ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-9

Upayuktha
0


ಗವದ್ ಗೀತೆ ಒಂದು ವಿಶ್ವಕೋಶವಿದ್ದಂತೆ. ಅದರಲ್ಲಿ ಪ್ರಸ್ತಾಪವಾಗದ ವಿಷಯವೇ ಇಲ್ಲ. ಮನುಷ್ಯರನ್ನು ಸಾಮಾನ್ಯವಾಗಿ ಅಧ್ಯಾತ್ಮಿಕ, ಆದಿಭೌತಿಕ ಹಾಗೂ ಆದಿ ದೈವಿಕ ಎಂಬ ಮೂರು ವಿಧವಾದ ದುಃಖಗಳು ಕಾಡುತ್ತವೆ. ಇವುಗಳನ್ನು ತಾಪತ್ರಯ ಎಂದು ಕರೆಯಲಾಗಿದೆ. ಅಧ್ಯಾತ್ಮಿಕ ದುಃಖದಲ್ಲಿ ಶಾರೀರಿಕ ಹಾಗೂ ಮಾನಸಿಕ ಎಂದು ಎರಡು ವಿಧ. ವಾತ, ಪಿತ್ತ ಮತ್ತು ಕಫ ಇವುಗಳ ಏರುಪೇರಿನಿಂದ ಉಂಟಾಗುವ ಬೇನೆಗಳು ಶಾರೀರಿಕವಾಗಿವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗದಿಂದ ಪ್ರಾಪ್ತವಾಗುವ ದುಃಖವೇ ಮಾನಸಿಕ ರೋಗ. ಶರೀರಕ್ಕೆ ಬರುವ ರೋಗಕ್ಕೆ ವ್ಯಾಧಿಯಾದರೆ, ಮನಸ್ಸಿಗೆ ಬರುವ ರೋಗವನ್ನು ಆಧಿ ಎಂದು ಕರೆಯಲಾಗಿದೆ. ಒಟ್ಟಿನಲ್ಲಿ ಸಕಲ ಮಾನಸಿಕ ವ್ಯಾಧಿಗಳಿಗೆ ಮನಸ್ಸೇ ಮೂಲ ಕಾರಣ. ಆದ್ದರಿಂದಲೇ 'ಮನಃ ಏವ ಮನುಷ್ಯಾಣಾಂ, ಕಾರಣಂ, ಬಂಧ, ಮೋಕ್ಷಯೋಃ ಅಂದರೆ ಮನುಷ್ಯನ ಬಂಧನಕ್ಕೆ (ತೊಂದರೆಗೆ) ಹಾಗೂ ಮೋಕ್ಷಕ್ಕೆ (ಆ ತೊಂದರೆಯಿಂದ ಬಿಡುಗಡೆಗೆ) ಮನಸ್ಸೇ ಮೂಲ ಕಾರಣ ಎಂದು ಮನಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಿಕವಿ ವಾಲ್ಮೀಕಿಯೂ ಸಹ 'ಮನೋ ಹಿ ಹೇತು, ಸರ್ವೇಷಾಂ ಇಂದ್ರಿಯಾಣಾಂ ಪ್ರವರ್ತನೇ ಅಂದರೆ ಕಣ್ಣು ಕಿವಿ, ಮೂಗು, ನಾಲಿಗೆ, ತ್ವಚೆ ಎಂಬ ಜ್ಞಾನೇಂದ್ರೀಯಗಳು ಹಾಗೂ ವಾಕ್, ಪಾಣಿ, ಪಾದ, ಗುದ ಮತ್ತು ಉಪಸ್ಥ ಎಂಬ ಕರ್ಮೇಂದ್ರಿಯಗಳ ಪ್ರವೃತ್ತಿಗೆ (ಚಟುವಟಿಕೆಗೆ ಅಥವಾ ವ್ಯಾಪಾರಕ್ಕೆ) ಮನಸ್ಸೇ ಮೂಲ ಕಾರಣ ಎಂದು ಗುರುತಿಸಿದ್ದಾನೆ.


