ಭಾರತೀಯರ ಪ್ರಥಮ ಮಹಾಕಾವ್ಯ "ರಾಮಾಯಣ"ದ ಕರ್ತೃ ಆದಿಕವಿ ಮಹರ್ಷಿ ವಾಲ್ಮೀಕಿ

Upayuktha
0



ಮ್ಮ ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರು ಹಿರಿಯರಿಂದ 'ರಾಮಾಯಣ'ವನ್ನು ಕೇಳುತ್ತಲೇ ಬೆಳೆದಿದ್ದೇವೆ. ಈ ಪ್ರಥಮ ಮಹಾಕಾವ್ಯವಾದ "ರಾಮಾಯಣ"ವನ್ನು ರಚಿಸಿದವರು ಶ್ರೇಷ್ಠ ಕವಿ ವಾಲ್ಮೀಕಿ ಮಹರ್ಷಿ, ಆದುದರಿಂದ ವಾಲ್ಮೀಕಿಗಳನ್ನು'ಆದಿಕವಿ' ಯೆಂದು, ಅವರ ಈ ರಚನೆಯನ್ನು 'ವಾಲ್ಮೀಕಿ ರಾಮಾಯಣ 'ಎಂದು ಕರೆಯಲಾಗುತ್ತದೆ. ಇಂತಹ ಮಹಾನ್ ರಚನೆಯನ್ನು ಮಾಡಿದ ವಾಲ್ಮೀಕಿ ಮುನಿಗಳ ಹಿನ್ನೆಲೆಯನ್ನು ಅವಲೋಕನ ಮಾಡಿದಾಗ ನಮಗೆ ಹಲವಾರು ಅಚ್ಚರಿಯ ವಿಷಯಗಳು ತಿಳಿದುಬರುತ್ತವೆ.


ವಾಲ್ಮೀಕಿಗಳ ಜೀವನದ ಕುರಿತು ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ ಋಷಿಯಾಗುವ ಮುನ್ನ ಓರ್ವ 'ಬೇಡ'ನಾಗಿದ್ದ, ಅವನ ಹೆಸರು ರತ್ನಾಕರ ಎಂಬುದಾಗಿತ್ತು. ಮಹಾಕ್ರೂರಿ ದರೋಡೆಕಾರನಾಗಿದ್ದ ಈತ ವಾಲ್ಮೀಕಿಯಾದದ್ದೇ ಒಂದು ರೋಚಕವಾದ ಕಥೆ.


ಒಂದು ದಿನ ಬೇಡ ರತ್ನಾಕರ ದರೋಡೆಯನ್ನು ಮಾಡುವ ಸಂದರ್ಭದಲ್ಲಿ ಅವನಿಗೆ ಸಪ್ತಋಷಿಗಳು ಎದುರಾಗುತ್ತಾರೆ. ಎಂದಿನಂತೆ ಅವರನ್ನು ಹೆದರಿಸಿ ದೋಚಲು ಪ್ರಯತ್ನಿಸುತ್ತಿರುವಾಗ, ಅವರು 'ನೀನು ಮಹಾಪಾಪದ ಕಾರ್ಯ ಮಾಡುತ್ತಿರುವೆ.ಯಾರಿಗಾಗಿ ಇದನ್ನು ಮಾಡುತ್ತಿರುವೆ, ಈ ಪಾಪವನ್ನು ಯಾರು ಹೊರುತ್ತಾರೆ?' ಎಂದು ಕೇಳಿದಾಗ ಬೇಡನು ತನ್ನ ಸಂಸಾರಕ್ಕಾಗಿ ಮಾಡುತ್ತಿರುವೆ, ಅವರು ಹೊರುತ್ತಾರೆ ಎಂದು ಉತ್ತರ ನೀಡುತ್ತಾನೆ. ಆಗ ಋಷಿಗಳು 'ನಿನ್ನ ಸಂಸಾರದವರು ಈ ಪಾಪವನ್ನು ಹೊರುವುದಿಲ್ಲ, ಅನುಮಾನವಿದ್ದರೇ ವಿಚಾರಿಸು' ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ. ಮನೆಗೆ ಬಂದ ರತ್ನಾಕರ ಹೆಂಡತಿ ಮಕ್ಕಳಿಗೆ ತಾನು ಮಾಡುತ್ತಿದ್ದ ನೀಚಕಾರ್ಯವನ್ನು ತಿಳಿಸಿ, ಇದರಿಂದ ಬರುವ ಪಾಪದಲ್ಲಿ ಭಾಗಿಯಾಗಿವಿರಾ?' ಎಂದಾಗ ಮನೆಯವರು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಆಗ ತಕ್ಷಣವೇ ತನ್ನ ತಪ್ಪಿನ ಅರಿವಾಗಿ ರತ್ನಾಕರನು ಋಷಿಗಳ ಬಳಿಗೆ ಬಂದು ಈ ಪಾಪದಿಂದ ಮುಕ್ತನನ್ನಾಗಿ ಮಾಡಿ ಎಂದು ಪ್ರಾರ್ಥಿಸಿದಾಗ ಅವರು ರಾಮಮಂತ್ರವನ್ನು ಪಠಿಸಲು ಉಪದೇಶ ಮಾಡಿ, ಇದರಿಂದ ನಿನ್ನ ಬಾಳು ಬೆಳಕಾಗುತ್ತದೆ ಎಂದು ಹರಸುತ್ತಾರೆ. ಋಷಿಗಳ ಸಮ್ಮುಖದಲ್ಲಿಯೇ ರತ್ನಾಕರ ರಾಮಮಂತ್ರವನ್ನು ಪಠಿಸಲು ಆರಂಭಿಸುತ್ತಾನೆ. 


