ನವರಾತ್ರಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ ಈ ಹಬ್ಬವನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಗುತ್ತದೆ. ನವರಾತ್ರಿ ಎಂದರೆ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಈ ನವರಾತ್ರಿಯಲ್ಲಿ ಚಾಮುಂಡೇಶ್ವರಿ ಅಥವಾ ದುರ್ಗಾದೇವಿಯು "ಮಹಿಷಾಸುರ" ಎಂಬ ರಾಕ್ಷಸನನ್ನು ಸಂಹಾರ ಮಾಡಿ ಮಹಿಷಮರ್ಧಿನಿಯಾದಳು. ನವರಾತ್ರಿಯ ಹತ್ತನೇ ದಿನವನ್ನು 'ವಿಜಯದಶಮಿ' ಎನ್ನಲಾಗುತ್ತದೆ. ಈ ದಿನ ಮಹಾದುರ್ಗೆ ರಾಕ್ಷಸರನ್ನು ಸಂಹಾರ ಮಾಡಿ ವಿಜಯವನ್ನು ಸಾಧಿಸಿದ ದಿನ. ಹಾಗೆಯೇ ತ್ರೆತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ಹೇಳಲಾಗುತ್ತದೆ. ಇದನ್ನೇ "ವಿಜಯದಶಮಿ" ಅಥವಾ "ದಸರಾ" ಎನ್ನುತ್ತಾರೆ. ಈ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದುರ್ಗಾದೇವಿಯನ್ನು ಒಂದೊಂದು ರೂಪದಲ್ಲಿ ಅಲಂಕರಿಸಿ, ಪ್ರತಿಯೊಂದು ದಿನವೂ ನಿರ್ದಿಷ್ಟ ಬಣ್ಣದ ಉಡುಪು ಧರಿಸಿ, ನವದುರ್ಗೆಯರನ್ನು ಬಹಳ ಅದ್ಧೂರಿಯಾಗಿ, ಸಂಭ್ರಮದಿಂದ ದೇಶಾದ್ಯಂತ ಪೂಜಿಸಲಾಗುತ್ತದೆ.
ಮೊದಲನೆಯದಾಗಿ ನಾವು "ಶೈಲಪುತ್ರಿಯ"ನ್ನು ಆರಾಧಿಸುತ್ತೇವೆ. ಸತಿಯ ಪುನರ್ಜನ್ಮದ ರೂಪವೇ ಶೈಲಪುತ್ರಿ. ಸತಿ ದೇವಿ ತನ್ನ ತಂದೆ ಶಿವನನ್ನು ಅವಮಾನ ಮಾಡಿದ್ದಕ್ಕೆ ದೇವಿಯು ಯಜ್ಞದ ವೇಳೆಯಲ್ಲಿ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಬಿಡುತ್ತಾಳೆ. ಸತಿಯ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿರುತ್ತಾನೆ. ಈಶ್ವರನನ್ನು ಮರಳಿ ಪಡೆಯಲು ಸತಿ ಪುನರ್ಜನ್ಮ ಪಡೆದು ಕಾಡಿನಲ್ಲಿ 16 ವರ್ಷ ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಒಲಿಸುತ್ತಾಳೆ.
ಎರಡನೇಯದಾಗಿ ನಾವು "ಬ್ರಹ್ಮಚಾರಿಣಿ" ದೇವಿಯನ್ನು ಆರಾಧಿಸುತ್ತೇವೆ. ಸತಿ ಪಾರ್ವತಿಯಾಗಿ ಹಿಮವಂತನ ಪುತ್ರಿಯಾಗಿ ಜನಿಸುತ್ತಾಳೆ. ಶಿವನನ್ನು ಪತಿಯಾಗಿ ಪಡೆಯಲು ನಾರದಾರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡಿದ ಕಾರಣದಿಂದಾಗಿ ದೇವಿಗೆ "ಬ್ರಹ್ಮಚಾರಿಣಿ" ಎನ್ನುವ ಹೆಸರು ಬಂದಿದೆ.
