ಬಾಲ್ಯದ ಆ ದಿನಗಳು

Upayuktha
0


ಬೇಸಿಗೆ ರಜೆ ಕಳೆದು ಶಾಲಾ ತರಗತಿಗಳು ಆರಂಭವಾಗಿದೆ. ಹಲವು ದಿನಗಳಿಂದ ಕದ ಮುಚ್ಚಿದ ಶಾಲೆಗಳು ಇಂದು ಮಕ್ಕಳಿಂದ ತುಂಬಿದೆ. ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುತ್ತಾ ಬಲು ಹುರುಪಿನೊಂದಿಗೆ ಶಾಲಾ ಸಮವಸ್ತ್ರ ಧರಿಸಿ ಬರುತ್ತಿದ್ದರೆ, ಇವರನ್ನು ನೋಡುವಾಗ ನನ್ನ ಶಾಲಾ ದಿನಗಳ ನೆನಪು ಒಮ್ಮೆಲೇ ಕಣ್ಣ ಮುಂದೆ ಹಾದುಹೋಯಿತು.


ಒಂದರಿಂದ ಐದನೇ ತರಗತಿಯವರೆಗೆ ನಮ್ಮಊರಿನ ಸರಕಾರಿ ಶಾಲೆಯಲ್ಲಿ ಕಲಿತ ನಾನು ಆ ದಿನಗಳನ್ನು ನೆನೆಯುತ್ತಿದ್ದರೆ ಅಲ್ಲಿಯ ಎಷ್ಟೋ ನೆನಪುಗಳು ಇಂದಿಗೂ ಹಚ್ಚ ಹಸಿರಿನಂತಾಗಿರುವಂತೆ ಮರುಕಳಿಸುತ್ತದೆ.


ಅಂಗನವಾಡಿಯಿಂದ ದೊಡ್ಡ ಶಾಲೆಗೆ ಹೋಗುವ ಖುಷಿಯಲ್ಲಿ ಆ ದಿನ ರಾತ್ರಿ ನಿದ್ದೆ ಮರೆತು ಹೋದಂತೆ. ಶಾಲಾ ಆರಂಭದಲ್ಲೇ ನಮಗೆ ಮಳೆಯ  ಭಾಗ್ಯ ಸಿಗುತ್ತಿದ್ದ ಕಾರಣ ಹೊಸ ಹೊಸ ಹೂವಿನ ಕೊಡೆಯನ್ನು ಒಂದು ಕೈಯಲ್ಲಿ, ಬೆನ್ನಲ್ಲಿ ಗೊಂಬೆ ಆಕಾರದ ಪುಸ್ತಕದ ಬ್ಯಾಗ್ ಹಾಕಿ ಅಮ್ಮನ ಬೆಚ್ಚನೆಯ ಅಂಗೈಯೊಳಗೆ ಪುಟ್ಟ ಕೈಯನ್ನು ಇಟ್ಟು ಶಾಲೆಗೆ ಹೋಗುತ್ತಿದ್ದೆವು.


ನಲಿ ಕಲಿ ಎಂಬ ಹೆಸರಿನೊಂದಿಗೆ ನೆಲದ ಮೇಲೆ ಟೀಚರ್‌ನ ಸುತ್ತಲೂ ಕುಳಿತುಕೊಂಡು ಪಾಠ ಕೇಳುತ್ತಿದ್ದರೆ ಏನು ಆನಂದ. ಶಾಲೆ ಬಿಟ್ಟು ತಕ್ಷಣ ಅಂಗಳದಲ್ಲಿ ಆಟ ಆಡಲು ಧಾರಾಳ ಸಮಯವೂ ಸಿಗುತ್ತಿತ್ತು. ಹೂವಿನ ಗಿಡ ನೆಟ್ಟು ಪ್ರತಿದಿನ ನೀರು ಹಾಕುವ ಕೆಲಸ ನಮಗೆ ಇರುತ್ತಿತ್ತು. ಶಿಕ್ಷಕರು ಪಾಠ ಮಾಡುತ್ತಿದ್ದ ಸಮಯದಲ್ಲಿ ಅಂಗಳದಲ್ಲಿ ಚಿಟ್ಟೆ ಹಾರುವುದು ಕಂಡ ತಕ್ಷಣ ಒಂದಕ್ಕೆ ಎಂದು ಕೈ ಬೆರಳು ತೋರಿಸಿ ಅಂಗಳಕ್ಕೆ ಓಡುತ್ತಿದ್ದೆವು.


