ಯಲಹಂಕ, ಬೆಂಗಳೂರು: ‘ಸಾಮಗ್ರಿಗಳ ಉತ್ಪಾದಕರು ಉತ್ಪಾದನಾ ಪ್ರಕ್ರಿಯೆಯಲ್ಲಿ ಸುಸ್ಥಿರ ಹಾಗೂ ಪರಿಸರಸ್ನೇಹಿ ಸರಂಜಾಮುಗಳನ್ನು ಮಾತ್ರ ಕಡ್ಡಾಯವಾಗಿ ಬಳಸಬೇಕೆಂದು ಸರ್ಕಾರ ವಿಧೇಯಕವನ್ನು ಹೊರಡಿಸಬೇಕು ಹಾಗೂ ಈ ವಿಧೇಯಕದ ಅನುಷ್ಠಾನದಲ್ಲಿ ಯಾವುದೇ ಲೋಪಗಳಾಗಬಾರದು ಎಂದು ಆದೇಶಿಸಬೇಕು. ಆಗ ಮಾತ್ರ ಭೂಮಿಯ ಶಾಖ ಅಥವ ಉಷ್ಣತೆಯ ಏರುವಿಕೆಯನ್ನು ನಿಯಂತ್ರಿಸ ಬಹುದು. ಇಲ್ಲದಿದ್ದರೆ ಜಾಗತಿಕ ತಾಪಮಾನದ ನಿರಂತರ ಏರುವಿಕೆಯಿಂದ ನಾವು ಕ್ರಮೇಣ ನಮ್ಮ ನೆಲೆಯಾದ ಭೂಮಿಯನ್ನೇ ಕಳೆದುಕೊಳ್ಳುತ್ತೇವೆ. ನಮ್ಮ ಉದ್ಯಮ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಸದಾ ಪರಿಸರಸ್ನೇಹಿ, ಲಘುತೂಕದ, ಪುನರ್ಬಳಕೆಗೆ ಯೋಗ್ಯವಾದ ಸರಂಜಾಮುಗಳನ್ನೇ ಕಡ್ಡಾಯವಾಗಿ ಅವಲಂಬಿಸಿ ಸಾಮಗ್ರಿಗಳನ್ನು ಉತ್ಪಾದಿಸಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿನ್ಯಾಸ ಹಾಗೂ ಉತ್ಪಾದನಾ ವಿಭಾಗದ ಪ್ರಾಧ್ಯಾಪಕ ಡಾ. ಅನಿಂದ್ಯ ದೇಬ್ ನುಡಿದರು.
ಹಾಗೆಯೇ ನಮ್ಮ ಸಂಶೋಧಕರು ಅತೀವ ಬದ್ದತೆಯಿಂದ, ಬಳಸಿದ ವಸ್ತುಗಳ ಪುನರ್ಬಳಕೆ, ವಿಷಾನಿಲಗಳ ಹೊರಸೂಸುವಿಕೆಯ ನಿಯಂತ್ರಣ, ಇಂಧನ ಸಾಮರ್ಥ್ಯದ ಹೆಚ್ಚಳ ಹಾಗೂ ವಸ್ತುಗಳ ದೀರ್ಘಕಾಲದ ಬಾಳಿಕೆಗಳ ಬಗ್ಗೆ ಅನ್ವೇಷಣೆ ಮಾಡಬೇಕು. ಇದರಿಂದ ಉದ್ಯಮ ಸಂಸ್ಥೆಗಳಿಗೂ ಸಹಾಯವಾಗುತ್ತದೆ ಹಾಗೂ ಜಗತ್ತಿನ ಸುಸ್ಥಿರತೆಗೆ ಕಾಣಿಕೆ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ ‘ಸುಧಾರಿತ ಸಾಮಗ್ರಿಗಳು ಹಾಗೂ ಸುಸ್ಥಿರ ತಂತ್ರಜ್ಞಾನ’ ಕುರಿತ ಎರಡು-ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು, ‘ಸುಧಾರಿತ ಸಾಮಗ್ರಿಗಳು ಹಾಗೂ ಸುಸ್ಥಿರ ಪರಿಸರಸ್ನೇಹಿ ತಂತ್ರಜ್ಞಾನ ಕೇವಲ ಪ್ರಸ್ತುತ ಸಂದರ್ಭದ ತುರ್ತು ಅಗತ್ಯ ಎಂದಷ್ಟೇ ಭಾವಿಸಬಾರದು. ಅದು, ಭೂಮಿ ಹಾಗೂ ಈ ಭೂಮಿಯಲ್ಲಿ ಜೀವಿಸಿರುವ, ಮುಂದೆ ಜೀವಿಸುವ ಸಕಲ ಜೀವಿಗಳ ಉತ್ತಮ ಭವಿಷ್ಯಕ್ಕಾಗಿ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಹಣವನ್ನು ಈ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಅಭಿವೃದ್ಧಿಗಳಿಗೆ ಆದ್ಯತೆಯ ಮೇರೆ ವಿನಿಯೋಗಿಸಬೇಕು. ಸುಸ್ಥಿರ ಜಗತ್ತನ್ನು ಅಪಾಯಗಳಿಂದ ಕಾಪಾಡಲು ನಮಗಿರುವುದು ಇದೊಂದೇ ಮಾರ್ಗ’ ಎಂದರು.
ಡಾ. ಸುಧೀರ್ ರೆಡ್ಡಿ ಜೆ, ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರು ಈ ಸಂದರ್ಭದಲ್ಲಿ ಮಾತನಾಡಿ, ‘ಸಂಯುಕ್ತ ರಾಷ್ಟ್ರ ಸಂಸ್ಥೆಯ 193 ಸದಸ್ಯರಾಷ್ಟ್ರಗಳ ಪೈಕಿ ಸುಸ್ಥಿರತೆಯನ್ನು ಸಾಧಿಸಿರುವ ದೇಶಗಳ ಪಟ್ಟಿಯಲ್ಲಿ ಭಾರತ 99ನೇ ಸ್ಥಾನದಲ್ಲಿದೆ. ಇದು ನಿರಾಶಾದಾಯಕ. ನಾವು ನಮ್ಮ ಸ್ಥಾನವನ್ನು ಸುಧಾರಿಸಿ ಪಟ್ಟಿಯಲ್ಲಿ ಗಣನೀಯ ಸ್ಥಾನವನ್ನು ಪಡೆದುಕೊಳ್ಳಲು ಶ್ರಮಿಸಬೇಕು. 2030ನೇ ಇಸವಿ ಇದಕ್ಕೆ ಗಡುವಾಗಬೇಕು’, ಎಂದು ಕಳಕಳಿಯ ಮನವಿ ಮಾಡಿದರು.
ಎಲ್ ಆ್ಯಂಡ್ ಟಿ ಎಡ್ಯುಟೆಕ್‍ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಕುಮಾರ್ ಎಸ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಬಾಬು ಎನ್ ಅವರು ಸಭೆಗೆ ಸಮ್ಮೇಳನದ ಧ್ಯೇಯೋದ್ದೇಶಗಳನ್ನು ಪರಿಚಯಿಸಿದರು. ದೇಶ ಹಾಗೂ ವಿದೇಶಗಳ ವಿವಿಧೆಡೆಗಳಿಂದ ಅತ್ಯುನ್ನತ ದರ್ಜೆಯ 130 ಸಂಶೋಧನಾ ಸಂಪ್ರಬಂಧಗಳನ್ನು ಸಮ್ಮೇಳನ ಸ್ವೀಕರಿಸಿದೆ, ಐದುನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಸಂಶೋಧನಾಸಕ್ತರು, ತಜ್ಞರು ಹಾಗೂ ಸಂಶೋಧನಾವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸ್ವಾಗತಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಜಿ.ಎಲ್ ಸರ್ವರನ್ನೂ ವಂದಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಸಂಶೋಧನಾ ವಿಭಾಗದ ಡೀನ್ ಡಾ. ಕಿರಣ್ ಐತಾಳ್ ಎಸ್, ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