ಮೂರನೇಯದಾಗಿ ದೇವಿಯನ್ನು "ಚಂದ್ರಘಂಟಾ" ರೂಪದಲ್ಲಿ ಆರಾಧಿಸುತ್ತೇವೆ. ಈ ಅವತಾರ ದೇವಿಯ ರೌದ್ರ ಸ್ವರೂಪವಾಗಿದೆ. ಪಾರ್ವತಿ ದೇವಿಯ ಕಠಿಣ ತಪಸ್ಸಿನ ನಂತರ ಶಿವನನ್ನು ವಿವಾಹವಾಗುವ ಸಂಧರ್ಭದಲ್ಲಿ ಈಶ್ವರನು ತನ್ನ ಗಣಗಳೊಂದಿಗೆ ದೇವಿಯ ಅರಮನೆಯತ್ತ ಬರುವಾಗ ಅತೀ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ಕಂಡ ದೇವಿಯ ತಾಯಿ ಮೂರ್ಛೆಹೋಗುತ್ತಾರೆ. ನಂತರ ದೇವಿ 'ಚಂದ್ರಘಂಟಾ' ರೂಪದಲ್ಲಿ ಈಶ್ವರನ ಮುಂದೆ ಪ್ರತ್ಯಕ್ಷರಾಗಿ ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಂಡ ನಂತರ ಶಿವ ಪಾರ್ವತಿಯ ವಿವಾಹ ನೆರವೇರುತ್ತದೆ.
ನಾಲ್ಕನೇ ದಿನದಂದು ದೇವಿಯನ್ನು "ಕೂಷ್ಮಾಂಡಿನಿ" ರೂಪದಲ್ಲಿ ಆರಾಧಿಸುತ್ತೇವೆ. ಸೃಷ್ಟಿಯ ಆಸ್ತಿತ್ವ ಇಲ್ಲದಿದ್ದಾಗ ಅಂಧಕಾರವೇ ಇದ್ದುದರಿಂದ, ಆಗ ದೇವಿಯು ತನ್ನ 'ಈಶತ್' ಹಾಸ್ಯದಿಂದ ಬ್ರಹ್ಮಂಡ ಸೃಷ್ಟಿಸಿ, ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ. ಹಾಗಾಗಿ 'ಕೂಷ್ಮಾಂಡಿನಿ' ದೇವಿಯನ್ನು "ಭೂಮಿಯ ಸೃಷ್ಟಿಕರ್ತೆ" ಎಂದು ಹೇಳಲಾಗುತ್ತದೆ. ದೇವಿಯು ಎಂಟು ಭುಜಗಳನ್ನು ಹೊಂದಿರುವ ಕಾರಣ ಅವಳನ್ನು "ಅಷ್ಟಭುಜಾದೇವಿ" ಎಂದೂ ಸಹ ಕರೆಯಲಾಗಿದೆ.
ಐದನೇಯದಾಗಿ "ಸ್ಕಂದಮಾತೆ"ಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯನ ತಾಯಿಯೇ 'ಸ್ಕಂದ ಮಾತೆ'. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ದೇವಿಯು ಕಾಣುತ್ತಾಳೆ.
ಆರನೇಯದಾಗಿ "ಕಾತ್ಯಾಯಿನಿ" ರೂಪದಲ್ಲಿ ದೇವಿಯನ್ನು ಆರಾಧಿಸುತ್ತೇವೆ. 'ಕಾತ್ಯಾಯನ' ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕೆಂದು ಕಠಿಣ ತಪಸ್ಸನ್ನು ಮಾಡಿದ ನಂತರ, ದೇವಿ ಪ್ರತ್ಯಕ್ಷಳಾಗಿ ಋಷಿಗೆ ಆಶೀರ್ವಾದ ಮಾಡುತ್ತಾಳೆ. ಮಗಳು ಹುಟ್ಟಿದ ಮೇಲೆ ಅವಳಿಗೆ "ಕಾತ್ಯಾಯಿನಿ" ಎಂದು ಹೆಸರಿಡಲಾಗುತ್ತದೆ. ನಂತರ ದೇವಿಯು ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ರಾಕ್ಷಸರನ್ನು ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸುತ್ತಾಳೆ. ದುಷ್ಟರ ಸಂಹಾರಕ್ಕಾಗಿ ಅವತರಿಸಿ ಬಂದವಳೇ ದೇವಿ "ಕಾತ್ಯಾಯಿನಿ".
