ವಿಡಂಬನೆ: 'ಬಿಗ್ ಬಾಸ್- ಅದೇ ಅದೇ ಅದೇ ಇದು!'

Upayuktha
0


'ಏನಪಾ ಕಾಳ್ಯಾ ಏನ ಹೊಸಾದು ಐತಿ?' ಕೇಳಿದ ರಬಡ್ಯಾ

'ಇಲ್ಲಿ ಇಡ್ಲಿ ದೋಸೆ ಉಪ್ಪಿಟ್ಟು ನೀರ ದೋಸೆ ಎಲ್ಲ ಉಂಟು ಮಾರಾಯ್ರೆ' ಎಂದ ಕಾಳ್ಯಾ

'ಅರೇ ಹಿಂಗ್ಯಾಕ ಆಡಕತ್ತಾನ ಇಂವಾ?' ಕೇಳಿದ ರಬಡ್ಯಾ

'ಇಂವಾ ಮೊನ್ನೆ ಆ ಬಿಗ್ ಬಾಸ್ ನಡಿತೈತಲಾ, ಅಲ್ಲಿಗೆ ಹೋಗಿದ್ದಾ' ಎಂದ ಟಕಳ್ಯಾ

'ಅರೇ ಐಸಾ ಕ್ಯಾ? ಉದರ್ ಕ್ಯಾ ಕ್ಯಾ ಹುವಾ?' ಕೇಳಿದ ಬಾಶಾ


'ಕ್ಯಾ ಕ್ಯಾನೂ ಇಲ್ಲ.... ಕೀ ಕೀನೂ ಇಲ್ಲಾ..... ಬಂದ್ ಆಗಿತ್ತು ಬಾಗಲಾ' ಎಂದ ಟುಮ್ಯಾ

'ಯಾವುದು ಬಿಗ್ ಬಾಸ್ದಾ? ಯಾವಾಗ?' ಅಮಾಯಕನಂತೆ ಕೇಳಿದ ಧಡಂಧುಡಕಿ

'ಇಂವಾ ಯಾವ ಊರಾಗ ಇದ್ನಲೆ ಯಪ್ಪಾ? ಇಡೀ ಜಗತ್ತಿಗೇ ಗೊತೈತಿ.... ನಿಂಗ ಗೊತ್ತಿಲ್ಲಾ?' ಜಬರಿಸಿ ಕೇಳಿದ ಕಾಳ್ಯಾ

'ಇಂವಾ .... ಆ ರಕ್ಷಿತಾ ಶೆಟ್ಟಿ ಊರಿಗೆ ಹೋಗಿದ್ನಂತ ಕಾಣತೈತಿ' ಅಂತ ನಕ್ಕ ಗುಡುಮ್ಯಾ

'ಏನು ಮಾತಾಡತೈತಲೇ ತಮ್ಮಾ ಆ ಹುಡುಗಿ...... ಪಟಪಟ ಅಂತ' ಅಂದ ಕಾಕಾ

'ಹೌಂದ ಮತ್ತs .....ಅದು ಯಾರಿಗೂ ಮಣೆಂಗಿಲ್ಲ ತಗಿ' ಎಂದಳು ರಾಶಿ

'ಹ್ಯಾಂಗ ಮಾತಾಡ್ತಾಳು ಆಕಿ?' ಕೇಳಿದ ಶೌರಿ


'ಎಂಥದು ಮಾರಾಯಾ ನಿಂದು, ಹಾಂ......ಅದೇ ಅದೇ..... ಅದೇ ಇದು..... ಗೊತ್ತುಂಟಾ ನಿಮಗೆ? ನಾವು ಮಂಗಳೂರಿಗೆ ಬರುವುದುಂಟು ...... ಹಾಗೇ ಮುಂಬಯಿಗೆ ಹೋಗ್ತೇನೆ......ಅಲ್ಲಿ ಅಮ್ಮ ಉಂಟು ..... ಇಲ್ಲಿ ಅಜ್ಜಿ ಇದೆ...... ಬಾಂಗ್ಡಾ ಮೀನು ಭಾರಿ ಉಂಟು ಇಲ್ಲಿ..... ನಾನು ಅದರದೇ ರೀಲ್ಸ್ ಮಾಡಿ.... ಎಡಿಟ್ ಕೂಡಾ ಮಾಡಿಲ್ಲ...... ಹಾಗೇ ಕಳಿಸಿದೆ.....ಅದೇ ಅದೇ ಇದು..... ತುಂಬ ವೈರಲ್ ಆಯಿತು..... ನಿಮಗೆ ಗೊತ್ತುಂಟಾ?........' ಹೀಂಗs ಏನಪಾಂತಂದ್ರs ಮಾತಾಡಿ ಮಾತಾಡಿನೇ ಎಲ್ಲಾರ ದಿಕ್ಕು ತಪ್ಪಿಸ್ಯಾಳ ರಕ್ಷಿತಾ' ಎಂದ ರಬಡ್ಯಾ