ಹಲವು ಸಮಯದ ನಂತರ ಸಪ್ತರ್ಷಿಗಳು ಮತ್ತೊಮ್ಮೆ ಅದೇ ಸ್ಥಳಕ್ಕೆ ಬಂದಾಗ ರತ್ನಾಕರ ಮಂತ್ರ ಪಠಿಸಲು ಆರಂಭಿಸಿದ ಸ್ಥಳದಲ್ಲಿ ಒಂದು ದೊಡ್ಡ ಹುತ್ತ  ಬೆಳೆದಿರುವುದನ್ನು ಗಮನಿಸಿ, ಆ ಹುತ್ತವನ್ನು ಕರಗಿಸಿದಾಗ ಅದರೊಳಗಿನಿಂದ ರತ್ನಾಕರ ಹೊರಗೆ ಬರುತ್ತಾನೆ, ಶ್ರದ್ಧೆಯಿಂದ ರಾಮಜಪವನ್ನು ಜಪಿಸಿದ ಕಾರಣ ಜ್ಞಾನಿಯಾಗಿ ಪರಿವರ್ತನೆಯಾಗಿರುತ್ತಾನೆ. ಸಂಸ್ಕೃತದಲ್ಲಿ 'ವಲ್ಮೀಕ' ಎಂದರೆ 'ಹುತ್ತ'. ಹುತ್ತದಿಂದ ಹೊರಬಂದವನಾದ್ದರಿಂದ "ವಾಲ್ಮೀಕಿ" ಎಂದು ಹೆಸರುವಾಸಿಯಾದ. ಹೀಗೆ 'ರಾಮನಾಮ' ಜಪಿಸುವ ಮೂಲಕ ದೈಹಿಕದಿಂದ ಬೌದ್ಧಿಕವಾಗಿ ದ್ವಿಜತ್ವವನ್ನು ಸಾಧಿಸುತ್ತಾನೆ, ರಾಮನಾಮ ಜಪದ ಮಹತಿಯನ್ನು ಜಗತ್ತಿಗೆ ಸಾರುತ್ತಾನೆ.


ಮುಂದೆ ನಡೆದ ಮತ್ತೊಂದು ಮಹತ್ವದ ಘಟನೆ ವಾಲ್ಮೀಕಿ ಜೀವನದ ಪಥವನ್ನೇ ಬದಲಿಸಿಬಿಡುತ್ತದೆ. ಒಂದು ದಿನ ವಾಲ್ಮೀಕಿ ಆಶ್ರಮಕ್ಕೆ ನಾರದ ಮಹರ್ಷಿಗಳು ಆಗಮಿಸಿದಾಗ, ವಾಲ್ಮೀಕಿಯು ನಾರದರಿಗೆ 'ಸ್ವಾಮಿ, ಲೋಕದಲ್ಲಿ ಅತ್ಯಂತ ಒಳ್ಳೆಯ ಗುಣಗಳುಳ್ಳ ಶ್ರೇಷ್ಠ ವ್ಯಕ್ತಿತ್ವ ಯಾರದ್ದು?' ಎಂದು ಪ್ರಶ್ನಿಸಿದಾಗ ನಾರದರು ಶ್ರೀರಾಮನ ಕಥೆಯನ್ನು ವಿವರಿಸುತ್ತಾರೆ. ನಾರದರಿಂದ ಶ್ರೀರಾಮನ ಕಥೆಯನ್ನು ಕೇಳಿದ ವಾಲ್ಮೀಕಿ ಅದನ್ನೇ ಮನನ ಮಾಡಿಕೊಳ್ಳುತ್ತ ಸ್ನಾನ ಮಾಡಲು ತಮಸಾ ಎಂಬ ನದಿಯ ಕಡೆಗೆ ತೆರಳುತ್ತಾನೆ. ಆ ನದಿ ತೀರದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತ, ಅಲ್ಲಿ ಪ್ರಣಯ ಸಲ್ಲಾಪದಲ್ಲಿ ಮಗ್ನವಾದ ಎರಡು ಕ್ರೌಂಚ ಪಕ್ಷಿಗಳನ್ನು ಗಮನಿಸುತ್ತಿರುವಾಗಲೇ ಓರ್ವ ಬೇಡ ಆ ಪಕ್ಷಿಗಳಿಗೆ ಬಾಣಗಳಿಂದ ಘಾಸಿಗೊಳಿಸುತ್ತಾನೆ.


