ಬೆಂಗಳೂರು: "ಮಹಿಳೆಯರನ್ನು ರಕ್ಷಿಸಿದರೆ ಧರ್ಮವನ್ನು ರಕ್ಷಿಸಿದಂತೆ" ಎಂದು ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಇವರು ಕರೆ ನೀಡಿದರು. ಅವರು ಅ.20ರಂದು ನರಕ ಚತುರ್ದಶಿಯಂದು ಭಾರತೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನರಕ ಚತುರ್ದಶಿಯಂದು ಭಾರತೀಯರು ಮಹಿಳಾ ದಿನಾಚರಣೆಯನ್ನು ಆಚರಿಸಬೇಕು. ಯಾಕೆಂದರೆ ಇಂದು, ಶ್ರೀ ಕೃಷ್ಣ ಪರಮಾತ್ಮ ನರಕಾಸುರನನ್ನು ಸಂಹರಿಸಿ, ಹದಿನಾರು ಸಾವಿರ ಮಹಿಳೆಯರನ್ನು ರಕ್ಷಿಸಿ ಸ್ಥಾನಮಾನ ನೀಡಿದ ದಿನವಾಗಿದೆ. ಈ ದಿನವನ್ನು ಭಾರತೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸುವ ಬಯಕೆ ನಮ್ಮ ಗುರುಗಳಾದ ಶ್ರೀವಿಶ್ವೇಶ ತೀರ್ಥರ ಅಪೇಕ್ಷೇಯೂ ಆಗಿತ್ತು. ಅದಕ್ಕೆ ಕಾಲ ಈಗ ಕೂಡಿ ಬಂದಿದೆ. ನಮ್ಮೊಂದಿಗೆ ಹೆಳವನ ಕಟ್ಟೆ ರಂಗನಾಥ ಭಕ್ತ ವೃಂದ ಮತ್ತು ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ), ಇವರ ಸಹಕಾರದಿಂದ ಈ ಕಾರ್ಯ ಆರಂಭವಾಗಿದೆ. ಈ ಕಾರ್ಯಕ್ರಮವನ್ನು ಪ್ರತಿಯೊಂದು ಊರು ಊರುಗಳಲ್ಲಿ, ರಾಜ್ಯದಾದ್ಯಂತ ಆಚರಿಸಬೇಕೆಂದು ಸೂಚಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕರು ಹಾಗೂ ಪ್ರಜ್ಞಾ ಕನ್ಯಾ ಗುರುಕುಲದ ಸಂಚಾಲಕ ವಿದ್ವಾನ್ ಗುರುಮೂರ್ತಿ ಆಚಾರ್ಯರು, "ಮಹಿಳೆಯರು ದೀಪವಿದ್ದಂತೆ. ಹುಟ್ಟಿದ ಮನೆಯನ್ನು ಕೊಟ್ಟ ಮನೆಯನ್ನು ಬೆಳಗುತ್ತಾರೆ. ಪತಿಯ ಕೆಲಸ ಕಾರ್ಯದಲ್ಲಿ ಸಹಾಯಕರಾಗಿರುತ್ತಾರೆ. ತಾವು ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಮತ್ತು ಇತರರು ನಿಭಾಯಿಸುವಂತೆ ಪ್ರೇರೇಪಿಸುತ್ತಾರೆ. ಇಷ್ಟು ದಿನ ಮಹಿಳೆಯರಿಗೆ ಸಾಂಸ್ಕೃತಿಕ ಶಿಕ್ಷಣದ ಅವಶ್ಯಕತೆ ಇರಲಿಲ್ಲ. ಆದರೆ ಇಂದಿನ ದಿನಮಾನದಲ್ಲಿ, ಯುವತಿಯರಿಗೆ ಹಾಗೂ ಗೃಹಿಣಿಯರಿಗೆ, ಅದರ ಅಗತ್ಯತೆ ಕಂಡುಬರುತ್ತಿದೆ. ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಧರ್ಮ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಲ್ಲಿ ಧಾರ್ಮಿಕತೆಯ ಕುರಿತು ಡಾ.ವಿದ್ಯಾ ಕಸಬೆ ವಿಶೇ಼ಷ ಉಪನ್ಯಾಸ ನೀಡಿದರು. ಸೌ. ರಮಾದೇವಿ ರಾಜಲಕ್ಷ್ಮಿ ಮೋಹನಾಚಾರ ಇವರಿಗೆ “ಸಾಧಕ ಮಹಿಳೆ” ಎಂದು ಸನ್ಮಾನ ಮಾಡಲಾಯಿತು. ಶ್ರೀಮತಿ ರಮಾದೇವಿ ಇವರು, ತಮ್ಮ ಯೂ ಟ್ಯೂಬ್ ಚಾನಲ್ ನ ಮುಖಾಂತರ, ಧರ್ಮ ಜಾಗೃತಿಯನ್ನು ಕಳೆದ ಐದು ವರ್ಷಗಳಿಂದ ಮಾಡುತ್ತಿದ್ದಾರೆ. ಅವರ ಯೂ ಟ್ಯೂಬ್ ಚಾನೆಲ್ ಗೆ 67,000 ಜನ ಸಬ್ ಸ್ಕ್ರೈಬರ್ ಗಳಿದ್ದು, ಸುಮಾರು ಸಾವಿರದಷ್ಟು ಎಪಿಸೋಡುಗಳನ್ನು ಬಿತ್ತರಿಸಿದ್ದಾರೆ. ಅವರಿಗೆ, ಮೈತ್ರೇಯಿ ಮಹಿಳಾ ಹರಿದಾಸ ಟ್ರಸ್ಟ್ “ಸಂಸ್ಕಾರ ಸಂಸ್ಕೃತಿ ಶಿರೋಮಣಿ” ಎಂಬ ಪ್ರಶಸ್ತಿ ನೀಡಿತು. ಹೆಳವನ ಕಟ್ಟೆ ರಂಗನಾಥ ಭಕ್ತ ವೃಂದದ ಸಹಯೋಗದೊಂದಿಗೆ, ಸಕಲ ಸೌಭಾಗ್ಯದ ಮಂಗಲ ದ್ರವ್ಯಗಳು, ಮೊರದ ಬಾಗಿನದ ಗೌರವವನ್ನು ಸುವಾಸಿನಿಯರು ನೀಡಿದರು ಹಾಗೂ ಈ ಕಾರ್ಯಕ್ರಮದ ರೂಪರೇಷೆಯನ್ನು ಪೂರ್ಣ ಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ನಿತ್ಯ ಜ್ಞಾನ ಯಜ್ಞ ವೇದಿಕೆಯ ಸಂಚಾಲಕರಾದ ವೇದಮೂರ್ತಿ ನಾರಾಯಣಾಚಾರ ಬಾದರ್ಲಿ ವಹಿಸಿಕೊಂಡಿದ್ದರು.
