ಕಾರ್ತಿಕ ಮಾಸವು ಹರಿಯು ಸಂಪ್ರೀತನಾದ ಕಾಲವಾಗಿರುವುದರಿಂದ ತುಳಸೀ ಪೂಜೆಯನ್ನು, ಮದುವೆಯನ್ನು ಇದೇ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಮಾಸವು ದ್ವಾದಶ ಮಾಸಗಳಲ್ಲಿ ಶ್ರೇಷ್ಟ ಮಾಸವಾಗಿದೆ. ಮಾಸದ ಮೊದಲ ದಿನವೇ ಬಲಿಪಾಡ್ಯಮಿ. ಎರಡನೇಯ ದಿನ ಗೋಪೂಜೆ, ತಿಂಗಳ ಪೂರ್ತಿ ಮನೆಮಂದಿರಗಳಲ್ಲಿ ದೀಪೋತ್ಸವ ಗುರುಸೇವೆ, ತುಳಸಿಯ ಪೂಜೆ, ಅನ್ನದಾನ, ಉಪವಾಸಾದಿ ವೃತಾಚರಣೆ ಇರುವದರಿಂದ ಕಾರ್ತಿಕಮಾಸವನ್ನು ಪವಿತ್ರಮಾಸವೆಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಈ ಮಾಸದ ಸೂರ್ಯೋದಯ, ಸೂರ್ಯಾಸ್ತ ಸಮಯದಲ್ಲಿ ದೀಪ ಬೆಳಗಬೇಕು.
ದೀಪಾರಾಧನೆಯಿಂದ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ, ಪ್ರಾಪ್ತಿಯಾಗುತ್ತದೆ. ಈ ಮಾಸದ ಹುಣ್ಣಿಮೆಯನ್ನು ಗೌರಿ ಹುಣ್ಣಿಮೆಯಂತಲೂ ಅಂದಿನ ದಿನ ಸೂರ್ಯೋದಯದ ಮೊದಲು ಎದ್ದು ನದಿ ಸ್ನಾನ ಮಾಡಿ ದೀಪಹಚ್ಚಿ ನದಿಯಲ್ಲಿ ಬಿಟ್ಟು ದೀಪೋತ್ಸವ ಆಚರಿಸುತ್ತಾರೆ. ಅಂದಿನ ದಿನ ದೀಪಾರಾಧನೆ ಬಹಳ ಶ್ರೇಷ್ಟ.
ಕಾರ್ತಿಕ ಎನ್ನುವದು ನಕ್ಷತ್ರದ ಹೆಸರು. ಈ ತಿಂಗಳಲ್ಲಿ ಈ ನಕ್ಷತ್ರ ಚಂದ್ರನಿಗೆ ಬಹಳ ಸಮೀಪದಲ್ಲಿರುತ್ತದೆ. ಹುಣ್ಣಿಮೆಯ ಚಂದ್ರ ಕಾರ್ತಿಕ ನಕ್ಷತ್ರದಲ್ಲಿ ಚಲಿಸುತ್ತಾನೆ.ಹೀಗಾಗಿ ಕಾರ್ತಿಕ ಎನ್ನುವ ಹೆಸರು ಈ ಮಾಸಕ್ಕೆ ಬಂದಿದೆ. ಕಾರ್ತಿಕಮಾಸದ ಅಧಿಪತಿ ಶಿವ. ಈ ಸಮಯದಲ್ಲಿ ಶಿವಾಲಯಗಳಿಗೆ ಬೇಟಿ ನೀಡುವದು ಪುಣ್ಯಪ್ರದ. ಈ ಮಾಸ ಅಧ್ಯಾತ್ಮ ಸಾಧಕರ ಮಾಸ. ಈ ಮಾಸದಲ್ಲಿ ನಿಯಮ ನಿಷ್ಟೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುವುದು. ಈ ಮಾಸದ ಹುಣ್ಣಿಮೆಯಂದು ಚಂದ್ರನ ಬೆಳಕು ಎಲ್ಲದಕ್ಕಿಂತ ಹೆಚ್ಚಾಗಿರುತ್ತದೆ.
