ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-5

Upayuktha
0


ಹಾಭಾರತದ ಕಥೆಯನ್ನು ಅವಲೋಕಿಸಿದಾಗ, ನಿಚ್ಚಳವಾಗಿ ಕಾಣುವ ಸತ್ಯ, ಶ್ರೀಕೃಷ್ಣ ಗೀತೆಯನ್ನು ಪ್ರಪ್ರಥಮವಾಗಿ ಸೂರ್ಯನಿಗೆ ಬೋಧಿಸಿದ ಎಂಬ ಅಂಶ. ಕರ್ಣ ಎಷ್ಟಾದರೂ ಸೂರ್ಯ ಪುತ್ರನಲ್ಲವೆ? ಸಹಜವಾಗಿಯೇ ಅವನನ್ನು ‘ಗೀತಾ ಪಾರಂಗತ’ನೆನ್ನಬೇಕು. ಏಕೆಂದರೆ ಭಾರತ ಕಥಾನಕದ ಯಾವುದೇ ಸಂದರ್ಭದಲ್ಲಿ ಶ್ರೀಕೃಷ್ಣಪ್ರಜ್ಞೆಯನ್ನು ಮರೆತವನು ಅವನಲ್ಲ. ಅವನ ಜೀವನವೇ ಒಂದು ದ್ವಂದ್ವ. ಕುಂತಿಯ ಮೊದಲ ಮಗನಾದರೂ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಹೆಗ್ಗಳಿಕೆ ಅವನದಲ್ಲ. ಕರ್ಣಾರ್ಜುನರ ಯುದ್ಧದ ಸಮಯದಲ್ಲಂತೂ ಅವನ ಪರೀಕ್ಷೆ ಹೇಳತೀರದು. ಯುದ್ಧದ ಮುನ್ನಾ ದಿನ ಕುಂತಿ ಅವನಿಗೆ ಅವನ ಜನ್ಮ ರಹಸ್ಯವನ್ನು ತಿಳಿಸಿ ಪಾಂಡವರು ಅವನ ಸೋದರರೆಂಬ ಸತ್ಯವನ್ನು ತಿಳಿಸಿ ಅವನ ಮನಸ್ಸು ವಿಚಲಿತಗೊಳಿಸುತ್ತಾಳೆ. ಆದರೆ ಕರ್ತವ್ಯನಿಷ್ಠನಾದ ಕರ್ಣ ಸುಯೋಧನನ ಕೈ ಬಿಡುವುದಿಲ್ಲ. ಕರ್ಣಾರ್ಜುನರು ನೇರವಾಗಿ ಒಬ್ಬರನ್ನೊಬ್ಬರು ಎದುರಿಸಿದಾಗ ಭ್ರಾತೃ ಸಂಬಂಧದ ಎಳೆಯೊಂದು ಸತ್ಯ ಗೊತ್ತಿರದ ಅರ್ಜುನನ್ನು ಬಾಧಿಸಿ, “ಕೃಷ್ಣ, ನೀನ ಹೇಳು, ನಿಜವಾಗಿಯೂ ಕರ್ಣ ಯಾರು?” ಎಂದು ತನ್ನ ಸಾರಥಿಯನ್ನು ಅಂಗಲಾಚುತ್ತಾನೆ. ಅರ್ಜುನನ ವಿಚಲತೆ ಕರ್ಣನಿಗಿಲ್ಲ. ಏಕೆಂದರೆ ಅರ್ಜುನ ಆಗ ತಾನೆ ಗೀತೆಯನ್ನು ಕೇಳಿದ ವಿದ್ಯಾರ್ಥಿ. ಅದರ ಆಚರಣೆ-ಅನುಷ್ಠಾನ ಅವನಿಗೆ ಹೊಸದು. ಆದರೆ ಕರ್ಣನ ಗೀತಾ ಪರಿಣತಿ ಪಿತ್ರಾರ್ಜಿತವಾದುದು. ಅದರ ಅನುಷ್ಠಾನದಲ್ಲಿ ಅಪ್ರತಿಮ ಅವನು. ಕರ್ಣ ನೇರವಾಗಿ ಅರ್ಜುನನ್ನು ಎದುರಿಸಿದಾಗ ಅವನ ಧೀಮಂತಿಕೆ, ಗೀತಾ ಶ್ರೀಮಂತಿಕೆ ಎಂತಹುದು- ಅದನ್ನು ಕುಮಾರವ್ಯಾಸನ ಬಾಯಿಯಿಂದಲೆ ಕೇಳೋಣ.


