ಅಧ್ಯಾತ್ಮಿಕ ಮನೋಧರ್ಮದವರು ವೇದಗಳನ್ನಾಗಲಿ, ಉಪನಿಷತ್ತುಗಳನ್ನಾಗಲಿ ಅಥವಾ ಇನ್ಯಾವುದೇ ಧಾರ್ಮಿಕ ಗ್ರಂಥಗಳನ್ನಾಗಲಿ ಓದುವ ಅಗತ್ಯವಿಲ್ಲ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಅದು ಸಾಧ್ಯವೂ ಇಲ್ಲ. ಆದರೆ ಪ್ರತಿದಿನ ಶ್ರೀ ಭಗವದ್ಗೀತೆಯ ಒಂದು ಶ್ಲೋಕವನ್ನಾದರೂ ಓದಿ ಅದನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ಅದಕ್ಕಿಂತ ಮಿಗಿಲಾದ ಪುಣ್ಯಪ್ರದ ಕಾರ್ಯವಿಲ್ಲ. ಏಕೆಂದರೆ ಬದುಕಿನ ಬವಣೆಗಳಿಂದ, ದುಃಖದಿಂದ ಆತಂಕದಿಂದ ಮುಕ್ತರಾಗಲು ಇದಕ್ಕಿಂತ ಬೇರೆ ಸುಲಭ ಮಾರ್ಗವಿಲ್ಲ.
ಭಗವದ್ಗೀತೆ ಎರಡು ಬಾರಿ ಕೊನೆಗೊಳ್ಳುತ್ತದೆ. ಮೊದಲನೆಯದಾಗಿ ಶ್ರೀಕೃಷ್ಣ ಅರ್ಜುನನೊಂದಿಗೆ ನಡೆಸುವ ಸಂವಾದವನ್ನು ಪರಿಸಮಾಪ್ತಿಗೊಳಿಸುತ್ತಾನೆ. ಅದುವರೆಗಿನ ಸಂವಾದವನ್ನು ಕೇಳಿಸಿಕೊಂಡ ಸಂಜಯ ಅದನ್ನು ಮುಂದುವರೆಸುತ್ತಾನೆ. ‘ಹೇ ಅರ್ಜುನ ರಹಸ್ಯಗಳಲ್ಲಿ ರಹಸ್ಯವಾದುದನ್ನು ನಾನು ಈಗಾಗಲೇ ನಿನಗೆ ತಿಳಿಸಿದ್ದೇನೆ. ಅದನ್ನು ನೀನು ಹೇಗೆ ಬೇಕಾದರೂ ಸ್ವೀಕರಿಸಬಹುದು. ನಿನಗೆ ನನ್ನಲ್ಲಿ ಪೂರ್ಣ ವಿಶ್ವಾಸವಿದ್ದರೆ ಬೇರೆಲ್ಲಾ ಮಾರ್ಗಗಳನ್ನು ಬದಿಗೊತ್ತು. ನಾನು ನಿನಗೆ ಮೋಕ್ಷವನ್ನು ನೀಡಬಲ್ಲೆ ಎಂಬುದನ್ನು ತಿಳಿದುಕೋ. ಆದರೆ ಈ ಜ್ಞಾನವನ್ನು ಡಂಭಾಚಾರಿಗಳು, ವಸ್ತುವಿಷಯ ಗಳನ್ನು ತುಚ್ಛವಾಗಿ ನೋಡುವವರು ಅಥವಾ ಅನಾಸಕ್ತರೊಂದಿಗೆ ಹಂಚಿಕೊಳ್ಳಬೇಡ. ಯಾರು ನನ್ನಲ್ಲಿ ದೃಢವಾದ ವಿಶ್ವಾಸವನ್ನಿಟ್ಟುಕೊಂಡು ಕೇಳುತ್ತಾರೋ ಅವರಿಗೆ ನಾನು ಸಂತೋಷವನ್ನು ಪ್ರಸಾದಿಸುತ್ತೇನೆ. ನಾನು ಏನು ಹೇಳಲು ಹೊರಟಿದ್ದೇನೆ ಎಂಬುದು ನಿನಗೆ ಈಗಾಗಲೇ ಅರ್ಥವಾಗಿರಬಹುದು. ಈ ಜ್ಞಾನದಿಂದ ನಿನ್ನೊಳಗಿನ ಎಲ್ಲಾ ಭ್ರಮೆಗಳು ನೇಪಥ್ಯಕ್ಕೆ ಸಂದಿವೆ ಎಂದು ನಾನು ಭಾವಿಸುತ್ತೇನೆ (ಭಗವದ್ಗೀತೆ: 18ನೇ ಅಧ್ಯಾಯ, 63-72). ಶ್ರೀಕೃಷ್ಣನ ಉಪದೇಶದಿಂದ ತನ್ನ ಮನದೊಳಗೆ ಕವಿದಿದ್ದ ಭ್ರಮೆಗಳಲ್ಲವೂ ದೂರಾಗಿವೆ ಎನ್ನುತ್ತಾನೆ ಅರ್ಜುನ. ತನ್ನ ಮನಸ್ಸಿನಲ್ಲೀಗ ದೃಢ ನಿಶ್ಚಯ ಬಂದಿದೆ ಮನದೊಳಗಿನ ಸಂದೇಹಗಳೆಲ್ಲವೂ ದೂರಾಗಿವೆ ಎಂದು ಪುನರುಚ್ಛರಿಸುತ್ತಾನೆ. ಕುರುಕ್ಷೇತ್ರ ರಣಭೂಮಿಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂವಾದವನ್ನು ಕೇಳುವ ಭಾಗ್ಯವನ್ನು ನೀಡಿದ್ದು ಹಾಗೂ ಶ್ರೀಕೃಷ್ಣನ ವಿರಾಟ್ ರೂಪವನ್ನು ನೋಡಲು ದಿವ್ಯದೃಷ್ಟಿಯನ್ನು ತನಗೆ ಪ್ರಸಾದಿಸಿದ್ದಕ್ಕಾಗಿ ಸಂಜಯನು ವ್ಯಾಸರಿಗೆ ಕೃತಜ್ಞತೆ ಅರ್ಪಿಸುತ್ತಾನೆ. ಅಂತಿಮವಾಗಿ ಭಗವದ್ಗೀತೆಯ ಅಂತ್ಯದಲ್ಲಿ ಶ್ರೀಕೃಷ್ಣನನ್ನು ಕುರಿತಂತೆ ತನ್ನ ವೈಯುಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.
ಕೃಷ್ಣನಿದ್ದಲ್ಲಿ ಗೆಲುವಿದೆ:
ಶ್ರೀಕೃಷ್ಣ ಅರ್ಜುನನ ಮನಸ್ಸನ್ನು ಬದಲಿಸುತ್ತಾನೆ. ಕೆಳಗಿಳಿಸಿದ ಅವನ ಗಾಂಢೀವವನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತಾನೆ. ಕೃಷ್ಣನಿದ್ದೆಡೆಗೆ ಅದೃಷ್ಟ, ಯಶಸ್ಸು, ಸ್ಥಿರತೆ, ಕಾನೂನು, ಪರಮಾಧಿಕಾರ ಎಲ್ಲವೂ ತಾನಾಗಿಯೇ ನೆಲೆಗೊಳ್ಳುತ್ತದೆ (ಭಗವದ್ಗೀತೆ 18ನೇ ಅಧ್ಯಾಯ, 78ನೇ ಶ್ಲೋಕ) ಎನ್ನುತ್ತಾನೆ. ಈ ಹಂತದಲ್ಲಿ ನಾವು ಎರಡು ವಿಭಿನ್ನ ದೃಷ್ಟಿಕೋನವನ್ನು ಕಾಣಬಹುದು. ಕೃಷ್ಣನ ಮಾತುಗಳಲ್ಲಿ ದೃಢತೆಯಿದೆ. ಅದರಲ್ಲಿ ಯಾವುದೇ ಒತ್ತಡವಿಲ್ಲ. ಆದರೆ ಸಂಜಯನ ಮಾತುಗಳು ಲೋಕಾಭಿರಾಮವಾಗಿದೆ. ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಅರ್ಜುನ ನನ್ನಲ್ಲಿ ನೀನು ದೃಢವಾದ ವಿಶ್ವಾಸವನ್ನಿಡು. ರಣಭೂಮಿಯಲ್ಲಿ ವೀರಯೋಧನಂತೆ ಕಾದಾಡು. ನಿನ್ನ ಹೋರಾಟ ಪರರಿಗೆ ಹಿತವಾಗುವಂತಿರಲಿ. ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸಬೇಡ. ಆಗ ನಿನಗೆ ಮೋಕ್ಷವನ್ನು ನಾನು ಕರುಣಿಸುತ್ತೇನೆ ಎಂದು ಅಭಯವನ್ನು ನೀಡುತ್ತಾನೆ.