ಪೌರಾಣಿಕ ಕಥೆ- ಚಂದ್ರನು ಶಿವನನ್ನು ಕುರಿತು ಹಲವು ವರ್ಷ ಕಾಲ ತಪಸ್ಸು ಮಾಡಿದನು. ದೇವತೆಗಳು ಚಂದ್ರನ ತಪಸ್ಸು ಭಂಗಪಡಿಸಲು ಪ್ರಯತ್ನಿಸಿದರು. ಅವರ ಪ್ರಯತ್ನ ವ್ಯರ್ಥವಾಗಿ ಏಕಾಗ್ರತೆಯಿಂದ ತಪಸ್ಸು ಮಾಡಿದ ಚಂದಿರ ತಪಸ್ಸಿಗೆ ಮೆಚ್ಚಿದ ಶಿವ ವಿಶೇಷ ವರ ನೀಡುತ್ತಾನೆ. ನಿನ್ನ ಸೌಂದರ್ಯ ಹೀಗೆಯೇ ಇರಲಿ. ನನ್ನ ಶಿರದ ಮೇಲೆ ಸದಾಕಾಲ ಇರು ಎಂದು ಅನುಗ್ರಹಿಸುತ್ತಾನೆ. ಹಾಗಾಗಿ ಚಂದ್ರ ಶಿವನ ಶಿರದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಶಾಶ್ವತವಾಗಿ ನೆಲಸಿದ್ದಾನೆ ಎನ್ನಲಾಗುತ್ತದೆ.
ಕಾರ್ತಿಕ ಸೋಮವಾರಗಳ ವಿಶೇಷತೆ- ಸೋಮವಾರಗಳಿಗೆ ಕಾರ್ತಿಕ ಮಾಸದಲ್ಲಿ ವಿಶೇಷ ಮಹತ್ವವಿದೆ. ಶಿವನ ಮಾಸವೆಂದೇ ಕರೆಯಲಾಗುತ್ತದೆ. ಕಾರ್ತಿಕ ಸೋಮವಾರಗಳಂದು ಕ್ಷೀರಾಭಿಷೇಕ ಮಾಡುವುದರಿಂದ ಸಕಲ ಪಾಪ ಪರಿಹಾರವಾಗುತ್ತವೆ ಎಂಬ ವಾಡಿಕೆಯಿದೆ. ಹೀಗಾಗಿ ಕಾರ್ತಿಕ ಸೋಮವಾರಗಳಂದು ಪ್ರದೋಷ ವ್ರತ ಆಚರಣೆ ಪುಣ್ಯಪ್ರದವಾದುದು.
ಕಾರ್ತಿಕಮಾಸದ ಸ್ನಾನದ ಮಹತ್ವ- ಕಾರ್ತಿಕಮಾಸದಲ್ಲಿ ನದಿಗಳ ಸ್ನಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನದಿ ಸ್ನಾನಕ್ಕೆ ಭೌತಿಕ ಚಿಕಿತ್ಸೆಗೆ ಪೂರಕವಾಗಿದೆ. ಈ ಪವಿತ್ರ ಸ್ನಾನ ಭೌತಿಕ ಕಲ್ಮಶ ಹೋಗಲಾಡಿಸುವುದಲ್ಲದೇ ಮನುಷ್ಯನ ಕೋಪತಾಪಗಳನ್ನು ನಿಯಂತ್ರಿಸುತ್ತದೆ. ಹೀಗಾಗಿ ಮನುಷ್ಯನ ಆರೋಗ್ಯ ದೃಷ್ಟಯಿಂದ ನದಿ ಸ್ನಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
ಕಾರ್ತಿಕಮಾಸದ ಧಾತ್ರಿ ಹೋಮದ ಮಹತ್ವ- ಧಾತ್ರಿ ವೃಕ್ಷವೆಂದರೆ ಬೆಟ್ಟದ ನೆಲ್ಲಿಕಾಯಿ ವೃಕ್ಷ. ಬ್ರಹ್ಮದೇವರ ಆನಂದಭಾಷ್ಪ ಭೂಮಿಗೆ ಬಿದ್ದು ಹುಟ್ಟಿದ ವೃಕ್ಷವೇ ಬೆಟ್ಟದ ನೆಲ್ಲಿಯ ಮರ. ಕಾರ್ತಿಕ ಮಾಸದಲ್ಲಿ ಧಾತ್ರಿ ಹೋಮ ಅತ್ಯಂತ ವಿಶೇಷ ಆಚರಣೆಯಾಗಿದೆ. ಈ ಮಾಸದ ಹುಣ್ಣಿಮೆ, ತ್ರಯೋದಶಿ, ಚತುರ್ದಶಿಗಳಲ್ಲಿ ಧಾತ್ರಿ ಹೋಮ ಮಾಡಲಾಗುತ್ತದೆ. ಈ ಹೋಮ ಮಾಡಿದರೆ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ದೊರೆಯುವದು ಎಂಬ ನಂಬಿಕೆಯಿದೆ.