ಗಂಡು ಕ್ರೌಂಚಪಕ್ಷಿ ಅಸುನೀಗಿ, ಹೆಣ್ಣು ಪಕ್ಷಿ ನೋವಿನಿಂದ ನರಳಾಡುತ್ತಿರುತ್ತದೆ. ಇದನ್ನು ಕಂಡ ವಾಲ್ಮೀಕಿ ಕೊಪಗೊಂಡು ಆ ಬೇಡನಿಗೆ 

"ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ|

ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್||" 

ಅಕಾರಣವಾಗಿ ಹಕ್ಕಿಯನ್ನು ಕೊಂದ ಅನ್ಯಾಯಿ|

ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ||


ಎಂದು ಶಾಪಕೊಡುತ್ತಾನೆ. ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ, ಲಯ ಛಂದಸ್ಸುಗಳಿಂದ ಕೂಡಿತ್ತು. ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಮತ್ತು ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕರೂಪದಲ್ಲಿ ಹೊರಹೊಮ್ಮಿದ ಮಾತುಗಳು. ತಕ್ಷಣವೇ ತಾನು ತಪಸ್ವಿ,ಋಷಿ ಎಂದು ಮನವರಿಕೆಯಾಗಿ, ಬೇಡನಿಗೆ ಶಪಿಸಬಾರದಿತ್ತು ಎಂದು ದುಃಖಿಸುತ್ತ ಆಶ್ರಮಕ್ಕೆ ಹಿಂದಿರುಗುತ್ತಾರೆ. ಅದೇ ಸಂದರ್ಭದಲ್ಲಿ ಬ್ರಹ್ಮದೇವನು ಆಶ್ರಮಕ್ಕೆ ಆಗಮಿಸಿ "ವಾಲ್ಮೀಕಿ, ನಿನ್ನ ದುಃಖ ಮತ್ತು ಶಾಪ ಅಂತರ್ಸಂಬಂಧವಾಗಿದೆ. ನಿನ್ನ ಶೋಕವು ಶ್ಲೋಕ ರೂಪದಲ್ಲಿ ಬಂದಿದೆ, ಅದನ್ನೇ ನೀನು ವಿಸ್ತರಿಸಿ ಶ್ರೀರಾಮನ ಕಥೆಯನ್ನು ಕಾವ್ಯವಾಗಿ ಬರೆಯಬೇಕು" ಎಂದು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ಬರೆಯುವುದಕ್ಕೆ ಪ್ರಾರಂಭಿಸುತ್ತಾರೆ. ಶೋಕ, ದುಃಖ ಮತ್ತು ಕರುಣೆಗಳು ಸ್ಥಾಯಿಭಾವವಾಗಿ ಉಳಿದಿದ್ದರಿಂದ 'ರಾಮಾಯಣ'ದ ಉದ್ದಕ್ಕೂ ಕರುಣೆ ಎಂಬುದು ರಸದ ಪ್ರಭಾವವಾಗಿಯೇ ಬಂದಿದೆ. ಕ್ರೌರ್ಯದ ಒಡಲಿನಿಂದ ದುಃಖ, ಕರುಣೆ ಹಾಗೂ ಶೋಕದ ಬೀಜ ಮೊಳಕೆಯೊಡೆದು ಅದೊಂದು ಅಸಾಧ್ಯವಾದ ಕಾವ್ಯವಾಗಿ ವಿಸ್ತರಿಸಿಕೊಂಡಿರುವುದು ನಿಜಕ್ಕೂ ವಿಶಿಷ್ಟ ಸನ್ನಿವೇಶವಾಗಿದೆ.


