ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-10

Upayuktha
0





ಜೀವನರಥ: ರಥರೂಪಕವೇ ಭಗವದ್ಗೀತೆಯ ಮೂಲವೆಂದು ಭಾವಿಸಿದರೆ ತಪ್ಪಾಗಲಾರದು. ಸಂದರ್ಭ ಕುರುಕ್ಷೇತ್ರದಲ್ಲಿ ನಡೆದ ಹಗರಣ. ಈ ಹಗರಣವು ಸಾಂಕೇತಿಕವಾದುದು. ಕುರುಕ್ಷೇತ್ರ ಯುದ್ಧ ಎಲ್ಲಿಯೋ ಎಂದೋ ನಡೆದದ್ದು ಎಂದು ಭಾವಿಸಬಾರದು. ನಮ್ಮ ಒಡಲಲ್ಲಿ ಅನುಗಾಲವೂ ನಡೆಯುತ್ತಿರುವ ಹಗರಣ ಅದು. ಪಾಂಡವರೆಂದರೆ ಒಳಿತಿಗೆ ಒಲಿದವರು (ಪಂಡಾ ಎಂದರೆ ಆತ್ಮಜ್ಞಾನ; ಅದನ್ನು ಬಯಸುವವರು); ಕೌರವರು ಕೇಡಿಗರು (ಕುರು ಎಂದರೆ ಕರ್ಮ: ಸಕಾಮಕರ್ಮದಲ್ಲಿ ತೊಡಗಿದವರು). ನಮ್ಮಲ್ಲಿ ಒಬ್ಬೊಬ್ಬರಲ್ಲೂ ಇರುವ ಪ್ರವೃತ್ತಿಗಳು ಇವು. ಹಗರಣದಲ್ಲಿ ತೊಡಗಿದ ಅರ್ಜುನ ಹೇಳಿಕೇಳಿ ನರ; ಎಂದರೆ ಮನುಷ್ಯ. ನಮ್ಮಲ್ಲಿ ಒಬ್ಬೊಬ್ಬರೂ ಅರ್ಜುನನೇ, ಅವನು ಸರ್ಮಲೋಕಸಾಕ್ಷಿ. ಅರ್ಜುನನಿಗೆ ಒದಗಿದ ವಿಷಾದ ನಮ್ಮೆಲ್ಲರನ್ನೂ ಒಂದಲ್ಲ ಒಂದು ಬಗೆಯಲ್ಲಿ ಕಾಡುತ್ತದೆ. ಈ ವಿಷಾದವು ಎಲ್ಲರ ಸಾಂಸಾರಿಕ ಜೀವನಕ್ಕೆ ಅಂಟಿಕೊಂಡದ್ದು; ರಾಗ, ದ್ವೇಷ, ಮೋಹಗಳ ಮಡಿಲಿನಿಂದ ಎದ್ದದ್ದು. ಇದರಿಂದ ಪಾರಾಗಬೇಕೆಂಬುದೇ ಬದುಕಿನ ದೊಡ್ಡ ಬಯಕೆ. ಎಲ್ಲರ ಆಳಲೂ ಅದೇ. ಪಾರಾಗುವುದು ಹೇಗೆಂಬ ಹವಣಿಕೆ ಇದ್ದವರಿಗೆ ಗೀತೆ ದಾರಿ ತೋರಿಸೀತು, ಅರ್ಜುನನಿಗೆ ಕೃಷ್ಣದಾರಿ ತೋರಿಸಿದಂತೆ.


ಗೀತೆಯು ಶಾಸ್ತ್ರವೇ, ಕಾವ್ಯವೇ? 

ಗೀತೆಯನ್ನು ಗೀತಾಶಾಸ್ತ್ರವೆಂದು ಕರೆಯುವುದಂಟು. ಗೀತೆ ಎಂಬುದಕ್ಕೂ ಶಾಸ್ತ್ರ ಎಂಬುದಕ್ಕೂ ಶಬ್ಧಾರ್ಥದಲ್ಲಿ ಪರಸ್ಪರ ವೈಲಕ್ಷಣ್ಯ ತೋರುತ್ತದೆ. ಗೀತೆ ಎಂದರೆ ಹಾಡು. ಅದರ ಮುಖ್ಯ ಕಾರ್ಯ ಮನೋರಂಜನೆ. ಅದು ಬುದ್ಧಿಯನ್ನು ಉದ್ದೇಶಿಸಿದ್ದಲ್ಲ. ಶಾಸ್ತ್ರವಾದರೋ ಬುದ್ಧಿಯನ್ನುದ್ದೇಶಿಸಿದ್ದು. ಅದಕ್ಕೆ ಮನಸ್ಸಿನ ಉದ್ರೇಕ ಸಲ್ಲದು. ಹೀಗೆ ಮೇಲ್ನೋಟಕ್ಕೆ ಗೀತವೂ ಶಾಸ್ತ್ರವೂ ಪರಸ್ಪರ ವ್ಯತಿರಿಕ್ತಗಳು. ಕೃಷ್ಣಾರ್ಜುನ ಸಂವಾದದಲ್ಲಾದರೋ ಮನಸ್ಸಿನ ಸಂದರ್ಭಗಳು ಬುದ್ಧಿ ಪ್ರಸಕ್ತಿಗಳೂ ಸಮ್ಮೀಳಿತವಾಗಿ ಏಕೀಭವಿಸಿವೆ. 