'ಕಿಚ್ಚಗೂ ಗಾಭರಿ ಮಾಡ್ಯಾಳೂ?' ಕೇಳಿದ ಟಕಳ್ಯಾ

'ಹೂಂ ಮಾಡ್ಯಾಳು...... ಬಿಗ್ ಬಾಸ್ಗೂ ದಿಕ್ಕ ತಪ್ಪಿಸೂ ಚಾನ್ಸಿಸ್ ಆವ' ಎಂದ ಶೌರಿ

'ಮಲ್ಲಮ್ಮ..... ಅಶ್ವಿನಿ..... ರಕ್ಷಿತಾ..... ಗಿಲ್ಲಿ...... ಹೀಂಗs ಈ ಸಲ ಭಾಳ ಮಂದಿ ಅದಾರು ದಿಕ್ಕ ತಪ್ಪಸವರು' ಎಂದಳು ರಾಶಿ

'ಅದೊಂದು ಹುಚ್ಚರ ಸಂತೆ ಇದ್ದಂಗ ಕಾಣತೈತೆ' ಅಂತ ನಕ್ಕ ಧಡಂಧುಡಕಿ


'ಏs ಹಂಗ ಅನಬ್ಯಾಡ..... ನಿನ್ನೂ ಹಿಡಕೊಂಡ ಒಯ್ದು ಒಳಗ ಹಾಕ್ತಾರು' ಎಂದು ವ್ಯಂಗವಾಗಿ ಹೇಳಿದ ಕಾಳ್ಯಾ

'ಏ ಛೊಲೋ ಆತು ತಗೋ ..... ಮಸ್ತ ಅರಮನೆ ಇದ್ದಂಗ ಐತಿ......... ಮಜಾ ಮಾಡೂಣು' ಎಂದ ಧಡಂಧುಡಕಿ

'ಅಲ್ಲಿ ಎಲ್ಲಾ ಬರೇ ಜಾಸ್ತಿ ಜಗಳಗಂಟರೇ ತುಂಬ್ಯಾರ..... ನಿನ್ನ ಒಯ್ದು ಸೀದಾ ಸ್ವೀಮಿಂಗ್ ಫೂಲದಾಗ ಎತ್ತಿ ಒಗಿತಾರು' ಎಂದ ಟುಮ್ಯಾ

'ಇದು ಒಂದು ರೊಕ್ಕಾ ಮಾಡ್ಕೊ ವಿಧಾನಪಾ ಚಾನೆಲ್ಕ' ಎಂದ ಕಾಕಾ


' ಲಾಭ ಇರಲಾರದೇ ಯಾರೂ ಏನೂ ಮಾಡಂಗಿಲ್ಲ ಈ ಜಗತ್ತಿನ್ಯಾಗ' ಎಂದ ಟಕಳ್ಯಾ

'ಈಗ ನಿನ್ನೂ ತೆಲಿ ಮ್ಯಾಲಿನ ಕೂದಲ ಖಾಲಿ ಆಗ್ಯಾವು..... ಅವುನೂ 'ಲಾಭ'ಕ್ಕೆ ಹೋಗ್ಯಾವೇನು?' ಕೇಳಿದ ಕಾಳ್ಯಾ

'ಏs.... ಮತ್ತ ಹೋಗಿ ಹೋಗಿ.... ನನ್ನ ತೆಲಿಗೇ ಬರ್ತಿರಲ್ಲಲೆ? ನಿಮಗ ನನ್ನ ತಲಿ ಸುದ್ದಿಗಿ ಬರಲಿಲ್ಲಾಂದ್ರs.... ಉಂಡ ಅನ್ನ ಕರಗಂಗಿಲ್ಲೇನು?' ವ್ಯಗ್ರನಾಗಿ ಕೇಳಿದ ಟಕಳ್ಯಾ