ಆದರೆ ಶ್ರೀಕೃಷ್ಣನ ಮಾತುಗಳನ್ನು ಸಂಜಯ ಅರ್ಥೈಸಿಕೊಳ್ಳುವ ರೀತಿಯೇ ಬೇರೆಯಾಗಿದೆ. ಆತ ಕೃಷ್ಣನ ಮಾತಿನಲ್ಲಿ ಮಾತಿನಲ್ಲಿ ಐದು ರೀತಿಯ ಭರವಸೆಗಳನ್ನು ಕಾಣುತ್ತಾನೆ. ಅವೆಂದರೆ, ಅದೃಷ್ಟ (ಸಂಪತ್ತು), ಯಶಸ್ಸು (ವಿಜಯ), ಅಧಿಕಾರ (ಭು), ಸ್ಥಿರತೆ (ಧ್ರುವ) ಮತ್ತು ಕಾನೂನು (ನೀತಿ). ಇಲ್ಲೊಂದು ಅಂಶವನ್ನು ನಾವು ಗಮನಿಸಬೇಕು. ಅರ್ಜುನನ ಸಮಸ್ಯೆ ಅವನಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಶ್ರೀಕೃಷ್ಣ ನೀಡುವ ಪರಿಹಾರದಿಂದ ಅವನಿಗೆ ಜ್ಞಾನೋದಯವಾಗುತ್ತದೆ. ಅವನೀಗ ಬೇರೆಯವರ ಬಗ್ಗೆಯೂ ಚಿಂತಿಸಲು ಪ್ರಾರಂಭಿಸುತ್ತಾನೆ. ಆದರೆ ಸಂಜಯನ ದೃಷ್ಟಿಕೋನ ಸಂಕುಚಿತವಾಗಿರುವುದಿಲ್ಲ. ಅವನ ಗಮನವೆಲ್ಲ ಇಡೀ ಹಸ್ತಿನಾಪುರದ ಜನರ ಕ್ಷೇಮದತ್ತ ನೆಟ್ಟಿರುತ್ತದೆ. ಪಾಂಡವರು ಮತ್ತು ಕೌರವರ ನಡುವಿನ ಯುದ್ಧದಲ್ಲಿ ಪರಸ್ಪರ ಹಿತಾಸಕ್ತಿಯೇ ಮೇಲ್ಪಂಕ್ತಿಯಾಗಿರುತ್ತದೆಯೇ ಹೊರತು ಸಂಜಯನ ವಿಚಾರಧಾರೆ ಅಲ್ಲಿ ನಗಣ್ಯವಾಗಿರುತ್ತದೆ.
