ಸೈನಿಕರಿಗೂ ದೀವಿಗೆ ಭಗವದ್ಗೀತೆ
1999ರಲ್ಲಿ ಹಿಮಾಲಯದ ಶಿಖರದಲ್ಲಿ ಕಾರ್ಗಿಲ್ ಯುದ್ಧ ಗೆದ್ದುಕೊಳ್ಳುವುದರಲ್ಲಿ ಟೊಲೋಲಿಂಗ್ ಎಂಬ ಆಯಕಟ್ಟಾದ ಪರ್ವತ ಪ್ರದೇಶವನ್ನು ಗೆದ್ದುಕೊಳ್ಳುವುದರಲ್ಲಿ ಅತ್ಯಂತ ಶೌರ್ಯವನ್ನು ಪ್ರದರ್ಶಿಸಿದವನು 31 ವರ್ಷದ ಮೇಜರ್ ಪದ್ಮಪಾಣಿ ಆಚಾರ್ಯ. ರಾಜಪುತಾನ ಸೈನಿಕ ಪಡೆಯುವನು. ಮೂರು ವರ್ಷ ಹಿಂದೆ ತಾನೆ ಮದುವೆಯಾಗಿದ್ದ. ಇನ್ನು ಮೂರು ತಿಂಗಳಲ್ಲಿ ತಂದೆ ಆಗುವವನಿದ್ದ. ಕಾರ್ಗಿಲ್ ಯುದ್ಧದಲ್ಲಿ ಪ್ರಾಣತೆತ್ತು ಆತ ವೀರಸ್ವರ್ಗ ಸೇರಿದ. ಮರಣಕ್ಕೆ ಒಂದು ವಾರ ಮುಂಚೆ ತಂದೆಗೆ ಬರೆದ ಪತ್ರದಲ್ಲಿ ಆತ ಹೇಳಿದ್ದ:
''ಶತ್ರುಗಳ ಮೇಲೆ ಆಕ್ರಮಣಕ್ಕೆ ನಾವು ಸಿದ್ಧರಾಗುತ್ತಿದ್ದೇವೆ. ನೀವು ಯಾರೂ ಚಿಂತೆ ಮಡುವುದು ಬೇಡ. ಯುದ್ಧದಲ್ಲಿ ಏನು ಆಗುತ್ತದೆ ಎಂಬುದು ನಮ್ಮ ಕೈಗಳಿಗೆ ಮೀರಿದ್ದು. ಆದರೆ ನಾವು ಸತ್ತರೂ ಉದಾತ್ತ ಗುರಿಗೋಸ್ಕರ ತಾನೆ! ಭಗವದ್ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೇಳಿಯೇ ಇದ್ದಾನಲ್ಲ 'ಹತೋ ವಾ ಪ್ರಾಪ್ಯಸಿ ಸ್ವರ್ಗಂ, ಜಿತ್ವಾ ವಾ ಭೋಕ್ಷ್ಯಸೇ ಮಹೀಮ್| ತಸ್ಮಾದುತ್ತಿಷ್ಠ ಕೌಂತೇಯ, ಯುದ್ಧಾಯ ಕೃತನಿಶ್ಚಯಃ ಎಂದು. ಸತ್ತರೆ ಸ್ವರ್ಗ; ಗೆದ್ದರೆ ಕೀರ್ತಿ, ರಾಜ್ಯ ಹೀಗಿರುವಾಗ ಮನಸ್ಸಿಗೆ ಚಿಂತೆ ಏಕೆ?''
ಪ್ರಾಣವನ್ನು ಪಣವಾಗಿಟ್ಟು ಯುದ್ಧದಲ್ಲಿ ಹೋರಾಡುವ ಸೈನಿಕರಿಗೂ ಆತ್ಮವಿಶ್ವಾಸವೂ, ಶೌರ್ಯವಂತಿಕೆಯೂ ಭಗವದ್ಗೀತೆಯಿಂದ ಲಭ್ಯವಾಗುತ್ತಿರುವುದನ್ನು ನೋಡಿಯಾದರೂ ನಾವು ಭಗವದ್ಗೀತೆಯನ್ನು ಗೌರವಿಸೋಣ.
ಭಾರತೀಯ ಸಂಸ್ಕೃತಿಯ ಪರಿಚಾಯಕ:
ಜಗತ್ತಿನ ಇತರ ಚಿಂತನಧಾರೆಗಳು ಕಷ್ಟಪಟ್ಟು ಕಂಡುಕೊಳ್ಳಲು ಯತ್ನಿಸುತ್ತಿರುವ ಜೀವನತಥ್ಯಗಳನ್ನು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಗವದ್ಗೀತೆ ನಮಗೆ ತಿಳಿಸಿಕೊಟ್ಟಿದೆ.