'ಏs..... ಬಿಗ್ಬಾಸ್ದಾಗ ಬರೇ ಚಿಕನ್ ಮಟನ್ ಫಿಶ್ ....ಅಂತಾನೇ ಮಾತಾಡ್ತಾರ..... ಅಲ್ಲಿ ಅನ್ನ ಬ್ಯಾಳಿ ಸುದ್ದಿನೇ ಇಲ್ಲ!' ಅಂತ ನಕ್ಕ ಕಾಕಾ

'ಹೌಂದಾ....ಅಲ್ಲಿ ಚಟ್ನಿ ಕೋಸಂಬರಿ ಪಾನಕದ ಕ್ಯಾಂಡಿಡೇಟಗೊಳು ಇಲ್ಲ ತಗಿ' ಎಂದ ಟುಮ್ಯಾ

'ಪಾನಕದ್ದು ಗಿರಾಕಿಗೊಳು ಅದಾವು..... ಆದ್ರs ಅವರ 'ಪಾನಕ'ಕ್ಕs ನಿಮ್ಮ ಪಾನಕ ಭಾಳ ಅಂತರೈತಿ' ಎಂದ ಶೌರಿ

'ಅಲ್ಲಿ ಪಾನಕಾ..... ಧೂಮ್ರವಲಯಗಳು ...... ಜಗಳ ಹೊಡದಾಟ..... ಬಡಿದಾಟ..... ತಂತ್ರ..... ಮಂತ್ರ..... ತಿರುಮಂತ್ರ ...... ಹೀಂಗ ಏನಪಾಂದ್ರs ಎಲ್ಲಾ ನಮೂನಿ ಗಜಿಬಿಜಿ ಐತಿ' ಎಂದ ಧಡಂಧುಡಕಿ


'ಎಂಥದು ಮಾರಾಯ್ರೆ ನಿಮ್ದು...... ಅದೇ ಅದೇ ಇದು ನಾನು ಹೇಳುವುದುಂಟು ...... ಅರ್ಥ ಆಯ್ತಾ?' ಎಂದು ನಕ್ಕ ಕಾಳ್ಯಾ

'ಏs ಆಕಿ ರಕ್ಷಿತಾ..... ಸುದೀಪಗೇ ತಿಳಿಲಾರದಂಗ ಮಾತಾಡ್ತಾಳಪೋ' ಎಂದ ಗುಡುಮ್ಯಾ

'ಆಕೆ ಹೊರಗ ಹೋಗುದ್ರಾಗೇ ...... ಎಲ್ಲಾರಿಗೂ ಹುಚ್ಚ ಮಾಡ್ತಾಳ ತಗೋ' ಎಂದಳು ರಾಶಿ

'ಈ ಸಲ ಮೂರನೇ ವಾರಕ್ಕೆ ಒಂದು ಫೈನಲ್ ಅಂತ' ಎಂದ ರಬಡ್ಯಾ

'ನಾ ಡ್ರಾಯವರಾ....ಅಂತ ಟ್ರ್ಯಾಕ್ಟರ ಮ್ಯಾಲ ಕುಂತ ಹಾಡಿದ ಬೆಳಗಾವಿ ಮಾಳು ಮತ್ತ 'ಕರಿಮಣಿ' ಧಾರಾವಾಹಿ ಹಿರೋಯಿನ್ ಸ್ಪಂದನಾ ಫೈನಲಕ್ಕ ಬಂದಾರು' ಎಂದ ಟಕಳ್ಯಾ


'ಮಾಳು ಮನಿಗೆ ಹೊಕ್ಕಿನಿ ಅಂತ ಹಟ ಹಿಡಿದಿದ್ದ..... ಅಂಥವಾ ಫಸ್ಟ್ ಫೈನಲ್ಕ ಬಂದಾನು' ಎಂದ ಕಾಳ್ಯಾ

'ಅರೇ ಹೋ ಸಾಂಬಾ...... ಶೋಲೆ ಪಿಚ್ಚರ ಬಿಡುಗಡೆ ಆಗಿ 50 ವರ್ಷ ಆಯ್ತಂತ' ಎಂದ ಬಾಶಾ

'ಶೋಲೆ' ಸಿನೇಮಾ ಆವಾಗ ರಿಕಾರ್ಡ ಬ್ರೆಕ್ ಮಾಡಿತ್ತು. ಗಬ್ಬರಸಿಂಗ ಠಾಕೂರ ಬಸಂತಿ ....... ಧರ್ಮೇಂದ್ರ ಅಮಿತಾಬ ಬಚ್ಚನ ಹೇಮಾಮಾಲಿನಿ ಸಂಜೀವಕುಮಾರ ಜಯಾಬಾಧೂರಿ ಅಮ್ಜದಖಾನ.......ಆಹಾ! ಎಂಥಾ ಸಿನೇಮಾ ಅದು ರಮೇಶ ಸಿಪ್ಪಿದು' ಎಂದಳು ರಾಣಿ