ಏಳನೇಯದಾಗಿ ತಾಯಿಯ ಇನ್ನೊಂದು ರೂಪವಾದ "ಕಾಲರಾತ್ರಿ"ಯನ್ನು ಪೂಜಿಸಲಾಗುತ್ತದೆ. ರೌದ್ರಾವತಾರ ಮತ್ತು ಉಗ್ರ ರೂಪದಲ್ಲಿ ದೇವಿ ಕಾಲರಾತ್ರಿಯಾಗಿ ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಕಾಲರಾತ್ರಿಯು ಎಲ್ಲಾ ರೀತಿಯ ದುಷ್ಟತೆ ಮತ್ತು ನಕಾರಾತ್ಮಕ ಭೀತಿ ದೂರ ಮಾಡಿ ತನ್ನ ಭಕ್ತರಿಗೆ ಸುಖ, ಸಂತೋಷ ಹಾಗೂ ತೃಪ್ತಿಯನ್ನು ಕರುಣಿಸುತ್ತಾಳೆ. ಹಾಗಾಗಿ ಅವಳನ್ನು 'ಶುಭಂಕರಿ' ಅಥವಾ 'ಪವಿತ್ರ'ವೆಂದು ಪರಿಗಣಿಸಲಾಗಿದೆ.
ಎಂಟನೇಯ ದಿನದಂದು "ಮಹಾಗೌರಿ"ಯನ್ನು ಆರಾಧಿಸುತ್ತೇವೆ. ಗೌರಿ ಎಂದರೆ 'ಗಿರಿ' ಅಥವಾ 'ಪರ್ವತ'ದ ಮಗಳೆಂದು ಹೆಸರಿಸಲಾಗಿದೆ. ತಾಯಿಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ಶಿವನನ್ನು ವಿವಾಹವಾಗಲು ಬಯಸುತ್ತಾಳೆ. ಈಶ್ವರನಿಗಾಗಿ ತಪಸ್ಸು ಮಾಡಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಬಿಸಿಲಿನಿಂದ ಆಕೆಯ ದೇಹವು ಧೂಳು, ಕೊಳೆಯಿಂದ ತುಂಬಿ ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾವಿರಾರು ವರುಷಗಳ ಬಳಿಕ ಶಿವ ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ. ನಂತರ ದೇವಿಯು ಶ್ವೇತವರ್ಣದಲ್ಲಿ ಕಾಂತಿಯುತವಾಗಿ ಹದಿನಾರನೇ ವಯಸ್ಸಿನವಳ ಹಾಗೆ ಕಾಣುತ್ತಾಳೆ.
ಕೊನೆಯಯದಾಗಿ ಒಂಬತ್ತನೇ ದಿನದಂದು "ಸಿದ್ಧಿಧಾತ್ರಿ" ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯು ಅಷ್ಟ ಮಹಾಸಿದ್ದಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ನೀಡುತ್ತಾಳೆ. ತಾಯಿಯು ಪರಿಪೂರ್ಣತೆ, ಎಲ್ಲಾ ತರಹದ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ.
ಹೀಗೆ ನವರಾತ್ರಿಯ ಒಂಬತ್ತು ದಿನಗಳಲ್ಲೂ 'ನವದುರ್ಗೆಯ'ರನ್ನು ಸ್ಥಾಪಿಸಿ ಬಹಳ ಅದ್ದೂರಿಯಿಂದ ಪೂಜಿಸಲಾಗುತ್ತದೆ.
-ಹರ್ಷಿಣಿ ಕಾಂಚನ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