ಅರಿವಿನ ಕಡಲು ಭಗವದ್ಗೀತೆ 

ಯುದ್ಧ ಭೂಮಿಯಲ್ಲಿ ನಿಂತು ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಯು ಎಲ್ಲ ಬಗೆಯ ಒಳ ಹೊರಗಿನ ಯುದ್ಧ ಮತ್ತು ಒಳ ಹೊರಗಿನ ಯುದ್ಧ ಮತ್ತು ಪರಿಣಾಮಗಳನ್ನು ಕುರಿತು ಬೆಳಕು ಚೆಲ್ಲುತ್ತದೆ.

 

ಭಗವದ್ಗೀತೆ ಒಂದು ಪರಿಪೂರ್ಣ ಮಾರ್ಗದರ್ಶಕ ಕೃತಿ. ಐತಿಹಾಸಿಕವಾಗಿ ಇದು ಕುರುಕ್ಷೇತ್ರ ಯುದ್ಧಾರಂಭದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಬೋಧಿಸಿದ್ದು. ಆದರೆ ಅದಕ್ಕೂ ಮುನ್ನ ಗೀತೆಯ ಜ್ಞಾನವನ್ನು ಮಹಾವಿಷ್ಣುವು ವಿವಸ್ವಾನನಿಗೆ, ಅಂದರೆ ಸೂರ್ಯನಿಗೆ ಬೋಧಿಸಿದ್ದ. ಸ್ವತಃ ಗೀತೆಯೇ (4ನೇ ಅಧ್ಯಾಯ) ಈ ಮಾತನ್ನು ಸ್ಪಷ್ಟಪಡಿಸುತ್ತದೆ.


ಹಾಗಾದರೆ ವಿಷ್ಣುವು ಸೂರ್ಯನಿಗೆ ಯಾವ ಕಾರಣದಿಂದ ಇದನ್ನು ಬೋಧಿಸಿದ್ದ?

ಅರ್ಜುನನಿಗಾದರೋ ರಣಾಂಗಣದಲ್ಲಿ, ಎದುರು ಪಾಳಯದಲ್ಲಿ ಬಂಧುಗಳೇ ಇದ್ದರು. ಅವರ ವಿರುದ್ಧ ಹೋರಾಡಲಿಕ್ಕೆ ಆತ ಹಿಂಜರಿಯುತ್ತಿದ್ದ ಮತ್ತು ಈ ಹಿಂಜರಿಕೆಗೆ ಆತನ ಅಜ್ಞಾನವೇ ಕಾರಣವಗಿತ್ತು. ಆತ ಮಿಥ್ಯಾಹಂಕಾರದಿಂದ ಯುದ್ಧದ ಫಲಫಲಗಳೊಡನೆ ಗುರುತಿಸಿಕೊಂಡು ಶೋಕಿಸತೊಡಗಿದ್ದ. ಅಂತಹ ಪರಿಸ್ಥಿತಿಯಲ್ಲಿದ್ದ ಅರ್ಜುನನಿಗೆ ನಿತ್ಯ ಸತ್ಯವನ್ನು ಮನದಟ್ಟು ಮಾಡಿಸಿ, ಧರ್ಮಸ್ಥಾಪನೆಗಾಗಿ ಯುದ್ಧ ಮಾಡುವಂತೆ ಹುರಿದುಂಬಿಸಲು ಕೃಷ್ಣ ಗೀತೋಪದೇಶ ನೀಡಿದ. ಆದರೆ, ಸೂರ್ಯ ಯಾರ ಜೊತೆ ಯುದ್ಧ ಮಾಡಬೇಕಿತ್ತು? ಆತನಿಗೆ ಯಾವ ಹಿನ್ನಲೆಯಲ್ಲಿ ಗೀತೆಯನ್ನು ಬೋಧಿಸಲಾಯಿತು? 


ಹುಡುಕಾಟಕ್ಕೆ ತಕ್ಕಂತೆ...

