ಬ್ರಹ್ಮಾಂಡ ಅಸ್ತ್ರದ ಸದುಪಯೋಗ ಅತ್ಯಗತ್ಯ: ಸಮ್ರೀನ್

Chandrashekhara Kulamarva
0



ಮೂಡುಬಿದಿರೆ: ಕಲಾ ವಿಭಾಗದ ವಿದ್ಯಾರ್ಥಿಗಳು ಸಾಹಿತ್ಯ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇನ್ನಿತರ ವಿಷಯಗಳನ್ನು ಕಲಿಯುವುದರ ಜೊತೆಗೆ  ಮಾನವೀಯ ಮೌಲ್ಯಗಳು, ವಿಶ್ಲೇಷಣಾ ದೃಷ್ಟಿಕೋನ ಮತ್ತು ತಾರ್ಕಿಕ ಚಿಂತನೆಯನ್ನು ಬೆಳೆಸಿಕೊಂಡಿರುತ್ತಾರೆ.  ಹೀಗಾಗಿ  ಈ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಅಗತ್ಯವಾದ  ಬ್ರಹ್ಮಾಂಡ ಅಸ್ತ್ರವನ್ನು ತಮ್ಮ ವಿದ್ಯಾಭ್ಯಾಸದ ಹಂತದಲ್ಲೇ ಪಡೆದಿರುತ್ತಾರೆ ಎಂದು ಆಳ್ವಾಸ್ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ  ನಿಯೋಜಿತ ವಾಣಿಜ್ಯ ತೆರಿಗೆ ನಿರೀಕ್ಷಕಿ ಸಮ್ರೀನ್ ತಯ್ಯಬಾ ಎಂ ಎಸ್ ನುಡಿದರು.


ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಲಾ, ಸಾಹಿತ್ಯ ಹಾಗೂ ಮತದಾರರ ಸಾಕ್ಷರತಾ ಸಂಘದ ವತಿಯಿಂದ ‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ’  ಕುರಿತು ಮಾಹಿತಿ ಕಾರ್ಯಕ್ರಮವನ್ನು ವಿದ್ಯಾಗಿರಿ ಆವರಣದ ಡಾ.ಶಿವರಾಮ ಕಾರಂತ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಕಲಾ ವಿಭಾಗದ ವಿದ್ಯಾರ್ಥಿಗಳು ಭಾಷಾ ಪಾಂಡಿತ್ಯ, ತಾರ್ಕಿಕ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸಾಮಾಜಿಕ ಅರಿವಿನ ಜೊತೆಗೆ ತಮ್ಮ ಪಠ್ಯಕ್ರಮವನ್ನು ಸಮರ್ಪಕವಾಗಿ ಅಧ್ಯಯನ ನಡೆಸಿದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಮರ್ಥರಾಗುತ್ತಾರೆ. ವಿದ್ಯಾರ್ಥಿಗಳು ಪ್ರತಿದಿನ ತಲಾ ಒಂದು ಕನ್ನಡ ಹಾಗೂ ಇಂಗ್ಲೀಷ್ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. 


ಜೊತೆಗೆ, ಯೂಟ್ಯೂಬ್‌ನಲ್ಲಿ ಲಭ್ಯವಿರುವ ಅಧಿಕೃತ ವಿಡಿಯೋ ಸಿರೀಸ್‌ಗಳನ್ನು ಉಪಯೋಗಿಸಿ ಅಧ್ಯಯನವನ್ನು ನಡೆಸಿ ಎಂದು ಸಲಹೆ ನೀಡಿದರು.  ಸರಕಾರದಿಂದ ಆಯೋಜಿಸಲ್ಪಡುವ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.  


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ಸಂಘದ ಸಂಯೋಜಕ ದಾಮೋದರ  ಇದ್ದರು. ರ‍್ಯನ್ ಡಿಸೋಜಾ ನಿರೂಪಿಸಿ, ಭಾಗಮ್ಮ ಸ್ವಾಗತಿಸಿ,  ನಿಧಿ ಅತಿಥಿಯನ್ನು ಪರಿಚಯಿಸಿ, ಲ್ಯಾನ್ಲೇಪಾ ವಂದಿಸಿದರು. 



إرسال تعليق

0 تعليقات
إرسال تعليق (0)
To Top