 ಒಳಗೆ ಹೃದಯಾಂಬುಜದ ಮಧ್ಯ

 ಸ್ಥಳದೊಳಗೆ ಮುರ ವೈರಿಯನು ಹೊರ 

 ವಳಯದಲಿ ಫಲುಗುಣನ ಮಣಿರಥದಗ್ರ

ಭಾಗದಲಿ ಹೊಳೆವ ಹರಿಯನು ಕಂಡನಿದು ಹೊರ 

 ಗೊಳಗೆ ಹರಿ ತಾನೆಂಬ ಭೇದವ 

 ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ


ಕರ್ಣನ ಹೃದಯದಲ್ಲಿ ಶ್ರೀಕೃಷ್ಣ. ಮುಂದೆ ಅರ್ಜುನನ ರಥದ ಸಾರಥಿಯೂ ಅವನೇ. ಅದೇ ಶ್ರೀಕೃಷ್ಣ. ಆ ಕೃಷ್ಣನಿಗೂ ಈ ಕೃಷ್ಣನಿಗೂ ಭೇದವೇ ಇಲ್ಲ. 'ಹೊರಗೆ ಒಳಗೆ ಎಲ್ಲೆಲ್ಲೂ ಹರಿಯೇ ಹರಿಯೇ ತಾನು' ಎಂಬ ಅಭೇದವನ್ನು ತಿಳಿದು 'ನಿಜದೆಚ್ಚರ ಸಮಾಧಿ' - ಅರ್ಥಾತ್ 'ಯೋಗ ನಿದ್ರೆ'ಯಲ್ಲಿ ಮುಳುಗುತ್ತಾನೆ ಆ ಕರ್ಣ.

 

ಅವನ ಭಾವವಾದರೂ ಎಂತಹುದು? ಸಲಹಿದ ಒಡೆಯನ ಅನ್ನದ ಋಣ ಸಂದಾಯಕ್ಕಾಗಿ ತನ್ನ ಪ್ರಾಣವನ್ನೇ ಕೊಡುವುದು. ಅಲ್ಲದೆ ಮರಣ ಕಾಲದಲ್ಲಿ ಶ್ರೀ ಹರಿಯನ್ನು ಕಾಣುವ, ಅವನನ್ನು ಸ್ಮರಿಸುವ ಸುಕೃತ ಯಾರಿಗುಂಟು ಈ ಭಾಗ್ಯ.

 

