ಶಿವರಾಮ ಕಾರಂತರ ರಂಗ ಪ್ರಯೋಗಗಳು

Upayuktha
0
ಅ.10: ಶಿವರಾಮ ಕಾರಂತರ ಜನ್ಮದಿನಾಚರಣೆ



ಪ್ಪತ್ತನೆಯ ಶತಮಾನದ ಆದಿಯಲ್ಲಿ ಆರಂಭಗೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳಿಗೆ 1920 ರ ವೇಳೆಗೆ ಹೊಸ ತಿರುವು ದೊರಕಿತು. 1920ರ ವೇಳೆಗೆ ತೀವ್ರವಾಗುತಿದ್ದ ರಾಷ್ಟ್ರೀಯ ಚಳುವಳಿ ಮತ್ತು ಸಾಮಾಜಿಕ ಸುಧಾರಣೆಯ ಚಿಂತನೆಗಳು ದಕ್ಷಿಣ ಕನ್ನಡದ ಹವ್ಯಾಸಿ ರಂಗ ಭೂಮಿಯ ಮೇಲೆ ಪ್ರಭಾವವನ್ನು ಬೀರಿತು. ಇದರಿಂದ ಇಲ್ಲೂ ಹೊಸತನದ ಹುಡುಕಾಟ ಆರಂಭಗೊಂಡಿತು.


ಗಾಂಧೀಜಿಯವರ ನಾಯಕತ್ವದಲ್ಲಿ ರಾಷ್ಟ್ರೀಯ ಚಳುವಳಿಯು ಜನಾಂದೋಲನವಾಗಿ ವಿಸ್ತರಣೆಯಾಯಿತು. ಸ್ವರಾಜ್ಯ ಸಂಪಾದನೆಯೊಂದಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಸುಧಾರಣೆಗಳನ್ನು ತರಬೇಕೆಂಬ ಹಂಬಲ ಬೆಳೆಯಿತು.


ಗಾಂಧೀಜಿಯವರ ಚಳುವಳಿಯ ಕರೆಗೆ ಪ್ರತಿ ಸ್ಪಂದಿಸಿದ ಶಿವರಾಮ ಕಾರಂತರು ಉಳಿದ ಕಾಲೇಜು ವಿದ್ಯಾರ್ಥಿಗಳಂತೆ ತಾವೂ ಕಾಲೇಜು ತ್ಯಜಿಸಿ ಕುಂದಾಪುರವನ್ನು ಕೇಂದ್ರವಾಗಿರಿಸಿಕೊಂಡು ತಾಲೂಕು ಮಟ್ಟದಲ್ಲಿ ರಾಷ್ಟ್ರೀಯ ಚಳುವಳಿಯ ಪ್ರಚಾರಕ್ಕಾಗಿ ಕಾರ್ಯ ನಿರ್ವಹಿಸತೊಡಗಿದರು. ಸಮಾಜ ಸುಧಾರಣೆಯ ಆಲೋಚನೆಗಳಿಂದ ಪ್ರೇರಿತರಾಗಿದ್ದ ಕಾರಂತರು ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸಲು ನಾಟಕ ಸಶಕ್ತ ಮಾಧ್ಯಮ ಎಂಬುದನ್ನು ಕಂಡುಕೊಂಡರು.


1921 ರಲ್ಲಿ ಕುಂದಾಪುರದಲ್ಲಿ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಸಮಾವೇಶದಲ್ಲಿ ಶಿವರಾಮ ಕಾರಂತರು 'ನಿಶಾ ಮಹಿಮೆ' ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದರು. ಇದು 'ಏಕಚ್ ಪ್ಯಾಲಾ' ಎಂಬ ಮರಾಠಿ ನಾಟಕದ ಕನ್ನಡ ಅನುವಾದವಾಗಿದ್ದು ಮದ್ಯಪಾನದ ದುರಂತವನ್ನು ಚಿತ್ರಿಸುತ್ತದೆ.


ಆನಂತರದಲ್ಲಿ ಶಿವರಾಮ ಕಾರಂತರು ಪುತ್ತೂರಿನಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪುತ್ತೂರು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿ ವಿವಿಧ ಪ್ರಯೋಗಗಳನ್ನು ನಡೆಸಿದರು. ಗ್ರಾಮೀಣ ಪರಿಸರದ ತರುಣರನ್ನು ಸಂಘಟಿಸಿ ಗ್ರಾಮಗಳಲ್ಲಿ ಶ್ರಮದಾನ ಶಿಬಿರಗಳನ್ನು ನಡೆಸುತ್ತಿದ್ದರು. ರಾತ್ರಿಯ ವೇಳೆಯಲ್ಲಿ ಸಮಾಜ ಸುಧಾರಣೆಯ ಸಂದೇಶ ಗಳನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು. 1929ರಲ್ಲಿ 'ಡೊಮಿಂಗೊ' ಮತ್ತು 'ಮುರಳೀಧರ' ನಾಟಕಗಳನ್ನು ವಿವಿಧ ಹಳ್ಳಿಗಳಲ್ಲಿ ಪ್ರದರ್ಶಿಸಿದರು.


ವಿವಿಧ ಕಲಾ ಸಂಸ್ಥೆಗಳಿಗೆ ಕಾರಂತರು ನಾಟಕಗಳನ್ನು ಪ್ರದರ್ಶನಕ್ಕೆ ತರಬೇತಿ ನೀಡಿದರು. ಮಂಗಳೂರಿನ ನಾಟ್ಯ ಕಲಾ ಮಂಡಳಿಗೆ ಅವರು ಬರೆದು ನಿರ್ದೇಶಿಸಿದ ನಾಟಕ 'ಕರ್ಣ ಅರ್ಜುನ' ಬೇರೆ ಪೌರಾಣಿಕ ನಾಟಕಗಳಿಗಿಂತ ವಿಭಿನ್ನವಾಗಿತ್ತು. 


ಕಾರಂತರು ಮುಂದೆ ಅನೇಕ ಗೀತಾ ನಾಟಕಗಳನ್ನು ಬರೆದು ಹೊಸ ಪ್ರಯೋಗಗಳನ್ನು ಮಾಡಿದರು. ಅಸ್ಪೃಶ್ಯತಾ ನಿವಾರಣೆಯ ಹಾಗೂ ಕುಡುಕತನದ ದುಷ್ಪರಿಣಾಮಗಳನ್ನು ತಿಳಿಸುವ ನಾಟಕಗಳನ್ನು ಪ್ರದರ್ಶಿದರು.


ಪುತ್ತೂರು ರಲ್ಲಿ ಆರಂಭ ಮಾಡಿದ ದಸರಾ ಮಹೋತ್ಸವದ ವೇಳೆಯಲ್ಲಿ ತಾವೇ ಬರೆದ ನಾಲ್ಕೈದು ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು.

ಇವರ ನಾಟಕಗಳನ್ನು ಮಂಗಳೂರಿನ ಗಣಪತಿ ಹೈಸ್ಕೂಲ್ ತಂಡ, ಮಂಗಳೂರಿನ ಸರಕಾರಿ ಕಾಲೇಜು ತಂಡ ವಿವಿಧ ಸಂದರ್ಭದಲ್ಲಿ ಪ್ರದರ್ಶನ ಮಾಡಿವೆ.

ಇವರು ಅಂಬಾ ಪ್ರಸಾದಿತ ನಾಟಕ ಮಂಡಳಿಗೆ ರಚಿಸಿದ 'ಸತಿ ಸಂಯುಕ್ತೆ' ಮೊದಲಾದ ನಾಟಕಗಳು ಜನಪ್ರಿಯತೆ ಪಡೆದವು.


1933 ರಲ್ಲಿ ರಚಿಸಿ ಅಭಿನಯಿಸಿದ ಯೇಸು ಕ್ರಿಸ್ತರ ಜೇವನ ಚರಿತ್ರೆಯ ಪ್ರತಿಮಾ ನಾಟಕ ಮತ್ತು ಪರಿವರ್ತನಾ ಭಾರತ, ಬೌದ್ಧ ಯಾತ್ರಾ ನಾಟಕಗಳು ಸೊಗಸಾಗಿ ಪ್ರದರ್ಶನಗೊಂಡವು.


1932, 1933, 1934 ರಲ್ಲಿ ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ವಿಟ್ಲ ಮೊದಲಾದ ಸ್ಥಳಗಳಲ್ಲಿ ಒಂದು ವಾರದ ಮಕ್ಕಳ ಕೂಟಗಳನ್ನು ಆಯೋಜಿಸಿ ಮೂಕ ನಾಟಕ, ಗೀತಾ ನಾಟಕ ಮತ್ತು ಸಾಮಾಜಿಕ ನಾಟಕಗಳನ್ನು ತರಬೇತಿ ನೀಡಿ ಪ್ರದರ್ಶನ ನೀಡಲಾಗುತ್ತಿತ್ತು.


ಹಿರಿಯಕ್ಕನ ಚಾಳಿ, ಶುಭ ದತ್ತ, ರಾಯರ ಮರ್ಜಿ, ಗರ್ಭ ಗುಡಿ, ನಶ್ವರ ಪ್ರಪಂಚ, ಇಸ್ಪೀಟು ಗುಲಾಮ, ನಿಮ್ಮ ಓಟು ಯಾರಿಗೆ, ನಮ್ಮ ಜಾತಿ ಮೊದಲಾದ ನಾಟಕಗಳಲ್ಲಿ ಅಂದಿನ ಸಮಾಜದ ಸಮಸ್ಯೆಗಳ ಚರ್ಚೆ ಇದೆ.


1920 ರಿಂದ ಸುಮಾರು ಎರಡು ದಶಕಗಳ ಕಾಲ ರಂಗ ಭೂಮಿಯಲ್ಲಿ ಸಕ್ರಿಯರಾಗಿದ್ದ ಕಾರಂತರು ಪ್ರಗತಿಪರ, ವಾಸ್ತವ ಧೋರಣೆಗೆ ಪೂರಕವಾದ ನಾಟಕಗಳನ್ನು ರಚಿಸಿ ಪ್ರದರ್ಶನವಿತ್ತರು. ಪ್ರಗತಿ ಪರ ಚಿಂತನೆ ಮತ್ತು ಜನಪರ ಕಾಳಜಿಯ ಅವರ ನಾಟಕಗಳು ಇಂದಿಗೂ ಮಹತ್ವದ ನಾಟಕಗಳಾಗಿವೆ. ದಕ್ಷಿಣ ಕನ್ನಡದ ರಂಗ ಭೂಮಿಯ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ.


- ಕೃಷ್ಣಮೂರ್ತಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top