ನಮಗೆ ಅಮ್ಮನ ವಾತ್ಸಲ್ಯ ಕೊಟ್ಟು ಪ್ರೀತಿಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕರನ್ನು ನಾವು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಇಂದಿಗೂ ನಮ್ಮನ್ನು ಕಂಡ ತಕ್ಷಣ ಗುರುತಿಸಿದರೆ ನಮಗೆ ಏನೋ‌ ಸಂಭ್ರಮ.


ಅದರಲ್ಲೂ ಶಾಲೆಯ 6 ಮಕ್ಕಳಿಗೆ ಮುಖ್ಯಮಂತ್ರಿ ನಾನು, ಎಷ್ಟೂ ತರಲೆ ಮಾಡಿ ಬೇರೆಯವರ ಮೇಲೆ ದೂರು ಹೇಳಿದ್ದು ಎಲ್ಲಾ ಈಗ ಕನಸಾಗಿದೆ.


ಆದರೆ ವಿಪರ್ಯಾಸ ಎಂದರೆ ಇಷ್ಟು ವರ್ಷಗಳ ಕಾಲ ಎಲ್ಲರಿಗೂ ವಿದ್ಯಾಭ್ಯಾಸವನ್ನು ನೀಡುತ್ತಿದ್ದ ಶಾಲೆಯು ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಸರಕಾರಿ ಶಾಲೆಯಿಂದ ದೂರ ಓಡುವ ಜನರು ಖಾಸಗಿ ಶಾಲೆಯಲ್ಲಿ ಲಕ್ಷ ಲಕ್ಷ ಕೊಟ್ಟು ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಎಷ್ಟೋ ಜನರಿಗೆ ವಿದ್ಯಾಭ್ಯಾಸ ನೀಡಿದ ಶಾಲೆ ಇಂದು ಒಂಟಿಯಾಗಿದೆ.


ಸರಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಓದುತ್ತಿದ್ದಾರೆ ಎನ್ನುವಾಗ ವಿಚಿತ್ರವಾಗಿ ನೋಡುವ ಆ ಜನರೇ ತಾವು ಬಾಲ್ಯದಲ್ಲಿ ಸರಕಾರಿ ಶಾಲೆಯಲ್ಲಿ ಕಲಿತದ್ದು ಎಂದು ಮರೆತಂತಿದೆ. 


ಇನ್ನಾದರೂ ಸರಕಾರಿ ಶಾಲೆಯನ್ನು ಉಳಿಸೋಣ. ಬಂಗಾರದಂತಹ ದಿನಗಳನ್ನು ಬರೆದು ಮುಗಿಸಲು ಸಾಧ್ಯವಿಲ್ಲ. ಅದನ್ನು ಮೆಲಕು ಹಾಕಬಹುದಷ್ಟೇ .ನನ್ನ ನೆನಪಿನ ಗಣಿಯೊಳಗಡೆ ಈ ನೆನಪುಗಳು ಇಂದಿಗೂ ಬೆಚ್ಚಗೆ ಅವಿತುಕೊಂಡಿದೆ. ಮತ್ತೊಮ್ಮೆ ಆ ಅಮೂಲ್ಯವಾದ ಸವಿಗನಸನ್ನು ಮಕ್ಕಳಾಗಿ ಮೇಲಕ್ಕೂ ಹಾಕಬಹುದು.


- ಧನ್ಯ ದಾಮೋದರ, ಮುರೂರು- ಕೇನಾಜೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top