ದಾಸಸಾಹಿತ್ಯದ ಅಗ್ರಗಣ್ಯರಲ್ಲೊಬ್ಬರು ಶ್ರೀವಿಜಯದಾಸರು

Upayuktha
0



|| ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ | 

ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯಗುರುಂ ಭಜೇ ||


ಶ್ರೀಪುರಂದರದಾಸರ ಉತ್ತರಕಾಲದ ಪ್ರಮುಖ ಹರಿದಾಸರೆಂದರೆ ಶ್ರೀವಿಜಯದಾಸರು. ತಮ್ಮ ಜೀವನದ ಮೊದಲ ಮೂವತ್ಮೂರು ವರ್ಷಗಳವರೆಗೆ ಧನ ಹಾಗೂ ಜ್ಞಾನಗಳಿಂದ ವಂಚಿತರಾಗಿದ್ದ ಇವರು ಅನಂತರ ಮಾಡಿದ ಸಾಧನೆ ನಿಜವಾದ ಅರ್ಥದಲ್ಲಿ ಅದ್ಭುತವಾದದ್ದು. ದೈವಿಕವಾಗಿ 'ಶ್ರೀವಿಜಯವಿಠಲ' ಎಂಬ ಅಂಕಿತವನ್ನು ಪಡೆದ ಹಿರಿಮೆ ಇವರದು. ಅದರಿಂದಲೇ ದಾಸಪ್ಪ ಎನಿಸಿದ್ದ ಇವರು ಶ್ರೀವಿಜಯದಾಸರೆಂದು ಖ್ಯಾತರಾದರು. ಕೃತಿಕಾರರಾಗಿಯೂ ಶ್ರೀವಿಜಯದಾಸರದು ಶ್ರೀಪುರಂದರದಾಸರ ಅನಂತರದ ಸ್ಥಾನ ಇವರದೇ ಆಗಿದೆ. ಶ್ರೀಪುರಂದರದಾಸರ ಒಟ್ಟು ಕೃತಿಗಳ ಸಂಖ್ಯೆ ೪,೭೫೦೦೦. ಇವರ ಕೃತಿಗಳ ಸಂಖ್ಯೆ ೨೫,೦೦೦ ಕ್ಕಿಂತ ಹೆಚ್ಚು. ಆ ೨೫,೦೦೦ವೂ ಶ್ರೀಪುರಂದರದಾಸರು ಸಂಕಲ್ಪಿಸಿದ್ದ ೫,೦೦೦೦೦ ಸಂಖ್ಯೆಯನ್ನು ಪೂರ್ಣಗೊಳಿಸುವ ಉದಾತ್ತಧೋರಣೆಯದು. ಇತರ ಕೃತಿಗಳು ಸಹ ಅನೇಕ. ದಿನವೊಂದಕ್ಕೆ ಅತಿಕಡಿಮೆ ಎಂದರೆ ೧೦ ಕೃತಿಗಳನ್ನು ಇವರು ರಚಿಸುತ್ತಿದ್ದರೆಂಬ ಉಲ್ಲೇಖ ಗಮನಾರ್ಹ.


ಸಂಖ್ಯೆಯ ದೃಷ್ಟಿಯಿಂದ ಶ್ರೀಪುರಂದರದಾಸರ ಕೃತಿಗಳು ಅಪಾರವೆನಿಸಿದರೂ ಇಂದು ದೊರೆತಿರುವ ಕೃತಿಗಳಲ್ಲಿ ಅತಿ ಹೆಚ್ಚಿನ ಕೃತಿಗಳು ಶ್ರೀವಿಜಯದಾಸರವೇ ಎಂಬುದು ವಿಶೇಷ. ಈ ದೃಷ್ಟಿಯಲ್ಲಿ ಶ್ರೀವಿಜಯದಾಸರದು ಹರಿದಾಸ ಸಾಹಿತ್ಯದಲ್ಲಿ ಸಿಂಹಪಾಲು ಎನ್ನಬಹುದು.