ಯಾವುದಾದರೂ ದೇಶದ ಅಥವಾ ಜನಾಂಗದ ಪರಿಚಯ ಹೇಳಬೇಕಾದಾಗ ಅದರ ಭೌತಿಕಸಾಧನೆ, ಸಮಾಜವ್ಯವಸ್ಥೆ, ಸಾಹಿತ್ಯ, ಕಲೆ ಮೊದಲಾದ ಅಂಶಗಳನ್ನು ಪ್ರಸ್ತಾವಿಸುವುದಾಗುತ್ತದೆ. ಆದರೆ ಇಂತಹ ಅಂಶಗಳಲ್ಲಿ ಮೇಲ್ಮೆ ಸಾಧಿಸಿದ್ದರೂ ಯಾವುದೋ ಒಂದು ನಾಗರಿಕತೆ ಉಳಿಯುತ್ತದೆ ಎಂಬ ಭರವಸೆ ಇಲ್ಲ. ಕಳೆದ ಐದಾರು ಸಾವಿರ ವರ್ಷಗಳಲ್ಲಿ ನಷ್ಟವಾಗಿಹೋಗಿರುವ ನಾಲ್ಕಾರು ನಾಗರಿಕತೆಗಳು ಭೌತಮಟ್ಟದಲ್ಲಿ ಉನ್ನತಿ ಸಾಧಿಸಿದ್ದವೇ, ಆದರೆ ಅವು ಯಾವುದೂ ಉಳಿದಿಲ್ಲ. ಆದರೆ ಅರಣ್ಯಗಳಲ್ಲಿ ಕುಳಿತು ಉದಾತ್ತ ಚಿಂತನೆ ಮಾಡುತ್ತಿದ್ದ ಋಷಿಮುನಿಗಳು ರೂಪಿಸಿದ ಭಾರತೀಯ ಸಂಸ್ಕೃತಿ ಹತ್ತು ಸಾವಿರ ವರ್ಷಗಳಾದ ಮೇಲೂ ನಷ್ಟವಾಗದೇ ಉಳಿದಿದೆ. ಇದಕ್ಕೆ ಕರಣ ವೇದ-ಉಪನಿಷತ್ತುಗಳು ಮತ್ತು ಅವುಗಳ ಸಾರ ರೂಪವಾದ ಭಗವದ್ಗೀತೆ.
ಈಗ್ಗೆ ಏಳು ವರ್ಷ ಹಿಂದೆ (2007) ಕಾಶಿಯ ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಮೊಕದ್ದಮೆಯೊಂದರಲ್ಲಿ ತೀರ್ಪು ನೀಡುತ್ತಾ ಅಲಹಾಬಾದ್ ಹೈಕೊರ್ಟಿನ ನ್ಯಾಯಾಧೀಶ ಶ್ರೀವಾಸ್ತವ ಎಂಬುವರು ಪ್ರಾಸಂಗಿಕವಾಗಿ ನಮ್ಮ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮೊದಲಾದ ಲಾಂಛನಗಳಿರುವಂತೆ ಭಗವದ್ಗೀತೆಯನ್ನು 'ರಾಷ್ಟ್ರೀಯ ಧರ್ಮಶಾಸ್ತ್ರ ಗ್ರಂಥ'ವೆಂದು ಪರಿಗಣಿಸಬೇಕು ಎಂದು ಅಭಿಪ್ರಾಯ ಕೊಟ್ಟಿದ್ದಾರೆ. ಆ ಸಲಹೆಯನ್ನು ಸರ್ಕಾರ ಮಾನ್ಯ ಮಾಡಲಿ ಬಿಡಲಿ, ಜನಮಾನಸದಲ್ಲಂತೂ ಗೀತೆಗೆ ಮೂರ್ಧನ್ಯಸ್ಥಾನ ಸಾವಿರಾರು ವರ್ಷಗಳಿಂದ ಹಿಂದೆಯೇ ಬಂದುಬಿಟ್ಟಿದೆ ಬಗೆದಷ್ಟು ಹೆಚ್ಚು ಹೆಚ್ಚು ಬೆಳಕು ಗೀತೆಯಿಂದ ಹೊಮ್ಮುತ್ತದೆ.
ಗೀತಾ ಜಯಂತಿಗೂ ಮುನ್ನ ಗೀತೆ ಇರಲಿಲ್ಲವೇ?
