ಸುರತ್ಕಲ್: ರಾಷ್ಟ್ರ ರಕ್ಷಣೆಯಲ್ಲಿ ಭಾರತೀಯ ಸೇನಾ ಪಡೆಗಳ ಶೌರ್ಯ ಪ್ರದರ್ಶನ, ಕಠಿಣ ಪರಿಶ್ರಮ, ಪ್ರತಿಭೆ, ಬದ್ಧತೆ ಅನನ್ಯವಾದುದು. ಯುವಜನತೆ ಸೇನಾ ಪಡೆಗೆ ಸೇರ್ಪಡೆಗೊಳ್ಳುವ ಮೂಲಕ ರಾಷ್ಟ್ರ ಸೇವೆ ಮಾಡಬಹುದಾಗಿದೆ ಎಂದು ಭಾರತೀಯ ವಾಯು ಸೇನೆಯ ಬೆಂಗಳೂರಿನ ಟ್ರೈನಿಂಗ್ ಕಮಾಂಡ್ ಸಾರ್ಜಂಟ್ ಮಣೀಂದ್ರ ಕೆ. ಸಾಲ್ಯಾನ್ ಹೊಸಬೆಟ್ಟು ನುಡಿದರು.
ಅವರು ಸುರತ್ಕಲ್ ಅಪಾದ್ಭಾಂಧವ ಸಮಾಜ ಸೇವಾ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಹೊಸಬೆಟ್ಟು ಸಾನದ ಮನೆಯಲ್ಲಿ ನಡೆದ 'ವೀರ ಯೋಧರ ಮನೆಯಲ್ಲಿ ದೀಪಾವಳಿ ಆಚರಣೆ' ಕಾರ್ಯಕ್ರಮದಲ್ಲಿ ಗೌರವ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ತಮ್ಮ 18 ವರ್ಷಗಳ ವಾಯುಸೇನಾ ಅನುಭವಗಳನ್ನು ವಿವರಿಸಿ ಮಡದಿ ಹಾಗೂ ಹೆತ್ತವರ ಬೆಂಬಲ, ಮನೋ ಸ್ಟೈರ್ಯ ಯೋಧರಿಗೆ ವಿಶೇಷ ಆತ್ಮವಿಶ್ವಾಸವನ್ನು ತಂದು ಕೊಡುತ್ತದೆ. ಯೋಧರ ಕುರಿತು ಇಂದು ಅಭಿಮಾನ ಹಾಗೂ ಗೌರವದ ಭಾವನೆ ಬೆಳೆಯತ್ತಿರುವುದು ಸಂತಸದ ವಿಚಾರ ಎಂದರು.
ಭೂ ಸೇನೆಯ ನಿವೃತ್ತ ಯೋಧ ಭರತ್ ಹೊಸಬೆಟ್ಟು ಭಾರತೀಯ ಸೇನೆಯಲ್ಲಿ ಯುವ ಜನತೆಗೆ ವಿಪುಲ ಅವಕಾಶಗಳಿದ್ದು ಸೇರ್ಪಡೆಗೆ ಆಸಕ್ತಿ ತಾಳ ಬೇಕೆಂದರು.
ಸುರತ್ಕಲ್ ರೋಟರಿ ಕ್ಲಬ್ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವೀರ ಯೋಧರು ನಿಜವಾದ ನಾಯಕ ರಾಗಿದ್ದು ವಿದ್ಯಾರ್ಥಿಗಳಿಗೆ ಸೇನಾ ಕಾರ್ಯಗಳನ್ನು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಯೋಧರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡುವ ಮೂಲಕ ವೀರ ಯೋಧರೆಲ್ಲರಿಗೆ ಗೌರವ, ಪ್ರೀತಿ ಸಲ್ಲಿಸಲಾಗುತ್ತಿದೆ ಎಂದರು.
ಅರ್ಚನಾ, ಯಶಿಕ, ಚಂದ್ರಹಾಸ್, ಮಾಲತಿ, ಕುಮಾರ್ ಕರ್ಕೇರ, ಸುಮತಿ, ಉದ್ಯಮಿ ತಾರಾನಾಥ್ ಕಟ್ಲ, ಸರೋಜ ತಾರಾನಾಥ್, ಲಕ್ಷ್ಮಿ ಹೇಮಂತ್ ಹೊಸಬೆಟ್ಟು, ಅಶ್ವಿನ್ ಕುಮಾರ್, ಕವಿತಾ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಸೈನಿಕ ಲೀಲಾಧರ ಕಡಂಬೋಡಿ ಸ್ವಾಗತಿಸಿದರು. ಅಪಾದ್ಭಾಂಧವ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಉಮೇಶ ಇಡ್ಯಾ ವಂದಿಸಿದರು. ಸದಸ್ಯರೆಲ್ಲರೂ ಹೂ ಬತ್ತಿಗಳನ್ನು ಪ್ರಕಾಶಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

