ಯುಗದ ಹಿಂದೆ ಉದಿಸಿದ ‘ಗೀತೆಯೆಂಬ ಕೌತುಕ’ ಇಂದೂ ಜಗದ ಗಮನವನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅಧ್ಯಾತ್ಮದಿಂದ ಆರಂಭಿಸಿ ಇಂದಿನ ಜೀವಿಕಾ ಕ್ಷೇತ್ರದ ಹಲವು ಘಟ್ಟಗಳವರೆಗೆ ಅದರ ವ್ಯಾಪ್ತಿ. ಹಲವು ಕ್ಷೇತ್ರದ ಗಣ್ಯ-ಮಹನೀಯರು ಅದನ್ನು ನೆಚ್ಚಿದ್ದಾರೆ, ಮೆಚ್ಚಿದ್ದಾರೆ. ಆದರೆ ನಾವಿನ್ನೂ ಅದರ ಆಳಕ್ಕೆ ಇಳಿದಿಲ್ಲ. ಅದರ ಕುರಿತು ಭಾರತೀಯರಿಗೆ ಆದರವಿದೆಯಾದರೂ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡಿಲ್ಲ. ಅದರ ಮಾರ್ಗದರ್ಶನವನ್ನು ಪಡೆದುಕೊಂಡಿಲ್ಲ. ಅದನ್ನು ನಮ್ಮದಾಗಿಸಿಕೊಂಡಿಲ್ಲ. ನಮ್ಮೊಳಗೆ ಇಳಿಸಿಕೊಂಡಿಲ್ಲ. ಮತ್ತೆ ಬಂದ ‘ಗೀತಾ ಜಯಂತಿ’ ತನ್ನಿರವನ್ನು ನಮಗೆ ನೆನೆಪಿಸುತ್ತಿದೆ. “ನಿಮ್ಮ ನೋವನ್ನು ನಿವಾರಿಸಲು, ನಲಿವನ್ನು ಉದ್ದೀಪಿಸಲು ನಾನು ಸಿದ್ಧ, ಸನ್ನದ್ಧ” ಎಂದದು ಸಾರುತ್ತಿದೆ. ನಾವದನ್ನು ಕೇಳಿಸಿಕೊಳ್ಳಬೇಕಿದೆ.
‘ಗೀತೆ’ ಮನೆಮನೆಯ ಯಶೋಗಾಥೆಗೆ ಕಾರಣವಾಗಬೇಕು. ಅದಕ್ಕೆ ಕಾರಣವಾಗಲು ‘ಗೀತೆ’ ಸಿದ್ಧ. ಕಾರಣವಾಗಿಸಿಕೊಳ್ಳಲು ನಾವು ಸಿದ್ಧರೇ?
ಸತ್ಯಕಾಮರು ನುಡಿಯುತ್ತಾರೆ- ಗೀತೆಯನ್ನು ನಾವು ನಮ್ಮೊಳಗೆ ಬಿಟ್ಟರೆ ಅದು ಮಾಡಬೇಕಾದದ್ದನ್ನು ಮಾಡಿಯೆ ಬಿಡುತ್ತದೆ. ಕೃಷ್ಣನಿಗಿಂತ ದೊಡ್ಡವರ ಮೇಲೆ ಅದು ಏನೂ ಪರಿಣಾಮ ಮಾಡಲಿಕ್ಕಿಲ್ಲ. ಆದರೆ ಯಾರು ತನ್ನೊಳಗೆ ಅದನ್ನು ಸೇರಿಸಿಬಿಡುತ್ತಾರೋ ಅವರಿಗೆ ಪರಿಣಾಮ ಇಲ್ಲ ಎನ್ನುವುದು ಸಾಧ್ಯವೇ ಇಲ್ಲ.
