ಭೂಮಿ, ಉಸಿರಾಡುವ ಗಾಳಿ ಎಲ್ಲವೂ ವಿಷವಾದರೆ ಬದುಕುವುದು ಇನ್ನೆಲ್ಲಿ, ಬಲಿ ತೆಗೆದುಕೊಳ್ಳುವ ಈ ಬೆಳವಣಿಗೆ ಬೇಕೆ? ಇದಲ್ಲದೆ ಬೆಳವಣಿಗೆ ನೆಪದಲ್ಲಿ ಹೊಲ-ಕಾಡು ನಾಶ ಮಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ನಗರೀಕರಣ. ತ್ವರಿತ ವೇಗದಲ್ಲಿ ಸಾಗುತ್ತಿರುವ ನಮ್ಮನ್ನು ಕಾಡಿಗೆ ಹತ್ತಿರ ಮಾಡುತ್ತಿದ, ಊರಿನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಅಂದರೆ ನಾವು ಇತ್ತೀಚೆಗೆ ನೋಡಬಹುದು ಪ್ರತಿ ಊರಿನ ಕೊನೆಯ 5-6 ಕಿಲೋ ಮೀಟರ್ ನಿಂದ ಊರು ಪ್ರಾರಂಭವಾಗುತ್ತಿದೆ. ಉಳುವ ಹೊಲ-ಕಾಡನ್ನು ಫ್ಲಾಟ್ ಗಳನ್ನಾಗಿ NA ಮಾಡಿ ಹಣ ಗಳಿಸಲು ಇರುವ ಮತ್ತೊಂದು ಮಾರ್ಗವನ್ನಾಗಿಸಿ ಬಿಟ್ಟಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಒಂದೇ ಒಂದು ರಾಜಮಾರ್ಗ ಅದು ಮರು ಅರಣ್ಯೀಕರಣ. ಮರು ಅರಣ್ಯೀಕರಣವೆಂದರೆ ನಾಶವಾದ ಕಾಡನ್ನು ಅಲ್ಲಿ ಮರಗಿಡಗಳನ್ನು ನೆಟ್ಟು ಬೆಳೆಸುವುದು. ಮರು ಅರಣ್ಯೀಕರಣದಿಂದಾಗಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಂದರೆ ಹಸಿರು ಮನೆ ಪರಿಣಾಮವನ್ನು ತಪ್ಪಿಸಬಹುದು, ಓಝೋನ್ ಪದರದ ಪುನರ್ ನಿರ್ಮಾಣ, ಮಣ್ಣಿನ ಸವಕಳಿ, ನೀರಿನ ಕೊರತೆ, ಅಂತರ್ಜಲ ಹೆಚ್ಚಿಸುವಿಕೆ, ಶುದ್ಧವಾದ ಗಾಳಿ ಮುಂತಾದ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಭೂಮಿಯ ಮೇಲೆ ಈ ಸಮಸ್ಯೆಗಳು ಹೆಚ್ಚಾದಾಗ ದೇವರು ಭೂಮಿಯ ತಾಪಮಾನವನ್ನು, ಭೂಮಿಯ ಪರಿಸ್ಥಿತಿಯನ್ನು ನೋಡಿ ಕೆಲವು ದೂತರನ್ನು ಕಳಿಸಿದರೂ ಎಂಬಂತೆ ಈ ಮಹಾನುಭಾವರು ಕಾರ್ಯವನ್ನು ಮಾಡಿದ್ದಾರೆ. ಇವರು ಭೂಮಿಯ ವಿವಿಧ ಸ್ಥಳಗಳಲ್ಲಿ ಅಥವಾ ಪ್ರದೇಶಗಳಲ್ಲಿ ತಮಗೆ ದೊರಕಿರುವ ಜಾಗದಲ್ಲಿ ಇವರು ತಮ್ಮ ಸ್ವ ಇಚ್ಛೆಯಿಂದ ದೈವ ಕಾರ್ಯವೆಂಬಂತೆ ಈ ಕೆಲಸವನ್ನು ಅಂದರೆ ಮರು ಅರಣೀಕರಣವನ್ನು ಮಾಡಿದ್ದಾರೆ. ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಕೇವಲ ಹತ್ತು ಹಲವಾರು ಅಲ್ಲದೆ ಸಾವಿರ ಲಕ್ಷ ಮತ್ತು ಒಂದು ಕಾಡನ್ನೆ ಸೃಷ್ಟಿಸುವಂತಹ ಕಾಯಕವನ್ನು ತಮ್ಮ ಜವಾಬ್ದಾರಿಯಮ್ಮಂತೆ ಮಾಡಿದ್ದಾರೆ. ಇದಕ್ಕೆ ಅವರು ತಮ್ಮ ಜೀವನವನ್ನೇ ಸವಿಸಿದ್ದಾರೆ ಇವುಗಳಲ್ಲಿ ಪ್ರಮುಖರು,
ಸಾಲುಮರದ ತಿಮ್ಮಕ್ಕ- ಆಲದ ಮರದ ತಿಮ್ಮಕ್ಕ ಎಂದು ಕರೆಯಲ್ಪಡುವ ಇವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ಪರಿಸರವಾದಿ.ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕಡೂರು ನಡುವಿನ 4-5km ಹೆದ್ದಾರಿ ಯುದ್ದಕ್ಕೂ 385 ಆಲದ ಮರಗಳನ್ನು ನೆಡುವ ಅವುಗಳನ್ನು ಪೋಷಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸುಮಾರು 8000 ಮರಗಳನ್ನು ನೆಟ್ಟು ಅಲ್ಲಿಯ ಪ್ರಕೃತಿಯ ಸಮೃದ್ಧತೆಯನ್ನು ಕಾಪಾಡಿದ್ದಾರೆ. ಮರಗಳನ್ನ ತಮ್ಮ ಮಕ್ಕಳೆಂದು ತಿಳಿದು ಬೆಳೆಸಿದ್ದಾರೆ. ಇವರು ಈ ಕಾರ್ಯಕ್ಕೆ ತಮ್ಮ ಜೀವಮಾನವನ್ನೇ ಸವಿಸಿದ್ದಾರೆ.