ಇಷ್ಟು ಸಾಲದೆಂಬಂತೆ, ಕರ್ಣನ ಕಿವಿಯಲ್ಲಿ ಕುಂಡಲಗಳಿರುವವರೆಗೂ ಅವನ ಪ್ರಾಣ ಹೋಗದೆಂಬ ರಹಸ್ಯವನ್ನು ಅರಿತಿದ್ದ ಶ್ರೀಕೃಷ್ಣ, ಸಾರಥಿ ವೇಷ ಕಳಚಿ ಬ್ರಾಹ್ಮಣನ ರೂಪದಲ್ಲಿ ಬಂದು 'ದಾನ ಶೂರ' ಬಿರುದಾಂಕಿತ ಕರ್ಣನ ಕುಂಡಲಕ್ಕಾಗಿ ಬೇಡುತ್ತಾನೆ. ಆಗ ಕರ್ಣ ಆ ದಾನ ನೀಡಲು ರಣರಂಗದಲ್ಲಿ ನೀರನ್ನೆಲ್ಲಿ ತರಲಿ ಎಂದಾಗ ನಿನ್ನ ಹೃದಯದ ಗಂಗಾ ಜಲದಿಂದಲೆ ಧಾರೆಯೆರೆದು ಕೊಡು ಎನ್ನಲು, ಕ್ಷಣ ಕಾಲವೂ ಯೋಚಿಸಿದ ಕರ್ಣ ಬಾಣದಿಂದ ತನ್ನ ಎದೆಯನ್ನು ಬಗೆದು, ಅಲ್ಲಿಂದ ಚಿಮ್ಮಿದ ರಕ್ತವನ್ನೆ ಉದಕವೆಂದು ಅನುಸಂಧಾನ ಮಾಡಿ ಕುಂಡಲಗಳನ್ನು ಧಾರೆಯೆರೆದು ಕೊಡುತ್ತಾನೆ. ರಣರಂಗದಲ್ಲಿ, ಶತ್ರುವಿನೊಂದಿಗೆ ಹೋರಾಡಿ ಬಸವಳಿದ ಸಮಯದಲ್ಲಿಯೂ ಯಾಚಿಸುವ ಬ್ರಾಹ್ಮಣ ಶ್ರೀಕೃಷ್ಣನೆಂಬ ಸತ್ಯ ತಿಳಿದಿದ್ದೂ ತನ್ನ ಪ್ರಾಣವನ್ನೇ ಕೃಷ್ಣಾರ್ಪಣ ಮಾಡಿದ ಕರ್ಣ ಶ್ರೀ ಭಗವದ್ಗೀತೆಯ ಅನುಷ್ಠಾನದ ಜೀವಂತ ಉದಾಹರಣೆಯಲ್ಲದಿದ್ದರೆ ಮತ್ಯಾರನ್ನು ಹೆಸರಿಸಬೇಕು. ಆ ದಾನದ ಸಮಯದಲ್ಲಿ ಅಮರ ಗಣ ಜಯಕಾರ ಮಾಡಿ ಕರ್ಣನನ್ನು ಹರಸುತ್ತದೆ. ಶ್ರೀಕೃಷ್ಣ ತನ್ನ ನಿಜ ರೂಪ ತೋರಿ ಕರ್ಣನಿಗೆ ಮುಕ್ತಿಯನ್ನು ಅನುಗ್ರಹಿಸುತ್ತಾನೆ. ಕರ್ಣನ ಕೃಷ್ಣ ಭಕ್ತಿಯನ್ನು, ಗೀತಾ ತತ್ವದ ಅನುಷ್ಠಾನವನ್ನು ಕಂಡ ಶ್ರೀ ರಾಮದೂತ ಚಿರಂಜಿವಿ ಹನುಮಂತ, ''ನಿನ್ನ ಸರಿದೊರೆಯನ್ನು ತ್ರೇತಾಯುಗ ಹಾಗೂ ದ್ವಾಪರಯುಗ –ಎರಡರಲ್ಲಿಯೂ ನಾನು ಕಾಣಲಿಲ್ಲ'' ಎಂದು ಉದ್ಗರಿಸುತ್ತಾನೆ.

ಅಧ್ಯಾತ್ಮಿಕ ಮನೋಧರ್ಮದವರು ವೇದಗಳನ್ನಾಗಲಿ, ಉಪನಿಷತ್ತುಗಳನ್ನಾಗಲಿ ಅಥವಾ ಇನ್ಯಾವುದೇ ಧಾರ್ಮಿಕ ಗ್ರಂಥಗಳನ್ನಾಗಲಿ ಓದುವ ಅಗತ್ಯವಿಲ್ಲ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಅದು ಸಾಧ್ಯವೂ ಇಲ್ಲ. ಆದರೆ ಪ್ರತಿದಿನ ಶ್ರೀ ಭಗವದ್ಗೀತೆಯ ಒಂದು ಶ್ಲೋಕವನ್ನಾದರೂ ಓದಿ ಅದನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ಅದಕ್ಕಿಂತ ಮಿಗಿಲಾದ ಪುಣ್ಯಪ್ರದ ಕಾರ್ಯವಿಲ್ಲ. ಏಕೆಂದರೆ ಬದುಕಿನ ಬವಣೆಗಳಿಂದ, ದುಃಖದಿಂದ ಆತಂಕದಿಂದ ಮುಕ್ತರಾಗಲು ಇದಕ್ಕಿಂತ ಬೇರೆ ಸುಲಭ ಮಾರ್ಗವಿಲ್ಲ.


