ಪುತ್ತೂರು: ಸಂವಹನ ಕೌಶಲ್ಯವು ಭವಿಷ್ಯದ ಉನ್ನತಿಗೆ ಮೂಲ ತಳಹದಿಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಸಮಯಪ್ರಜ್ಞೆ, ತಾಳ್ಮೆ, ವರ್ತನೆಯೊಂದಿಗೆ ಸಕಾರಾತ್ಮಕ ಮನೋಭಾವವು ಬಹುಮುಖ್ಯವಾಗಿದೆ. ನಾವು ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸನ್ನು ಗಳಿಸಲು ಸಾಧ್ಯ.
ಅವಕಾಶ ನಮ್ಮ ಬಳಿಗೆ ಬಂದಾಗ ಅದನ್ನು ಬಿಟ್ಟುಬಿಡದೆ ಬಾಚಿಕೊಳ್ಳಬೇಕು. ಯಾವುದೇ ಕಷ್ಟದ ಸಂದರ್ಭದಲ್ಲಿಯೂ ಹಿಡಿದ ಕೆಲಸವನ್ನು ಕೈ ಬಿಡಬಾರದು. ಸಮಾಜದಲ್ಲಿ ಬದುಕಲು ಪುಸ್ತಕದ ಜ್ಞಾನ ಮಾತ್ರ ಸಾಕಾಗುವುದಿಲ್ಲ, ಇಲ್ಲಿ ಕಲಿಯಲು ಸಾಕಷ್ಟು ವಿಷಯಗಳಿವೆ ಎಂದು ಮಂಗಳೂರಿನ ತರಬೇತುದಾರೆ ರಾಧಿಕಾ ಭಗತ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ತರಬೇತಿ ಮತ್ತು ನೇಮಕಾತಿ ವಿಭಾಗ , ಐಕ್ಯೂಎಸಿ ಸಹಯೋಗದಲ್ಲಿ ನಡೆದ ‘ಕಾರ್ಪೊರೇಟ್ ಗೆ ಸಿದ್ಧತೆ ; ಮನೋಭಾವದ ನಿಪುಣತೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್. ಬಿ ಅಧ್ಯಕ್ಷೀಯ ನುಡಿಗಳನ್ನಾಡಿ, ‘ಸಂವಹನ ಕೌಶಲ್ಯವಿಲ್ಲದೆ ನಾವು ಏನನ್ನೂ ಮಾಡಲಾಗುವುದಿಲ್ಲ. ನಾವು ಏನನ್ನೇ ಕಲಿಯಬೇಕಾದರೂ ಮೊದಲು ನಮ್ಮಲ್ಲಿ ಹೊಂದಾಣಿಕೆಯ ಮನೋಭಾವ ತುಂಬಾ ಮುಖ್ಯವಾಗಿದೆ. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ನಮ್ಮ ಸಂಸ್ಕೃತಿಯನ್ನು ಬಿಟ್ಟು ಕೊಡಬಾರದು ಅದನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ನುಡಿದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ಭಟ್ ಸ್ವಾಗತಿಸಿ, ಆಂಗ್ಲ ವಿಭಾಗದ ಉಪನ್ಯಾಸಕಿ ದೇಚಮ್ಮ ವಂದಿಸಿ, ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ಸಂಚಿತಾ ನಿರೂಪಿಸಿದರು.