ಕಾರ್ಯಕ್ರಮವು ಕು.ಅನನ್ಯಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಡಾ.ಸುಧಾ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು, ಡಾ.ಶಾಂತಾ ರಘೋತ್ತಮಾಚಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರಂಭದಲ್ಲಿ ಮುಖ್ಯವಾಗಿ ಪೇಜಾವರ ಮಠದ ಹಿರಿಯ ಗುರುಗಳಾದ ಶ್ರೀ ವಿಶ್ವೇಶ ತೀರ್ಥರ ಅಭಿಲಾಶೆಯಂತೆ, ಸನಾತನ ಮಹಿಳಾ ದಿನಾಚರಣೆಯನ್ನು ನರಕ ಚತುರ್ದಶಿಯಂದೇ ಮಾಡುವ ಬಗ್ಗೆ, ಇಂದಿನ ಗುರುಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಪ್ಪಣೆಯನ್ನು ಪಡೆದು, ಕಾರ್ಯಕ್ರಮದಲ್ಲಿ, ಗುರುಗಳು ನೀಡಿದ ಸಂದೇಶವನ್ನು ಸ್ಮರಿಸಿ, ಸಾಧಕ ಮಹಿಳೆಯನ್ನು ಗುರುತಿಸಿ, ಸನ್ಮಾನಿಸಿವುದು, ಯುವತಿಯರಲ್ಲಿ ಸನಾತನ ಸಂಸ್ಕೃತಿ ಹಾಗೂ ಆಧ್ಯಾತ್ಮ ಜ್ಞಾನದ ಬಲ ವೃದ್ಧಿಸುವುದು, ಪರಕೀಯರ ಆಕರ್ಷಣೆಗೆ ಮನಸೋಲದೇ, ಭಾರತೀಯತೆಯ ನಡೆ ನುಡಿಗಳನ್ನು ಗೌರವಿಸುವುದು, ಅಂತರ್ ಜಾತಿ ವಿವಾಹ, ವಿವಾಹ ವಿಚ್ಛೇದನಗಳ ಸಮಸ್ಯೆಗಳನ್ನು ವಿವರಿಸಿದರು.
ಕುಟುಂಬದ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳಿಸುವುದರ ವಿರುದ್ಧ ಜಾಗೃತಿ ಮೂಡಿಸುವ ಬಗ್ಗೆ ವಿವರಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಸಹಕಾರವನ್ನು ಕೋರಿದರು. ಕೇವಲ ಹತ್ತೇ ದಿನಗಳಲ್ಲಿ, ಇಡೀ ಸಮಾರಂಭಕ್ಕೆ ನಿರ್ದಿಷ್ಟ ರೂಪುರೇಷೆ ಯೊಂದಿಗೆ, ಸಹಕರಿಸಿ, ಕಾರ್ಯಕ್ರಮದ ಯಶಸ್ಸಿಗೆ ವಿದ್ವಾನ್ ಮಾತರಿಶ್ವಾಚಾರ್ ಇವರ ಹಾಗೂ ವಿದ್ಯಾಪೀಠದ ಇತರೆ ವಿದ್ವಾಂಸರ ಸಹಕಾರವನ್ನು ಸ್ಮರಿಸಿದರು.
ಈ ಕಾರ್ಯಕ್ರಮವನ್ನು ಪೂರ್ಣಪ್ರಜ್ಞಾ ವಿದ್ಯಾಪೀಠ ಬೆಂಗಳೂರಿನ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಡಾ.ವೃಂದಾ ಸಂಗಮ್ ಅತಿಥಿ ಪರಿಚಯ ಮಾಡಿಕೊಟ್ಟರು. ಭಾರ್ಗವಿ ಕಕ್ಕೇರಿ ಜಯಗೀತೆ ಹಾಡಿದರು. ಡಾ. ಶೀಲಾದಾಸ ವಂದನಾರ್ಪಣೆ ಮಾಡಿದರು. ಡಾ.ವಿದ್ಯಾಶ್ರೀ ಕುಲ್ಕರ್ಣಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪೂರ್ಣಪೀಠ ವಿದ್ಯಾಪೀಠದ ಪ್ರಾಧ್ಯಾಪಕರು, ಮಹಿಳೆಯರು, ಪುರುಷರು, ಹೆಳವನಕಟ್ಟೆ ರಂಗನಾಥ ಭಕ್ತವೃಂದ ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