ಜಾದವ್ ಮೂಲೆ ಪೈಯಿಂಗ್- ಪೈಯಂಗ್ ರವರು ಮಜುಲಿಯ ಪರಿಸರ ಕಾರ್ಯಕರ್ತ ಮತ್ತು ಅರಣ್ಯ ಕೆಲಸಗಾರ. ಭಾರತದ "ಅರಣ್ಯ ಮನುಷ್ಯ" ಎಂದು ಜನಪ್ರಿಯರಾಗಿದ್ದಾರೆ. ಹಲವಾರು ದಶಕಗಳ ಅವಧಿಯಲ್ಲಿ ಅವರು ಬ್ರಹ್ಮಪುತ್ರ ನದಿಯ ಮರಳುದಿಬ್ಬದ ಮೇಲೆ ಮರಗಳನ್ನು ನೆಟ್ಟು ಅದನ್ನು ಸಂರಕ್ಷಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದಾರೆ. ಅವರ ನಂತರ ಮುಲೈ ಅರಣ್ಯ ಎಂದು ಕರೆಯಲ್ಪಡುವ ಈ ಅರಣ್ಯವು ಭಾರತದ ಅಸ್ಸಾಂನ ಜೋಹರ್ ನ ಕೋಕಿಲ್ಮುಖ ಬಳಿ ಇದೆ. ಸುಮಾರು 1360 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಅವರು 16 ವರ್ಷ ಇದ್ದಾಗ ಪ್ರಾರಂಭವಾದ ಈ ಕೆಲಸ ಅವರ 47ನೇ ವಯಸ್ಸಿನಲ್ಲಿ ಅವರು ತಮ್ಮದೇ ಆದ ಅರಣ್ಯದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ತಮ್ಮ ನಿರ್ಜನ ಪ್ರದೇಶವನ್ನು ಪ್ರದೇಶವನ್ನು ಒಂದು ಅರಣ್ಯ ವಾಗಿ ಮಾರ್ಪಾಡು ಮಾಡಿದರು. ಕೇವಲ ಅರಣ್ಯವನ್ನು ಬೆಳೆಸದೆ ಅಲ್ಲಿನ ಪ್ರಾಣಿ ಪಕ್ಷಿ ಸಂಕುಲಕ್ಕೆ ಆಶ್ರಯವನ್ನು ಒದಗಿಸಿದ್ದಾರೆ.
ತುಳಸಿ ಗೌಡ- ಇವರು ಹೊನ್ನಾಳಿ ಗ್ರಾಮದ ಭಾರತೀಯ ಪರಿಸರವಾದಿ. ಇವರು 30 ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ಮತ್ತು ಅರಣ್ಯ ಇಲಾಖೆಯ ನರ್ಸರಿಗಳನ್ನು ನೋಡಿಕೊಂಡರು. ಯಾವುದೇ ಜಾತಿಯ ಮರಗಳ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇವರನ್ನು "ಅರಣ್ಯ ವಿಶ್ವಕೋಶ "ಎಂದು ಕರೆಯಲಾಗುತ್ತದೆ.
