ನನ್ನ ಮಗ ಮೂರು ದಿನದ ಹಿಂದೆ ನನ್ನ ಕಬೋರ್ಡ್ ನಲ್ಲಿ ಎಲ್ಲಾ ಜೋಡಿಸಿ ಇಡುತ್ತಿದ್ದ. ನಾಲ್ಕು ತಿಂಗಳಿಂದ ನಾನು ಅದಕ್ಕೆ ಕೈ ಹಾಕಿರಲಿಲ್ಲ. ಅವನಿಗೆ ನಾನು ಜೋಪಾನವಾಗಿ ಇಟ್ಟಿದ್ದ ನನ್ನ ಅಮೂಲ್ಯ ಸಂಪದ ಸಿಕ್ಕಿತು. "ಇದೇನು ಸಿಲ್ಕ್ ಪೀಸ್‌ನಲ್ಲಿ ಸುತ್ತಿಟ್ಟಿದ್ದೀಯಾ?" ಎಂದು ಕೇಳಿದ. "ಅದನ್ನ ಹಾಗೆ ಇಡು. ತೆಗೀಬೇಡ" ಎಂದೆ. ಅವನಿಗೆ ಅದು ಏನೆಂದು ಅರ್ಥ ಆಯಿತು. ಅದನ್ನು ತೆಗೆದಿರಿಸಿದ.
ಇಂದು ವಿಶ್ವ ಅಂಚೆ ದಿನ'ದ ಆಚರಣೆ. ಬಹಳ ಜನರಿಗೆ ಸುಮಾರು ವರ್ಷಗಳಿಂದ ಪತ್ರ ಬರೆದು ಹಾಕುವ ಅಭ್ಯಾಸವೇ ತಪ್ಪಿ ಹೋಗಿದೆ. ಹಾಗೆಂದು ಅಂಚೆ ಕಚೇರಿ ಮುಚ್ಚಿಲ್ಲ. ಅಂಚೆ ತಲುಪುತ್ತಿವೆ. ಬುಕ್ ಪೋಸ್ಟ್, ಆಮಂತ್ರಣ ಪತ್ರಿಕೆಗಳು, ವಿಮಾ ಕಂಪೆನಿಗಳಿಂದ, ಬ್ಯಾಂಕ್ ನಿಂದ ಇತ್ಯಾದಿ ಬರುತ್ತಿದೆ. ಪತ್ರಗಳು ಬಹಳವೇ ಕಡಿಮೆ ಆಗಿದೆ. ಇಂದು ಶಾಲೆಗಳಲ್ಲಿ- ಪತ್ರಿಕೆಗೆ, ಮುಖ್ಯೋಪಾಧ್ಯಾಯರಿಗೆ, ಹೀಗೆ ವ್ಯಾವಹಾರಿಕ ಕಾಗದ- ನೋಟ್ ಬರೆಸುವರು. ಇಂದು ಪತ್ರ ಬರೆಯುವುದು ಅಂದರೆ ಇಷ್ಟಕ್ಕೆ ಸೀಮಿತವೇನೋ!!
ಅಪ್ಪ- ಅಮ್ಮ ಮಕ್ಕಳಿಗೆ ಪತ್ರ ಬರೆಯುತ್ತಿದ್ದರು. ಒಡಹುಟ್ಟಿದವರ ಪತ್ರ ಬರುತ್ತಿತ್ತು. ಬಂಧುಗಳ, ಸ್ನೇಹಿತರ ಪತ್ರ ಇರುತ್ತಿತ್ತು. ಊರಿಗೆ ಬರುವ ಮೊದಲು, ಬಂದು ಹೋದ ಮೇಲೆ ಇರುತ್ತಿತ್ತು. ಯಾರಾದರೂ ಊರಿಗೆ ಹೋಗುತ್ತಿದ್ದರೆ- ಅಲ್ಲಿ ತಲುಪಿದ ಮೇಲೆ ಕಾಗದ ಬರೀ ಎಂದು ಹೇಳುವುದು ವಾಡಿಕೆಯಲ್ಲಿ ಇತ್ತು. ಅದೇ ಈಗ ಒಂದು ಕಾಲ್ ಮಾಡು ಇಲ್ಲ ಮೆಸೇಜ್ ಮಾಡು ಅಂತ ಹೇಳೋದು ಅಭ್ಯಾಸ ಆಗಿದೆ. ಎಲ್ಲರೂ ಬಹಳ ಬಿಸಿ. (busy)
ಮದುವೆ ನಿಶ್ಚಯ ಆದ ಮೇಲೆ ಹುಡುಗ ಹುಡುಗಿಯ ಮಧ್ಯೆ ಪತ್ರ ವಿನಿಮಯ ಆಗುತ್ತಿತ್ತು. ಪತ್ರಕ್ಕಾಗಿ ಅಂಚೆಯವನಿಗೆ ಕಾಯುತ್ತಿದ್ದ ಕಾಲ. ಒಡಹುಟ್ಟಿದವರ ಕೈಯಲ್ಲಿ ಪತ್ರ ಸಿಕ್ಕಿದರೆ ಬೇಡ ಫಜೀತಿ. ಆಟ ಆಡಿಸಿ ಕಾಡಿಸಿ ಕೊಡುತ್ತಿದ್ದರು. ಅವರಿಂದ ಪತ್ರ ಪಡೆದಾಗ ಸಂತೋಷ, ಲಜ್ಜೆ ಎರಡೂ ಮಿಳಿತವಾಗಿ ಇರುತ್ತಿತ್ತು.
ಇನ್ನು ಕದ್ದು ಮುಚ್ಚಿ ಪ್ರೇಮಿಸುವ ಪ್ರೇಮಿಗಳಿಗೆ ಅಂಚೆಯ uncle ಆಪದ್ಭಾಂಧವ, ಸಂದೇಶವಾಹಕ. ಇಲ್ಲದಿದ್ದರೆ ಸ್ನೇಹಿತರ ಅಡ್ರೆಸ್ ಕೊಡುತ್ತಿದ್ದರು. ಹೆದರಿಕೆಯಲ್ಲಿ ಪ್ರೇಮ ಸಂದೇಶದ ವಿನಿಮಯ ಆಗುತ್ತಿತ್ತು. ಪ್ರತಿಯೊಬ್ಬ ಪ್ರೇಮಿ / ಪ್ರೇಮಿಕೆ ಪತ್ರ ಬರೆಯುವಾಗ ಕವಿ, ಶಾಯರ್ ಆಗುತ್ತಾನೆ. ಹೋಟಲ್, ಕಾಫಿ ಡೇ, ನಂದಿ ಬೆಟ್ಟ, ರಿಸಾರ್ಟ್ ಅನ್ನೋ ಯೋಚನೆ ಇರುತ್ತಿರಲಿಲ್ಲ. ಜೇಬಿನಲ್ಲಿ ದುಡ್ಡು ಇರುತ್ತಿರಲಿಲ್ಲ. ಹುಡುಗಿಯರ ಕೋರಿಕೆ ಅಂದು ಜೊತೆಯಲ್ಲಿ ಸಮಯ ಕಳೆಯಬೇಕು ಅಷ್ಟೇ. ಒಂದು ಕಳ್ಳೇಕಾಯಿ ಪೊಟ್ಟಣ ಇಬ್ಬರಿಗೂ ಸಾಕಾಗ್ತಾ ಇತ್ತು.
Romance had a civilised, morality, restrained desires. ಅಂದಿನ ಕಾದಂಬರಿಗಳಲ್ಲೂ, ಚಲನಚಿತ್ರಗಳಲ್ಲೂ ಪ್ರಣಯದ ಅತಿರೇಕದ ಭಾವಭಂಗಿಗಳು ಇರುತ್ತಿರಲಿಲ್ಲ. ಸಮಾಜದ ಒಳಿತಿನ ದೃಷ್ಟಿಕೋನ ಲೇಖಕರಲ್ಲಿ, ಚಲನಚಿತ್ರ ನಿರ್ಮಾಪಕರಲ್ಲಿ ಇರುತ್ತಿತ್ತು. ಒಂದು ರೀತಿಯಲ್ಲಿ ವ್ಯವಸ್ಥಿತ ಸಮಾಜ ಇತ್ತು.
ಒಂದು ಹುಡುಗಿಗೆ I love you, ನಿನ್ನನ್ನು ಪ್ರೀತಿಸ್ತೀನಿ ಎಂದು ಹೇಳಲು ಧೈರ್ಯ ಬೇಕಾಗಿತ್ತು. ಆ ಮಾತಿನಲ್ಲಿ ಸ್ಥಿರತೆ, ದೃಢತೆ ಇರುತ್ತಿತ್ತು. ಯಾವಾಗಲೂ ಎಲ್ಲಾ ಪ್ರೇಮಕಥೆ ಸುಖಮಯವಾಗಿ ಅಂತ್ಯ ಆಗುವುದಿಲ್ಲ. ಇದು ಗೊತ್ತಿರುವುದೇ.