ಪ್ರಜ್ಞಾಪಾತಕ್ಕಿದೆ ಪರಿಹಾರ 

ಪ್ರಜ್ಞಾಪಾತ ಅಥವಾ ಬುದ್ಧಿ ನಾಶ ಆಧುನಿಕ ಜಗತ್ತನ್ನು ಪೀಡಿಸುತ್ತಿರುವ ಭೀಕರವಾದ ಮಾನಸಿಕ ವ್ಯಾಧಿ. ಬುದ್ಧಿ ಒಮ್ಮೆಲೆ ನಾಶವಾಗುವುದಿಲ್ಲ. ಅಂದರೆ ಕೆಡುವುದಿಲ್ಲ. ಮನುಷ್ಯರ ಮನಸ್ಸಿನಲ್ಲಿರುವ ಮೂರು ಗುಣಗಳು ಈ ಬುದ್ಧಿಯನ್ನು ನಿಯಂತ್ರಿಸುತ್ತದೆ. ಗೀತೆಯಲ್ಲಿ ಪ್ರಜ್ಞಾಪಾತ ಮಾನಸಿಕ ಕಾಯಿಲೆಯ ಬಗ್ಗೆ ವಸ್ತು ನಿಷ್ಠವಾದ ವಿವರಣೆ ಇದೆ. ಹೇಗೆಂದರೆ, ಧ್ಯಾಯತೋ ವಿಷಯನಾ ಪುಂಸಃ ಸಂಗಸ್ತೇ ಷೂಪಜಾಯತೇ| ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿ ಜಾಯತೇ|| ಕ್ರೋಧಾದ್ಭವತಿ ಸಂಮೋಹ ಸಂಮೋಹಾತ್ ಸ್ಮೃತಿವಿಭ್ರಮಃ| ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶತ್ ಪ್ರಣಶ್ಯತಿ||


ಅಂದರೆ, ಭೋಗಗಳ (ವಿಷಯಗಳ) ಧ್ಯಾನದಿಂದ ಅವುಗಳನ್ನು ಪಡೆಯಬೇಕು ಎಂಬ ಬುದ್ಧಿ ಜಾಗೃತವಾಗುತ್ತದೆ. ಆಗ ಉಂಟಾಗುವುದು ಕಾಮ ಅಥವಾ ಇಚ್ಛೆ ಯಾರಾದರೂ ಆ ವಸ್ತುವನ್ನು ಪಡೆಯುವುದಕ್ಕೆ ಮಧ್ಯದಲ್ಲಿ ಬಂದರೆ ಅಥವಾ ಅಡ್ಡಿಪಡಿಸಿದರೆ ಕೋಪವುಂಟಾಗುತ್ತದೆ. ಆ ಕೋಪದಿಂದ ಸಮ್ಮೋಹ ಉಂಟಾಗಿ ಯುಕ್ತಾ ಯುಕ್ತ ವಿವೇಕ ಹೊರಟು ಹೋಗುತ್ತದೆ ಹಾಗೂ ಸ್ಮರಣೆ ನಾಶವಾಗುತ್ತದೆ. ಸ್ಮೃತಿ ನಾಶದಿಂದ ಬುದ್ಧಿ ನಾಶವಾಗುತ್ತದೆ. ಸ್ಮೃತಿ ನಾಶದಿಂದ ಮನುಷ್ಯ ತಾನೂ ನಾಶವಾಗುತ್ತಾನೆ. ಇದನ್ನೇ ಪ್ರಜ್ಞಾಪಾತ ಎನ್ನುತ್ತದೆ ಗೀತೆ. ಸಮಸ್ಯೆಗೆ ಪರಿಹಾರವೂ ಗೀತೆಯಲ್ಲಿದೆ. ಹೇಗೆಂದರೆ, ರಾಗ-ದ್ವೇಷಗಳಿಂದ ಬಿಡುಗಡೆ ಹೊಂದಿ (ಪ್ರಿಯ ವಸ್ತುವಿನಲ್ಲಿ ರಾಗ ಅಥವಾ ಆಸಕ್ತಿ. ಅಪ್ರಿಯ ವಸ್ತುವಿನಲ್ಲಿ ದ್ವೇಷ) ಹಿಡಿತದಲ್ಲಿರುವ ಇಂದ್ರಿಯಗಳಿಂದ ಕೂಡಿದ ಭೋಗಗಳ ಮಧ್ಯೆ ಇದ್ದರೂ ತ್ಯಾಗಿಯಂತೆ ಇರುವ ಮನುಷ್ಯನ ಮನಸ್ಸು ಪ್ರಸನ್ನವಾಗಿಯೇ ಇರುತ್ತದೆ. ಇನ್ನು ಭಗವದ್ಗೀತೆಯಲ್ಲಿ 'ಕ್ಷುದ್ರಂ ಹೃದಯ ದೌರ್ಬಲ್ಯಂ' ಎನ್ನುವ ವಾಕ್ಯ ಬರುತ್ತದೆ. ಇದು ಮಾನಸಿಕ ಹಿಂಜರಿಕೆ ಎನ್ನುವ ಮನೋರೋಗ. ನನ್ನಿಂದ ಆಗುವುದಿಲ್ಲ. ಉಳಿದವರ ಸಂಗಡ ತುಲನೆ ಮಾಡಿದರೆ ನಾನು ಏನೂ ಅಲ್ಲ ಎನ್ನುವ ಭಾವನೆಯೇ ಮಾನಸಿಕ ಹಿಂಜರಿಕೆ. ಇದನ್ನು ಹೋಗಲಾಡಿಸಲಿಕ್ಕೆ ಉತ್ತರವೂ ಸಹ ಅದೇ ಶ್ಲೋಕದಲ್ಲಿದೆ. 'ತ್ಯಕ್ತೋತಿಷ್ಠ ಪರಂತಪ ಅಂದರೆ, ಮಾನಸಿಕ ಹಿಂಜರಿಕೆಯನ್ನು ಬಿಟ್ಟು ಮೈ ಕೊಡವಿ ಎದ್ದು ನಿಲ್ಲು. ದೃಢವಾದ ಪ್ರಯತ್ನದಿಂದ ಮುಂದುವರಿ. ಆಗ ನೀನು ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್ನಿಂದ ಹೊರ ಬರುವೆ ಎನ್ನುತ್ತದೆ.