ಎಂ. ಯೋಗಿನಾಥನ್- ಇವರು "ದಿ ಟ್ರೀ ಮ್ಯಾನ್" ಎಂದೆ ಹೆಸರುವಾಸಿಯಾದವರು. ಇವರು ಒಬ್ಬ ಭಾರತೀಯ ಪರಿಸರ ಕಾರ್ಯಕರ್ತರು. ಇವರು ಕಳೆದ 28 ವರ್ಷಗಳಲ್ಲಿ 120 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಇವರು ತಮಿಳುನಾಡು ರಾಜ್ಯ ಸಾರಿಗೆ ನಿಯಮದ ಕೊಯಮುತ್ತೂರು ಬಸ್ ಕಂಡಕ್ಟರ್ ಆಗಿ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಮಾಸಿಕ ಸಂಬಳದ 40% ಸಂಬಳವನ್ನು ಸಸಿಗಳನ್ನು ಖರೀದಿಸಲು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ. ರಾಜ್ಯವನ್ನು ಪಾದಯಾತ್ರೆಯ ಮಾಡುವ ಮೂಲಕ 4,20,000 ಮರದ ಸಸಿಗಳನ್ನು ನೆಟ್ಟಿದ್ದಾರೆ.
ಸೇಬ್ಯಾಸ್ಟಿಯೋ ಸಾಲ್ಗಡು ಮತ್ತು ಲೇಲಿಯ ಡೆಲ್ಲಿಯುಜ್ ಸಾಲ್ಗಡ- ಬ್ರೆಜಿಲ್ ನ ಈ ದಂಪತಿಗಳು ನಾಶವಾಗಿದ್ದ ಅರಣ್ಯವನ್ನು ಮರು ಅರಣ್ಯೀಕರಿಸಲು, ಸತತ 20 ವರ್ಷಗಳ ಪ್ರಯತ್ನಿದಿಂದ ಪುನರ್ ನಿರ್ಮಾಣ ಮಾಡಿದರು. ಎರಡು ಮಿಲಿಯನ್ ಅಧಿಕ ಮರಗಿಡಗಳನ್ನು ನೆಟ್ಟು ಪ್ರಾಣಿ ಪಕ್ಷಿ ಸಂಕುಲಕ್ಕೆ ವಸತಿ ಮತ್ತು ಜೀವನಕ್ಕೆ ಆಸರೆಯಾದರು. ಬರಿದಾದ ಬೆಟ್ಟವನ್ನು ಅರಣ್ಯ ಸಂಪತ್ತಿನಿಂದ ಮರು ನಿರ್ಮಾಣ ಮಾಡಿದರು.
ಪಿಲಿಪೈನ್ಸ್ ನಲ್ಲಿ ಒಬ್ಬ ವ್ಯಕ್ತಿ ಸತತ 19 ವರ್ಷಗಳ ಕಾಲ ಸುಮಾರು 62,000 ಮರಗಳನ್ನು ನೆಟ್ಟು ಒಂದು ಜೋಗು ಪ್ರದೇಶವನ್ನು ಫಲವತ್ತತೆಯಾದ ಹಾಗೂ ಅಂತರ್ಜಲ ಯುಕ್ತ ಪ್ರದೇಶವನ್ನಾಗಿ ಮಾರ್ಪಾಡು ಮಾಡಿದ್ದಾನೆ.
ಹೀಗೆ ಇವರುಗಳೆಲ್ಲರಿಗೂ ಯಾವ ಅವಶ್ಯಕತೆ ಇಲ್ಲ, ಯಾವ ವೈಯಕ್ತಿಕ ಲಾಭವು ಇಲ್ಲ, ಆದರೆ ಪ್ರಕೃತಿಯ ಅಂತರಾಳವನ್ನು ಅರಿತು ಅದಕ್ಕೆ ಸ್ಪಂದಿಸಿದವರು. ಆಗುತ್ತಿರುವ ಭೂಮಿಯ ವೈಪರಿತ್ಯಗಳನ್ನು ಅರ್ಥ ಮಾಡಿಕೊಂಡವರು. ತಮ್ಮ ಜೀವನವನ್ನು ಪ್ರಕೃತಿಯ ಸೇವೆಗೆಂದು ಮುಡಿಪಾಗಿಸಿಕೊಂಡವರು. ಇವರುಗಳ ಈ ಮರ ನೆಡುವಿಕೆಯ ಕಾರ್ಯವು ಒಂದು ಪ್ರದೇಶ,ಒಂದು ಕಾಡು, ಒಂದು ಅರಣ್ಯವನ್ನು ನಿರ್ಮಿಸುದ್ದಲ್ಲದೆ ಅವರಿಂದ ಪ್ರಕೃತಿಯ ಸಮತೋಲನವು ಕಾಯ್ದುಕೊಂಡಿತು. ಇದರಿಂದ ಭೂಮಿಯ ತಾಪಮಾನ ಇಳಿಕೆ, ಅಂತರ್ಜಲ ಮರುಸೃಷ್ಟಿ, ಓಝೋನ್ ಪುನರ್ ನಿರ್ಮಾಣವು ಸಾಧ್ಯವಾಗಿದೆ. ನಾಸಾ ವರದಿಯ ಪ್ರಕಾರ 2040ರ ಹೊತ್ತಿಗೆ ಓಝೋನ್ ಪದರವು ಮರು ನಿರ್ಮಾಣಗೊಳ್ಳುತ್ತದೆ. ಅಂದರೆ ಕೈಗಾರಿಕರಣದಿಂದಾಗಿ ಪ್ರಕೃತಿಯ ನಾಶವು ಕೆಲವು ಚಳುವಳಿ, ಕಾಯಿದೆ, ನಿಯಮಗಳಿಂದಾಗಿ ಕಟ್ಟುನಿಟ್ಟಿನ ವಿಶ್ವಸಂಸ್ಥೆಯ ಪರಿಸರ ರಕ್ಷಣೆಯ ಧೋರಣೆಗಳಿಂದಾಗಿ ಹಾಗೂ ದೇವರು ಕಳಿಸಿರುವ ಇಂತಹ ದೂತರಿಂದಾಗಿ ಪ್ರಕೃತಿಯ ಸಮತೋಲನವು ಪುನರ್ ನಿರ್ಮಾವಾಗುತ್ತಿದೆ. ಇಂತಹ ಕೆಲವು ಮಹನೀಯರಿಂದ ಪ್ರಕೃತಿಯು ಸಹಜ ಸ್ಥಿತಿಗೆ ಬರುತ್ತಿದೆ. ಪ್ರಪಂಚದ ಕಾಡಿನ ಸಂಪತ್ತು ಹೆಚ್ಚಿದೆ ಅದರಲ್ಲಿ ಬಹು ಪಾಲು ಭಾರತ ಮತ್ತು ಚೀನಾದ ಮರು ಅರಣ್ಯೀಕರಣದಿಂದ ಆಗದೆ. ಸೌದಿ ಅರೇಬಿಯವು ತಮ್ಮ ಮರುಭೂಮಿಗಳಲ್ಲಿ ಮರನೆಡುವ ಮೂಲಕ ತಮ್ಮ ಭವಿಷ್ಯದ ತಲೆಮಾರಿನ ಜೀವನವನ್ನು ಪ್ರಕೃತಿಯ ಮೂಲಕ ಬದಲಿಸುತ್ತಿದ್ದಾರೆ. ಭೂಮಿ ಯಾವಾಗ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆಯೋ ಹಾಗೆಲ್ಲ ದೇವರು ಕಳಿಸಿರುವ ದೂತರಂತೆ ಬಂದ ಸಾಲುಮರದ ತಿಮ್ಮಕ್ಕ, ಜಾದವ್ ಪಾಯಂಗ್, ಎಂ. ಯೋಗಿನಾಥನ್, ಬ್ರೆಜಿಲ್ ದಂಪತಿಗಳು ಹೀಗೆ ನಮಗೆಲ್ಲ ಕಂಡು ಬಂದವರು ಆದರೆ ಕಾಣದೆ ಕೆಲಸ ಮಾಡುತ್ತಿರುವವರು ಇನ್ನು ಎಷ್ಟು ಜನವೂ? ಆದರೆ ಇದು ಅವರುಗಳ ಕೆಲಸ ಮಾತ್ರವಲ್ಲ ಪ್ರತಿಯೊಬ್ಬ ಮಾನವನ ಕೆಲಸವಾಗಿದೆ.
ಭೂಮಿಯ ಸ್ಥಿತಿಯನ್ನು ಕಂಡ ಭಗವಂತ ತನ್ನ ದೂತರನ್ನು ಕಳಿಸಿದೆನೋ ಎಂಬಂತೆ ಈ ಮಹನೀಯರು ಗಿಡ ಮರಗಳನ್ನು ನೆಟ್ಟು ಕಾಡನ್ನು ಸೃಷ್ಟಿಸಿ ಪರಿಸರದ ಸಮತೋಲನವನ್ನು ಕಾಪಾಡಿದ್ದಾರೆ. ಇದು ಕೇವಲ ಅವರದ್ದಷ್ಟೇ ಕಾರ್ಯವಲ್ಲ. ಪ್ರಕೃತಿಯ ಆಸರೆಯಲ್ಲಿ ಬದುಕುವ ಪ್ರತಿಯೊಬ್ಬ ಮನುಷ್ಯನ ಕಾರ್ಯವಾಗಿದೆ. ಪ್ರತಿ ಮನುಷ್ಯನು ದೇವ ದೂತರಂತೆ ಮರ ಗಿಡಗಳನ್ನು ನೆಟ್ಟು ಪ್ರಕೃತಿಯ ಸಮತೋಲನವನ್ನು ಮತ್ತು ಸಮೃದ್ಧತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
-ಸಂಗೀತಾ ಸಂತೋಷ್ ಜವಳಿ
ಗಂಗಾವತಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




