ಆಕಾಶದೆತ್ತರಕ್ಕೆ ಒಮ್ಮೆ ಕಣ್ಣು ಹಾಯಿಸಿದಾಗ ನಾ ಕಂಡೆ ಮೋಡಗಳು ಚಲಿಸುವುದನ್ನು. ಖುಷಿಯಿಂದ ಕುಣಿಯುತ್ತಾ ಹಾಡಿದೆ ಒಂದು ಹಾಡನ್ನು "ಬಾನ ತೊರೆದು ನೀಲಿ ಮರೆಯಾಯಿತೇತಕೇ, ಕರಗೀತೇ ಈ ಮೋಡ ನಿಟ್ಟುಸಿರ ಶಾಖಕೇ". ನನ್ನ ಸುಶ್ರಾವ್ಯ ಗಾಯನಕ್ಕೆ ತಲೆದೂಗುತ್ತಿದ್ದ ನನ್ನ ಪ್ರೀತಿಯ ಪುಟ್ಟಕ್ಕ, ಮುದ್ದಮ್ಮ ಹಾಗೂ ಪುಟ್ಟ ಕಂದಮ್ಮ ಸಾಧುಮ್ಮನನ್ನು ಮುದ್ದಾಡುತ್ತಾ ನಿಂತಿದ್ದಾಗ ಥಟ್ಟನೆ ನೆನಪಾಗಿದ್ದು ನನ್ನ ಬಬ್ಲಿ ಮತ್ತು ಟೈಗರ್. ಇವರು ಯಾರು ಅಂತ ಅಂದುಕೊಂಡರಾ ಅವರೇ ನನ್ನ ನಾಯಿಮರಿಗಳು. ಹೀಗೇ ಟೈಗರನ್ನು ಓಡಿಸುತ್ತಾ ಇದ್ದಾಗ, ಅವನು ನನ್ನ ಕೈಗೆ ಸಿಗಲೇ ಇಲ್ಲ. ಇನ್ನೇನು ಕೈಗೆ ಸಿಗಬೇಕು ಅನ್ನುವಷ್ಟರಲ್ಲಿ ನಂಗೆ ಎಚ್ಚಾರವಾಯಿತು. ಕಣ್ಣು ಬಿಟ್ಟು ನೋಡಿದಾಗ ಕಗ್ಗತ್ತಲು.
ಮಂದ ಬೆಳಕಿನ ಲೈಟ್ ಹಾಕಿ ಯಾವತ್ತೂ ಮಲಗ್ತೇನೆ, ಇವತ್ತೇನು ಮರೆತು ಬಿಟ್ಟಿದ್ದೇನಾ, ಫ್ಯಾನ್ ಫುಲ್ ಮಾಡೋದು ಮರ್ತೋಗಿದ್ದೇನಾ, ಅರೆ ಇದೇನು ಹೊರಗಡೆಯಿಂದ ಲೈಟ್ ಹಾಕಿದ್ದಾರಲ್ಲ ನಾನೆಲ್ಲಿದ್ದೇನೆ ಅಂತ ಅನ್ನಿಸಿತು, ಯೋಚಿಸ್ತಾ ಇದ್ದ ಹಾಗೆ ನೆನಪಾಯ್ತು ನಾನು ಹಾಸ್ಟೆಲಲ್ಲಿ ಇದ್ದೇನೆ ಅಂತ. ಆಗ ಗೊತ್ತಾಯ್ತು ನಾನು ಕಂಡದ್ದು ಕನಸು ಅಂತ. ಮನೆಯಲ್ಲಾಗ್ತಿದ್ರೆ ನನ್ನಮ್ಮ "ಏಳು ಕಂದ ಕಾಲೇಜು ಉಂಟಲ್ವಾ" ಅಂತ ಪ್ರೀತಿಯಿಂದ ಎಬ್ಬಿಸೋದೇ ಅಲಾರಾಂ ಆಗಿತ್ತು. ಆದ್ರೆ ಇಲ್ಲಿ ರೂಂಮೇಟ್ ಟ್ಯಾಪಲ್ಲಿ ನೀರು ಬಿಟ್ಟಾಗ ಶಬ್ದ ಬರೋದೇ ಅಲಾರಾಮು. ಹಾಗೆ ನನ್ನ ಕೆಲಸಗಳನ್ನು ಮುಗಿಸಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ, ತಿಂಡಿ ತಿಂದಾಗ ನೆನಪಾಗಿದ್ದು ನನ್ನಮ್ಮ. ಅವರು ಪ್ರೀತಿಯಿಂದ ನಂಗೆ ಇಷ್ಟ ಇರೋ ಕೈರುಚೀನ ಮಾಡಿ ಅವರೇ ಬಡಿಸಿ, ಅಷ್ಟೇ ಅಲ್ಲ ಅವರೇ ಟಿಫಿನ್ ಗೆ ಹಾಕಿ ಕೊಡುತ್ತಾ ಇದ್ರು.
