ಅಂಕಕ್ಕಿಂತಲೂ ಕೌಶಲ ಅಗತ್ಯ: ಧನ್ಯಾ ಪ್ರಭು

Upayuktha
0

ಉಜಿರೆ: ಅಂಕಗಳು ಎಂದಿಗೂ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ನಮ್ಮ ಕೌಶಲ್ಯಗಳು ನಮ್ಮ ಅಭಿವೃದ್ಧಿಗೆ ಪೂರಕವಾಗುತ್ತವೆ. ಅದಕ್ಕಾಗಿ, ಕಾಲೇಜು ದಿನಗಳಲ್ಲಿ ಸಿಕ್ಕ ಸದವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಫೆಲೋಶಿಪ್ ಪುರಸ್ಕೃತೆ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಧನ್ಯಾ ಪ್ರಭು ಹೇಳಿದರು.


ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ವತಿಯಿಂದ ಅ.17 ರಂದು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆ 'ಎಕೋ-ವಿಷನ್ 2025' ಉದ್ಘಾಟಿಸಿ ಅವರು ಮಾತನಾಡಿದರು.


ನಮ್ಮ ಸುತ್ತಮುತ್ತ ಅವಕಾಶಗಳು ಬಹಳಷ್ಟಿವೆ. ಅವುಗಳನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಕಾಲೇಜಿನಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಾನೂ ಸಹ ಇಂದು ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ನನಗೆ ನನ್ನ ಕಾಲೇಜು ದಿನಗಳಲ್ಲಿ ಸಿಕ್ಕ ಅವಕಾಶಗಳು ಎಂದರು.


ಕೆಲವೊಮ್ಮೆ ನಿಮ್ಮ ಮನಸ್ಸು ಹೇಳುವುದಕ್ಕಿಂತ ಮೊದಲೇ ನಿಮ್ಮ ಹೃದಯ ಏನು ಮಾಡಬೇಕು ಎಂದು ಹೇಳುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ಹೃದಯದ ಮಾತನ್ನು ಕೇಳಿ. ಸಮಯ ಸಿಕ್ಕಾಗ ಪ್ರವಾಸಗಳನ್ನು ಮಾಡಿ. ಆಗ ಮಾತ್ರ ಹೊರಗಿನ ಪ್ರಪಂಚ ನಿಮಗೆ ತಿಳಿಯುತ್ತದೆ ಎಂದು ಕಿವಿಮಾತು ಹೇಳಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಕಲಿಕೆ ಎಂದರೆ ಪಾಠ ಮಾಡುವುದು, ಕಲಿಯುವುದು ಹಾಗೂ ತಿದ್ದುವುದಕ್ಕೆ ಮಾತ್ರ ಸೀಮಿತವಾಗಿತ್ತು, ಆದರೆ ಅದರ ಚಿತ್ರಣ ಇಂದು ಬದಲಾಗಿದೆ. ಅವುಗಳೊಂದಿಗೆ ಈಗ ಕೌಶ್ಯಾಭಿವೃದ್ಧಿ ಕೂಡ ಸೇರಿಕೊಂಡಿದೆ. ನಾವು ಮೊಬೈಲ್ ಗಳನ್ನು ಹೇಗೆ ಕಾಲಕ್ಕೆ ತಕ್ಕಂತೆ ಬದಲಿಸುತ್ತೇವೆಯೋ ಹಾಗೆಯೇ ಶಿಕ್ಷಣವೂ ಸಹ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ನೀವು ನಿಮ್ಮ ಕೌಶಲ್ಯ, ಮೌಲ್ಯ ಹಾಗೂ ಗುಣವನ್ನು ಉತ್ತಮವಾಗಿ ಬೆಳೆಸಿಕೊಂಡಾಗ ಮಾತ್ರ ನಿಮ್ಮ ಜ್ಞಾನ ಹಾಗೂ ವ್ಯಕ್ತಿತ್ವ ವಿಕಸನ ಆಗುತ್ತದೆ ಎಂದರು.


ಧನ್ಯಾ ಪ್ರಭು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ಸ್ವಾಗತಿಸಿದರು. ಸೃಷ್ಟಿ ಮತ್ತು ತಂಡ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಮಹೇಶ್ ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ಪುನೀತ್ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top