ಭಾರತೀಯ ಜ್ಞಾನ ಪದ್ದತಿ: ಶ್ರೀನಿವಾಸ್ ಯೂನಿವರ್ಸಿಟಿ ಮುಕ್ಕ ಕ್ಯಾಂಪಸ್‌ನಲ್ಲಿ ವಿಶೇಷ ಸಂವಾದ

Upayuktha
0


 ಸುರತ್ಕಲ್‌: ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮತ್ತು ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕುಡುಪು ಕಟ್ಟೆಯ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದ ಸಹಯೋಗದೊಂದಿಗೆ ಭಾರತೀಯ ಜ್ಞಾನ ಪದ್ದತಿಯ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.


ಖ್ಯಾತ ಉಪನ್ಯಾಸಕರು, ಸಾಮಾಜಿಕ ಮಾಧ್ಯಮದ ಪ್ರಸಿದ್ಧ ವಾಗ್ಮಿ, ಆಧ್ಯಾತ್ಮಿಕ ನಾಯಕರು ಹಾಗೂ ಇಸ್ಕಾನ್ ದ್ವಾರಕಾ ನವದೆಹಲಿ ಇದರ ಉಪಾಧ್ಯಕ್ಷರಾದ ಪೂಜ್ಯ ಶ್ರೀ ಅಮೋಘ ಲೀಲಾ ದಾಸ್ ಪ್ರಭು ಜೀ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣ ಎನ್ ಹೆಗಡೆ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮುಖ್ಯಸ್ಥೆ ಪ್ರೊ. ಪಾವನಾ ಕೃಷ್ಣಮೂರ್ತಿ, ಇಸ್ಕಾನ್ ಮಂಗಳೂರು ಪ್ರತಿನಿಧಿ ಡಾ. ವನಮಾಲಿ ಗೋವಿಂದ ದಾಸ್ ಜೀ ಮತ್ತು ಕಾರ್ಯಕ್ರಮದ ಸಂಯೋಜಕ ಪ್ರೊ. ಕೆ. ಶ್ರೀನಾಥ್ ರಾವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


 

ಉದ್ಘಾಟನಾ ಭಾಷಣ ಮಾಡಿದ ಶ್ರೀ ಅಮೋಘ ಲೀಲಾ ದಾಸ್ ಪ್ರಭು ಜೀ ಯವರು ಭಾರತೀಯ ಜ್ಞಾನ ಪದ್ದತಿಯ ಪ್ರಸ್ತುತ ಕಾಲಘಟ್ಟದಲ್ಲಿನ ಮಹತ್ವವನ್ನು ಮನದಟ್ಟಾಗಿಸುವಂತೆ ವಿವರಿಸಿದರು. "ನಿಜವಾದ ಜ್ಞಾನವು ಸಂತೋಷವನ್ನು ನೀಡುತ್ತದೆ ಮತ್ತು ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ" ಎಂದು ಅವರು ತಿಳಿಸಿದರು. ಇಂದಿನ ಸಮಯದಲ್ಲಿ, ಬುದ್ಧಿಮತ್ತೆ ಪ್ರಮಾಣ (IQ) ಜತೆಗೆ ಭಾವನಾತ್ಮಕ ಪ್ರಮಾಣ (EQ) ಮತ್ತು ಆಧ್ಯಾತ್ಮಿಕ ಪ್ರಮಾಣ (SQ) ಕೂಡ ಸಮಾನವಾಗಿ ಮುಖ್ಯ ಎಂದು ಹೇಳಿದರು.




ತಾಳ್ಮೆ, ಏಕಾಗ್ರತೆ ಮತ್ತು ಸ್ಪಷ್ಟತೆಯ ಕೊರತೆಯು ಪ್ರಸ್ತುತ ಯುವಜನತೆಯ ಪ್ರಮುಖ ಸಮಸ್ಯೆಯಾಗಿದೆ. ಸಂಶೋಧನಾ ಅಧ್ಯಯನದ ಪ್ರಕಾರ, ಇಂದು ಭಾರತದ ಯುವಜನತೆಯ ಗಮನಾವಧಿಯು ಕೇವಲ 8 ಸೆಕೆಂಡುಗಳು ಎಂದು ಕಂಡುಬಂದಿದ್ದು, ಇದು ಗೋಲ್ಡ್ ಫಿಶ್ ಮೀನಿಗಿಂತ ಕಡಿಮೆಯಾಗಿದೆ ಎಂದು ಅವರು ಉಲ್ಲೇಖಿಸಿದರು. ತಂತ್ರಜ್ಞಾನವನ್ನು ಸಮಾಜ ಮತ್ತು ದೇಶದ ಹಿತಕ್ಕಾಗಿ ಜವಾಬ್ದಾರಿಯುತವಾಗಿ ಉಪಯೋಗಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಭಾರತದ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳ ಕುರಿತಂತೆ ಮಾತನಾಡಿದ ಅವರು, ಸಂಸ್ಕೃತ ಭಾಷೆ ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪ್ರತಿರೂಪವಾಗಿದ್ದು, ಇಂದು ಕಂಪ್ಯೂಟರ್ ಡೇಟಾ ಹಾಗೂ ಪ್ರೋಗ್ರಾಮಿಂಗ್ ಕ್ಷೇತ್ರಗಳಲ್ಲಿಯೂ ಸಂಸ್ಕೃತವನ್ನು ಅನ್ವಯಿಸಲಾಗುತ್ತಿದೆ ಎಂದು ತಿಳಿಸಿದರು.