ಟೆಲಿಫೋನ್ ಬಂದಮೇಲೆ coin booth ನಿಂದ STD, Trunk call, ಫೋನ್ ಮಾಡಿ ಮಾತನಾಡುವುದು ಶುರುವಾಯಿತು. ಈಗ ಎಲ್ಲರ ಬಳಿ ಮೊಬೈಲ್ ಇದೆ. ಕುಶಲೋಪರಿ ಎಲ್ಲಾ ಅದರ ಮೂಲಕವೇ. ಮದುವೆಗೆ, ಹುಟ್ಟಿದ ಹಬ್ಬಕ್ಕೆ ಆಶೀರ್ವಾದ ಮೊಬೈಲ್ ನಲ್ಲೇ. ಸಂತಾಪ ಸೂಚಿಸುವುದು ಮೊಬೈಲ್ ನಲ್ಲಿ. ಗ್ರೂಪ್ ನಲ್ಲಿ ಇದ್ದರಂತೂ ಸೆಲಿಬ್ರೆಟಿಗಳಿಗೂ ಸಂತಾಪ ಸೂಚಿಸಲು ಸಾಧ್ಯ. ಹೀಗೆ ಸುಲಭವಾಗಿ ನಿಮಿಷದಲ್ಲಿ ಆಗುವಾಗ ಪ್ರೇಮಪತ್ರ ಬರೆಯುವುದು, ಅದಕ್ಕಾಗಿ ಅಂಚೆಯವನಿಗೆ ಕಾಯುವಿಕೆ ಎಲ್ಲಿ? ಆ ಉತ್ಸುಕತೆ, ಬೇರೆಯವರು ಗೋಳಾಡಿಸುವಾಗ ಆಗುವ ಆ ಸಂತಸದ ಅನುಭವ ಎಲ್ಲಿಯದು? All these small pleasures are missing.
ಹೌದು ಈಗ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದು ಹಲವು ship (live in relationship) ಗಳಲ್ಲಿ ಇರುವಾಗ ಮದುವೆ ಆದ ಮೇಲೆ ಹೊಸತು ಏನೂ ಇಲ್ಲ. Stale mate ಅಷ್ಟೇ. ಅವರಿಗೆ Mate has become stale . ಆರಾಮವಾಗಿ ಅವರ ಮೇಲೆ ಖರ್ಚು ಮಾಡುವ ಗಂಡು / ಹೆಣ್ಣಿನ ಸಂಗ ಬೇಕು. ಬಂಧನ, ಜವಾಬ್ದಾರಿ, commitment ಬೇಡ. ಮೊಬೈಲ್ ನಿಂದ ಅವನ / ಅವಳ ಗುರುತುಗಳನ್ನು ಡಿಲೀಟ್ ಮಾಡಲು ಎರಡು ನಿಮಿಷ ಸಾಕು. ವಿಜ್ಞಾನ ಮುಂದುವರಿದಂತೆ ಅವೈಜ್ಞಾನಿಕ, ಅಪಸ್ವರದ ಜೀವನ ಇಂದಿನ 80% ಯುವ ಜನಾಂಗದ ಜೀವನ ಶೈಲಿ. ನಾವು ಅಂದಿನ ಕಾಲದವರು ಪತ್ರಗಳನ್ನು ನಿಧಿಯಂತೆ ಜೋಪಾನವಾಗಿ ಕಾಪಿಡುವೆವು. ಹುಣಸೆಹಣ್ಣಿನ ಹುಳಿ ಹಳೆಯದಾದರೂ ಕಡಿಮೆ ಆಗುವುದಿಲ್ಲ. ಅದರ ಸ್ವಾದ ಇನ್ನಷ್ಟು ರುಚಿ. ನಮ್ಮ ಜನಾಂಗದ ಪ್ರೇಮ ಮದುವೆ ಆದ ಮೇಲೆ ಹುಟ್ಟಿದರೂ ಮಾಸಿಹೋಗುವುದಿಲ್ಲ.
ಇಂದು 53 ವರ್ಷದ ಹಿಂದೆ ನನ್ನವರು ಬರೆದ ಪತ್ರಗಳನ್ನು ಓದುತ್ತಿದ್ದರೆ ನೆನಪುಗಳು ಅದೆಷ್ಟೋ.
- ಸಂಧ್ಯಾ ಸಿದ್ದವನಹಳ್ಳಿ
(ಲೇಖಕಿ: ಹೆಸರಾಂತ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಸಿದ್ಧವನಹಳ್ಳಿ ಕೃಷ್ಣಶರ್ಮರ ಪುತ್ರಿ)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