ಬೆಂಗಳೂರು: ‘ತಂತ್ರಜ್ಞಾನ ಕ್ಷೇತ್ರದ ಸಾರ್ಥಕ ಸಂಶೋಧನೆಗಳಿಗೆ ಅತ್ಯಂತ ಅಗತ್ಯವಿರುವುದು ಸಂಶೋಧನೆಗಾಗಿ ನಾವು ಆಯ್ದುಕೊಂಡ ಸಮಸ್ಯೆಯ ಸಮಗ್ರ ಅಧ್ಯಯನ. ಇದರಿಂದ ಸಮಸ್ಯೆಯ ಆಳ-ಅಗಲಗಳು ಮನದಟ್ಟಾಗುತ್ತವೆ. ಸಮಸ್ಯೆಯ ಪರಿಪೂರ್ಣ ವಿಶ್ಲೇಷಣೆ ನಮ್ಮ ಸಂಶೋಧನೆಗೆ ಬೇಕಾಗಿರುವ ಏಕಾಗ್ರತೆ ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ನೆರವಾಗಲಿದೆ. ಹೀಗೆ ಸವಾಲುಗಳನ್ನು ಸಂಶೋಧನೆಗೆ ಮೊದಲೇ ಅರಿತರೆ, ಸಮಾಜದ ಹಾಗೂ ಪರಿಸರದ ಅಡ್ಡಿ ಆತಂಕಗಳನ್ನು ನಿವಾರಿಸುವ ದಿಟ್ಟಿನಲ್ಲಿ ನಾವು ಸದೃಢ ಹೆಜ್ಜೆಗಳನ್ನಿಡಬಹುದು. ಪ್ರಾರಂಭದಲ್ಲಿ ಸೋಲುಗಳನ್ನು ಕಂಡರೂ ಕ್ರಮೇಣ ಆ ಸೋಲುಗಳೇ ಅವಕಾಶಗಳ ಬಗ್ಗೆ ದಿಕ್ಸೂಚಿಗಳಾಗುತ್ತವೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ)ಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಡಾ. ಅನಿಲ್ ಡಿ. ಸಹಸ್ರಬುದ್ದೆ ನುಡಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೋದ್ಯಮಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವಿಶೇಷ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮಲ್ಲಿ ಸಂಶೋಧಕರಿಗೆ ಹಾಗೂ ಅನ್ವೇಷಕರಿಗೆ ಕೊರತೆಯಿಲ್ಲ. ಸಮಸ್ಯೆಯ ಸವಾಲುಗಳನ್ನು ಅರ್ಥೈಸಿಕೊಂಡು ನಮ್ಮ ಯುವತಂತ್ರಜ್ಞರು ಉತ್ಸುಕತೆಯಿಂದ ಮುನ್ನುಗುತ್ತಿರುವುದರಿಂದಲೇ 2014ರಲ್ಲಿ ಕೇವಲ 400ರಷ್ಟಿದ್ದ ಸ್ಟಾರ್ಟ್ಅಪ್ (ನವೋದ್ಯಮ)ಗಳ ಸಂಖ್ಯೆ ಇಂದು 1,75,000 ಸಂಖ್ಯೆಯನ್ನು ದಾಟಿ, ನಮ್ಮ ದೇಶ ಅಭೂತಪೂರ್ವ ಪ್ರಗತಿ ಹೊಂದಿದೆ. ಕರೋನಾದಂತಹ ಭೀಕರ ವ್ಯಾಧಿ ಜಗತ್ತನ್ನೇ ನಡುಗಿಸಿದಾಗ, ಅಲ್ಪಾವಧಿಯಲ್ಲಿ ನಾವು ಅದಕ್ಕೆ ಲಸಿಕೆ ಕಂಡುಹಿಡಿದು ನಮ್ಮ ಕೋಟ್ಯಾಂತರ ಪ್ರಜೆಗಳಿಗೆ ನೀಡಿದೆವು ಹಾಗೂ ಸಾವುಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದೆವು. ಅಷ್ಟೇ ಅಲ್ಲ, ಇಡೀ ಭೂಮಿಯೇ ನಮ್ಮ ಕುಟುಂಬ ಎಂಬ ಈ ನೆಲದ ನಂಬಿಕೆಗೆ ಅನುಗುಣವಾಗಿ ಅಗತ್ಯವಿರುವ ಎಲ್ಲಾ ರಾಷ್ಟ್ರಗಳಿಗೂ ನೀಡಿದೆವು. `ಆಪರೇಶನ್ ಸಿಂಧೂರ’ ಅನುಷ್ಠಾನಗೊಂಡಾಗ ಅಗತ್ಯ ಡ್ರೋನ್‌ಗಳನ್ನು ನಮ್ಮ ನವೋದ್ಯಮಿಗಳು ತುರ್ತಾಗಿ ಒದಗಿಸಿದ್ದರಿಂದ ಅಪೂರ್ವ ಯಶಸ್ಸು ಕಂಡು ಜಗತ್ತಿನ ಗಮನವನ್ನು ನಾವು ಸೆಳೆಯುವಂತಾಯಿತು’ ಎಂದು ಅವರು ನುಡಿದರು.