ಭಗವದ್ಗೀತೆ ಎರಡು ಬಾರಿ ಕೊನೆಗೊಳ್ಳುತ್ತದೆ. ಮೊದಲನೆಯದಾಗಿ ಶ್ರೀಕೃಷ್ಣ ಅರ್ಜುನನೊಂದಿಗೆ ನಡೆಸುವ ಸಂವಾದವನ್ನು ಪರಿಸಮಾಪ್ತಿಗೊಳಿಸುತ್ತಾನೆ. ಅದುವರೆಗಿನ ಸಂವಾದವನ್ನು ಕೇಳಿಸಿಕೊಂಡ ಸಂಜಯ ಅದನ್ನು ಮುಂದುವರೆಸುತ್ತಾನೆ. 'ಹೇ ಅರ್ಜುನ ರಹಸ್ಯಗಳಲ್ಲಿ ರಹಸ್ಯವಾದುದನ್ನು ನಾನು ಈಗಾಗಲೇ ನಿನಗೆ ತಿಳಿಸಿದ್ದೇನೆ. ಅದನ್ನು ನೀನು ಹೇಗೆ ಬೇಕಾದರೂ ಸ್ವೀಕರಿಸಬಹುದು. ನಿನಗೆ ನನ್ನಲ್ಲಿ ಪೂರ್ಣ ವಿಶ್ವಾಸವಿದ್ದರೆ ಬೇರೆಲ್ಲಾ ಮಾರ್ಗಗಳನ್ನು ಬದಿಗೊತ್ತು. ನಾನು ನಿನಗೆ ಮೋಕ್ಷವನ್ನು ನೀಡಬಲ್ಲೆ ಎಂಬುದನ್ನು ತಿಳಿದುಕೋ. ಆದರೆ ಈ ಜ್ಞಾನವನ್ನು ಡಂಭಾಚಾರಿಗಳು, ವಸ್ತುವಿಷಯಗಳನ್ನು ತುಚ್ಛವಾಗಿ ನೋಡುವವರು ಅಥವಾ ಅನಾಸಕ್ತರೊಂದಿಗೆ ಹಂಚಿಕೊಳ್ಳಬೇಡ. ಯಾರು ನನ್ನಲ್ಲಿ ದೃಢವಾದ ವಿಶ್ವಾಸವನ್ನಿಟ್ಟುಕೊಂಡು ಕೇಳುತ್ತಾರೋ ಅವರಿಗೆ ನಾನು ಸಂತೋಷವನ್ನು ಪ್ರಸಾದಿಸುತ್ತೇನೆ. ನಾನು ಏನು ಹೇಳಲು ಹೊರಟಿದ್ದೇನೆ ಎಂಬುದು ನಿನಗೆ ಈಗಾಗಲೇ ಅರ್ಥವಾಗಿರಬಹುದು. ಈ ಜ್ಞಾನದಿಂದ ನಿನ್ನೊಳಗಿನ ಎಲ್ಲಾ ಭ್ರಮೆಗಳು ನೇಪಥ್ಯಕ್ಕೆ ಸಂದಿವೆ ಎಂದು ನಾನು ಭಾವಿಸುತ್ತೇನೆ (ಭಗವದ್ಗೀತೆ: 18ನೇ ಅಧ್ಯಾಯ, 63-72). ಶ್ರೀಕೃಷ್ಣನ ಉಪದೇಶದಿಂದ ತನ್ನ ಮನದೊಳಗೆ ಕವಿದಿದ್ದ ಭ್ರಮೆಗಳಲ್ಲವೂ ದೂರಾಗಿವೆ ಎನ್ನುತ್ತಾನೆ ಅರ್ಜುನ. ತನ್ನ ಮನಸ್ಸಿನಲ್ಲೀಗ ದೃಢ ನಿಶ್ಚಯ ಬಂದಿದೆ ಮನದೊಳಗಿನ ಸಂದೇಹಗಳೆಲ್ಲವೂ ದೂರಾಗಿವೆ ಎಂದು ಪುನರುಚ್ಛರಿಸುತ್ತಾನೆ. ಕುರುಕ್ಷೇತ್ರ ರಣಭೂಮಿಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂವಾದವನ್ನು ಕೇಳುವ ಭಾಗ್ಯವನ್ನು ನೀಡಿದ್ದು ಹಾಗೂ ಶ್ರೀಕೃಷ್ಣನ ವಿರಾಟ್ ರೂಪವನ್ನು ನೋಡಲು ದಿವ್ಯದೃಷ್ಟಿಯನ್ನು ತನಗೆ ಪ್ರಸಾದಿಸಿದ್ದಕ್ಕಾಗಿ ಸಂಜಯನು ವ್ಯಾಸರಿಗೆ ಕೃತಜ್ಞತೆ ಅರ್ಪಿಸುತ್ತಾನೆ. ಅಂತಿಮವಾಗಿ ಭಗವದ್ಗೀತೆಯ ಅಂತ್ಯದಲ್ಲಿ ಶ್ರೀಕೃಷ್ಣನನ್ನು ಕುರಿತಂತೆ ತನ್ನ ವೈಯುಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.

