ನಮ್ಮ ಮೊಮ್ಮಗ ವಿರಾಟಶರ್ವ ಹೋಗುತ್ತಿರುವುದು ವಿವೇಕಾನಂದ ಶಿಶುಮಂದಿರಕ್ಕೆ. ಆಟ, ಪಾಠ, ಪದ್ಯ, ನೃತ್ಯ, ಸಂಸ್ಕಾರ ಈ ರೀತಿಯಲ್ಲಿ ಶಾಲಾ ದಿನಗಳು ಮಕ್ಕಳಿಗೆ ಬಲು ಸಂತೋಷದಲ್ಲಿ ಕಳೆಯುತ್ತದೆ. ವರ್ಷಕ್ಕೊಮ್ಮೆ ಹೊರ ಸಂಚಾರದ ಮೂಲಕ ನಾಲ್ಕು ಗೋಡೆಗಳ ಮಧ್ಯದಿಂದ ಪ್ರಕೃತಿಯ ಕಡೆಗೆ ಭೇಟಿ ಪ್ರತಿ ವರ್ಷದ ಕಾರ್ಯಕ್ರಮಗಳಲ್ಲೊಂದು.
ಆ ಉದ್ದೇಶದಿಂದ ಈ ವರ್ಷ ಶಿಶುಮಂದಿರದ ಭೇಟಿ ನಮ್ಮ ಮರಿಕೆ ಮನೆಗೆ. ಶಾಲಾ ವಾಹನದಲ್ಲಿ ಬರುವಾಗ ಅನತಿ ದೂರದಿಂದಲೇ ಮಕ್ಕಳ ಕೇಕೆಯ ಕಲರವ ಹತ್ತಿರ ಬರುತ್ತಿರುವ ಪೂರ್ವ ಸೂಚನೆಯನ್ನು ನೀಡಿತ್ತು. ಬರೋಬ್ಬರಿ 67 ಚಿಣ್ಣರು.
ವಾಹನದಿಂದ ಇಳಿದದ್ದೆ ತಡ ಎಲ್ಲೆಂದರಲ್ಲಿ ಓಡಾಡುವುದೇ ಮಕ್ಕಳು. ಕಪ್ಪೆಯನ್ನಾದರೂ ತಕ್ಕಡಿಗೆ ಹಾಕಬಹುದೇನೋ, ಆದರೆ ಇಷ್ಟೊಂದು ಮಕ್ಕಳನ್ನು ಒಂದು ಶಿಸ್ತಿಗೆ ಒಳಪಡಿಸಿಕೊಂಡು ಯಾವುದೇ ಅಪಾಯ ಬಾರದಂತೆ ನೋಡಿಕೊಳ್ಳುವುದೆಂದರೆ ಹರಸಾಹಸವೇ. ಕುಣಿದು ಕುಪ್ಪಳಿಸುವ ತುಂಟ ಮಕ್ಕಳನ್ನು ಒಂದಿನಿತೂ ತಾಳ್ಮೆ ತಪ್ಪದೇ ತಾಯಿ ಪ್ರೀತಿಯನ್ನು ನೀಡಿ ನಗುನಗುತ್ತಲೆ ಸುಧಾರಿಸುವ ಮಾತಾಜಿಯರನ್ನು (ಶಿಕ್ಷಕಿಯರು) ಅಭಿನಂದಿಸಲೇಬೇಕು.
ತೋಟದೊಳಗೆ ಕುಣಿಯುತ್ತ ಕುಣಿಯುತ್ತ ಮುಂದೊತ್ತಿ ಗೋಶಾಲೆಯಲ್ಲಿ ಗೋಮಂದೆಯನ್ನು ಕಾಣುತ್ತಿದ್ದಂತೆ ಮಕ್ಕಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ದನಗಳನ್ನು ಮುಟ್ಟಿದರು ತಟ್ಟಿದರು ಪಕ್ಕದಲ್ಲಿದ್ದ ಹುಲ್ಲನ್ನು ನೀಡಿ ತಮ್ಮ ಸಂತೋಷವನ್ನು ಬಹುವಾಗಿ ವ್ಯಕ್ತಪಡಿಸಿದರು. ಕರುಮಂದೆಯನ್ನು ಕಂಡಾಗ ಸಂತೋಷ ಮೇರೆ ಮೀರಿತ್ತು. ಶಿಶು ಮಂದೆಯ ಮಧ್ಯಕ್ಕೆ ಕರು ಮಂದೆ ಆಗಮಿಸಿದಾಗ ಮುಟ್ಟಿ ಅಪ್ಪಿ ನೇವರಿಸಿ ಮೈಯುಜ್ಜಿ ತೃಪ್ತಿ ಪಟ್ಟುಕೊಂಡರು. ಕರುಗಳೂ ಮಕ್ಕಳೊಡನೆ ಕುಣಿದಾಡಿದವು.