ಭಗವದ್ಗೀತೆಯ ಕೆಲವು ಮುಖ್ಯ ಭಾಷ್ಯಗಳು 

1. ಶಂಕರಾಚಾರ್ಯ ಗೀತಾಭಾಷ್ಯ

2. ಆನಂದಗಿರಿ ಗೀತಾಭಾಷ್ಯಟೀಕಾ

3. ರಾಮಾನುಜಾಚಾರ್ಯ ಗೀತಾಭಾಷ್ಯ

4. ವೇದಾಂತದೇಶಿಕ ತಾತ್ಪರ್ಯ ಚಂದ್ರಿಕಾ 

5. ಮಧ್ವಾಚಾರ್ಯ ಗೀತಾಭಾಷ್ಯ 

6. ಜಯತೀರ್ಥ ಪ್ರಮೇಯದೀಪಿಕಾ 

7. ರಾಘವೇಂದ್ರತೀರ್ಥ ಅರ್ಥಸಂಗ್ರಹ; ಗೀತಾವಿವೃತಿ

8. ಹನೂಮತ್‌ಕೃತ ಬ್ರಹ್ಮಾನಂದಗಿರಿ 

9. ವೆಂಕಟನಾಥ ಬ್ರಹ್ಮಾನಂದಗಿರಿ

10. ವಲ್ಲಭಚಾರ್ಯ ಸತ್ತತ್ತ÷್ವದೀಪಿಕಾ 

11. ಪುರುಷೋತ್ತಮತೀರ್ಥ ಅಮೃತತರಂಗಿಣೀ

12. ನೀಲಕಂಠಸೂರಿ ಭಾರತಭಾವದೀಪ (ಗೀತಾರ್ಥಪ್ರಕಾಶ) 

