ಅಡಿಕೆ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳ ವಿಚಾರದಲ್ಲಿ ಮಲೆನಾಡು ಸಂಸದರ, ಶಾಸಕರ ನಿರ್ಲಕ್ಷ್ಯ

Upayuktha
0



ಡಿಕೆ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳ ವಿಚಾರದಲ್ಲಿ ಕರಾವಳಿ ಭಾಗದಲ್ಲಿ, ಅಲ್ಲಿನ ಸಂಸದರು ಆಗಾಗ ಉನ್ನತ ಮಟ್ಟದ ಸಭೆಗಳನ್ನು ಮಾಡಿ, ಗಂಭೀರವಾಗಿ ಚರ್ಚಿಸಿ, ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಸುದ್ಧಿಗಳು ಬರುತ್ತಿವೆ.



ನಮ್ಮಲ್ಲೂ ಇಂತಹದೇ ಒಂದು ಉನ್ನತ ಮಟ್ಟದ ಸಭೆಯನ್ನು (ಮಲೆನಾಡಿನ ಎಲ್ಲ ಶಾಸಕರು, ಸಂಸದರು, ಸಚಿವರುಗಳು, ಉಸ್ತುವಾರಿ ಸಚಿವರುಗಳು, ಇಲಾಖಾ ಅಧಿಕಾರಿಗಳು, ಅಡಿಕೆ ಬೆಳೆಗಾರರು, ವಿಜ್ಞಾನಿಗಳು, ಸ್ಥಳೀಯ ಜನಪ್ರತಿನಿಧಿಗಳು.. ಸೇರಿಸಿ) ಆಯೋಜಿಸಲು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆ ಕಳೆದ ಒಂದುವರೆ ವರ್ಷದಿಂದ ಹರ ಸಾಹಸ ಪ್ರಯತ್ನ ಮಾಡುತ್ತಿದ್ದು, ಇವತ್ತಿಗೂ ಸಾಧ್ಯವಾಗುತ್ತಿಲ್ಲ.  



ಕ್ಷೇತ್ರ ಸಂಸದರು ಒಂದೆರಡು ಬಾರಿ ದಿನಾಂಕ ನಿಗದಿ ಮಾಡಿದ್ದರೂ, ನಂತರ ಅದು ರದ್ದಾಗಿವೆ.



ಸ್ಥಳೀಯ ಶಾಸಕರು, ಸಭೆ ಮಾಡುವ ಭರವಸೆಗಳನ್ನು ಕೊಟ್ಟಿದ್ದು ಬಿಟ್ಟರೆ, ಇವತ್ತಿನವರೆಗೂ ಆ ಬಗ್ಗೆ ಗಂಭೀರವಾಗಿ ಆಸಕ್ತಿ ತೋರಿಸಿಲ್ಲ.



ಸಂಸದರ ಆಪ್ತ ಕಾರ್ಯದರ್ಶಿಗಳು ಕೇಳಿದಂತೆ, ಸಭೆಯಲ್ಲಿ ಭಾಗವಹಿಸುವವರ (ವಿವಿ ಮುಖ್ಯಸ್ಥರು, ವಿಜ್ಞಾನಿಗಳು, ತಜ್ಞರು, ಬೆಳೆಗಾರರು, ಜನಪ್ರತಿನಿಧಿಗಳು...) ಹೆಸರು, ವಿವರ, ಮೊಬೈಲ್‌ ನಂಬರ‌ಗಳನ್ನೂ ಪಟ್ಟಿ ಮಾಡಿ ಈಗಾಗಲೆ ಕೊಡಲಾಗಿದೆ. ಕೊಟ್ಟು ವರ್ಷವೇ ಕಳೆದಿದೆ.



1) ನಾಲ್ಕು ವರ್ಷದಿಂದ ಅಡಿಕೆ ಎಲೆಚುಕ್ಕಿ ಭೀಕರವಾಗಿ ವಿಸ್ತರಿಸುತ್ತಿದೆ.



2) ಅಡಿಕೆ ಹಳದಿ ರೋಗವೂ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ.



3) ಈ ವರ್ಷ ಅಡಿಕೆ ಕೊಳೆ ರೋಗ ಮಲೆನಾಡಿನ 50% ಅಡಿಕೆ ಫಸಲನ್ನು ಬಲಿ ಪಡೆದಿದೆ.



