ದೇಶದಲ್ಲೇ ವಿನೂತನ ಮಾದರಿಯಲ್ಲಿ ನಡೆಯಲಿದೆ ಹನುಮಗಿರಿ ಬ್ರಹ್ಮಕಲಶೋತ್ಸವ

Upayuktha
0

2026ರ ಏಪ್ರಿಲ್ 9ರಿಂದ 12ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ




ಪುತ್ತೂರು: 2026ರ ಏಪ್ರಿಲ್ 9 ರಿಂದ 12ರ ವರೆಗೆ ನಡೆಯಲಿರುವ ಶ್ರೀಕ್ಷೇತ್ರ ಹನುಮಗಿರಿ ಶ್ರೀ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸಮಿತಿ ರಚನೆ ಮತ್ತು ಸಮಾಲೋಚನಾ ಸಭೆಯು ಅಕ್ಟೋಬರ್ 26ರಂದು ಹನುಮಗಿರಿಯ ವೈದೇಹಿ ಸಭಾಭವನದಲ್ಲಿ ನಡೆಯಿತು. 


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬ್ರಹ್ಮಕಲಶೋತ್ಸವದ ಸಮಾಲೋಚನೆಗೆ ಕರೆದಿದ್ದ ಪ್ರಥಮ ಸಭೆಗೆ 500ಕ್ಕೂ ಅಧಿಕ ಜನ ಸೇರಿರುವುದು ಅತ್ಯದ್ಭುತ. ಶ್ರೀ ಕ್ಷೇತ್ರ ಹನುಮಗಿರಿಯ ಬ್ರಹ್ಮ ಕಲಶೋತ್ಸವ ರಾಷ್ಟ್ರಮಟ್ಟದಲ್ಲೇ ಶ್ರೇಷ್ಠ ಕಾರ್ಯಕ್ರಮವಾಗಿ ಮೂಡಿ ಬರಲಿದೆ. ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನವಾದ ಅಯೋಧ್ಯೆಯಿಂದ ಶ್ರೀರಾಮ ಜ್ಯೋತಿಯನ್ನು ಹೊತ್ತು ಅಂಜನಾದ್ರಿಯ ಮೂಲಕ ಸಾಗಿ ಬಂದು ಅಲ್ಲಿಂದ ಹನುಮಾ ಜ್ಯೋತಿಯನ್ನು ಹೊತ್ತ ರಥಯಾತ್ರೆ ಶ್ರೀಕ್ಷೇತ್ರಕ್ಕೆ ಬರಲಿದೆ. ಉತ್ತರ ಭಾರತದ ಅಯೋಧ್ಯೆಯಿಂದ ದಕ್ಷಿಣ ಭಾರತದ ಹನುಮಗಿರಿಗೆ ರಾಮಜ್ಯೋತಿಯು ಬರುವುದರ ಮೂಲಕ ಭಾರತದ ಏಕತ್ವವನ್ನು ಈ ಕಾರ್ಯಕ್ರಮ ಎತ್ತಿ ಹಿಡಿಯಲಿದೆ. ಸಮಾಜಕ್ಕೆ ಹೊಸ ಸಂದೇಶ, ಜಾಗೃತಿ, ಸಂಸ್ಕಾರ, ಶಕ್ತಿಯನ್ನು ಕೊಡುವ ನಿಟ್ಟಿನಲ್ಲಿ ಈ ಬ್ರಹ್ಮಕಲಶ ಸಂಪನ್ನಗೊಳ್ಳಬೇಕು. ಶ್ರೀರಾಮ ಹನುಮಾ ಜ್ಯೋತಿಯ ರಥಯಾತ್ರೆಯ ಗ್ರಾಮ ಸಂಚಾರದ ಸಂದರ್ಭ ಸ್ವಾಗತ, ಭಜನೆ, ಸತ್ಸಂಗ ನಡೆಯಬೇಕು. ಬ್ರಹ್ಮಕಲಶೋತ್ಸವದಲ್ಲಿ ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಂಪನ್ನಗೊಳ್ಳಲಿದೆ. ಲಕ್ಷೋತ್ತರ ನಾರಿಕೇಳ ಯಜ್ಞಕ್ಕೆ ಪ್ರತಿ ಮನೆಯಿಂದಲೂ 2 ತೆಂಗಿನಕಾಯಿ ಸಮರ್ಪಣೆ ಮಾಡಬೇಕು.ಇದರೊಂದಿಗೆ ಶ್ರೀ ಕ್ಷೇತ್ರದಲ್ಲಿ ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ನಡೆಯಲಿದೆ. ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞದ ಪೂರ್ಣಾಹುತಿಗಾಗಿ ಮನೆ ಮನೆಯಲ್ಲಿ ರಾಮಜಪ ನಡೆಯಬೇಕು. ಇಂದಿನ ಈ ಸಭೆಯಲ್ಲಿ ಸಾಂಕೇತಿಕವಾಗಿ ಏಳು ಸಮಿತಿಗಳ ರಚನೆಯಾಗಿದ್ದು, ಇನ್ನೂ ಒಟ್ಟು 30 ಸಮಿತಿಗಳ ರಚನೆಯಾಗಲಿದೆ. ಪ್ರತಿ ಮನೆ ಮತ್ತು ಮನಸ್ಸನ್ನು ತಲುಪುವಲ್ಲಿ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.


