ಅಬ್ಬಕ್ಕ ರಾಣಿಯ ಶೌರ್ಯ, ಸ್ವಾಭಿಮಾನ ಎಲ್ಲ ಹೆಣ್ಣು ಮಕ್ಕಳಿಗೂ ಮಾದರಿ: ಎಸ್.ಎಲ್ ಭೋಜೇಗೌಡ

Chandrashekhara Kulamarva
0


ಮಂಗಳೂರು: ಶುದ್ಧ ಅಂತಃಕರಣ, ಸದುದ್ದೇಶದಿಂದ ಪ್ರೇರಿತ ಶಿಕ್ಷಣ, ಸದ್ಬುದ್ಧಿ, ಮತ್ತು ಸಂಸ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತ ನಮಗೆಲ್ಲರಿಗೂ ಸಿಕ್ಕಿತ್ತು. ಯಾವ ದೇಶದ ಉತ್ಕೃಷ್ಟ ಶಿಕ್ಷಣಕ್ಕೂ ಅದು ಕಡಿಮೆಯಿರಲಿಲ್ಲ. ಈಗಿನ ಯಾವ ಪಠ್ಯ ಪುಸ್ತಕಗಳಲ್ಲಿ ನಮ್ಮ ನೆಲಕ್ಕಾಗಿ ಹೋರಾಡಿದ ಅಬ್ಬಕ್ಕ ರಾಣಿಯ ಬಗ್ಗೆ ಉಲ್ಲೇಖಗಳೇ ಇಲ್ಲದಿರುವುದು ವಿಷಾದಕರ. ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘವು ಈ ನಿಟ್ಟಿನಲ್ಲಿ ಅಬ್ಬಕ್ಕ @ 500 ಸರಣಿ ಉಪನ್ಯಾಸ ಏರ್ಪಡಿಸಿ ಕಾಲೇಜು ಹೆಣ್ಣು ಮಕ್ಕಳಲ್ಲಿ ಸಬಲೀಕರಣ ಹಾಗೂ ನೆಲದ ಮಣ್ಣಿನ ಬಗ್ಗೆ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಶಾಸಕ ಎಸ್ ಎಲ್ ಭೋಜೇಗೌಡ ಇವರು ಅಭಿಪ್ರಾಯಪಟ್ಟರು.



ಇಂದು (ನ.07) ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗ ಮತ್ತು ನಗರದ ಕೊಡಿಯಾಲ್ ಬೈಲಿನಲ್ಲಿರುವ ಬೆಸೆಂಟ್ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಅಬ್ಬಕ್ಕ@500 ಪ್ರೇರಣಾದಾಯಿ ಉಪನ್ಯಾಸ ಸರಣಿಯ ಎಸಳು-84ನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.


ಮಂಗಳೂರಿನ ಉಳ್ಳಾಲ ಪ್ರದೇಶವನ್ನು ರಾಜಧಾನಿಯಾಗಿರಿಸಿ ತುಳುನಾಡನ್ನು ಆಳಿದ ವೀರ ರಾಣಿ ಅಬ್ಬಕ್ಕನ ಸ್ಮರಣೀಯ ಹುಟ್ಟು ಮತ್ತು ಪ್ರೇರಣಾದಾಯಿ ಬದುಕು 200 ವರ್ಷಗಳನ್ನು (1525-2025) ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ  ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು ವಿಭಾಗವು ಶೈಕ್ಷಣಿಕ ವರ್ಷ 2025 ನ್ನು ರಾಜ್ಯಾದ್ಯಂತ “ಅಬ್ಬಕ್ಕ @ 500” ಎಂಬ ಪ್ರೇರಣಾದಾಯಿ 500 ಉಪನ್ಯಾಸಗಳ ಸರಣಿಯನ್ನು ಯೋಜಿಸಿದ್ದು ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು ಹಮ್ಮಿಕೊಂಡಿರುವ 100 ಉಪನ್ಯಾಸ ಸರಣಿಯಲ್ಲಿ ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ  83 ಕಾಲೇಜುಗಳಲ್ಲಿ ವೀರ ರಾಣಿ ಅಬ್ಬಕ್ಕನ ಬಗೆಗಿನ ಉಪನ್ಯಾಸ ಸರಣಿಗಳು ಪೂರ್ಣಗೊಂಡಿದ್ದು ಸದ್ರಿ ಮಹಿಳಾ ಕಾಲೇಜಿನಲ್ಲಿ ಆಯೋಜನೆಗೊಂಡ 84ನೇ ಎಸಳು ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪ್ರೇರಣೆ ನೀಡಿತು.


ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ನಿವೃತ್ತ  ಹಿರಿಯ ಪ್ರಬಂಧಕರಾದ ಬಿ.ಕೆ ಕುಮಾರ್ ಸಂಪನ್ಮೂಲ ಭಾಷಣದಲ್ಲಿ ತುಳು ನಾಡನ್ನು ನಿರಂತರ 40 ವರ್ಷಗಳ ಕಾಲ  ಪೋರ್ಚುಗೀಸರ ಉಪಟಳದ ವಿರುದ್ಧ ಸೆಣಸಾಡಿ ಸದೆ ಬಡಿದ ವೀರ ರಾಣಿ ಅಬ್ಬಕ್ಕನ ಮಾತೃತ್ವ, ಭ್ರಾತೃತ್ವ ಮತ್ತು ಕರ್ತೃತ್ವದ ಬದುಕನ್ನು ವಿವರಿಸಿದರು. ಇಂದು ಬಂಕಿಮ ಚಂದ್ರ ಚಟರ್ಜಿಯವರು ರಚಿಸಿರುವ ವಂದೇ ಮಾತರಂ ಗೀತೆಯು ತನ್ನ  150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಹಾಡಿನ ಕೋಟಿ-ಕಂಠ ಗಾಯನವನ್ನು ನಡೆಸಲಾಯಿತು. ಬೆಸಂಟ್ WNES ಅಧ್ಯಕ್ಷ ಅಣ್ಣಪ್ಪ ನಾಯಕ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.


ಕೆ.ಆರ್.ಎಂ.ಎಸ್.ಎಸ್.ನ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಸ್ತಾವನೆಗೈದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ. ಸುಭಾಷಿಣಿ ಶ್ರೀವತ್ಸ ಅತಿಥಿಗಳನ್ನು ಪರಿಚಯಿಸಿ, ಡಾ. ಗಿರಿಯಪ್ಪ ವಂದಿಸಿದರು. ಶ್ರೀಮತಿ ಜ್ಞಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಬೆಸೆಂಟ್ ಮನೇಲ್ ಶ್ರೀನಿವಾಸ್ ನಾಯಕ್ ಆಡಳಿತ ನಿರ್ವಹಣಾ ಸಂಸ್ಥೆಯ ಆಡಳಿತ ನಿರ್ವಹಣಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, ಬೆಸೆಂಟ್ ಮಹಿಳಾ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



إرسال تعليق

0 تعليقات
إرسال تعليق (0)
To Top