'ಅದು ಇಲ್ಲೇ.... ನಮ್ಮ ರಾಮನಗರ ಬೆಟ್ಟದಾಗ ಶೂಟಿಂಗ್ ಆಗಿತ್ತು ಸತತ ಎರಡು ವರ್ಷ' ಎಂದ ಕಾಕಾ

'ಅವೆಲ್ಲಾ ಎವರಗ್ರೀನ ಫೀಲ್ಮ್ಸ! ಇತಿಹಾಸ ಆಗಿ ಹೋದಂಥವು! ಮತ್ತ ಅಂಥಾದ್ದು ಸಿಗಲಿಕ್ಕಿಲ್ಲ' ಎಂದ ಕಾಳ್ಯಾ


'ಈಗ ನಮ್ಮ 'ಟಗರು' & 'ಬಂಡೆ' ಕಾಳಗ ಐತೇಲಾ? ಅದುನೂ ಒಂದ ನಮೂನಿ 'ಶೋಲೆ'ನೇ!' ಎಂದು ನಕ್ಕ ಶೌರಿ

'ಮೆಹಬೂಬಾ ಮೆಹಬೂಬಾ ಅಂತ ಇಲ್ಲಿ ಯಾರು ಹಾಡ್ತಾರು?' ಕೇಳಿದ ಗುಡುಮ್ಯಾ

'ಇಲ್ಲಿನ 'ಜೋಕರ' ಹಾಡಬಹುದು' ಎಂದ ಟುಮ್ಯಾ

' ಎಲ್ಲಾ ಮಂತ್ರಿಗಳನ್ನ ತೆಗೆದು ಬ್ಯಾರೆಯವ್ರನ್ನ ತೊಗೊತಾರಂತ' ಎಂದ ಕಾಕಾ

'ಯಾರು?' ಕೇಳಿದ ರಬಡ್ಯಾ

'ಟಗರು ಆ್ಯಂಡ್ ಕಂಪನಿ' ಅಂದ ಧಡಂಧುಡಕಿ


'ಬಂಡೆ' ಏನು ಮಕ್ಕೊಂಡಿರತದೇನು ಇಷ್ಟೆಲ್ಲಾ ಆಗೂತನ್ಕಾ ?' ಕೇಳಿದ ಟಕಳ್ಯಾ

'ಅದು 'ಶ್ಯಾಣ್ಯಾ' ನ ಹತ್ರ ಹೋಗಿ 'ಜರಗುಂಡಿ' ಆಡತಿರತದ' ಎಂದ ಡಬರ್ಯಾ

'ಜರಗುಂಡಿ' ಅಂದ್ರs 'ಜಾರುಬಂಡಿ' ಏನು?' ಕೇಳಿದ ಶೌರಿ

'ಹಂ! ಎಲ್ಲಾರನೂ 'ಸೋಂಯಕ್' ಅಂತ ತಣ್ಣಗೆ ಜಾರಸೂದು!' ಎಂದು ನಕ್ಕ ಕಾಳ್ಯಾ


'ಸಮೀಕ್ಷೆ ಸಲುವಾಗಿ ಸಾಲಿ ಮತ್ತ ಸೂಟಿ ಕೊಟ್ಟಾರಲಾ?' ಕೇಳಿದ ಕಾಕಾ

' ಅವರಿಗೆ ಬೇಕಂದ್ರs ...... ಬೇಕಾದ್ದು ಮಾಡ್ತಾರು..... ಬ್ಯಾಡಂದ್ರs ಕಸಾಪ 'ಕಿಂಗ್'ಗ ಮಾಡಿದಂಗನೂ ಮಾಡ್ತಾರು' ಎಂದ ಟುಮ್ಯಾ

'ಅಲ್ಲಿ ಆಡಳಿತಾಧಿಕಾರಿ ಬರೂದು 'ಗ್ಯಾರಂಟಿ' ನೋಡು' ಎಂದ ಗುಡುಮ್ಯಾ

'ಕಿಂಗ್'ಗ ಜನರಲ್ ಬಾಡಿ ಮೀಟಿಂಗ ಮಾಡೂದೇ ದುಸ್ಸಾಧ್ಯ ಆಗೇತಿ' ಎಂದಳು ರಾಶಿ

'ಎಲ್ಲಾ ..... ಹೀಂಗೇ ನೋಡು..... ಬೇಕಂದ್ರs ಬೇಕಾದ್ದು ಮಾಡಿದ್ರೂ ನಡಿತೈತಿ...... ಬ್ಯಾಡಂದ್ರs ಹೆಜ್ಜೆ ಹೆಜ್ಜೆಗೂ ತೊಡರಗಾಲು!' ಎಂದಳು ರಾಣಿ