ಭಗವದ್ಗೀತೆಯನ್ನು ಸೀಮಿತಗೊಳಿಸಿ ನೋಡಿದಾಗ ಇಂತಹ ಪ್ರಶ್ನೆ ಏಳುವುದು ಸಹಜ. ವಾಸ್ತವ ಹಾಗಿಲ್ಲ. ಭಗವದ್ಗೀತೆ ಒಂದು ಅರಿವಿನ ಕಡಲು. ಅಧ್ಯಾತ್ಮ-ಲೌಕಿಕಗಳೆರಡಕ್ಕೂ ಸಲ್ಲುವ ತಿಳಿವಿನದೊಂದು ಪರಿಪೂರ್ಣ ಪ್ಯಾಕೆಜ್. ಯಾರು ಯಾವ ಉದ್ದೇಶವನ್ನಿಟ್ಟುಕೊಂಡು ಗೀತೆಯ ಕದ ತಟ್ಟುತ್ತಾರೋ, ಅವರಿಗದು ಅಲ್ಲಿ ಲಭ್ಯವಗುತ್ತದೆ. ನಾವು ಯಾವುದನ್ನು ಗೀತೆಯಲ್ಲಿ ಅರಸುತ್ತೇವೆಯೋ ನಮಗೆ ಅದು ಅಲ್ಲಿ ದೊರಕುತ್ತದೆ. ಹೀಗೆ ಗೀತೆಯ ಕಡಲಿಂದ ಬೊಗಸೆಯರಿವನ್ನು ತುಂಬಿಕೊಳ್ಳುವ ಪ್ರಕ್ರಿಯೆ ಹಲವು ಶತಮಾನಗಳಿಂದ ನಡೆದುಬಂದಿದೆ. ಭಾರತೀಯ ತತ್ವಶಾಸ್ತ್ರದ ವಿವಿಧ ಬಣಗಳು, ಅಧ್ಯಾತ್ಮ ಪಂಥಗಳು ಈ ನಿಟ್ಟಿನಲ್ಲಿ ಮಹತ್ವದ ಅಧ್ಯಯನ ನಡೆಸಿದೆ. ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳನ್ನು ದ್ವೈತಾದ್ವೈತಗಳ ತರ್ಕಕ್ಕೆ ಅನ್ವಯಿಸಿ ಆಯಾ ಸಿದ್ಧಾಂತಕ್ಕೆ ಸೂಕ್ತವಾಗುವಂತೆ ತಾತ್ಪರ್ಯವನ್ನು ಪಡೆದುಕೊಂಡಿರುವುದು ಈ ನಿಟ್ಟಿನಲ್ಲಿ ಮೊದಲ ಉದಾಹರಣೆ. ಸಾಗರ ಮಥನ ನಡಸಿದಾಗ ವಿವಿಧ ಅಮೂಲ್ಯ ವಸ್ತುಗಳು ದೊರೆತ ಹಾಗೆಯೇ ಗೀತೆಯ ಕಡಲನ್ನು ಕಡೆದಾಗ ಅಮೂಲ್ಯ ಜ್ಞಾನ ಪ್ರಾಪ್ತವಾಗುವುದು.

ಇಂದಿನ ತಲೆಮಾರಿಗೆ 

ಭಗವದ್ಗೀತೆ ತನ್ನ ಬಳಿ ನಿಜವಾದ ಆಸಕ್ತಿ ಇಟ್ಟು ಬಂದವರಿಗೆಲ್ಲ ತರೆದುಕೊಂಡಿದೆ. ಸ್ವತಃ ಗೀತಾಚಾರ್ಯ ಶ್ರೀಕೃಷ್ಣನು ಯಾರು ಮತ್ಸರವನ್ನು ತೊರೆದು ಭಗವದ್ಗೀತೆಯನ್ನು ಅರಿಯುವ ಪ್ರಾಮಾಣಿಕತೆಯಿಂದ ಇದನ್ನು ಪಠಿಸುತ್ತಾರೋ ಅಂಥವರಿಗೆ ಈ ಗುಹ್ಯತಮ ಬೋಧನೆಯು ವೇದ್ಯವಾಗುತ್ತದೆ ಎಂದಿದ್ದಾನೆ.


ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನೇತಾರರು ಕೂಡ ಭಗವದ್ಗೀತೆಯಿಂದ ಸ್ಪೂರ್ತಿ ಪಡೆದಿದ್ದಾರೆ. ಗಾಂಧೀಜಿ ಭಗವದ್ಗೀತೆಯನ್ನು ತಮ್ಮ ಬದುಕು ರೂಪಿಸಿದ ಕೃತಿ ಎಂದು ಕೊಂಡಾಡಿದ್ದಾರೆ, ತಿಲಕರು ಗೀತೆಯ ಕುರಿತು ವ್ಯಾಖ್ಯಾನವನ್ನೇ ಬರೆದು ಗೀತಾರಹಸ್ಯ ಎಂಬ ಪುಸ್ತಕ ಪ್ರಕಟಿಸಿದ್ದರು. 

