(ಒಂದು ಲಘು ದೊಣ್ಣೆ ಬರಹ)
80 ವರ್ಷ ವಯಸ್ಸಾದವರು ಸರಕಾರಿ ಶಾಲೆಗಳ ಸಮೀಪ, ಸಾರ್ವಜನಿಕ ಸ್ಥಳಗಳಲ್ಲಿ ಊರುಗೋಲು ಹಿಡಿದು ಸುತ್ತಾಡುವಂತಿಲ್ಲ.
ಶಾಲೆ, ಸಾರ್ವಜನಿಕ ಕ್ರೀಡಾಂಗಣಗಳಲ್ಲಿ ದೊಣ್ಣೆಯಂತೆ ಕಂಡುಬರುವ ಬ್ಯಾಟು, ವಿಕೇಟು ಹಿಡ್ಕೊಂಡು ಕ್ರಿಕೇಟ್ ಆಡುವ ಹಾಗಿಲ್ಲ. ಅದರಲ್ಲೂ ಆಕ್ರಮಣಕಾರಿ ಬ್ಯಾಟಿಂಗ್‌ನ್ನು ಶಾಶ್ವತವಾಗಿ ನಿಷೇಧಿಸಬೇಕು.
ಸರಕಾರಿ ಸಂಸ್ಥೆ, ಸಾರ್ವಜನಿಕ ಪ್ರದೇಶಗಳಲ್ಲಿ ಬಿಲಿಯರ್ಡ್ಸ್, ಹಾಕಿ, ಚಿನ್ನಿದಾಂಡು ನಿಷೇಧಿಸಲಾಗಿದೆ.
ಸಾರ್ವಜನಿಕ ಕಟ್ಟಡ ನಿರ್ಮಾಣ, ಅನುದಾನಿತ ಶಾಲೆ ನಿರ್ಮಾಣ ಸಂದರ್ಭಗಳಲ್ಲಿ ಸಿಮೇಂಟ್ ಕಲೆಸುವುದಕ್ಕೆ ದೊಣ್ಣೆ ಇರುವ ಹಾರೆ/ಗುದ್ದಲಿ/ಸಬ್ಬಲ್ಲುಗಳನ್ನು ಬಳಸಲು ಸರಕಾರದಿಂದ ಲೈಸನ್ಸ್ ಮತ್ತು ಪೋಲೀಸ್ ಇಲಾಖೆಯಿಂದ ದೈನಂದಿನ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಕಟ್ಟಡದ ರೂಫ್ ಮೌಲ್ಡಿಂಗ್ ಮಾಡುವಾಗ ದಪ್ಪ ದೊಣ್ಣೆಗಳನ್ನು ಬಳಸಲು IT BT ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುಮತಿ ಪಡೆಯುವಂತೆ ನಿಯಮ ಜಾರಿ.
ಖಾಸಗಿ ಅಡಿಕೆ ತೋಟಗಳಿಗೆ ಸರಕಾರಿ ದಾರಿಯ ಮೂಲಕ ಹೋಗುವಾಗ, ದೊಣ್ಣೆಯಂತಿರುವ ದೋಟಿಗಳನ್ನು ಒಯ್ಯಲು ರಕ್ಷಣಾ ಇಲಾಖೆಯಿಂದ ಲಿಖಿತ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಅಡಿಕೆ ಹಂಡೆಯಲ್ಲಿ ದಸಿಗೆ ಬಳಸಿ ಅಡಿಕೆ ಬೇಯಿಸಲು ಮೂರು ತಿಂಗಳಿಗೆ ತಾತ್ಕಾಲಿಕ ಅನುಮತಿ ಪಡೆಯಬೇಕು.
ಪೌರ ಕಾರ್ಮಿಕರು ದೊಣ್ಣೆಯಂತಹ ಸ್ಟಿಕ್ ಇರುವ ಪೊರಕೆಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವಂತಿಲ್ಲ. ಕೇವಲ ಪೊರಕೆಗಳನ್ನು ಬಳಸಿ, ಸೊಂಟ ಬಗ್ಗಿಸಿಕೊಂಡು ಗುಡಿಸುವುದು ಮತ್ತು ಸಚಿವರುಗಳು ಕ್ಷೇತ್ರ ಪ್ರವಾಸಕ್ಕೆ ಬಂದರೆ, ಎಲ್ಲ ಪೊರಕೆಗಳನ್ನು ಎರಡು ದಿನಗಳು ಹೊರ ತೆಗೆಯುವಂತಿಲ್ಲ.
