ಉಜಿರೆ: ತ್ಯಾಗ ಬಲಿದಾನಗಳ ಮೂಲಕ ದೃಢ ದೇಶಭಕ್ತಿ ಪ್ರದರ್ಶಿಸಿದ ಅವೆಷ್ಟೋ ವೀರರ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಅವರಿಂದ ಪ್ರೇರಿತರಾಗಿ ನಮ್ಮ ದೇಶ ಭಕ್ತಿ ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಸೀಮಿತವಾಗದೆ, ನಿತ್ಯ ನಿರಂತರವಾಗಬೇಕು ಎಂದು ಬೆಂಗಳೂರಿನ ಸರಕಾರಿ ಕಲಾ ಕಾಲೇಜು ಇಲ್ಲಿನ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಾ ಕೆ.ಎನ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ ಕಾಲೇಜಿನ ಇತಿಹಾಸ ವಿಭಾಗವು ಅ. 3 ರಂದು ಕಾಲೇಜಿನಲ್ಲಿ ಆಯೋಜಿಸಿದ್ದ "ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ"ದ ಸಮರೋಪ ಸಮಾರಂಭ ಮತ್ತು "ಶೌರ್ಯದ ಪ್ರತಿಧ್ವನಿಗಳು: ದಕ್ಷಿಣ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರು" ಎಂಬ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾಂತ್ರಿಕತೆ, ವಿಜ್ಞಾನ ಇವುಗಳಿಗೆ ಹೆಚ್ಚು ಒಗ್ಗಿಕೊಂಡಿರುವ ಪ್ರಸ್ತುತ ಯುವಜನಾಂಗ ದೇಶ ಬೆಳೆದು ಬಂದ ಹಾದಿಯ ಕಡೆಗೊಮ್ಮೆ ಕಣ್ಣು ಹಾಯಿಸುವ ಅವಶ್ಯಕತೆಯಿದೆ. ಕೆಲವರ ತ್ಯಾಗ ಬಲಿದಾನಗಳ ಪ್ರತಿಫಲವನ್ನು ನಾವುಗಳು ಇಂದು ಅನುಭವಿಸುತ್ತಿದ್ದೇವೆ. ಅಂತಹ ವೀರರ ಆದರ್ಶಗಳು, ಜೀವನ ಶೈಲಿ ಇಂದಿನ ಯುವಪೀಳಿಗೆಗೆ ಆದರ್ಶವಾಗಬೇಕು ಎಂದರು.
ದಕ್ಷಿಣ ಕನ್ನಡದಲ್ಲೂ ಸಾಕಷ್ಟು ವೀರರು ಸ್ವಾತಂತ್ರ್ಯದ ಸಲುವಾಗಿ ಹೋರಾಡಿದ್ದಾರೆ. ವಿಪರ್ಯಾಸವೆಂದರೆ ಅವುಗಳಲ್ಲಿ ಹೆಚ್ಚಿನವರ ಬಗ್ಗೆ ನಮಗೆ ತಿಳಿದಿಲ್ಲ. ತೆರೆಮರೆಯಲ್ಲಿ ಮರೆಯಾಗಿರುವ ಇಂತಹ ಹೋರಾಟಗಾರರ ಬಗ್ಗೆ ನಾವು ತಿಳಿದುಕೊಂಡು ದೇಶಕ್ಕಾಗಿ ಅವರು ಮಾಡಿದ ತ್ಯಾಗ, ಬಲಿದಾನಗಳ ಬಗ್ಗೆ ಇತರರಿಗೆ ತಿಳಿಸುವ ಪ್ರಯತ್ನ ಮಾಡಿದಾಗ ಮಾತ್ರ ದೇಶಭಕ್ತಿ ಜಾಗೃತವಾಗುವುದು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಗೌರವಿ ಮತ್ತು ಅಕ್ಷಯ್ ಹಾಗೂ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತೃತೀಯ ಬಿ ಎ ವಿದ್ಯಾರ್ಥಿನಿಯರಾದ ಮಾನಸ ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿ ಎ ವಿದ್ಯಾರ್ಥಿಗಳಾದ ಮನ್ವಿತ್ ಸ್ವಾಗತಿಸಿ, ಅಕ್ಷಯ್ ವಂದಿಸಿದರು. ಶಿಶಿರಾ ಮತ್ತು ಬಳಗದವರು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಸಲುವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