ವೇದಿಕ ಗಣಿತ, ಆಯುರ್ವೇದ, ಜ್ಯೋತಿಷ್ಯ ಶಾಸ್ತ್ರ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಹಾಗೂ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಭಾರತವು ಜಗತ್ತಿಗೆ ಅತ್ಯಂತ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಭಾರತೀಯ ಸೇನಾ ವಿಜ್ಞಾನದಲ್ಲಿ ಉಲ್ಲೇಖಿಸಿದ ಅತ್ಯಂತ ಪ್ರಾಚೀನ ಯುದ್ಧ ಕಲೆಯಾದ, ಎಲ್ಲಾ ಮಾರ್ಷಲ್ ಆರ್ಟ್ಸ್‌ಗಳ ಮೂಲ ಎಂದೇ ಪರಿಗಣಿಸಲ್ಪಟ್ಟಿರುವ ಕಲಾರಿ ಪಯಟ್ಟು ಕಲೆಯು ಕಾಲಕ್ರಮೇಣ ಚೀನಾದಲ್ಲಿ ಕುಂಗ್-ಫು, ಕರಾಟೆ ಮೊದಲಾಗಿ ರೂಪಾಂತರಗೊಂಡಿದೆ. ಭಾರತೀಯ ಜ್ಞಾನಪದ್ದತಿಗಳು ಮೌಲ್ಯ, ಸ್ಮರಣಶಕ್ತಿ, ಸ್ಪಷ್ಟತೆ ಮತ್ತು ಅಗಾಧ ಜ್ಞಾನವನ್ನು ನೀಡುತ್ತದೆ. ಇದರ ಪರಿಣಾಮವಾಗಿ, ಭಾರತೀಯರು ಜಾಗತಿಕ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಭಾರತವು ವಿಶ್ವಗುರುವಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ, ಯುವ ಜನತೆಯು ತಮ್ಮ ಅಧ್ಯಯನ ಹಾಗೂ ವೃತ್ತಿಪರ ಬದುಕಿನಲ್ಲಿ ಏಕಾಗ್ರತೆ ಹಾಗೂ ಭಾರತೀಯ ಜ್ಞಾನ ಪದ್ದತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ವಿಶೇಷ ಕೊಡುಗೆಯನ್ನು ನೀಡಬೇಕು ಎಂದು ಶ್ರೀ ಅಮೋಘ ಲೀಲಾ ದಾಸ್ ಪ್ರಭು ಜೀ ಯವರು ಮನವಿ ಮಾಡಿದರು. ಭಾಷಣದ ನಂತರ, ಶ್ರೀ ಅಮೋಘ ಲೀಲಾ ದಾಸ್ ಪ್ರಭು ಜೀ ಯವರು ವಿದ್ಯಾರ್ಥಿಗಳೊಂದಿಗೆ ಹಾಗೂ ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು. 



ಈ ಸಮಾರಂಭದಲ್ಲಿ, ಇಸ್ಕಾನ್ ಕುಡುಪು, ಮಂಗಳೂರು ಇದರ ಆಡಳಿತ ಮಂಡಳಿಯ ಸದಸ್ಯ ಸುತಾಪ ಪ್ರಭು, ನವದೆಹಲಿಯ ದ್ವಾರಕಾ ಇಸ್ಕಾನ್ ಸಂಸ್ಥೆಯ ಸಾಮಾಜಿಕ ಜಾಲತಾಣ ಪ್ರಮುಖರಾದ ಆಶ್ರಯ ನಾರಾಯಣ ಪ್ರಭು, ಕಾಲೇಜಿನ ಎನ್.ಎಸ್.ಎಸ್ ಸಂಯೋಜಕ ಪ್ರೊ. ತ್ರಿವಿಕ್ರಮ್ ಪ್ರಭು, ಉಭಯ ಕಾಲೇಜುಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


 

ಶ್ರೀನಿವಾಸ್ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣ ಎನ್ ಹೆಗಡೆ ಯವರು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ ಶ್ರೀ ಅಮೋಘ ಲೀಲಾ ದಾಸ್ ಪ್ರಭು ಜೀ  ಮತ್ತು ಡಾ. ವನಮಾಲಿ ಗೋವಿಂದ ದಾಸ್ ಜೀ ಯವರ ಪರಿಚಯವನ್ನು ಸಭೆಗೆ ನೀಡಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಸುಮಂತ್ ಶ್ರೀಕಾಂತ್ ಭಟ್ ರವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.  


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top