13. ಕೇಶವಕಾಶ್ಮೀರಿ ತತ್ತ÷್ವಪ್ರಕಾಶಿಕಾ 

14. ಮಧುಸೂದನಸರಸ್ವತಿ ಗೂಢಾರ್ಥದೀಪಿಕಾ 

15. ಶಂಕರಾನAದ ತಾತ್ಪರ್ಯಬೋಧಿನೀ 

16. ಶ್ರೀಧರಸ್ವಾಮಿ ಸುಭೋಧಿನೀ 

17. ಸದಾನಂದಯತಿ ಭಾವಪ್ರಕಾಶ

18. ಧನಪತಿಸೂರಿ ಭಾಷ್ಯೋತ್ಕರ್ಷದೀಪಿಕಾ

19. ದೈವಜ್ಞಪಂಡಿತಸೂರ್ಯ ಪರಮಾರ್ಥಪ್ರಪಾ

20. ರಾಜಾನಕರಾಮಕಂಠ ಸರ್ವತೋಭದ್ರ

21. ಅಭಿನವಗುಪ್ತ ಗೀತಾಸಂಗ್ರಹ 

22. ಭಾಸ್ಕರಾಚಾರ್ಯ ಭಗವದಾಶಯಾನುಸರಣ 

23. ಆನಂದವರ್ಧನ ಜ್ಞಾನಕರ್ಮಸಮುಚ್ಚಯ 

24. ಸಂತ ಜ್ಞಾನೇಶ್ವರ ಜ್ಞಾನೇಶ್ವರೀ 

25. ನಿಂಬಾರ್ಕಾಚಾರ್ಯ ತತ್ತ÷್ವಪ್ರಕಾಶಿಕಾ 

26. ಬಾಲಗಂಗಾಧರ ತಿಲಕ ಗೀತಾರಹಸ್ಯ 

27. ಶ್ರೀ ಅರವಿಂದ ದಿ ಎಸ್ಸೇಸ್ ಆನ್ ಗೀತಾ

ಎಲ್ಲ ಉಪನಿಷತ್ತುಗಳ ಸಾರವೇ ಭಗವದ್ಗೀತೆ ಎಂಬ ಎಣಿಕೆ ಸಂಪ್ರದಾಯದಲ್ಲಿ ಗಟ್ಟಿಯಾಗಿದೆ. ಇಲ್ಲಿ ಈ ಮಾತನ್ನಷ್ಟೆ ಹೇಳುತ್ತಿಲ್ಲ. ಲೌಕಿಕ ಉದಾಹರಣೆಯ ಜೊತೆ ಜೊತೆಗೆ ಗೀತೆಯ ಅಲೌಕಿಕ ಹಿರಿಮೆಯನ್ನು ಹೇಳಲಾಗಿದೆ. ಮನುಷ್ಯನ ಪ್ರಥಮಾವಸ್ಥೆಯ ಮೊದಲನೆಯ ಆಹಾರವೇ ಹಾಲು. ಗೀತೆಯನ್ನು ಇಲ್ಲಿ ಹಾಲಿಗೆ ಹೋಲಿಸಲಾಗಿದೆ. ಇದು ನಮ್ಮ ಲೋಕಕ್ಕೆ ಸಲ್ಲುವ ಮಾತು. ಗೀತೆಯ ಸುಲಭತೆಯನ್ನೂ ಸರಳತೆಯನ್ನೂ ಅವಶ್ಯಕತೆಯನ್ನೂ ಈ ಮಾತು ಹೇಳುವಂತಿದೆ. ಈ ಹಾಲನ್ನು ಅಮೃತಕ್ಕೂ ಹೋಲಿಸಲಾಗಿದೆ. ಅಮೃತ ನಮ್ಮ ಲೋಕಕ್ಕೆ ಸೇರಿದ್ದಲ್ಲ; ದೇವಲೋಕದ್ದು. ಸಾವೇ ಇಲ್ಲದಂತೆ ಮಾಡುವ ಗುಣ ಅದರದ್ದು. ಆದರೆ ಗೀತೆ ಹುಟ್ಟಿದ್ದೇ ಸಾವಿನ ಸರಮಾಲೆಗೆ ಅವಕಾಶವನ್ನು ಕಲ್ಪಿಸಿಕೊಡುವ ಯುದ್ಧರಂಗದಲ್ಲಿ. ಯುದ್ಧದಲ್ಲಿ ಜನರು ಸೇರುವುದೇ ಸಾಯಿಸಲು, ಅಥವಾ ಸಾಯಲು. ಅಮೃತ ಮರಣವಲ್ಲದ ಸ್ಥಿತಿಯನ್ನು ಮಾತ್ರವೇ ಕೊಡದು, ಹುಟ್ಟಿನಿಂದಲೂ ಅದು ಪಾರುಮಾಡಬಲ್ಲದು. ಹುಟ್ಟಲು ಸಾಯಲೇಬೇಕು; ಸಾಯಲು ಹುಟ್ಟಲೇಬೇಕು. ಈ ಎರಡು ಕಟ್ಟುಗಳಿಂದಲೂ ಬಿಡುಗಡೆ ಮಾಡಬಲ್ಲದು ಗೀತಾಮೃತ. ಯುದ್ಧದಲ್ಲಿ ಭಾಗವಹಿಸುತ್ತಿರುವವರೆಲ್ಲರೂ ಈಗಾಗಲೇ ಸತ್ತವರು ಎಂದು ಕೃಷ್ಣನೇ ಹೇಳುತ್ತಾನೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top