ಇಂದಿನ ತಲೆಮಾರು ಟೈಮ್ ಮ್ಯಾನೆಜ್‌ಮೆಂಟ್, ಟೀಮ್ ವರ್ಕ್, ಪಾಸಿಟಿವ್ ಥಿಂಕಿಂಗ್, ಡಿಸಿಷನ್ ಮೇಕಿಂಗ್‌ನಂತಹ ಇಂದಿನ ದೈನಂದಿನ ಚಟುವಟಿಕೆಗಳಿಗೆ ಪೂರಕವಾಗುವ ಹಾಗೂ ಪ್ರೇರಕವಾಗುವ ಅಂಶಗಳನ್ನು ಭಗವದ್ಗೀತೆಯಿಂದ ಪಡೆಯಲು ಯಶಸ್ವಿಯಾಗಿದೆ.


ಇದಕ್ಕೆ ಸರಿಯಾಗಿ ಹಲವಾರು ಕಾರ್ಪೋರೇಟ್ ಗುರುಗಳೂ ಆಧ್ಯಾತ್ಮಿಕ ಅಂಶಗಳೊಡನೆ ಭಗವದ್ಗೀತೆಯೊಳಗಿನ ಈ ಎಲ್ಲ ವಿಷಯಗಳನ್ನೂ ಹೆಕ್ಕಿ ತೆಗೆದು, ಮನದಟ್ಟಾಗುವಂತೆ ಬೋಧಿಸುತ್ತಿದ್ದಾರೆ. ಸ್ವಾಮಿ ಸದಾಶಿವ ತೀರ್ಥರ ಭಗವದ್ಗೀತಾ ಫಾರ್ ಮಾಡರ್ನ್ ಟೈಮ್ಸ್ ಎಂಬ ಹೊತ್ತಿಗೆಯಂತೂ ಇಂದಿನ ಸಾಕಷ್ಟು ಧಾವಂತಗಳಿಗೆ ಗೀತಾ ಬೋಧನೆಯ ಮೂಲಕ ಸಮಾಧಾನ ಒದಗಿಸುವ ಕೃತಿಯೆಂಬ ಮನ್ನಣೆಗೆ ಪಾತ್ರವಾಗಿದ್ದು, ಬೆಸ್ಟ್ ಸೆಲ್ಲರ್ ಪಟ್ಟಗಿಟ್ಟಿಸಿದೆ. 


ಹೀಗೆ ವಿವಿಧ ಆಯಾಮಗಳನ್ನು ಒಳಗೊಂಡಿರುವ ಗೀತೆಯು ವಾಸ್ತವದಲ್ಲಿ ನಮ್ಮ ಸಾಮಾನ್ಯ ತಿಳಿವಿನಂತೆ ಯುದ್ಧವನ್ನು ಎದುರಿಸುವ ಧೈರ್ಯ ತುಂಬುವ ಕೆಲಸವನ್ನೇ ಮಾಡುತ್ತಿದೆ. ದ್ವಂದ್ವಗಳೆಲ್ಲ ಕಾಲ ತಳ್ಳುವ ನಮಗೆ, ನಮ್ಮ ವಿರುದ್ಧವೇ ಯುದ್ಧಕ್ಕೆ ನಿಂತಿರುವ ನಮ್ಮನ್ನು ಹೇಗೆ ಎದುರಿಸಬೇಕು ಮತ್ತು ಮಣಿಸಬೇಕೆಂದು ಭಗವದ್ಗೀತೆಯು ಬೋಧಿಸುತ್ತದೆ. ಇಷ್ಟೆಲ್ಲ ಹೇಳಿಯೂ 'ಯಥೇಚ್ಛಸಿ ತಥಾ ಕುರು- ನಿನಗೆ ತೋಚಿದಂತೆ ಮಾಡು' ಎನ್ನುವ ಸ್ವಾತಂತ್ರ್ಯವನ್ನೂ ನೀಡುತ್ತದೆ. ಗೀತೆ. 'ನಿನ್ನಿಂದ ಕೆಲಸವಾಗಬೇಕಿದೆ. ಅದನ್ನು ನೀನು ಮಾಡಲೇಬೇಕಿದ್ದರೂ ಮಾಡುವವನು ನೀನಲ್ಲ' ಎನ್ನುವ ಗೀತೆಯ ಸರಳ ಬೋಧೆಯು ಬದುಕನ್ನು ನಿರಾಳವಾಗಿಸುವ ಸಾರ ಸೂತ್ರದಂತಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top