(ಮುಂದುವರಿಯುವುದು)


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
ಬೋಳೂರು ವಾರ್ಡಿನ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನಕ್ಕೆ ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 27ನೇ ಬೋಳೂರು ವಾರ್ಡಿನ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನಕ್ಕೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಮೇಲ್ಫಾವಣಿ ಹಾಗೂ ನೆಲಹಾಸು ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿನ ದೈವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಕೆಲವು ಅಭಿವೃದ್ಧಿ ಕಾರ್ಯಗಳು ಅಗತ್ಯವಾಗಿ ನಡೆಯಬೇಕಾಗಿದ್ದು ಆ ಬಗ್ಗೆ ಸ್ಥಳೀಯ ಬಿಜೆಪಿ ಪ್ರಮುಖರು, ದೇವಸ್ಥಾನಕ್ಕೆ ಸಂಬಂಧಪಟ್ಟವರು ಮಾಡಿದ ಮನವಿಯಂತೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ವಾರ್ಡ್ ಅಧ್ಯಕ್ಷರಾದ ದಿನೇಶ್, ಸ್ಥಳೀಯ ಪ್ರಮುಖರಾದ ಮೋಹನ್ ಬರ್ಕೆ, ರಘು ಶೆಟ್ಟಿ, ರವೀಂದ್ರ ಆಚಾರಿ, ರವೀಂದ್ರ ಶೆಣೈ, ವಿಜೇಂದ್ರ ಸಾಲ್ಯಾನ್, ತಿಲಕ್ ರಾಜ್ ಕೋಟ್ಯಾನ್, ಭಾಸ್ಕರ ಚಂದ್ರ ಶೆಟ್ಟಿ, ಸದಾಶಿವ ಪೂಜಾರಿ, ದಾಮೋದರ ಶೆಟ್ಟಿ, ಸಂದೀಪ್ ಪೂಜಾರಿ, ಗೌತಮ್ ಸುವರ್ಣ, ವಿಶಾಲ್ ಮೊದಲಾದವರು ಉಪಸ್ಥಿತರಿದ್ದರು. Advt Slider:
To Top