ಅಲ್ಲದೇ ವಾಲ್ಮೀಕಿ ತಾವೇ ರಚಿಸಿದ ರಾಮಾಯಣದಲ್ಲಿ ತಾವೂ ಪಾತ್ರವಾಗಿ ಪಾಲ್ಗೊಂಡಿದ್ದಾರೆ. ಶ್ರೀರಾಮನಿಂದ ಪರಿತ್ಯಕ್ತಳಾದ ಗರ್ಭಿಣಿ ಸೀತಾಮಾತೆಗೆ ತಮ್ಮ ಆಶ್ರಮದಲ್ಲಿ ಪೋಷಿಸಿ, ಮುಂದೆ ಆಕೆಯ ಅವಳಿಮಕ್ಕಳಿಗೆ 'ಲವ ಕುಶ' ಎಂಬ ಹೆಸರಿಟ್ಟು, ಮಕ್ಕಳಿಗೆ ಸಂಸ್ಕಾರ ಕಲಿಸುವುದರೊಂದಿಗೆ ವಿದ್ಯೆಯನ್ನು ಉಪದೇಶಿಸುತ್ತ, ರಾಮಾಯಣವನ್ನು ಒಂದು ಕಾವ್ಯವಾಗಿ ಕಲಿಸುತ್ತಾರೆ. ನಂತರ ವಾಲ್ಮೀಕಿಯೇ ಸೀತೆಯನ್ನು, ಲವಕುಶರನ್ನು ಶ್ರೀರಾಮನ ಬಳಿ ಕರೆದೊಯ್ದು ಅವರಿಂದ ರಾಮಾಯಣವನ್ನು ಗಾನ ಮಾಡಿಸುತ್ತಾರೆ. ಹೀಗೆ ರಾಮಾಯಣದ ಕರ್ತೃ ವಾಲ್ಮೀಕಿಯಲ್ಲಿ ಎರಡು ರೀತಿಯ ವ್ಯಕ್ತಿತ್ವಗಳಿವೆ. ಒಂದು ರಾಮಾಯಣ ಕಾವ್ಯವನ್ನು ಬರೆದ ಕವಿಯಾಗಿ, ಮತ್ತೊಂದು ಆ ಕಾವ್ಯದಲ್ಲಿ, ಉತ್ತರ ರಾಮಾಯಣದಲ್ಲಿ ತಾನೇ ಒಂದು ಪಾತ್ರವಾಗಿದ್ದಾರೆ. ಓರ್ವ ಕವಿ ಒಂದು ಕಾವ್ಯವನ್ನು ಸೃಷ್ಟಿಸಿ, ತಾನೂ ಕೂಡ ಪಾತ್ರವಾಗಿ ಅದರಲ್ಲಿ ಭಾಗಿಯಾಗಿರುವದು 'ರಾಮಾಯಣ'ದ ವಿಶೇಷ. ರಾಮಾಯಣವು ಒಟ್ಟು 24,000 ಶ್ಲೋಕಗಳನ್ನು, ಏಳು ಕಾಂಡಗಳನ್ನು ಹೊಂದಿದ ಸಂಸ್ಕೃತ ಸಾಹಿತ್ಯದ ಮೊಟ್ಟಮೊದಲ ಮಹಾಕಾವ್ಯವಾಗಿದೆ. 

     

ಕೂಜಂತಂ ರಾಮ ರಾಮೇತಿ|

ಮಧುರಂ ಮಧುರಾಕ್ಷರಮ್||

ಆರುಹ್ಯ ಕವಿತಾಶಾಖಾಂ|

ವಂದೇ ವಾಲ್ಮೀಕಿ   

ಕೋಕಿಲಮ್|| 


ಈ ಬಹಳ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಗಳಿಗೆ ವಂದಿಸುವ, ನಮಸ್ಕರಿಸುವ ಶ್ಲೋಕವು 'ಬುಧಕೌಶಿಕ' ಮುನಿಗಳಿಂದ ರಚಿಸಲ್ಪಟ್ಟ "ಶ್ರೀರಾಮರಕ್ಷಾ" ಸ್ತ್ರೋತ್ರದಲ್ಲಿದೆ.


'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮಾ ರಾಮಾ' ಎಂದು ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ- ನಮಸ್ಕಾರ. ಪ್ರತಿವರ್ಷ  ಆಶ್ವಯುಜ ಮಾಸದ ಶುದ್ಧ ಹುಣ್ಣಿಮೆಯ ದಿನದಂದು 'ಮಹರ್ಷಿ ವಾಲ್ಮೀಕಿ ಜಯಂತಿ" ಯನ್ನು ವೈಭವದಿಂದ ಆಚರಿಸಲಾಗುತ್ತದೆ. ನಾಳೆ  ಹುಬ್ಬಳ್ಳಿಯಲ್ಲಿ ಸಂಸ್ಕೃತ ಭಾರತಿ'ಯಿಂದ ಅನೇಕ ಸ್ಥಳಗಳಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ.




- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ

(ಸಂಸ್ಕೃತ ಭಾರತಿ'ಯ ಉತ್ತರ ಕರ್ನಾಟಕದ ಪ್ರಚಾರ ಗಣ ಸದಸ್ಯೆ)

 99805 45433


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top