ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಮಾಹುಲಿ ವಿದ್ಯಾಸಿಂಹಾಚಾರ್ಯ ಸಾರಥ್ಯ
ಮೈಸೂರು: ಮುಂಬೈ ಮಹಾನಗರದ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ, ಮಹಾ ಮಹೋಪಾಧ್ಯಾಯ ಪಂಡಿತ ಮಾಹುಲಿ ವಿದ್ಯಾಸಿಂಹಾಚಾರ್ಯ ಅವರು ನಗರದಲ್ಲಿ ಆಯೋಜನೆಗೊಂಡಿರುವ ವಿಶೇಷ ಜ್ಞಾನಸತ್ರದಲ್ಲಿ ಪಾಂಡಿತ್ಯಪೂರ್ಣ ಪ್ರವಚನ ನೀಡಲಿದ್ದಾರೆ.
ಅಕ್ಟೋಬರ್ 26ರಿಂದ ನವೆಂಬರ್ 1ರ ವರೆಗೆ ಕಾರ್ಯಕ್ರಮ ಆಯೋಜನೆಗೊಂಡಿದೆ. ನಗರದ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ನಿತ್ಯ ಬೆಳಗ್ಗೆ 7.30ರಿಂದ 9 ರ ವರೆಗೆ ‘ಗೀತಾಭಾಷ್ಯ’- ಒಂದು ವಿಶೇಷ ಚಿಂತನ ಕಾರ್ಯಕ್ರಮ ಆಚಾರ್ಯರಿಂದ ನೆರವೇರಲಿದೆ.
ಸಂಜೆ 6ರಿಂದ 7.30ರ ವರೆಗೆ ಅಗ್ರಹಾರದ ಉತ್ತರಾದಿ ಮಠ (ಶ್ರೀ ಧನ್ವಂತರಿ ಸನ್ನಿಧಾನ)ದಲ್ಲಿ ‘ಶ್ರೀಮದ್ ಭಾಗವತ’- ಒಂದು ವಿಶಿಷ್ಟ ದೃಷ್ಟಿ- ಕುರಿತು ವಿದ್ಯಾಸಿಂಹಾಚಾರ್ಯರು ವಿಶೇಷ ಪ್ರವಚನ ನೀಡಲಿದ್ದಾರೆ.
ಯುವ ಸಂಕಲ್ಪದಲ್ಲಿ: ಶ್ರೀ ಉತ್ತರಾದಿ ಮಠವು ಯುವಜನರ ಅಧ್ಯಾತ್ಮಿಕ ಅಭ್ಯುದಯವನ್ನು ಪ್ರಮುಖ ಉದ್ದೇಶವಾಗಿರಿಸಿಕೊಂಡು ಆರಂಭಿಸಿರುವ ‘ ಯುವ ಸಂಕಲ್ಪ’ ವಿಶೇಷ ಪರಿಕ್ರಮದ ವತಿಯಿಂದ ವಿಶೇಷ ಉಪನ್ಯಾಸ ಆಯೋಜನೆ ಮಾಡಲಾಗಿದೆ. ಅ. 26ರ ಮಧ್ಯಾಹ್ನ 3.30ಕ್ಕೆ ನಗರದ ಕೃಷ್ಣಮೂರ್ತಿ ಪುರಂನ ಬಿಎಸ್‌ಎಸ್ ವಿದ್ಯೋದಯ ಶಾಲೆ ಸಭಾಂಗಣದಲ್ಲಿ ಪಂಡಿತ ಮಾಹುಲಿ ವಿದ್ಯಾಸಿಂಹಾಚಾರ್ಯ ಅವರು ‘ರ್‍ಯಾಷನಾಲಿಟಿ ಆ್ಯಂಡ್ ಫೇತ್ : ಕಾನ್‌ಫ್ಲಿಕ್ಟ್ ಆರ್ ಕಾಂಪ್ಲಿಮೆಂಟ್ಸ್?- ಎ ಧರ್ಮ ಬೇಸ್ಡ್ ಇನ್‌ಕ್ವಯರಿ ಫಾರ್ ಛಾರಿಟಿ ಇನ್ ಮಾಡ್ರನ್ ಲೈಫ್- ವಿಷಯ ಕುರಿತು ಯುವಜನರನ್ನು ಉದ್ದೇಶಿಸಿ ಶಿಖರೋಪನ್ಯಾಸ ಮಾಡಲಿದ್ದಾರೆ. ನಂತರ ಪ್ರಶ್ನೋತ್ತರ-ಸಂವಾದ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು ಎಂದು ಉತ್ತರಾದಿ ಮಠದ ಪ್ರಕಟಣೆ ತಿಳಿಸಿದೆ. ವಿವರಗಳಿಗೆ 94481 47459 ಸಂಪರ್ಕಿಸಬಹುದು.
ಪರಿಚಯ: ದೇಶ ಕಂಡ ಅಪರೂಪದ ವಿದ್ವಾಂಸರಾಗಿರುವ ಮಾಹುಲಿ ವಿದ್ಯಾಸಿಂಹಾಚಾರ್ಯರು, ಸಂಸ್ಕೃತ ಸಾಹಿತ್ಯ, ವ್ಯಾಕರಣ, ಪ್ರಾಚೀನ ಮತ್ತು ನವೀನ ನ್ಯಾಯ, ಛಂದಸ್ಸು, ಅಲಂಕಾರ, ನ್ಯಾಯಸುಧಾ, ವ್ಯಾಸತ್ರಯ, ಮೀಮಾಂಸ, ಕೌಟಿಲ್ಯನ ಅರ್ಥಶಾಸ್ತ್ರ, ವ್ಯಾಸ-ದಾಸ ಸಾಹಿತ್ಯದ ಪ್ರಕಾಂಡ ಪಂಡಿತರಾಗಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ, ಆಂಗ್ಲ ಭಾಷೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರೌಢ ಪ್ರವಚನ ನೀಡಿದ ಖ್ಯಾತಿ ಇವರಿಗೆ ಇದೆ. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ, ವೇದಾಂತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಹಿರಿಮೆ ಇವರದ್ದು. ದೇಶದ ಉದ್ದಗಲಕ್ಕೂ ಶಿಷ್ಯಪಡೆಯನ್ನು ಹೊಂದಿರುವ ಇವರು ಪೂಜಾ ರಹಸ್ಯ, ತಾತ್ಪರ್ಯ ನಿರ್ಣಯ, ಯೋಗ ದೀಪಿಕಾ, ಸೂತ್ರ ಭಾಷ್ಯ, ಸಂಧ್ಯಾ ರಹಸ್ಯ, ಹಾರ್ಟ್ ಆಫ್ ಋಗ್ವೇದ- ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿ ಪ್ರಕಾಶಿಸಿದ್ದಾರೆ.