ಅನುಪಮ ಸಂಗಾತಿ:
ಹಿಂದಿನ ಕಾಲದಲ್ಲಿ ವೇದಾಂತದಲ್ಲಿ ಆಸಕ್ತಿ ಇದ್ದವರಷ್ಟೆ ಭಗವದ್ಗೀತೆಯ ಅಧ್ಯಯನ ಮಾಡುತ್ತಿದ್ದರು. ಆದರೆ ಈಚಿನ ಕಾಲದಲ್ಲಿ ದೈನಂದಿನ ಜೀವನದ ಎಲ್ಲ ಸನ್ನಿವೇಶಗಳಿಗೂ ಭಗವದ್ಗೀತೆಯಿಂದ ಮಾರ್ಗದರ್ಶನ ಲಭ್ಯವಿದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿದೆ. ರಾಜಕಾರಣಿಗಳಿರಲಿ, ಉದ್ಯಮಪತಿಗಳಿರಲಿ, ವರ್ತಕರಿರಲಿ, ಸಂನ್ಯಾಸಿಗಳಿರಲಿ, ಅಧ್ಯಾತ್ಮ ಸಾಧಕರಿರಲಿ, ವಿದ್ಯಾರ್ಥಿಗಳಿರಲಿ, ಗೃಹಸ್ಥರಿರಲಿ- ಎಲ್ಲರಿಗೂ ಗೀತೆಯಿಂದ ಲಾಭವಿದೆ. ಏಕೆಂದರೆ ಗೀತೆಯು ಜ್ಞಾನಪ್ರದಾಯಿನಿಯಾದದ್ದು. ಜ್ಞಾನಶಕ್ತಿಯಿಂದಲೇ ಇಚ್ಛಾಶಕ್ತಿಯೂ, ಕ್ರಿಯಾಶಕ್ತಿಯೂ ಹುಟ್ಟುವುದು. ಗೀತೆಯ ವಾಕ್ಯಗಳು ಅವೇ ಇದ್ದರೂ ನಮ್ಮ ಮನಸ್ಸಿನ ಯೋಗ್ಯತೆ ಹೆಚ್ಚಿದ ಹಾಗೆಲ್ಲ ಗೀತೆಯಲ್ಲಿ ಹೊಸ ಹೊಸ ಅರ್ಥಗಳು ನಮಗೆ ತೋರುತ್ತಾ ಹೋಗುತ್ತವೆ. ಇದು ಗೀತೆಯ ವಿಶೇಷ. ಒಂದು ಸಾಮಾನ್ಯ ಕಥೆಯೋ, ನಾಟಕವೋ ಒಂದು ಸಲ ಓದಿದರೆ ಮುಗಿಯಿತು. ಭಗವದ್ಗೀತೆಯದರೋ ಇಡೀ ಜೀವಮಾನ ನಮ್ಮ ಜೊತೆಯಲ್ಲಿ ಸ್ನೇಹಿತನ ಹಾಗೆ ಇರುತ್ತದೆ.
ಅಹಂಕಾರ ಅತಿಯಾಗಿ ಬೆಳೆಯುವುದರಿಂದಲೇ ವ್ಯಕ್ತಿಜೀವನವೂ, ಸಾಮಾಜಿಕ ಜೀವನವೂ ಅವ್ಯವಸ್ಥಿತವಾಗುವುದು. ಆದ್ದರಿಂದ ಅಹಂಕಾರವನ್ನು ನಿಯಂತ್ರಣ ಮಾಡಿಕೊಳ್ಳುವ ವಿಧಾನಗಳನ್ನು ತಿಳಿಸಿ ಗೀತೆ ಹೇಳಿವೆ. ಎಲ್ಲರೂ ತಮ್ಮ ಅಹಂಕಾರಗಳಿಗೆ ಒಂದಷ್ಟು ಕಡಿವಾಣ ಹಾಕಿಕೊಂಡರೆ ಜಗತ್ತಿನಲ್ಲಿ ವ್ಯಕ್ತಿ- ವ್ಯಕ್ತಿ ಸಂಬAಧ ಉದಾತ್ತ ರೀತಿಯದಾಗುತ್ತದೆ, ಜಗತ್ತು ಸುಂದರವಾಗುತ್ತದೆ, ಶಾಂತಿಮಯವಾಗುತ್ತದೆ. ಎಲ್ಲರೂ ಅವರವರಿಗೆ ವಿಹಿತವಾದ ಕರ್ತವ್ಯಗಳನ್ನು ಪೂರ್ಣ ಮನಸ್ಸಿಟ್ಟು ದಕ್ಷತೆಯಿಂದ ಮಾಡಬೇಕು ಎಂದು ಗೀತೆ ಹೇಳಿದೆ: “ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ”
ಇಡೀ ಸಮಾಜದಲ್ಲಿ ಇಂತಹ ಕರ್ತವ್ಯಪ್ರಜ್ಞೆ ದೃಢವಾಗಿ ಇದ್ದ ಕಾಲದಲ್ಲಿ ಈಗ್ಗೆ ಇನ್ನೂರು-ಮುನ್ನೂರು ವರ್ಷ ಹಿಂದೆ- ಸರಕಾರಗಳಿಗೆ ಬಹಳ ಕಡಿಮೆ ಕೆಲಸ ಇರುತ್ತಿತ್ತು.