ರಿಯಲ್ ಆಗಿ ಸಿಕ್ಕಿ ಮಾತಾಡ್ತಾ ಇದ್ದವರು ಈಗ ರೀಲ್ ಥರ ಫೋನಲ್ಲಿ ವಿಡಿಯೋ ಕಾಲಲ್ಲಿ ನೋಡೋ ಹಾಗಾಯ್ತು. ಮನಸಲ್ಲಿ ಬೇಜಾರಾದ್ರು ಸಹಿಸಿಕೊಂಡು ನಮ್ಮ ಓದಿಗೋಸ್ಕರ ಇಲ್ಲಿ ಇರಲೇ ಬೇಕಲ್ವಾ, ಅದಕ್ಕೆ ತಾನೇ ಅಪ್ಪಾ, ಅಮ್ಮ ಇಲ್ಲಿ ಸೇರಿಸಿರೋದು ಅಂತ ಅಂದುಕೊಂಡು ಸಮಾಧಾನವಾಗ್ತಾ ಇದ್ದೆ.
ಯಾವತ್ತೂ ಸ್ನಾನ ಮುಗಿಸಿ ಆದ ಮೇಲೆ ಬಟ್ಟೆಯನ್ನು ಅಲ್ಲೇ ಇಟ್ಟು ಬರುವ ನಾನು, ಇಲ್ಲಿ ನಾನೇ ನನ್ನ ಬಟ್ಟೆ ಒಗೆದು ಬರೋ ಪರಿಸ್ಥಿತಿ ಬಂತು. ಅಲ್ಲಾಗ್ತಿದ್ರೆ ವಾಷಿಂಗ್ ಮೆಶಿನ್ ಇಲ್ಲಾದ್ರೆ ನನಗೆ ನಾನೇ ವಾಷಿಂಗ್ ಮೆಶಿನ್. ಒಂದು ಕಡೆ ಸೊಂಟ ನೋವು, ಇನ್ನೊಂದು ಕಡೆ ಕಾಲು ನೋವು. ನಾನು ಮೂರು ಫೀಟು ಇರುವುದರಿಂದ ನಂಗೆ ಬಟ್ಟೆ ಒಣಗ್ಲಿಕ್ಕೆ ಹಾಕಬೇಕೆಂದರೆ ಹಾರಿ ಹಾರಿ ಹಾಕಬೇಕು. ನನ್ನ ಪರಿಸ್ಥಿತಿಯನ್ನು ನಾನು ಯಾರ ಹತ್ರ ಹೇಳಿಕೊಳ್ಳಲಿ. ಒಂದು ಕಡೆ ನಗೋಕೂ ಆಗ್ದೆ, ಇನ್ನೊಂದು ಕಡೆ ಅಳೋಕೂ ಆಗ್ದೆ ಪರದಾಡ್ತಾ ಇದ್ದೇನೆ. ನಗುವುದೋ ಅಳುವುದೋ ನೀವೇ ಹೇಳಿ.
ಹೀಗೆ ದಿನನಿತ್ಯ ನನ್ನ ಹಾಸ್ಟೆಲ್ ಕಥೆ ನಡೀತಾ ಇದೆ. ಕಳೆದಿದ್ದು ಹತ್ತಿರತ್ತಿರ ಎರಡು ತಿಂಗಳುಗಳಾದರೂ ಮನಮುಟ್ಟಿದ್ದು ನೂರಾರು ವಿಷಯಗಳು. ನಾನೇ ತಟ್ಟೆ ತೊಳೀಲಿಕ್ಕೆ, ನಾನೇ ಬಟ್ಟೆ ಒಗೆಯಲಿಕ್ಕೆ, ನಾನೇ ಅದನ್ನು ಒಣಗಾಕ್ಲಿಕ್ಕೆ, ನಾನೇ ರೂಮ್ ಗುಡಿಸಲಿಕ್ಕೆ ಕಲಿತುಕೊಂಡೆ. ಹಾಗೇನೇ ಬದುಕಲ್ಲಿ ಸ್ವಾವಲಂಬಿ ಆಗುವುದನ್ನೂ ಕಲಿತಿದ್ದೇನೆ.
ಕೆಲವೊಂದು ಸಲ ನಾವು ಸಮಯಕ್ಕೆ ತಕ್ಕಂತೆ, ಜಾಗಕ್ಕೆ ತಕ್ಕಂತೆ ಬದಲಾಗಬೇಕು. ಇಲ್ಲಾಂದ್ರೆ ನಮಗೆ ಎಲ್ಲವೂ ಕಷ್ಟ ಎನಿಸುತ್ತದೆ. ಹೀಗೆ ನನ್ನ ಜೀವನ ಹಾಸ್ಟೇಲಲ್ಲಿ ಕಾಲ ಕಳಿಯುತ್ತಾ ಇದೆ.
- ಶ್ರಾವ್ಯಾ ಭಟ್, ಸ್ವರ್ಗ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


