ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನೀಡುವ 2025ನೇ ಸಾಲಿನ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿ, ಪಂಕಜಶ್ರೀ ಸಾಹಿತ್ಯ ದತ್ತಿ, ಹಾಗೂ ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ'ಗಳ ಪ್ರದಾನ ಸಮಾರಂಭ ಅ.10ರಂದು ಶುಕ್ರವಾರ ಸಂಜೆ 5 ಗಂಟೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿದೆ.
ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಬಿ.ಆರ್. ಗುರುಪ್ರಸಾದ್ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದತ್ತಿ ದಾನಿಗಳಾದ ಬೆಂಗಳೂರಿನ ಎ.ಆರ್. ನಾರಾಯಣಘಟ್ಟ, ದಾವಣೆಗೆರೆಯ ಟಿ.ಎಸ್. ಶೈಲಜಾ ಅವರು ಉಪಸ್ಥಿತರಿರುತ್ತಾರೆ.
ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿಯನ್ನು ಡಾ. ಹೆಚ್.ಎಸ್. ಸುರೇಶ್; ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಶ್ರೀಮತಿ ಮಿತ್ರಾ ವೆಂಕಟ್ರಾಜು, ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಡಾ. ಬಿ.ಎಸ್. ಶೈಲಜಾ ಸ್ವೀಕರಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ಪರಿಚಯ:
ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿ
ರಾಷ್ಟ್ರೀಯ ವಿದ್ಯಾಲಯ ಸಂಸ್ಥೆಯಲ್ಲಿ 32 ವರ್ಷಗಳ ಅರ್ಥಪೂರ್ಣ ಸೇವೆ ಸಲ್ಲಿಸಿರುವ ಹಿರಿಯ ಗಾಂಧೀವಾದಿ ಎ.ಆರ್. ನಾರಾಯಣಘಟ್ಟ ಅವರು ಪಠ್ಯಪುಸ್ತಕ ರಚನೆ ಸಮಿತಿ ಮತ್ತು ಪರಿಷ್ಕರಣ ಸಮಿತಿಯಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಸುವರ್ಣ ವರ್ಷದಲ್ಲಿ 'ಕೆಚ್ಚೆದೆಯ ಕಲಿಗಳು' ಎಂಬ 14 ಕಂತುಗಳ ರೂಪಕ ಪ್ರಸಾರ, 'ಗೀತಾ ಕುಟೀರ' ಪ್ರಕಾಶನದ ಮೂಲಕ ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ನಾಟಕ, ವಿಚಾರ ಇತ್ಯಾದಿ ಹಲವು ಲೇಖನಗಳ ಪ್ರಕಟಣೆ. ಗಾಂಧೀಜಿ ಅವರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಸಾಧನೆ ತೋರಿದವರನ್ನು ಗೌರವಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ಹೆಸರಿನಲ್ಲಿ ಎರಡು ಲಕ್ಷ ರೂಪಾಯಿಗಳ ದತ್ತಿನಿಧಿ ಸ್ಥಾಪಿಸಿರುತ್ತಾರೆ, ದಾನಿಗಳ ಆಶಯದಂತೆ ಗಾಂಧಿ ಸಾಹಿತ್ಯ ರಚನೆ, ಅಸ್ಪೃಶ್ಯತಾ ನಿರ್ಮೂಲನ, ಪಾನ ವಿರೋಧ, ಖಾದಿ ಪ್ರಚಾರ ಮತ್ತು ಗ್ರಾಮಾಭಿವೃದ್ಧಿ ಈ ಅಂಶಗಳ ಪೈಕಿ ಕನಿಷ್ಠ ಎರಡರಲ್ಲಾದರೂ ತಮ್ಮನ್ನು ತೊಡಗಿಸಿಕೊಂಡಿರುವ ಮಹನೀಯರಿಗೆ ಅಥವಾ ಗಾಂಧಿ ಸಂಘ-ಸಂಸ್ಥೆಗಳಿಗೆ ಪ್ರತಿ ವರ್ಷ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡುತ್ತಾ ಬಂದಿದೆ.
