ಸಮುದಾಯದ ಏಳಿಗೆ ಮತ್ತು ಭದ್ರತೆಗಾಗಿ ಪಾದಯಾತ್ರೆಯನ್ನು ಬೆಂಬಲಿಸೋಣ: ನಿತಿನ್ ಗುತ್ತೇದಾರ್

Upayuktha
0

 ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆ ಬಿತ್ತಿ ಪತ್ರ ಬಿಡುಗಡೆ


ಕಲಬುರಗಿ: ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಸಮಗ್ರ ಏಳಿಗೆಗೆ ಮತ್ತು ಭದ್ರತೆಗಾಗಿ ಮುಂದಿನ ಜನವರಿ 6 ರಿಂದ 41 ದಿನಗಳ ಪಾದಯಾತ್ರೆ ಕೈಗೊಂಡಿರುವ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೂಜ್ಯ ಡಾಕ್ಟರ್ ಪ್ರಣವಾನಂದ ಶ್ರೀಗಳ ಪಾದಯಾತ್ರೆಯನ್ನು ಸರ್ವರು ಬೆಂಬಲಿಸಬೇಕು ಎಂದು ಬಿಜೆಪಿ ಮುಖಂಡರಾದ ನಿತಿನ್ ಗುತ್ತೇದಾರ್ ಕರೆ ನೀಡಿದರು. 


ಕಲಬುರಗಿಯ ಚಿತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ನಡೆಯುವ ಪಾದಯಾತ್ರೆಯ ಬಿತ್ತಿ ಚಿತ್ರವನ್ನು ಅಕ್ಟೋಬರ್ 19ರಂದು ಕಲಬುರಗಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು ಪೂಜ್ಯ ಪ್ರಣವಾನಂದ ಶ್ರೀಗಳು ನಮ್ಮ ಸಮಾಜದ ಏಳಿಗೆಗಾಗಿ ಮತ್ತು ಭದ್ರತೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಕಳೆದ ಬಾರಿ 780 ಕಿಲೋಮೀಟರ್ ಪಾದಯಾತ್ರೆಯನ್ನು ಮಂಗಳೂರಿನಿಂದ ಆರಂಭಿಸಿ ಫ್ರೀಡಂ ಪಾರ್ಕ್ ವರೆಗೆ ನಡೆಸಿದ ಪರಿಣಾಮವಾಗಿ ಈಡಿಗ ನಿಗಮವನ್ನು ಬಿಜೆಪಿ ಸರಕಾರ ಘೋಷಣೆ ಮಾಡಿತು ಮತ್ತು ಕುಲಶಾಸ್ತ್ರೀಯ ಅಧ್ಯಯನಕ್ಕೆ 25 ಕೋಟಿ ರೂಪಾಯಿ ಮಂಜೂರು ಮಾಡಿದ ಐತಿಹಾಸಿಕ ಯಶಸ್ವಿಯ ನಂತರ ಇದೀಗ ಎರಡನೇ ಬಾರಿಗೆ ಈ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. 


ಜನವರಿ 6 ರಂದು ಚಿತ್ತಾಪುರದ ಕರದಾಳುನಿಂದ ಆರಂಭಗೊಳ್ಳುವ ಪಾದಯಾತ್ರೆ ಚಿತ್ತಾಪುರ, ವಾಡಿ, ಶಹಬಾದ್ ಜೇವರ್ಗಿ ಶಹಾಪುರ, ಸುರಪುರ, ಲಿಂಗಸಗೂರು ತಾವರಗೇರಾ, ಗಂಗಾವತಿ, ಹೊಸಪೇಟೆ ಚಿತ್ರದುರ್ಗ,ತುಮಕೂರು, ಮಾರ್ಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತಲುಪಲಿದೆ. ಈ ಸಂದರ್ಭದಲ್ಲಿ ಸಮುದಾಯದ ಎಲ್ಲರೂ ಸ್ವಾಮೀಜಿಯವರಿಗೆ ಪೂರ್ಣ ಪ್ರಮಾಣದ ಬೆಂಬಲವನ್ನು ನೀಡಲು ಸಜ್ಜಾಗೋಣ. ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಸರಕಾರದ ಕಣ್ಣು ತೆರೆಸುವುದಕ್ಕಾಗಿ ಹೋರಾಟದ ಅಂಗವಾಗಿ ಪಾದಯಾತ್ರೆಯನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. 


ಬಿತ್ತಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ ಕಡೇಚೂರ್, ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿ ವೆಂಕಟೇಶ ಗುಂಡಾನೂರು, ಶಕ್ತಿಪೀಠದ ಸಂಚಾಲಕರಾದ ಡಾ. ಸದಾನಂದ ಪೆರ್ಲ, ಸಮಾಜದ ಮುಖಂಡರಾದ ಅಂಬಯ್ಯ ಗುತ್ತೇದಾರ ಇಬ್ರಾಹಿಂಪುರ್, ಅನಿಲ್ ಯರಗೋಳ, ರಾಜೇಶ್ ದತ್ತು ಗುತ್ತೇದಾರ್, ಬಸಯ್ಯ ಗುತ್ತೇದಾರ್ ತೆಲ್ಲೂರ್, ಅಂಬರೀಶ್ ನಾಲವಾರ್, ಆನಂದ ಗುತ್ತೇದಾರ್ ಬಳವಡಗಿ ಮತ್ತಿತರರು ಉಪಸ್ಥಿತರಿದ್ದರು.



500ಕೋಟಿ ನಿಗಮಕ್ಕೆ ಅಗತ್ಯ

ಡಾ. ಪ್ರಣವಾನಂದ ಶ್ರೀಗಳು ನಿರಂತರವಾಗಿ ಈಡಿಗ ,ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದು ಈ ಬಾರಿ ನಾರಾಯಣ ಗುರು ನಿಗಮಕ್ಕೆ 500 ಕೋಟಿ ನೀಡಬೇಕೆಂಬ ಒತ್ತಾಯ ಈ ಪಾದಯಾತ್ರೆಯ ಪ್ರಮುಖ ಉದ್ದೇಶ. ಸಮುದಾಯದ ಜನರನ್ನು ನಿರ್ಲಕ್ಷಿಸುವುದರ ವಿರುದ್ಧ ಇದು ಎಚ್ಚರಿಕೆಯ ಪಾದಯಾತ್ರೆ ಆಗಿದೆ.


-ಸತೀಶ್ ವಿ ಗುತ್ತೇದಾರ್ 

ಅಧ್ಯಕ್ಷರು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ


 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top