ಕಾಡೆಂದರೆ ಹೇಗಿರುವುದು ಎಂಬ ಕಲ್ಪನೆಗಾಗಿ ಸಹಜ ಅರಣ್ಯದ ಒಳಗೆ ಒಮ್ಮೆ ನುಗ್ಗಿ ಹೊರ ಬಂದೆವು. ಮಕ್ಕಳ ಸಂತೋಷಕ್ಕಾಗಿ ಕಥೆ ಹೇಳುವಾಗ ಖುಷಿಪಟ್ಟರು. ಮುದ್ದು ರಾಮನ ಬಂಟ ಬುದ್ಧಿಯುಳ್ಳ ಹನುಮಂತ ಹದ್ದಾಗಿ ಹಾರಿದನು ಆಕಾಶಕೆ ಹಾಡನ್ನು ಕಥೆಯ ರೂಪದಲ್ಲಿ ವಿವರಿಸುವಾಗ ಹಾಡಿಗೆ ಧ್ವನಿ ಸೇರಿಸಿಕೊಂಡು ಬಹಳವಾಗಿ ಕಥೆಯನ್ನು ಅನುಭವಿಸಿದರು. ಕಥೆಗಳ ಮೂಲಕ ನೀತಿಯನ್ನ ಹೇಳಿದಾಗ ಮಕ್ಕಳು ಅದೆಷ್ಟು ಹಿಡಿದಿಟ್ಟುಕೊಳ್ಳಬಲ್ಲರು ಎಂಬುದನ್ನು ಇಂತಹ ಸಂದರ್ಭದಲ್ಲಿ ಕಾಣಬಹುದು. ಪಂಚತಂತ್ರದ ನೀತಿ ಕಥೆಗಳು ಆ ಕಾರಣದಿಂದಲ್ಲವೇ ಅಷ್ಟೊಂದು ವರ್ಷದಿಂದ ಇನ್ನೂ ಕೂಡ ಪ್ರಸ್ತುತ ಎನಿಸುವುದು.
ಮನೆಯವರೇ ಮಾಡಿದ ಊಟವನ್ನು ಮಕ್ಕಳೆಲ್ಲರೂ ಸವಿದು ನಂತರ ನೀಡಿದ ಹಿಮಕೆನೆ (ಮರಿಕೆ ನ್ಯಾಚುರಲ್ ಐಸ್ಕ್ರೀಮ್)ಯನ್ನು ಸವಿದು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ನಮಗೆ ವಿದಾಯ ಹೇಳಿ ಶಾಲಾ ವಾಹನ ಏರಿದರು.
ಶ್ರೀ ಕೃಷ್ಣನನ್ನು ಎಲ್ಲಿ ಕಾಣುವಿರಿ ಅಂತ ಕೇಳಿದಾಗ ಗೋ ಮಂದೆಯ ಮಧ್ಯದಲ್ಲಿ, ಗೋಪಬಾಲ ಬಾಲೆಯರ ವೃಂದದಲ್ಲಿ ಕಾಣಬಹುದಂತೆ. ಅದೇ ರೀತಿ ಇಂದು ಮುದ್ದು ಮಕ್ಕಳೊಂದಿಗೆ ನಾವೂ ಮಕ್ಕಳಾಗಿ ಶ್ರೀ ಕೃಷ್ಣನನ್ನು ಕಂಡೆವು.
- ಎ.ಪಿ. ಸದಾಶಿವ ಮರಿಕೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