ಡಾ. ಹೆಚ್.ಎಸ್. ಸುರೇಶ್, ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷರು ಹಾಗೂ ಬರಹಗಾರರು. ರಾಜ್ಯ ಜೂನಿಯರ್ ರೆಡ್ ಕ್ರಾಸ್ ಸಲಹೆಗಾರರು. ಕೇಂದ್ರ ಸರಕಾರದ ರಾಷ್ಟ್ರೀಯ ಸೇವಾ ಯೋಜನಾ ಪ್ರಾದೇಶಿಕ ಕೇಂದ್ರ, ಬೆಂಗಳೂರಿನಲ್ಲಿ ಎನ್ನೆಸ್ಸೆಸ್ ಸಲಹೆಗಾರರಾಗಿ ನಿವೃತ್ತರು. ಮುಂಬೈ ಪಾತಕ ಲೋಕದ ಲಕ್ಷ್ಮಣ್ ತುಕಾರಾಂ ಗೋಲೆ ಅವರ ಮನ ಪರಿವರ್ತನೆ ಕುರಿತ ಇವರ ಕೃತಿ 'ಪಾತಕ ಲೋಕದಿಂದ ಗಾಂಧಿಯಾನದೆಡೆಗೆ (ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಪ್ರಕಾಶನ) ಕಾಂತೇಶ ಕದರಮಂಡಲಗಿ ಅವರಿಂದ ನಾಟಕ ರೂಪದಲ್ಲಿ ರಂಗಭೂಮಿ ಮೇಲೆ ಯಶಸ್ವಿಯಾಗಿದೆ. ಮುಂಬೈ ಸರ್ವೋದಯ ಮಂಡಲದ ಕರ್ನಾಟಕ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಾಂಧೀ ಬರಹಗಾರರಾದ ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2025ನೇ ಸಾಲಿನ 'ಶ್ರೀ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಪಂಕಜಶ್ರೀ ಸಾಹಿತ್ಯ ದತ್ತಿ
ದಿವಂಗತ ಎ. ಪಂಕಜ ಅವರದು ಬಹುಮುಖ ವ್ಯಕ್ತಿತ್ವ. ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ನಡೆಸಿದ್ದರೂ, ಅವರನ್ನು ಸಾಂಸ್ಕೃತಿಕ ಲೋಕ ಖ್ಯಾತ ಕಾದಂಬರಿಗಾರ್ತಿ ಎಂದೇ ಗುರುತಿಸಿದೆ. ಅವರು ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರು ಬಹುಭಾಷೆಗಳನ್ನು ಬಲ್ಲವರು. ಅನುವಾದದಲ್ಲೂ ಅವರದು ಹೇರಳ ಕೃಷಿ. ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದಶ್ರೀ ಪ್ರಶಸ್ತಿ, ಎರಡು ಕಾದಂಬರಿಗಳಿಗೆ ಕೇಂದ್ರ ಸರ್ಕಾರದ ಪ್ರಶಸ್ತಿಗಳು ಲಭಿಸಿವೆ. ಇವರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಸನ್ಮಾನಿಸಿತ್ತು. ಇವರು ಸ್ಥಾಪಿಸಿರುವ ಎರಡು ಲಕ್ಷ ರೂಪಾಯಿಗಳ ದತ್ತಿಯಿಂದ ಪ್ರತಿವರ್ಷ ಮಹಿಳಾ ಸಾಹಿತಿಯೊಬ್ಬರಿಗೆ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗುತ್ತಿದೆ.
ಶ್ರೀಮತಿ ಮಿತ್ರಾ ವೆಂಕಟ್ರಾಜು, ಕುಂದಾಪುರದ ಹಲ್ಲನಾಡು ಮನೆತನದಲ್ಲಿ ಹುಟ್ಟಿದ ಮಿತ್ರಾ ವೆಂಕಟ್ರಾಜ್ ಕುಂದಾಪುರದಲ್ಲಿರುವಾಗಲೇ ಕತೆಗಳನ್ನು ಬರೆಯಲು ಆರಂಭಿಸಿದ್ದರೂ, ಇವರ ಹೆಚ್ಚಿನ ಕತೆಗಳು ರೂಪುಗೊಂಡದ್ದು ಮುಂಬಯಿಗೆ ಬಂದ ನಂತರ. ಕನ್ನಡದ ಉತ್ತಮ ಸಣ್ಣ ಕಥಾ ಲೇಖಕರಲ್ಲಿ ಒಬ್ಬರಾದ ಇವರು ರುಕುಮಾಯಿ, ಹಕ್ಕಿ ಮತ್ತು ಅವಳು, ಮಾಯಕದ ಸತ್ಯ, ನನ್ನಕ್ಕ ನಿಲೂಫರ್ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ ಮತ್ತು ಪಾಚಿ ಕಟ್ಟಿದ ಪಾಗಾರ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಸಾವಿತ್ರಮ್ಮ ಪ್ರಶಸ್ತಿ, ಧಾರವಾಡದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕಾಂತಾರವ ಕನ್ನಡ ಸಂಘದ ವರ್ಧಮಾನ ಪ್ರಶಸ್ತಿಗಳು ಲಭಿಸಿವೆ. ಮಾನವೀಯ ಸಂಬಂಧಗಳನ್ನು ಎಲ್ಲ ಸಂಕೀರ್ಣತೆಗಳೊಂದಿಗೆ ಸೂಕ್ಷ್ಮವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಬಲ್ಲ ಮಿತ್ರಾ ಅವರ ಕತೆಗಳಲ್ಲಿ ಬದುಕಿನ ಏಳು-ಬೀಳುಗಳ ಬಗೆಗಿನ ಅನುಭೂತಿ ಅವಲೋಕನಗಳಿವೆ. ಕಣ್ಣಿಗೆ ಕಟ್ಟುವ ಪಾತ್ರ ಚಿತ್ರಣ, ತಿಳಿಹಾಸ್ಯದ ಲೇಪ, ಲವಲವಿಕೆಯ ವಿವರಣೆ, ಕಾಲದೇಶಗಳನ್ನು ಹಿಡಿದಿಡುವ ಪರಿ ಮಿತ್ರಾ ಅವರ ಬರಹಗಳಲ್ಲಿ ಎದ್ದು ಕಾಣುವ ಅಂಶಗಳು. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2025ನೇ ಸಾಲಿನ 'ಪಂಕಜಶ್ರೀ ಸಾಹಿತ್ಯ ದತ್ತಿ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಶೈಲಜ ಟಿ.ಎಸ್. ಅವರು 'ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ' ಸ್ಥಾಪಿಸಿದ್ದಾರೆ. ಮೂಲತಃ ದಾವಣಗೆರೆಯವರಾದ ಟಿ. ಗಿರಿಜ ಸೂಕ್ಷ್ಮ ಸಂವೇದನಾಶೀಲ ಲೇಖಕಿ. ಬೆಳ್ಳಕ್ಕಿಗಳು, ಬಲಿ, ಬಹಿಷ್ಕಾರ, ಇಳಿಜಾರು, ಬೆಂಕಿಬೆಳಕು ಅವರ ಪ್ರಮುಖ ಕಾದಂಬರಿಗಳು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಮಗ್ರ, ಗಣನೀಯ, ಗುಣಾತ್ಮಕ ಸಾಧನೆ ಮಾಡಿದ ಅರ್ಹ ಮಹಿಳಾ ಸಾಹಿತಿಯೊಬ್ಬರಿಗೆ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ಲಕ್ಷ ರೂ. ದತ್ತಿ ಇರಿಸಿದ್ದು, ದಾನಿಗಳ ಆಶಯದಂತೆ ಪ್ರತಿ ವರ್ಷ ಅರ್ಹ ಮಹಿಳಾ ಸಾಹಿತಿಯೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಡಾ. ಬಿ.ಎಸ್. ಶೈಲಜಾ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಟಿ. ಗಿರಿಜ ದತ್ತಿ
ಪುರಸ್ಕಾರಕ್ಕೆ ಖ್ಯಾತ ವಿಜ್ಞಾನ ಬರಹಗಾರರು ಮತ್ತು ಜವಹರಲಾಲ್ ನೆಹರು ತಾರಾಲಯದ ನಿವೃತ್ತ ನಿರ್ದೇಶಕರೂ ಆದ ಡಾ.ಬಿ.ಎಸ್. ಶೈಲಜ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಶ್ರೀಮತಿ ಟಿ.ಎಸ್. ಶೈಲಜ, ದಾವಣಗೆರೆ ಅವರು ಸೂಕ್ಷ್ಮ ಸಂವೇದನಾಶೀಲ ಬರಹಗಾರ್ತಿ ಟಿ. ಗಿರಿಜ ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಲೇಖಕಿಯರಿಗೆ ಈ ಗೌರವ ಸಲ್ಲುತ್ತದೆ. 2025ನೆಯ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಬಿ.ಎಸ್. ಶೈಲಜಾ ಅವರು ಕನ್ನಡದ ಮಹತ್ವದ ಬರಹಗಾರ ಬ.ನ. ಸುಂದರ ರಾಯರ ಮಗಳು. ಭಾರತೀಯ ಭೌತ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪಡೆದ ಅವರು ಜವಹರಲಾಲ್ ನೆಹರು ತಾರಾಲಯದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ, ಕನ್ನಡದಲ್ಲಿ ವಿಜ್ಞಾನವನ್ನು ಅದರಲ್ಲಿಯೂ ಖಭೌತ ವಿಜ್ಞಾನವನ್ನು ಜನಪ್ರಿಯಗೊಳಿಸು ವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ನಿರಂತರವಾಗಿ ಬರೆಯುತ್ತಿರುವ ಅವರ ಲೇಖನಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಕನ್ನಡದಲ್ಲಿ ಆರುನೂರು ಮತ್ತು ಇಂಗ್ಲಿಷಿನಲ್ಲಿ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಜಾಗತಿಕ ಗಮನ ಸೆಳೆದಿದ್ದಾರೆ. ಅತ್ಯುತ್ತಮ ಅನುವಾದಕರೂ ಆಗಿರುವ ಅವರ 'ರುದ್ರಪ್ರಯಾಗದ ನರಭಕ್ಷಕ ಚಿರತೆ' 'ಗಲಿವರನ ಪ್ರವಾಸ' ಮಹತ್ವದ ಅನುವಾದಗಳಾಗಿವೆ. 'ಖಗೋಳ ದರ್ಶನ' ಎನ್ನುವ ಬೃಹತ್ ಸಂಪುಟ ಅವರು ಕನ್ನಡಕ್ಕೆ ನೀಡಿರುವ ಮಹತ್ವದ ಕೊಡುಗೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2025ನೇ ಸಾಲಿನ 'ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