ಶ್ರೀವಿಜಯದಾಸರ ಕೃತಿಗಳಲ್ಲೂ ಹೆಚ್ಚಿನವು ಸುಳಾದಿಗಳೆಂಬುವುದು ಮತ್ತೊಂದು ವಿಶೇಷಾಂಶ. ಅತ್ಯಂತ ಕಠಿಣವಾದ ಮಾಧ್ಯಮವೆನ್ನಿಸಿರುವ ಸುಳಾದಿಗಳು ಶ್ರೀವಿಜಯದಾಸರಿಗೆ ಅತಿಸುಲಭದ ರಚನೆಗಳೆನಿಸಿದ್ದು ಅವರ ಸಿದ್ಧಿಯ ಫಲ. ಸಂಖ್ಯೆಯಂತೆ ವಿಷಯ ವೈವಿಧ್ಯದಲ್ಲೂ ಅವರ ಸುಳಾದಿಗಳು ಬೆರಗು ಹುಟ್ಟಿಸುತ್ತವೆ. ಪ್ರತಿಯೊಂದು ಸುಳಾದಿಯ ವಿಷಯಶ್ರೀಮಂತಿಕೆ, ನಿರೂಪಣಾಕೌಶಲ ಅಚ್ಚರಿ ಹುಟ್ಟಿಸುವಂತಹುದು. ಚಿಂತನೆಯ ಸಮಗ್ರತೆ ಅವರ ಸುಳಾದಿಗಳ ಮತ್ತೊಂದು ವೈಶಿಷ್ಟ್ಯ. ಕೆಲವು ಸುಳಾದಿಗಳ ಮೂಲ ಆಕರ ಇನ್ನೂ ವಿದ್ವತ್ಪ್ರಪಂಚಕ್ಕೆ ಗೋಚರಿಸಿಲ್ಲ ಎಂದರೆ ಶ್ರೀವಿಜಯದಾಸರ ವಿಷಯ ಸಂಗ್ರಹದ ವ್ಯಾಪ್ತಿ ಅರಿವಾಗುತ್ತದೆ. ಇದರಿಂದಾಗಿ 'ಸುಳಾದಿದಾಸ'ರೆಂದೇ ಅವರು ಸುಪ್ರಸಿದ್ಧರು.


ಉಗಾಭೋಗಗಳ ದೃಷ್ಟಿಯಿಂದಲೂ ಶ್ರೀಪುರಂದರದಾಸರ ಅನಂತರದ ಸ್ಥಾನ ಇವರದೇ. ಮುದ್ರಿತ ಉಗಾಭೋಗಗಳಲ್ಲಿ ಹೆಚ್ಚಿನವು ಶ್ರೀಪುರಂದರದಾಸರದಾದರೆ ಅನಂತರದವು ಶ್ರೀವಿಜಯದಾಸರವೇ. ಸುಳಾದಿಗಳಂತೆ ಉಗಾಭೋಗಗಳಲ್ಲೂ ಸಮಗ್ರತೆ ಎದ್ದುಕಾಣುತ್ತದೆ.