ಪವಿತ್ರ ಸಸ್ಯಗಳ ಆರಾಧನೆ- ಪವಿತ್ರ ದೀಪಗಳನ್ನು ಬೆಳಗುವುದರ ಜೊತೆ ಪವಿತ್ರ ಸಸ್ಯಗಳಾದ ತುಳಸೀ, ಆಲದ ಮರದ ಪೂಜೆ ಮಾಡಬೇಕು. ಆಲದ ಮರದಲ್ಲಿ ಎಲ್ಲ ದೇವತೆಗಳು ನೆಲಸಿರುತ್ತಾರೆ. ಮನೆಯ ಮುಂದೆ ಬೆಳಸುವ ತುಳಸಿ ಸಸ್ಯದಿಂದ ಬೀಸುವ ಗಾಳಿ ಎಲ್ಲ ಬಗೆಯ ವಿಷಕಾರಕ ರಾಸಾಯನಿಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಸುತ್ತಲಿನ ವಾತಾವರಣ ಪ್ರಶಾಂತಗೊಳಿಸುತ್ತದೆ. ಮಾನಸಿಕ ಭಾವನೆಗಳ ಮೇಲೆ ಸಮತೋಲನ ಪಡೆದುಕೊಳ್ಳಲು ಸಹಾಯ ಮಾಡುವುದು.
ದೀಪಗಳ ದಾನ- ಧರ್ಮಗ್ರಂಥಗಳ ಪ್ರಕಾರ ದೀಪದಾನ ಕಾರ್ತಿಕಮಾಸದಲ್ಲಿ ಮಾಡುವುದು ಬಹಳ ಮುಖ್ಯವಾದುದು. ಪುರಾಣಗಳ ಪ್ರಕಾರ ವಿಷ್ಣುವು ಭಗವಾನ್ ಬ್ರಹ್ಮನಿಗೆ, ಬ್ರಹ್ಮನು ನಾರದನಿಗೆ, ನಾರದನು ಮಹಾರಾಜ ಪ್ರತ್ಯುವಿಗೆ ಕಾರ್ತಿಕ ಮಾಸದಲ್ಲಿ ದಾನ ಮಾಡಿದ್ದರ ಹಿಂದಿನ ಮಹತ್ವ ಹೇಳಿದ್ದಾರೆ. ಕಾರ್ತಿಕಮಾಸದಲ್ಲಿ ಯಾವುದೇ ನದಿ, ಸರೋವರ, ಕೊಳ, ಭೇಟಿ ಮಾಡಿದಾಗ ಅಲ್ಲಿ ದೀಪದಾನಮಾಡಬೇಕು.
ಈ ರೀತಿಯ ಮಾಸದಲ್ಲಿ ನಾವೂ ಭಗವಂತನನ್ನು ಸ್ಮರಿಸಿ, ಶಿವ ದೇವಾಲಯ, ಮನೆಯ ದೇವರಿಗೆ ದೀಪಬೆಳಗಿ, ನದಿ ಸ್ನಾನ ಮಾಡಿ, ದೀಪಗಳದಾನ ಮಾಡಿ ಪುನೀತರಾಗೋಣ. ಕಾರ್ತಿಕ ಮಾಸವು ನಾಡಿನ ಜನತೆಗೆ ಸುಖ, ಸಮೃದ್ಧಿ, ಆಯುರಾರೋಗ್ಯ ನೀಡಿ ರಕ್ಷಿಸಲಿ. ಸರ್ವೇ ಜನ ಸುಖಿನೋ ಭವಂತು.
- ಗಿರಿಜಾ.ಶಂ. ದೇಶಪಾಂಡೆ (ಜೋಶಿ)
ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