‘ಭಾರತ ಸರಕಾರದ ಶಿಕ್ಷಣ ಮಂತ್ರಾಲಯ ‘ಅಕೆಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್’ ಹೆಸರಿನ ಡಿಜಿಟಲ್ ವೇದಿಕೆಯನ್ನು ಸ್ಥಾಪಿಸಿದೆ. ಇಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಅಧ್ಯಯನ ಹಾಗೂ ಸಂಶೋಧನೆಗಳಲ್ಲಿ ಸಾಧಿಸಿರುವ ಹಾಗೂ ಸಾಧಿಸುತ್ತಿರುವ ಪ್ರಗತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದ ದೇಶದ ವೈಜ್ಞಾನಿಕ ಮುನ್ನಡೆ ಬಗ್ಗೆ ಸರ್ಕಾರ ಲಕ್ಷ್ಯ ನೀಡಬಹುದು, ಅಗತ್ಯ ಸೌಲಭ್ಯ ಹಾಗೂ ನೆರವುಗಳನ್ನು ಒದಗಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಕರು ಆದ್ಯತೆಯ ಮೇರೆ ತಮ್ಮ ನಿರಂತರ ಅಧ್ಯಯನಶೀಲತೆಯನ್ನು ಸಾಬೀತುಪಡಿಸಲು ಈ ವೇದಿಕೆಯಲ್ಲಿ ತಾವು ಕಲಿತ, ಕಲಿಯುತ್ತಿರುವ ಹೊಸ ವಿಚಾರಗಳನ್ನು ದಾಖಲಿಸಬೇಕು. ಇದರಿಂದ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಕಲಿಯಲು ಹಾಗೂ ಅನ್ವೇಷಿಸಲು ಪ್ರೇರಣೆ ಒದಗಿಸಿದಂತಾಗುತ್ತದೆ’ ಎಂದರು.
ಐದುನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಸಂಶೋಧನಾಸಕ್ತರ ಈ ಸಮಾವೇಶದ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದವರು ಐ.ಐ.ಟಿ ಬಾಂಬೆಯ ಗೌರವ ಪ್ರಾಧ್ಯಾಪಕ ಡಾ. ವಿವೇಕಾನಂದ ಡಿ. ಅವರು ತಮ್ಮ ಭಾಷಣದಲ್ಲಿ, ‘ವಿಜ್ಞಾನಿಗಳು ಹಾಗೂ ತಂತ್ರಜ್ಞರು ಏನೆಲ್ಲಾ ಸಾಧಿಸಿದರೂ ಈ ನೆಲದ ಧರ್ಮದ ವೈಶಾಲ್ಯತೆಗನುಗುಣವಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಹಾಗೂ ಮರ್ಯಾದಾ ಪುರುಷೋತ್ತಮರಾಗಿ ಸಮಾಜದ ಏಳಿಗೆಗೆ ಸದಾ ಸ್ಪಂದಿಸಬೇಕು’, ಎಂದು ಅಭಿಪ್ರಾಯಿಸಿದರು.
ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸರ್ವರನ್ನೂ ಸ್ವಾಗತಿಸಿ, ಸಂಸ್ಥೆಯಲ್ಲಿ ನಡೆಯುತ್ತಿರುವ ವೈವಿದ್ಯಮಯ ಸಂಶೋಧನೆಗಳ ಸಮಗ್ರ ಚಿತ್ರಣವನ್ನು ಸಭೆಗೆ ಪರಿಚಯಿಸಿದರು. ಸಭೆಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಸಮಾವೇಶದ ಸಂಯೋಜಕಿ ಡಾ. ಎನ್. ಸಮನ್ವಿತಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