ಶ್ರೀಪುರಂದರದಾಸರು ಹರಿದಾಸಕೂಟದ ಪ್ರಥಮಾಧ್ಯಕ್ಷರೆನ್ನಿಸಿದರೂ ಅವರಿಂದ ದಾಸದೀಕ್ಷೆ ಪಡೆದು ಕೃತಿಕಾರರೆನ್ನಿಸುವವರ ಬಗ್ಗೆ ದಾಖಲೆಗಳು ಲಭಿಸುವುದಿಲ್ಲ. ಶ್ರೀವಿಜಯದಾಸರ ಬಗ್ಗೆ ಹಾಗಲ್ಲ. ಶ್ರೀಗೋಪಾಲದಾಸರು, ಶ್ರೀಮೋಹನದಾಸರು, ಶ್ರೀವೇಣುಗೋಪಾಲದಾಸರು, ಶ್ರೀಗುರುಗೋಪಾಲ ದಾಸರು ಮೊದಲಾದ ಅನೇಕರಿಗೆ ದಾಸದೀಕ್ಷೆಯನ್ನು ನೀಡಿ ಹರಿದಾಸರನ್ನಾಗಿಸಿದ ಕೀರ್ತಿ ಇವರದು. ಹರಿಕಥಾಮೃತಸಾರದಂತಹ ಕೃತಿರತ್ನವನ್ನು ನೀಡಿದ ಶ್ರೀಜಗನ್ನಾಥದಾಸರ ಸಾಧನೆಯಲ್ಲೂ ಗಮನಾರ್ಹ ಪಾತ್ರ ಇವರದಾಗಿದೆ. ಇವರಿಂದ ಅಂಕಿತ ಪಡೆದವರು ಸಹ ಅನೇಕರಿಗೆ ದಾಸದೀಕ್ಷೆ ನೀಡಿ ಹರಿದಾಸರೆನ್ನಿಸಿದರು. ಹೀಗೆ ಹರಿದಾಸ ಪರಂಪರೆಯನ್ನು ಬೆಳೆಸಿದ ವಿಶೇಷ ಸಾಧನೆ ಶ್ರೀವಿಜಯದಾಸರದು. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂದಿನ ಸಕಲ ಹರಿದಾಸಪಂಥದ ಒಟ್ಟು ಮೂಲವನ್ನು ಹುಡುಕಿದಾಗ ಅದು ಶ್ರೀವಿಜಯದಾಸರಲ್ಲೇ ಪರ್ಯವಸಾನವಾಗುತ್ತದೆ. ಶ್ರೀಗೋಪಾಲದಾಸರು ಮೊದಲಾದ ಪ್ರತಿಯೊಬ್ಬರನ್ನೂ ಸಹ ಅವರವರ ಬಳಿಗೆ ತೆರಳಿ ಉದ್ಧರಿಸಿದ್ದು ಇವರ ವಿಶಾಲ ಮನೋಭಾವಕ್ಕೆ ನಿದರ್ಶನ. ಶ್ರೀ ಮೋಹನದಾಸರನ್ನು ಸಾಕುಮಗನನ್ನಾಗಿಯೇ ಬೆಳೆಸಿದ ಹಿರಿಮೆ ಇವರದು.


ಅವರು ಜನಿಸಿದ ಸ್ಥಳ ತುಂಗಭದ್ರಾತೀರದ ಚೀಕಲಪರವಿಯಾದರೆ ಅವರು ನಿರ್ಮಾಣ ಹೊಂದಿದ ಸ್ಥಳ ಭಾಸ್ಕರಕ್ಷೇತ್ರವೆನ್ನಿಸಿದ ಚಿಪ್ಪಗಿರಿ. ಈ ಎರಡು ಸ್ಥಳಗಳಲ್ಲೂ ಅವರ ಆರಾಧನೆ ಸಾಕಷ್ಟು ವೈಭವದಿಂದ ನಡೆಯುತ್ತದೆ. ಚೀಕಲಪರವಿಯಲ್ಲಿ ನೆಲೆಸಿರುವವರು ಇವರ ತಮ್ಮ ಆನಂದದಾಸರ ಪರಂಪರೆಯವರಾದರೆ ಚಿಪ್ಪಗಿರಿಯ ಉಸ್ತುವಾರಿ ಇವರ ಸಾಕುಮಕ್ಕಳಾದ ಶ್ರೀಮೋಹನದಾಸರ ವಂಶದವರದು.


"ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೋ" ಎಂಬ ಇವರ ಮೇಲೆ ರಚಿತವಾಗಿರುವ ಶ್ರೀವ್ಯಾಸವಿಠಲರ ಕೃತಿ ಹರಿದಾಸ ಪರಂಪರೆಯಲ್ಲೇ ಒಬ್ಬ ಗುರುಗಳ ಮೇಲೆ ರಚಿತವಾಗಿರುವ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಪಾರಾಯಣ ಕಂಡಿರುವ ವಿಶಿಷ್ಟ ಕೃತಿ.




- ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top