'ಎಲ್ಲಾ ಫೀಲ್ಡ್ ನಾಗೂ ಹೀಂಗೆ ನಡಿತೈತಿ......ಇಲ್ಲಿ ಒಂದೇ ಅಲ್ಲಾ' ಅಂದ ಕಾಳ್ಯಾ

'ಟ್ರಂಪಣ್ಣ' ಗ ನೋಬೆಲ್ ಶಾಂತಿ ಹೋಗಿ 'ಅಶಾಂತಿ' ಆತಲಾ' ಎಂದು ನಕ್ಕಳು ರಾಶಿ

' ಅದಕ್ಕೆ ಮತ್ತ ಭಾರಿ ಸಿಟ್ಟಿಗೇರ್ಯಾನು ಟ್ರಂಪಣ್ಣ' ಎಂದ ಟುಮ್ಯಾ

'ಇನ್ನಾ 14 ಯುದ್ಧ ನಿಲ್ಲಸೇನಿ ನಾ ಅಂತ ಮತ್ತ ಹೇಳಾಕ ಶುರು ಮಾಡ್ತಾನು' ಎಂದ ಕಾಕಾ

'ಎಲ್ಲಾ ಕಡೆ ಬರೇ ಇಂಥಾ ಎಡವಟ್ಟ ಗಿರಾಕಿನೇ ಸಿಗ್ತಾವು ನೋಡು' ಎಂದ ಟುಂಟುಂ


'ಇಂವಾ ಯಾಂವಪಾ ರಬಡ್ಯಾ?' ಅಂತ ಕೇಳಿದ ಕಾಕಾ

'ಕಾಕಾ ..... ಇಂವಾ 'ಟುಂಟುಂ' ಅಂತ...... ಇಂವಾ 'ಸು ಫ್ರಾಮ್ ಸೋ'ದಿಂದ ಇಳಿದು ಬಂದಾನು' ಎಂದ ರಬಡ್ಯಾ

'ಟ್ರಂಪಣ್ಣ'ನ್ನ ರಕ್ಷಿತಾನ್ನ ಕೈಯಾಗ ಕೊಟ್ರ ಹ್ಯಾಂಗ?' ಕೇಳಿದಳು ರಾಶಿ

'ಎಂಥದು ಮಾರಾಯಾ..... ಅದೇ ಅದೇ..... ಇದೇ ಅದೇ' ಅಂತ ಅಂತಾಳು ರಕ್ಷಿತಾ ಟ್ರಂಪಣ್ಣನ್ನ ನೋಡಿ' ಎಂದ ಕಾಳ್ಯಾ

'ನಡ್ರಿ ಎಲ್ಲಾರೂ ..... ದೀಪಾವಳಿ ಬಂತು..... ದೀಪಂ ಕರೋತಿ ಕಲ್ಯಾಣಂ..... ಅಂತ ಹಾಡಿ ದೀಪ ಹಚ್ಚೂಮು' ಎಂದ ಕಾಕಾ

'ಹೌದು.... ಅದಾದ ಕೂಡಲೇ ಕನ್ನಡ ರಾಜೋತ್ಸವದ ಸಂಭ್ರಮ ಶುರು' ಎಂದಳು ರಾಣಿ


'ದೀಪದ ಬೆಳಕು ಹರಡಲಿ..... ಅಂಧಕಾರ ಕಳೆಯಲಿ..... ಕನ್ನಡದ ಅರಿಷಿಣ ಕುಂಕುಮದ ಬಾವುಟ ಎಲ್ಲೆಡೆ ಹಾರಾಡಲಿ' ಅಂತ ಹಾಡೋಣ ಬರ್ರಿ' ಅಂತ ರಾಶಿ ಹೇಳಿದಳು

ಎಲ್ಲರೂ ಕನ್ನಡಾಂಬೆಗೆ ಜೈ ಅಂತ ಜೈಕಾರ ಹಾಕುತ್ತ ಹೊರಟರು.


- ಶ್ರೀನಿವಾಸ ಜಾಲವಾದಿ, ಸುರಪುರ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top