ಕುರುಕ್ಷೇತ್ರ ಯುದ್ಧದ ಏಕಾದಶೀ ದಿನ ಗೀತಾ ಜಯಂತಿ ಎಂದು ಗುರುತಿಸುವುದಾದರೆ ಅದಕ್ಕೆ ಮೊದಲು ಗೀತೆ ಇರಲಿಲ್ಲವೆ? ಹಾಗೆ ಇದ್ದುದಾದರೆ ಆ ಮೊದಲಿನ ದಿನ ಅದರ ಜಯಂತಿಯ ದಿನವಲ್ಲವೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಪೂರಕವಾಗಿ ಗೀತೆಯ ಜನ್ಮದಾತ ಶ್ರೀಕೃಷ್ಣನೇ ಅದರ ನಾಲ್ಕನೆಯ ಅಧ್ಯಾಯ 'ಜ್ಞಾನ ಕರ್ಮ ಸಂನ್ಯಾಸ ಯೋಗ'ದಲ್ಲಿನ ಮೊದಲನೆಯ ಶ್ಲೋಕದಲ್ಲಿ ಹೇಳುವುದಾದರೂ ಏನನ್ನು:
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್|
ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್||
ಅವಿನಾಶಿಯಾದ ಈ ಯೋಗವನ್ನು ನಾನು ವಿವಸ್ವಾನ-ಅರ್ಥಾತ್ ಸೂರ್ಯನಿಗೆ ಹೇಳಿದೆನು. ಸೂರ್ಯನು ಅದನ್ನು ಸಕಲ ಮಾನವ ಕುಲದ ಮೂಲ ಪುರುಷ ಮನುವಿಗೆ ಹೇಳಿದನು; ಮನುವು ಇಕ್ಷ್ವಾಕುವಿಗೆ ಹೇಳಿದನು.
ಭಗವಂತನು ಮುಂದುವರಿದು ಹೀಗೆ ಹೇಳಿದನು.
ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ|
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ||
ಅರ್ಜುನ, ಈ ಗೀತೆಯು ಗುರು ಪರಂಪರೆಯಲ್ಲಿ ಮುಂದುವರಿದು ರಾಜರ್ಷಿಗಳ ಧರ್ಮವಾಯಿತು. ಕಾಲಕ್ರಮದಲ್ಲಿ ಈ ಪರಂಪರೆ ನಿಂತು ಹೋಯಿತು.
ಶ್ರೀಕೃಷ್ಣನ ಉವಾಚದಂತೆಯೇ ಭಗವದ್ಗೀತೆ ಬಹುಪ್ರಾಚೀನವಾದುದು. ಆದರೆ ಆ ಮಾತನ್ನು ಅರ್ಜುನ ನಂಬಬೇಕಲ್ಲ. ಅವನು ಮರುಪ್ರಶ್ನೆ ಹಾಕುತ್ತಾನೆ:
ಅಪರಂ ಭವತೋ ಜನ್ಮ ಪರಂಜನ್ಮ ವಿವಸ್ವತಃ|
ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ||
ಸೂರ್ಯನಾದ ವಿವಸ್ವಾನನು ನಿನಗಿಂತ ಮುಂಚೆ ಹುಟ್ಟಿದವನು. ಅವನು ಹಿರಿಯ. ಅವನಿಗೆ ನೀನು ಇದನ್ನು ಬೋಧಿಸಿದೆ ಎಂದರೆ ಏನರ್ಥ?
ಶ್ರೀಕೃಷ್ಣಾರ್ಜುನರ ಕಾಲ ದ್ವಾಪರ ಯುಗ. ಸೂರ್ಯನಿಗೆ ಬೋಧನೆಯಾದ ಸಮಯ ಮನುಕುಲದ ಸೃಷ್ಟಿಗೆ ಮೊದಲು ಎಂದರೆ ತ್ರೇತಾಯುಗಕ್ಕೂ ಹಿಂದೆ. ಆಗ ಕೃಷ್ಣ ಇದ್ದನೆಂದು ಒಪ್ಪಬೇಕೆ? ಅದರಲ್ಲಿಯೂ ಕೃಷ್ಣ ಬೇರೆ ಯಾರೂ ಅಲ್ಲ, ತನ್ನ ಸಮಕಾಲೀನ ಹಾಗೂ ಸಖ. ಅರ್ಜುನನ ಸಂದೇಹ ನಿವಾರಣೆಗಾಗಿ ಕೃಷ್ಣ ಹೇಳುತ್ತಾನೆ, ''ಪರಂತಪನೇ, ನೀನು ನಾನು ಅನೇಕ ಜನ್ಮಗಳನ್ನು ಕಳೆದಿದ್ದೇವೆ. ಆದರೆ ನನಗೆ ಮಾತ್ರ ಅದರ ನೆನಪಿದೆ. ನಿನಗೆ ಆ ನೆನಪಿಲ್ಲ. ಅದರಿಂದ ನೀನು ಸಂದೇಹಿಸುತ್ತಿದ್ದೀಯ. ವಾಸ್ತವವಾಗಿ ನನಗೆ ಹುಟ್ಟು ಎನ್ನುವುದೇ ಇಲ್ಲ. ನಾನು ಎಲ್ಲ ಜೀವಿಗಳ ಪ್ರಭು. ನನ್ನ ಧಾರ್ಮಿಕ ಶರೀರಕ್ಕೆ ಸಾವೆಂಬುದೇ ಇಲ್ಲ. ಆದರೂ ಪ್ರತಿ ಯುಗದಲ್ಲಿಯೂ ನಾನು ಮೂಲರೂಪದಲ್ಲಿ ಪದೇ ಪದೇ ಅವತರಿಸುತ್ತೇನೆ. ಆ ಸಮಯ ಯಾವುದೆಂದರೆ-
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಭರತ ಕುಲದ ಸಂಜಾತನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ವಿಜೃಂಭಿಸುತ್ತದೆಯೋ ಆಗ ನಾನು ಸ್ವಯಂ ಅವತಾರ ಮಾಡಿ ''ದುಷ್ಟ ಸಂಹಾರ, ಶಿಷ್ಟ ರಕ್ಷಣೆ'' ಮಾಡುತ್ತೇನೆ. ಅರ್ಜುನನ ಅನುಮಾನ ಪರಿಹಾರಕ್ಕಾಗಿ ಶ್ರೀಕೃಷ್ಣ ಪದೇ ಪದೇ ಹೇಳುವುದು- ''ನಾನು ಸರ್ವಸ್ವ, ಅನಾದಿ. ಸೂರ್ಯನ ಬೆಳಕು, ನೀರಿನ ರುಚಿ, ವೇದದ ಓಂಕಾರ, ಆಕಾಶದ ಶಬ್ದ, ಹೂವಿನ ಪರಿಮಳ, ಅಗ್ನಿಯ ತೇಜಸ್ಸು. ಅಷ್ಟೇ ಅಲ್ಲ ಜಗತ್ತು ಯಾವುದನ್ನು ಪರಮ ಪದ ಎಂದೆನ್ನೆವುದೋ ಅದೇ ನಾನು''.
ಶ್ರೀಕೃಷ್ಣನ ಯಾವ ಮಾತಿಗೂ ತೃಪ್ತಿ ಪಡೆಯದ ಅರ್ಜುನನನ್ನು, ಅವನ ಸಂದೇಹಗಳನ್ನು ಪರಿಹರಿಸಲು, ಗೀತಾಚಾರ್ಯನು ವಿಶ್ವ ರೂಪವನ್ನೇ ಪ್ರದರ್ಶಿಸಬೇಕಾಗುತ್ತದೆ. ಆ ವಿರಾಟ್ ಸ್ವರೂಪವನ್ನು ಕಂಡ ಮೇಲೆಯೆ ಅರ್ಜುನನಿಗೆ ಶ್ರೀಕೃಷ್ಣನ ಹಿರಿಮೆ ಅರ್ಥವಾದುದು. ಅವನು ಸಖ, ಸಾರಥಿ ಎಂಬ ಭಾವ ಹೋಗಿ ಅನಂತ ಎಂಬ ಅರಿವು ಮೂಡಿದುದು.
ಮಾರ್ಗಶಿರ ಏಕಾದಶಿಯನ್ನು 'ಶ್ರೀ ಗೀತಾ ಜಯಂತಿ'ಯೆಂದು ಆಚರಿಸುವುದು ಕೇವಲ ಸಾಂಕೇತಿಕ ಮಾತ್ರ. ವರುಷದಲ್ಲಿ ಒಂದು ದಿನವಾದರೂ ಗೀತೆಯ ಸಂದೇಶವನ್ನು ನೆನೆದು ಬದುಕನ್ನು ಹಸನುಮಾಡಿಕೊಳ್ಳಲು. ಶ್ರೀ ಗೀತಾಚಾರ್ಯನ ಹಾಗೆ ಭಗವದ್ಗೀತೆಯೂ ಅನಾದಿ. ಅದನ್ನು ಕೇಳಿದುದರಲ್ಲಿ ಅರ್ಜುನ ಮೊದಲಿನವನೂ ಅಲ್ಲ- ಕೊನೆಯವನಂತೂ ಅಲ್ಲವೇ ಅಲ್ಲ. ಏಕೆಂದರೆ ಶ್ರೀಕೃಷ್ಣನ ಅನುಗ್ರಹವಿಲ್ಲದಿದ್ದರೆ ಗೀತೆ ಇಲ್ಲಿಯವರೆವಿಗೂ ಉಳಿದು ಬರುತ್ತಲೇ ಇಲ್ಲ.