ಸಂಜಯನ ದೃಷ್ಟಿಕೋನ
ಸಂಜಯನ ದೃಷ್ಟಿಯಲ್ಲಿ ಗೀತೋಪದೇಶ ಮುಂದೆ ದೇಶವನ್ನು ಆಳಬಲ್ಲ, ದೇಶದ ಚುಕ್ಕಾಣಿ ಹಿಡಿಯಬಲ್ಲ, ಜನರ ಯೋಗಕ್ಷೇಮಕ್ಕಾಗಿ ತಾವು ವಹಿಸಬೇಕಾದ ಕರ್ತವ್ಯವನ್ನು ಎಚ್ಚರಿಸುವುದ ಕ್ಕೋಸ್ಕರವಾಗಿ ರೂಪಗೊಂಡಿದೆಯೇ ಹೊರತು ಸ್ವಾರ್ಥಲಾಲಸೆಗಾಗಿ ಯುದ್ಧಭೂಮಿಯನ್ನೇ ವೇದಿಕೆ ಮಾಡಿಕೊಂಡವರಿಗಲ್ಲ. ಈ ಅಂಶವನ್ನೇ ಸಂಜಯ ಧೃತರಾಷ್ಟ್ರನಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಾನೆ. ಇನ್ನಾದರೂ ನಿನ್ನ ಸ್ವಾರ್ಥಾಲೋಚನೆಯನ್ನು ಬಿಡು, ಬೇರೆಯವರ ಹಿತದೃಷ್ಟಿಯ ಬಗ್ಗೆ ಚಿಂತಿಸು ಎಂದು ತಿಳಿ ಹೇಳುತ್ತಾನೆ.
ರಾಜನಾದವನು ಹೇಗಿರಬೇಕು?
ಸಂಜಯನ ದೃಷ್ಟಿಕೋನದಲ್ಲಿ ವೈಷ್ಣವ ತತ್ವವಿದೆ. ಆ ಕಾರಣದಿಂದಲೇ ಭಗವಾನ ವಿಷ್ಣುವಿನ ಹೆಸರನ್ನು ಪ್ರತಿಪಾದಿಸುವ ಶ್ರೀ ಮತ್ತು ಭೂಃ ಎನ್ನುವ ಪದ ಬಳಕೆಯಾಗಿದೆ. ಇಲ್ಲಿ ವಿಷ್ಣುವೇ ಯಶಸ್ಸಿನ ಸಂಕೇತವಾಗುತ್ತಾನೆ. ವಿಷ್ಣುವೇ ಬ್ರಹ್ಮಾಂಡದ ಅಧಿಪತಿಯಾಗಿದ್ದಾನೆ. ತನ್ನೊಡತಿಯರಾದ ಶ್ರೀ (ಲಕ್ಷ್ಮಿ) ಮತ್ತು ಭೂ (ಭೂಮಿ) ಯೊಂದಿಗೆ ವಿರಾಜಮಾನನಾಗಿದ್ದಾನೆ.
ಇಲ್ಲಿ ಶ್ರೀ ಎಂದರೆ ಸಂಪತ್ ಪ್ರದಾಯಿನಿ, ಅಷ್ಟೈಶ್ವರ್ಯಗಳನ್ನು, ಸಕಲ ಭೋಗಗಳನ್ನು ಕರುಣಿಸುವವಳು ಎಂದಾಗುತ್ತದೆ. ಭೂ ಎಂದರೆ ಭೂದೇವಿ. ಸಕಲ ಜೀವಿಗಳಿಗೂ ಆಶ್ರಯದಾತೆ ಮತ್ತು ಖನಿಜ ಸಂಪತ್ತಿನ ಒಡತಿ ಎಂದು ಅರ್ಥೈಸಿಕೊಳ್ಳಬಹುದು.
ಧ್ರುವ ಮತ್ತು ನೀತಿ ವಿಷ್ಣುವಿನ ಪರಮಾಪ್ತ ಭಕ್ತರು. ಉತ್ತರ ದಿಕ್ಕಿನಲ್ಲಿ ಪ್ರಕಾಶಿಸುವ ನಕ್ಷತ್ರವೇ ಧ್ರುವ. ಧ್ರುವನಿಗೋ ವಿಷ್ಣುವಿನ ತೊಡೆಯ ಮೇಲೆ ಕುಳಿತುಕೊಳ್ಳುವಾಸೆ. ಯಾವುದೇ ಕಾರಣಕ್ಕೂ ವಿಷ್ಣುವಿನ ತೊಡೆಯಿಂದ ಕೆಳಗೆ ಇಳಿಯದೆ ತನ್ನ ತಂದೆಯ ಪ್ರೀತಿಯನ್ನು ಅನೂಚಾನವಾಗಿ ಪಡೆಯಬೇಕೆಂಬುದು ಅವನಾಸೆ.
