ದೀಪಗಳ ಹಬ್ಬದ ಧಾರ್ಮಿಕ ಮಹತ್ವ; ಹೀಗೊಂದು ಆಯಾಮ

Upayuktha
0



ಭಾರತ ಹಬ್ಬಗಳ ತವರೂರು. ಇಲ್ಲಿನ ಹಬ್ಬಗಳ ವೈವಿಧ್ಯತೆ ಮತ್ತು ಸಂಭ್ರಮ ಕಂಡು ವಿದೇಶಿಗರು ಬೆರಗಾಗುತ್ತಾರೆ. ಅದರಲ್ಲೂ ದೀಪಾವಳಿಯನ್ನು ಈಗ ವಿದೇಶೀಯರು ಭರ್ಜರಿಯಾಗಿ ಆಚರಿಸುತ್ತಾರೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿಯಂತೂ ನಮ್ಮ ಆಚಾರ-ವಿಚಾರ- ಸಂಸ್ಕೃತಿಯ ಸಂಕೇತವೂ ಹೌದು. ಇತರ ಹೆಚ್ಚಿನ ಹಬ್ಬಗಳಂತೆಯೇ ಬೆಳಕಿನ ಹಬ್ಬಕ್ಕೂ ಧಾರ್ಮಿಕ ಮಹತ್ವವಿದೆ.  


ಪುರಾಣಗಳ ಪ್ರಕಾರ ಭಗವಂತ ಶ್ರೀರಾಮ ಹದಿನಾಲ್ಕು ವರ್ಷ ವನವಾಸ ಮುಗಿಸಿ, ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದಾಗ ಜನರು ಮನೆಮನೆಯಲ್ಲಿ ದೀಪ ಹಚ್ಚಿ ಆತನನ್ನು ಸ್ವಾಗತಿಸುತ್ತಾರೆ. ಆಗಿನಿಂದಲೇ ದೀಪಾವಳಿ ಆಚರಣೆ ಆರಂಭವಾಯಿತು, ಎಂಬ ನಂಬಿಕೆಯಿದೆ. ಈ ದಿನವನ್ನು ಅಂಧಕಾರದ ಮೇಲಿನ ಬೆಳಕಿನ ಜಯ, ಅಜ್ಞಾನದಿಂದ ಜ್ಞಾನದೆಡೆಗಿನ ಪಯಣ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತದೆ. 


ಧಾರ್ಮಿಕ ಹಿನ್ನೆಲೆಯಿರುವ ಈ ಹಬ್ಬವನ್ನು ನಮ್ಮ ಉತ್ತರ ಕರ್ನಾಟಕದ ಮಂದಿ ಆಚರಿಸುವ ಚೆಂದವೇ ಬೇರೆ. ಅಲ್ಲಿ ಹಬ್ಬ ಎಂದರೆ ಸಾಕು ಅದರ ಸಡಗರನೇ ಬೇರೆ. ನಮ್ಮ ಮನೆಯೂ ಇದಕ್ಕೆ ಹೊರತಲ್ಲ. ಬೆಳಗ್ಗೆ ಏಳುವಷ್ಟರಲ್ಲಿ ಅಮ್ಮ ಮಾಡುವ ರುಚಿರುಚಿಯಾದ ತಿಂಡಿಗಳ ಪರಿಮಳ ಇಲ್ಲದೇ ಇದ್ದ ಹಸಿವನ್ನು ಕೈಬೀಸಿ ಕರೆಯುತ್ತದೆ. ಅಪ್ಪ ಎಲ್ಲಾ ಬಾಗಿಲುಗಳಿಗೆ ತೋರಣ ಕಟ್ಟಿ ಮನೆಯನ್ನು ಸಿಂಗರಿಸುತ್ತಾರೆ. 


ಅಮಾವಾಸ್ಯೆ ಮರುದಿನ ಪಾಡ್ಯದಂದು ಸೆಗಣಿಯಿಂದ ಐದು ಆಕಾರ ಮಾಡಿ ಅದನ್ನು ಪಾಂಡವರೆಂದು ಅದಕ್ಕೆ ಉತ್ತರಾಣಿಕಡ್ಡಿ ಹಾಗೂ ಅಣ್ಣಿ ಹೂವಿನಿಂದ ಅಲಂಕರಿಸಿ ಪ್ರತಿ ಹೊಸ್ತಲಿಗೆ ಇಟ್ಟು ಪೂಜೆ ಮಾಡಲಾಗುತ್ತದೆ. ಇದರ ಹಿಂದಿರುವ ಅರ್ಥವೆಂದರೆ,  ಪಾಂಡವರು 14 ವರ್ಷ ವನವಾಸ ಮುಗಿಸಿ ಬಂದ ದಿನ ಇದೆಂದು. ಆದ್ದರಿಂದ ಪಾಂಡವರನ್ನು ಮನೆಗೆ ಆತ್ಮೀಯವಾಗಿ ಸ್ವಾಗತಿಸುವ ಪದ್ಧತಿ ಈಗಲೂ ನಡೆದುಕೊಂಡು ಬಂದಿದೆ. ಇದು ಬೆಳಕಿನ ಹಬ್ಬಕ್ಕೆ ಬೇರೆಯದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ.  


ಈ ದಿನ, ವಿಶೇಷವಾಗಿ ಉತ್ತರಾಣಿಕಡ್ಡಿ ಮತ್ತು ಅಣ್ಣಿ ಹೂವನ್ನು ಇಟ್ಟು ಪೂಜೆ ಮಾಡುವ ಹಿಂದೆ ಒಂದು ಉದ್ದೇಶವಿದೆ. ಈ ಸಂದರ್ಭದಲ್ಲಿ ಮುಂಗಾರು ಆರಂಭ ಮಳೆಯಲ್ಲಿ ಬಿತ್ತಿದ ಬೆಳೆ ಕೊಯ್ಲಿಗೆ ಬಂದಿರುತ್ತದೆ. ಇದರ ಜೊತೆಗೆ ಹಣ್ಣಿವು ಮತ್ತು ಉತ್ತರಾಣಿ ಕಡ್ಡಿ ಸಮೃದ್ಧಿಯಾಗಿ ಬೆಳೆದು ಸುಗ್ಗಿಯನ್ನು ಸೂಚಿಸುತ್ತದೆ. ಆದ್ದರಿಂದ ಅಣ್ಣಿ ಹೂ, ಉತ್ತರಾಣಿ ಕಡ್ಡಿಯನ್ನಿಟ್ಟು ಪೂಜೆ ಮಾಡಲಾಗುತ್ತದೆ, ಎಂದು ಹಿರಿಯರು ಹೇಳುತ್ತಾರೆ. 


ರಾಮಾಯಣ, ಮಹಾಭಾರತ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೆರೆತು ಹೋಗಿವೆ. ನಾವು ಆಚರಿಸುವ ಪ್ರತಿ ಹಬ್ಬ ಹರಿದಿನಗಳಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ಹಬ್ಬದ ವೈವಿಧ್ಯಮಯ ಆಚರಣೆಗಳು ನಮ್ಮನ್ನು ಇತಿಹಾಸ, ಪುರಾಣದ ಜೊತೆಗೆ ಸಂಪರ್ಕಿಸುತ್ತವೆ. ಧಾರ್ಮಿಕ ಮಹತ್ವವನ್ನು ನೆನಪಿಸುತ್ತವೆ. 





- ಅನಿತಾ ಹೂಗಾರ 

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top