4) ಕಳೆದ ಎರಡು ವರ್ಷಗಳೂ ಅತಿವೃಷ್ಟಿಯ ಮಳೆ ಆಗಿದ್ದರೂ, ಕೊಳೆ ರೋಗದಿಂದ ಫಸಲು ನಾಶವಾಗಿದ್ದರೂ, ನಾಶವಾಗುತ್ತಿದ್ದರೂ, ಅತಿವೃಷ್ಟಿ ಪ್ರದೇಶ ಎಂದು ಘೋಷಣೆ ಆಗಿಲ್ಲ, ರೈತರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ.



5) ಸಣ್ಣ ಅಡಕೆ ಬೆಳೆಗಾರರ ಒತ್ತುವರಿ ವಿಚಾರದಲ್ಲಿನ ಅರಣ್ಯ ಇಲಾಖೆಯ ತೆರವು ಕ್ರಮಗಳು ಮುಂದುವರೆದಿದೆ.  



6) ದಶಕಗಳಿಂದ ಬಾಕಿ ಇರುವ ಸಣ್ಣ ರೈತರ ಅರ್ಜಿ 50, 53, 57, 94c, 94ccಗಳು ಈಗಲೂ ಬಾಕಿ ಇವೆ. ಹಕ್ಕು ಪತ್ರ ಕೊಡುತ್ತಿಲ್ಲ. ಕೊಟ್ಟ ಹಕ್ಕು ಪತ್ರಗಳಿಗೆ ಖಾತೆ-ಪಹಣಿ ಆಗುತ್ತಿಲ್ಲ.



7) ಮಲೆನಾಡಿನ ಬಹುತೇಕ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳು ಐದು ದಶಕದ ಹಿಂದಿನ ಎತ್ತಿನ ಗಾಡಿ ರಸ್ತೆಗಿಂತಲೂ ಹೀನ ಸ್ಥಿತಿಯಲ್ಲಿವೆ.  



8) ಆನೆ, ಕಾಡುಕೋಣ, ಕಾಳಿಂಗ ಸರ್ಪ, ಮಂಗ... ಮುಂತಾದ ಕಾಡು ಪ್ರಾಣಿಗಳ ಹಾವಳಿಯಿಂದ ಮಲೆನಾಡು ಅಡಿಕೆ ಬೆಳೆಗಾರ ಬಸವಳಿಯುತ್ತಿದ್ದಾನೆ.



9) ಅಡಿಕೆ ರೋಗಗಳ, ಮುಖ್ಯವಾಗಿ ಅಡಿಕೆ ಎಲೆ ಚುಕ್ಕಿ ಸಂಶೋಧನೆ ನೆನೆಗುದಿಗೆ ಬಿದ್ದಿದೆ.



10) ಕೃಷಿ ಸಂಬಂಧಿತ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿ ಹತ್ತಾರು ಲೋಪಗಳಿಂದಾಗಿ, ಅವೈಜ್ಞಾನಿಕತೆಯಿಂದಾಗಿ ರೈತರಿಗೆ ಹತ್ತಾರು ಸಮಸ್ಯೆಗಳಾಗುತ್ತಿವೆ.



11) ಕೃಷಿ ಉಪಕರಣಗಳ ಮೇಲಿನ ಸರಕಾರಿ ಸಬ್ಸಿಡಿ ಒಂದು ವ್ಯವಸ್ಥಿತ ಮೋಸದ ದಂದೆಯಾಗಿದ್ದು, ಅದರ ಲಾಭವನ್ನು ವ್ಯಾಪಾರಸ್ತರು, ಮಧ್ಯವರ್ತಿಗಳು, ಇಲಾಖಾ ಅಧಿಕಾರಿಗಳು, (ಜನಪ್ರತಿನಧಿಗಳು!!?) ಪಡೆಯುತ್ತಿದ್ದು, ರೈತರಿಗೆ ಯಾವುದೇ ಅನುಕೂಲತೆಗಳು ದೊರೆಯುತ್ತಿಲ್ಲ.



12) ಅಡಿಕೆ ವ್ಯಾಪಾರದ ಮಧ್ಯವರ್ತಿಗಳು ತಮ್ಮ ಗೋಡನ್‌ಗಳಲ್ಲೂ, APMC ಯಂತಹ ಮಾರುಕಟ್ಟೆಯ ಪ್ರಾಂಗಣದ ಒಳಗಡೆ ರಾಜಾರೋಷವಾಗಿಯೂ ಅಡಿಕೆಗೆ ವಿಷಕಾರಿ ಕೆಮಿಕಲ್ ಬಣ್ಣ ಬಳಿಯುವಂತಹ ಕೃತ್ಯ ನೆಡೆಯುತ್ತಿದ್ದರೂ, ಅದಕ್ಕೆ ಕ್ರಮಗಳಾಗುತ್ತಿಲ್ಲ.