ವೇದಗಳೂ, ಉಪನಿಷತ್ತುಗಳೂ ಎಲ್ಲರಿಗೂ ಅರ್ಥವಾಗುವಂಥವಲ್ಲ. ಅವುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪಂಡಿತರ ಸಹಾಯ ಅನಿವಾರ್ಯ. ಆದರೆ ಗೀತೆಯನ್ನು ಆಸಕ್ತರು ಯಾರು ಓದಿದರೂ ಒಂದಷ್ಟು ಅರ್ಥ ಆಗುತ್ತದೆ; ಮನನ-ಚಿಂತನೆ ಮಾಡಿದ ಹಾಗೆಲ್ಲ ಹೆಚ್ಚು ಹೆಚ್ಚು ಸೂಕ್ಷ್ಮ ಅರ್ಥಗಳು ಮನವರಿಕೆಯಾಗುತ್ತವೆ. ಆದ್ದರಿಂದಲೇ ಗೀತೆಯನ್ನು “ಪ್ರಪನ್ನಪಾರಿಜಾತಾಯ” “ಶರಣಾಗರಿಗೆ ಕಲ್ಪವೃಕ್ಷ” ಎಂದೆಲ್ಲ ಧ್ಯಾನ ಶ್ಲೋಕಗಳಲ್ಲಿ ವರ್ಣಿಸಿದ್ದಾರೆ.
“ಗೀತಾ ಜ್ಞಾಮನಯೀ ಗಂಗಾ, ಪುನಾತಿ ಭುವನತ್ರಯಮ್” “ಗೀತೆಯು ಉದಾತ್ತ ಜ್ಞಾನದ ಗಂಗಾನದಿ. ಇದು ಎಲ್ಲ ಲೋಕವನ್ನೂ ಪಾವನಗೊಳಿಸುತ್ತದೆ.
ಕೃಷ್ಣಾವತಾರ:
ಶ್ರೀಕೃಷ್ಣನದು ಪೂರ್ಣಾವತಾರವೆಂದು ನಮ್ಮ ಪಾರಂಪರಿಕ ವಿಶ್ವಾಸವಿದೆ. ಮನುಷ್ಯ ಪ್ರವೃತ್ತಿ ವಿಕಟತೆಗಳ ಎದುರಿನಲ್ಲಿ ಅತ್ಯಂತಿಕಧರ್ಮದ ಸಂಸ್ಥಾಪನೆ ಒಬ್ಬ ಅವತಾರಪುರುಷನಿಂದ ಹೇಗೆ ಆಯಿತು ಎನ್ನುವುದನ್ನು ಶ್ರೀಕೃಷ್ಣಚರಿತ್ರೆಯಲ್ಲಿ ಕಾಣುತ್ತೇವೆ. ಭಾಗವತದಲ್ಲಿ ಶ್ರೀಕೃಷ್ಣನದೇ ಮಾತಿದೆ:
ಬ್ರಹ್ಮನ್ ಧರ್ಮಸ್ಯ ವಕ್ತಾಹಂ ಕರ್ತಾ ತದನುಮೋದಿತಾ|
ತಚ್ಛಕ್ಷಯಂಲ್ಲೋಕಮಿಮಂ ಆಸ್ಥಿತಃ ಪುತ್ರ ಮಾ ಖಿದಾ ||
“ಜನರಿಗೆ ಶಿಕ್ಷಣ ಕೊಡುವುದಕ್ಕಾಗಿಯೇ ನಾನು ನಿಂತಿದ್ದೇನೆ” ಎಂದು ಶ್ರೀಕೃಷ್ಣನು ನಾರದರಿಗೆ ಹೇಳುತ್ತಾನೆ. ಆ ಶಿಕ್ಷಣವಷ್ಟೂ ಹರಳುಗಟ್ಟಿರುವುದು ಭಗವದ್ಗೀತೆಯಲ್ಲಿ. ಅವನ ಜೀವನದ ಮಿಕ್ಕೆಲ್ಲ ಸಾಧನೆಗಳನ್ನು ಪಕ್ಕಕ್ಕಿಟ್ಟರೂ ಅವನಿಗೆ ಅತ್ಯುಜ್ವಲ ದೀಪಧಾರಿಯ ಸ್ಥಾನವನ್ನು ದೃಢಪಡಿಸುವುದಕ್ಕೆ ಭಗವದ್ಗೀತೆಯೊಂದೇ ಸಾಕಾಗುತ್ತದೆ. "The Gita is the heart’s heart of the Mahabharatha.” ಭಗವದ್ಗೀತೆಯನ್ನು ಲೋಕಕ್ಕೆ ಕೊಡುವುದಕ್ಕಾಗಿ ಮಹಾಭಾರತದ ರಚನೆಯಾಯಿತು ಎಂದರೆ ತಪ್ಪಾಗಲಾರದು.
ಶ್ರೀಕೃಷ್ಣ ಎಂದು ಸಂಬೋಧನೆಗೊಂಡಿರುವುದು ಸ್ವಯಂ ಪರಮಾತ್ಮನೇ. ಅರ್ಜುನನ ಸಂದಿಗ್ಧತೆಯನ್ನು ನಿಮಿತ್ತ ಮಾಡಿಕೊಂಡು ಲೋಕೋದ್ಧಾರಕ್ಕಾಗಿ ಜಗಜ್ಜೀವನದ ಮೂಲಭೂತ ಪ್ರಶ್ನೆಗಳಿಗೆ ಶ್ರೀಕೃಷ್ಣನು ಸಮಾಧಾನ ನೀಡಿದ್ದಾನೆ. ಅದನ್ನು ಮನಸ್ಸು-ಆತ್ಮದ ನಡುವಣ ಸಂವಾದವೆಂದು ಬೇಕಾದರೂ ಭಾವಿಸಬಹುದು. ಈ ಸಾರ್ವಕಾಲಿಕತೆ ಇರುವುದರಿಂದಲೇ ಈಚಿನ ದಿನಗಳಲ್ಲಿ ಅರ್ಥಶಾಸ್ತ್ರ, ವ್ಯವಸ್ಥಾಪನಾಶಾಸ್ತ್ರ ಮೊದಲಾದ ಕ್ಷೇತ್ರಗಳಿಗೆ ಭಗವದ್ಗೀತೆಯ ಸೂತ್ರೀಕರಣಗಳನ್ನು ಅನ್ವಯಿಸುವ ಪ್ರಯತ್ನಗಳಾಗಿವೆ.
ಭಗವದ್ಗೀತೆಯ ಒಂದು ಪ್ರಸಿದ್ಧ ಧ್ಯಾನಶ್ಲೋಕ ಇದು:
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ ||
“ಈ ಮಹಾನದಿಗೆ ಭೀಷ್ಮದ್ರೋಣರು ದಡಗಳು. ಜಯದ್ರಥನೇ ನೀರು. ಗಾಂಧಾರರಾಜನೇ ನೀಲಕಮಲ. ಶಲ್ಯನೇ ತಿಮಿಂಗಲ. ಕೃಪನೇ ಸೆಳವು. ಕರ್ಣನೇ ಮೇರೆಮೀರುವಿಕೆ. ಅಶ್ವತ್ಥಾಮ ವಿಕರ್ಣರೇ ಭೀಕರ ಮೊಸಳೆಗಳು. ದುರ್ಯೋಧನನೇ ಸುಳಿ. ಈ ದುರ್ಗಮ ನದಿಯನ್ನು ಪಾಂಡವರು ದಾಟಿದರು. ಅವರನ್ನು ದಾಟಿಸಿದವನು ಶ್ರೀಕೃಷ್ಣ.”
ಕುರುಕ್ಷೇತ್ರಯುದ್ಧದ ಪಾತ್ರಗಳೆಲ್ಲ ವಿವಿಧ ಮನಃಪ್ರವೃತ್ತಿಗಳ ಮೂರ್ತೀಕರಣಗಳೆಂದು ಈ ವರ್ಣನೆಯಲ್ಲಿ ಧ್ವನಿತವಾಗಿದೆ. ಮಹಾಭಾರತವು ಕೇವಲ ಒಂದು ಯುದ್ಧಕಥನವಲ್ಲವೆಂದೂ ಬಹು ವಿಶಾಲವಾದ ಉದ್ದೇಶವನ್ನುಳ್ಳದ್ದೆಂದೂ ಆ ವಾಙ್ಮಯದ ವಿಸ್ತಾರದಿಂದಲೂ ಸಂಕೀರ್ಣತೆಯಿಂದಲೂ ಸ್ಫುಟಗೊಂಡಿದೆ.
(ಮುಂದುವರಿಯುವುದು....)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







