ಉಡುಪಿ: ತೆಂಕುತಿಟ್ಟಿನ ಹೆಸರಾಂತ ಭಾಗವತ ದಿನೇಶ್ ಅಮ್ಮಣ್ಣಾಯ ಅವರ ನಿಧನಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಅಮ್ಮಣ್ಣಾಯರ ಕಲಾಸೇವೆಯನ್ನು ಸ್ಮರಿಸಿಕೊಂಡಿದ್ದಾರೆ. ಶ್ರೀಯುತ ದಿನೇಶ ಅಮ್ಮಣ್ಣಾಯರು ಯಕ್ಷಗಾನ ರಂಗದ ಓರ್ವ ಪ್ರಬುದ್ಧ ಭಾಗವತರಾಗಿ ಅಪಾರವಾದ ಸಿದ್ಧಿ- ಪ್ರಸಿದ್ಧಿಯನ್ನು ಸಂಪಾದಿಸಿದವರು. ತಮ್ಮ ಕಂಠಸಿರಿಯಿಂದ ಭಾಗವತಿಕೆಯ ಸತ್ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದರು. ನಮ್ಮ ಪೇಜಾವರ ಮಠದ ಪರ್ಯಾಯದ ಅವಧಿಯಲ್ಲೂ ಶ್ರೀ ಕೃಷ್ಣಮಠದಲ್ಲಿ ಕಲಾಸೇವೆಯನ್ನು ಸಲ್ಲಿಸಿದ್ದರು. ಅವರ ನಿಧನದಿಂದ ಕಲಾಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಶ್ರೀಯುತರಿಗೆ ಸದ್ಗತಿಯನ್ನು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀಪಾದರು ತಿಳಿಸಿದ್ದಾರೆ.