'ನೀತಿ' ಅಂದರೆ ಕಾನೂನು ಎಂದರ್ಥ. ಆತ ತನ್ನತನವನ್ನು ಭಗವಾನ್ ವಿಷ್ಣುವಿಗೇ ಸಮರ್ಪಿಸುತ್ತಾನೆ. ಅದುವೇ ಧರ್ಮವೆಂದು ಭಾವಿಸುತ್ತಾನೆ. ಅಂತಹ ವಿವೇಚನಾಯುಕ್ತ ನ್ಯಾಯವೇ ನಿಜವಾದ ಧರ್ಮ. ಅದರಿಂದ ಎಲ್ಲರಿಗೂ ನ್ಯಾಯ ಸಲ್ಲಿಕೆಯಾಗುತ್ತದೆ. ಧರ್ಮವಿಲ್ಲದ ನ್ಯಾಯಕ್ಕೆ ಬೆಲೆಯಿಲ್ಲ, ಅದು ಕೇವಲ ದಂಡನೆ, ದಬ್ಬಾಳಿಕೆ ಮತ್ತು ನಾಶಗೊಳಿಸುವಿಕೆಯ ಸಂಕೇತವಾಗಬಹುದು. ಈ ವಿಚಾರದಲ್ಲಿ ನಮಗೆ ರಾಮಾಯಣ ಮತ್ತು ಮಹಾಭಾರತದ ಘಟನಾವಳಿಗಳೇ ನಿದರ್ಶನವಾಗಬೇಕು. ಆ ದಿನಗಳಲ್ಲಿ ಬಾಂಧವ್ಯವು ಎಷ್ಟರ ಮಟ್ಟಿಗೆ ವಿಸ್ತೃತವಾಗಿತ್ತು. ಆ ಬಾಂಧವ್ಯದಲ್ಲಿ ಎಲ್ಲ ಸಮುದಾಯದವರೊಂದಿಗೆ ಸಹಭಾಳ್ವೆ ನಡೆಸಲಾಗುತ್ತಿತ್ತು. ಆ ಕಾರಣದಿಂದಲೇ ರಾಮಾಯಣದಲ್ಲಿ ಇಕ್ಷ್ವಾಕು ವಂಶಸ್ಥರ ಜತೆ ಜತೆಗೆ ವಾನರರು, ರಾಕ್ಷಸರು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಮಹಾಭಾರತದ ವಿಷಯ ಹಾಗಲ್ಲ. ಒಂದೇ ವಂಶದ ಎರಡು ಕುಡಿಗಳ ನಡುವಿನ ದ್ವೇಷವನ್ನು ಪ್ರತಿನಿಧಿಸುತ್ತದೆ. ಆಸ್ತಿಯ ಮೇಲೆ ಆಧಿಪತ್ಯ ಸಾಧಿಸುವ ಸಲುವಾಗಿ ಅವರೀರ್ವರ ನಡುವೆ ಕದನವಾಗುತ್ತದೆ. ರಾಮಾಯಣದಲ್ಲಿ ಅಯೋಧ್ಯೆ, ಕಿಷ್ಕಿಂಧಾ ಕಾಂಡವೇ ಪ್ರಮುಖವಾದರೆ ಮಹಾಭಾರತದಲ್ಲಿ ಹಸ್ತಿನಾಪುರವೇ ಮುಖ್ಯ ಭೂಮಿಕೆಯಾಗುತ್ತದೆ. ರಾಜನಾದವನು ಸ್ವಹಿತಾಸಕ್ತಿ ಹಾಗೂ ಲೋಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