ಜಾನಪದದ ಕೋಲಾಟದಲ್ಲಿ ಕೋಲುಗಳನ್ನೂ, ಯಕ್ಷಗಾನ ಬಯಲಾಟದ ಆಕ್ರಮಣಕಾರಿ ಯುದ್ಧ ಸನ್ನಿವೇಶದಲ್ಲಿ ದೊಣ್ಣೆಯಂತೆ ಕಾಣುವ ಬಿಲ್ಲು ಬಾಣಗಳನ್ನು ಬಳಸುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಪ್ಪಿಗೆ ಪತ್ರ ಪಡೆದಿರಬೇಕು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಡಿಗೆ ಮಾಡುವವರು ಕೇಸರಿ ಬಾತು ಮಾಡುವಾಗ, ಸಾರು ಕದಬರಿಸುವಾಗ, ಆಕ್ರಮಣಕಾರಿ ದೊಣ್ಣೆಯಂತಿರುವ ಉದ್ದುದ್ದ ಸೌಟುಗಳನ್ನು ಬಳಸಲು ಪಂಚಾಯತ್‌ರಾಜ್ ಇಲಾಖೆಯಿಂದ ಒಪ್ಪಿಗೆ ಪತ್ರ ಪಡೆದು, ಅಡಿಗೆ ಕೊಠಡಿಯಲ್ಲಿ ನೇತು ಹಾಕಿರಬೇಕು.
ಸರಕಾರಿ ಶಾಲೆಗಳಲ್ಲಿ ಹಾಗು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ಓಡಿಸಲು, ಹಂದಿ ಮಂಗಗಳನ್ನು ಹೆದರಿಸಲು ದೊಣ್ಣೆಗಳನ್ನು ಇಟ್ಟುಕೊಳ್ಳವುದು ಕಂಡು ಬಂದಿದ್ದು, ಇನ್ನು ಮುಂದೆ ಅವುಗಳನ್ನು ಅನುಮತಿ ಇಲ್ಲದೆ ಇಟ್ಟುಕೊಳ್ಳುವಂತಿಲ್ಲ.
ದೇವಸ್ಥಾನದ ಅರ್ಚಕರು, ಉಪನಯನದ ವಟುಗಳು ಆಕ್ರಮಣಕಾರಿ ರೀತಿಯಲ್ಲಿ ದೊಣ್ಣೆಯಂತಿರುವ ದಂಡವನ್ನು ಹಿಡಿಯುವುದನ್ನು, ಧಾರ್ಮಿಕ ಪೂಜಾವಿಧಿಯ ಹೆಸರಿನಲ್ಲಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ನಡೆಸುವ ಎಲ್ಲಾ ಬಗೆಯ ದಂಡ ಹಿಡಿದು ನೆಡೆಸುವ ಚಟುವಟಿಕೆಗಳಿಗೆ ನಿಷೇಧ ಹೇರಬೇಕು.
ಪ್ರತಿಮೆಗಳಲ್ಲಿ ಗಾಂಧಿ ಕೋಲು, ದಶದಾನದಲ್ಲಿ ದೊಣ್ಣೆ ಮತ್ತು ಮರದ ಹಿಡಿಕೆಯ ಕೊಡೆ ಕೊಡುವುದು, ಜಾಗಂಟೆ ದಂಡ, ಕರಾಟೆ ಬಡಿಗೆ, ಮಠಾಧಿಪತಿಗಳು ಹಿಡಿಯುವ ಧಾರ್ಮಿಕ ದಂಡ... ಇತ್ಯಾದಿಗಳ ನಿಷೇಧ ಅಥವಾ ಸೂಕ್ತ ಲೈಸನ್ಸ್ ಪಡೆಯಲು ನಿಯಮ ಮಾಡಬೇಕು.
ಸದ್ಯಕ್ಕೆ ಇಷ್ಟು ಪತ್ರ ಸಲಹೆಗಳು.
(ಅಡಿಕೆ ಕುಯಿಲು ಇನ್ನು ಪ್ರಾರಂಭವಾಗದೆ ಇರುವುದರಿಂದ, ಮಾಡಲು ಬೇರೆ ಏನು ಕೆಲಸ ಇಲ್ಲದ ಕಾರಣ ಈ ಪತ್ರ ಸಲಹೆಗಳನ್ನು ಬರೆದು ಕೊಡಲಾಗಿದೆ. ಜವಾಬ್ದಾರಿಯುತ ಮೂರು ನಾಲ್ಕು ಐದು ಖಾತೆಗಳನ್ನು ನಿರ್ವಹಿಸುತ್ತಿದ್ದರೂ ಮಾಡಲು ಕೆಲಸ ಇಲ್ಲದ ಸಚಿವರಿಗೆ ಈ ಸಲಹೆಗಳು!!. ಆಸಕ್ತ ಓದುಗರು, ಇದೇ ರೀತಿಯ ಇನ್ನಷ್ಟು ಸಲಹೆಗಳನ್ನು ಸೂಚಿಸಬಹುದು)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


