ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ‘ಕರ್ನಾಟಕ ಕೌಶಲ್ಯ ಒಲಿಂಪಿಕ್ಸ್’ ಸ್ಪರ್ಧೆ ಸಮಾರಂಭ

Upayuktha
0


ಬೆಂಗಳೂರು: ‘ಕೌಶಲ್ಯಾಧರಿತ ಶಿಕ್ಷಣವನ್ನು ಶಾಲಮಟ್ಟದಿಂದಲೇ ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಏಕೆಂದರೆ ಪ್ರತಿಯೊಂದು ಜೀವಿಯಲ್ಲಿಯೂ ಅದರದ್ದೇ ಆದ ಕೌಶಲ್ಯವಿರುತ್ತದೆ. ಆ ಕೌಶಲ್ಯವನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹದ ನೀರೆರೆದು ಪೋಷಿಸಿದರೆ, ಆ ಕೌಶಲ್ಯವಿರುವ ವ್ಯಕ್ತಿ ಬೃಹತ್ ಹೆಮ್ಮರದಂತೆ ಬೆಳೆದು ಜಾಗತಿಕ ಮಟ್ಟದಲ್ಲಿ ಕಾಣಿಕೆ ನೀಡಬಲ್ಲ ಸಾಧನೆ ಮಾಡುತ್ತಾನೆ. ಅದರಿಂದಲೇ ಕರ್ನಾಟಕ ಸರ್ಕಾರ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ ನುಡಿದರು.


ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ನಿಟ್ಟೆ ಸ್ಕೂಲ್ ಅಪ್ಫ್ ಫ್ಯಾಶನ್‌ ಟೆಕ್ನಾಲಜಿ ಮತ್ತು ಇಂಟೀರಿಯರ್ ಡಿಸೈನ್ ಜಂಟಿಯಾಗಿ ನಿಗಮದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಕರ್ನಾಟಕ ಕೌಶಲ್ಯ ಒಲಿಂಪಿಕ್ಸ್’ ಸ್ಪರ್ಧೆಯ ಲೋಕಾರ್ಪಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.


ನಿಗಮ ಅತ್ಯಂತ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಶೋಧಿಸಿ ನಂತರ ಉತ್ತೇಜಿಸಿ ಅವರನ್ನು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಪರ್ಧಾಳುಗಳನ್ನಾಗಿಸುವ ಬೃಹತ್ ಆಂದೋಲನವನ್ನು ಹಮ್ಮಿಕೊಂಡಿದೆ. 2026ರಲ್ಲಿ ಚೈನಾದ ಶಾಂಘೈನಲ್ಲಿ ಜರುಗುವ ವಿಶ್ವಕೌಶಲ್ಯ ಚಾಂಪಿಯನ್‍ಶಿಪ್‍ಗೆ ಸ್ಪರ್ಧಿಸಲು ಸೂಕ್ತ ಪ್ರತಿಭೆಗಳ ಆಯ್ಕೆಗಾಗಿ ‘ಕರ್ನಾಟಕ ಸ್ಕಿಲ್ ಓಲಂಪಿಕ್ಸ್’ಅನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಮೊದಲು ಜಿಲ್ಲಾ ಮಟ್ಟ, ನಂತರ ವಲಯದ ಹಂತಗಳಲ್ಲಿ ಜಯಗಳಿಸಿದವರು, ರಾಜ್ಯಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ರಾಷ್ಟ್ರಮಟ್ಟದಲ್ಲಿ ಜಯ ಸಾಧಿಸಿದವರು ಭಾರತವನ್ನು ಶಾಂಘೈನಲ್ಲಿ ನಡೆಯುವ ವಿಶ್ವಕೌಶಲ್ಯ ಚಾಂಪಿಯನ್‍ಶಿಪ್‍ನಲ್ಲಿ ಪ್ರತಿನಿಧಿಸುತ್ತಾರೆ’ ಎಂದು ನುಡಿದರು.


‘ಕೌಶಲ್ಯದಲ್ಲಿ ನಾಲ್ಕು ಪ್ರಕಾರಗಳಿವೆ. ಜೀವನಾಧಾರಿತ ಕೌಶಲ್ಯ, ವೃತ್ತಿ ಆಧಾರಿತ ಕೌಶಲ್ಯ, ಉದ್ಯಮಾಧರಿತ ಕೌಶಲ್ಯ ಹಾಗೂ ಸಂವಹನ ಕೌಶಲ್ಯ. ಈ ಕೌಶಲ್ಯಗಳು ನಮ್ಮನ್ನು ಈ ಸ್ಪರ್ಧಾತ್ಮಕ ಯುಗದಲ್ಲಿ ಬಹುಎತ್ತರಕ್ಕೆ ಕೋಂಡೊಯ್ಯಬಲ್ಲವು. ಕೇವಲ ನಾವು ಪಡೆಯುವ ಪದವಿಗಳು ಎಂದೆಂದಿಗೂ ಔನ್ನತ್ಯ ಸಾಧಿಸಲು ನೆರವಾಗುವುದಿಲ್ಲ. ಕೌಶಲ್ಯ ಅತ್ಯವಶ್ಯ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ವಿದ್ಯಾವಂತರನ್ನು ಕಾಡುತ್ತಿದ್ದರೆ ಅದಕ್ಕೆ ಕಾರಣ ಅವರು ಕೌಶಲ್ಯವನ್ನು ರೂಢಿಸಿಕೊಳ್ಳದಿರುವುದು ಎಂಬುದು ಸಾಬೀತಾಗಿದೆ’, ಎಂದು ವಿವರಿಸಿದರು.


ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮುಖ್ಯ ಸಲಹೆಗಾರ ಕ್ಯಾಪ್ಟನ್ ಕೌಸ್ತವ್ ನಾಥ್ ಮಾತನಾಡಿ ‘ಸ್ಪರ್ಧೆಯಲ್ಲಿ ಭಾಗವಹಿಸಲು ಸಕಲ ಯುವಜನತೆಗೆ ಅವಕಾಶವಿದೆ. ಸಾಮಾನ್ಯ ವಿಭಾಗದ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು ದಿನಾಂಕ 01.01.2004ರಂದು ಅಥವಾ ನಂತರ ಜನಿಸಿದವರಾಗಿರಬೇಕು. ಮುಂದುವರಿದ ಜ್ಞಾನಾಧರಿತ ವಿಭಾಗದಲ್ಲಿ ಭಾಗವಹಿಸುವವರು ದಿನಾಂಕ 01.01.2001ರಂದು ಅಥವ ನಂತರ ಜನಿಸಿರಬೇಕು. ಆಸಕ್ತರು www.skillindiadigital.gov.in  ನಲ್ಲಿ ನೋಂದಾಯಿಸಿಕೊಳ್ಳಬಹುದು’, ಎಂದು ಮಾಹಿತಿ ನೀಡಿದರು. ನೋಂದಾವಣೆಗೆ ಕಡೆಯ ದಿನಾಂಕ 15.10.2025. 


ಸಮಾರಂಭದಲ್ಲಿ ಐದುನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೆರೆದಿದ್ದರು. ಪ್ರಾರಂಭದಲ್ಲಿ ನಿಟ್ಟೆ ಸ್ಕೂಲ್ ಅಪ್ಫ್ ಫ್ಯಾಶನ್‌ ಟೆಕ್ನಾಲಜಿ ಮತ್ತು ಇಂಟೀರಿಯರ್ ಡಿಸೈನ್‍ನ ಪ್ರಾಂಶುಪಾಲೆ ಡಾ. ಸಂಧ್ಯಾರವಿ ಸರ್ವರನ್ನೂ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top