13) ವಿದೇಶದಿಂದ ಅಕ್ರಮವಾಗಿ ಕಳ್ಳದಾರಿಯಲ್ಲಿ ನಿರಂತರ ಅಡಿಕೆ ಆಮದಾಗುತ್ತಿರುವ, ಆಗಾಗ ಅದರಲ್ಲಿ ಒಂದೊಂದು ರೈಡ್ ಆಗುತ್ತಿರುವ ಸುದ್ದಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನಿತ್ಯ ಪ್ರಸಾರವಾದರೂ, ಇದರ ವಿರುದ್ದ ಶಾಶ್ವತ ಕ್ರಮ ಆಗುತ್ತಿಲ್ಲ.



14) ಮಲೆನಾಡಿನ ಶೃಂಗೇರಿ, ತೀರ್ಥಹಳ್ಳಿಗಳಲ್ಲಿ ಸ್ಥಾಪಿಸಿದ ಅಡಿಕೆ ಸಂಶೋಧನಾ ಕೇಂದ್ರಗಳು ರೈತರಿಗೆ ಅನುಕೂಲವಾಗುವ ಯಾವ ಪ್ರಯೋಗ, ಸಲಹೆ, ಮಾರ್ಗದರ್ಶನ, ಅಧ್ಯಯನಗಳನ್ನೂ ಮಾಡದೆ (ಮಾಡಿದ್ದರೂ ಅದು ರೈತರಿಗೆ ಸಿಕ್ಕಿಲ್ಲ!!) ಮುಚ್ಚುವ ಹಂತದಲ್ಲಿರುವ ಸರಕಾರಿ ಶಾಲೆಗಳಂತಿವೆ.



15) ಇವತ್ತು ಇಂಟರ್‌ನೆಟ್, ನೆಟ್ವರ್ಕ್‌ಗಳು ರೈತರಿಗೂ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಆದರೆ, ಮಲೆನಾಡಿನ ಬಹುತೇಕ ಗ್ರಾಮಗಳು ಈ ಸೌಲಭ್ಯದಿಂದ ವಂಚಿತವಾಗಿವೆ.



ಇದನ್ನೆಲ್ಲ, ಕುಳಿತು ಸಮಾಲೋಚನೆ ಮಾಡಿ, ಚರ್ಚಿಸಿ, ಸೂಕ್ತ ಕ್ರಮಗಳನ್ನೂ- ಪರಿಹಾರಗಳನ್ನೂ ತೆಗೆದುಕೊಳ್ಳಲು ಮುಂದಾಗಬೇಕಾದ ಸಂಸದರು, ಶಾಸಕರು ಕನಿಷ್ಟ ಒಂದು ಉನ್ನತ ಮಟ್ಟದ ಸಭೆ ಮಾಡಲೂ ಮನಸ್ಸು ಮಾಡುತ್ತಿಲ್ಲ. ಈಗಾಗಲೆ ಕೊಟ್ಟ ಹತ್ತಾರು ಮನವಿ, ಒತ್ತಾಯ ಪತ್ರಗಳಿಗೆ ಒಂದು ರಿಪ್ಲೈ ಕೂಡ ಇಲ್ಲ.



ಮಲೆನಾಡಿನ ಜನರ ಬದುಕಿನ ಗಂಭೀರ ಸಮಸ್ಯೆಗಳಿಗೆ ಸರಕಾರ, ಸರಕಾರದ ಇಲಾಖೆಗಳು ಕಿಂಚಿತ್ತೂ ಸ್ಪಂದಿಸುವುದಿಲ್ಲ ಅಂತಾದರೆ, ಅಧಿಕಾರಸ್ತ ಜನ ಪ್ರತಿನಿಧಿಗಳಾದ ಸಂಸದರು, ಶಾಸಕರು, ಸಚಿವರುಗಳು, ಉಸ್ತುವಾರಿಗಳು ಕ್ಷೇತ್ರಕ್ಕೆ ಬಂದು ಸ್ಪಂದಿಸುವುದಿಲ್ಲ ಅಂತಾದರೆ ರೈತರು ಏನು ಮಾಡಬೇಕು?



ಮಲೆನಾಡಿನಲ್ಲಿ ಕೃಷಿ ಕೆಲಸಕ್ಕೆ ಆಳುಗಳೂ ಸಿಗುವುದಿಲ್ಲ, ಕೃಷಿ ಸಮಸ್ಯೆಗಳಿಗೆ ಸ್ಪಂದಿಸಲು ಆಳುವವರೂ ಸಿಗುವುದಿಲ್ಲ!!



-ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top