ಸಮಾಲೋಚನಾ ಸಭೆಯಲ್ಲಿ ಮಾರ್ಗದರ್ಶನ ನೀಡಿದ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ಜಗತ್ಕಲ್ಯಾಣಕ್ಕಾಗಿ ಬ್ರಹ್ಮಕಲಶೋತ್ಸವ ಶುಭ ಸಂದರ್ಭದಲ್ಲಿ ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ನಡೆಯಲಿದೆ. ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಿಂದ ರಾಮಜ್ಯೋತಿ, ಅಂಜನಾದ್ರಿಯಿಂದ ಹನುಮ ಜ್ಯೋತಿ ಶ್ರೀ ಕ್ಷೇತ್ರಕ್ಕೆ ಬರಲಿದೆ. ಇಂತಹ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಭಾಗ್ಯ. ಆಧ್ಯಾತ್ಮಕತೆಯ ಶಕ್ತಿಕೇಂದ್ರವಾಗಿರುವ ಶ್ರೀಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವದಲ್ಲಿ ನಾವು ನಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡು ನಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.


ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ರವೀಶ್ ಪಡುಮಲೆಯವರು ಮಾತನಾಡಿ ದೈವನರ್ತಕನ ಕುಟುಂಬದವನಾದ ನನ್ನನ್ನು ಗುರುತಿಸಿ ಬ್ರಹ್ಮಕಲಶದ ಸ್ವಾಗತ ಸಮಿತಿಯ ಅಧ್ಯಕ್ಷನಾಗಿ ಮಾಡಿರುವುದು ಹಿಂದೂ ಸಮಾಜದ ಸಮಾನತೆಗೆ ಸಿಕ್ಕ ಗೌರವವಾಗಿದೆ, ಅಸ್ಪೃಶ್ಯತೆ, ಜಾತಿಯತೆಯನ್ನು ಬಿಟ್ಟು ಸಾಮಾಜಿಕ ಸಾಮರಸ್ಯ, ಸಮಾನತೆಯನ್ನು ಕಾಣುವ ನಮ್ಮ ಹಿಂದೂ ಸಮಾಜಕ್ಕೆ ಹನುಮಗಿರಿಯ ಬ್ರಹ್ಮಕಲಶ ಇನ್ನಷ್ಟು ಹೊಸ ಶಕ್ತಿಯನ್ನು ನೀಡಲಿದೆ ಎಂದರು.


ಸಮಾಲೋಚನಾ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ  ನಳಿನ್ ಕುಮಾರ್ ಕಟೀಲುರವರು 7 ವಿವಿಧ ಸಮಿತಿಗಳ ಘೋಷಣೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ, ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಮತ್ತು ಭಜನೆ ಸಮಿತಿ, ಲಕ್ಷೊತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಮಿತಿ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಗ್ರಾಮ ಸಮಿತಿ, ಕಾಮಗಾರಿ/ ನಿರ್ಮಾಣ ಸಮಿತಿಗಳ ಘೋಷಣೆ ಮಾಡಲಾಯಿತು. ಬಳಿಕ ಸಮಿತಿಯ ಎಲ್ಲಾ ಪ್ರಮುಖರಿಗೆ ಹೂ ನೀಡಿ, ಸಮಿತಿಯ ಕಡತ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ನ ಅಚ್ಚುತ ಮೂಡಿತ್ತಾಯರವರು ಉಪಸ್ಥಿತರಿದ್ದರು.


ಸಮಾಲೋಚನಾ ಸಭೆಯಲ್ಲಿ ನೆರೆದಿದ್ದವರ ಸಲಹೆ,  ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮುರಳಿಕೃಷ್ಣ ಹಸಂತಡ್ಕ, ಕಾವು ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಶ್ರೀಕಾಂತ್ ಕಾಸರಗೋಡು, ಪ್ರವೀಣ್ ಸರಳಾಯ, ಆರ್.ಸಿ ನಾರಾಯಣ, ಗಿರಿಶಂಕರ ಸುಲಾಯ, ಶ್ರೀರಾಂ ಪಕ್ಕಳ ಸೇರಿದಂತೆ ಅನೇಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದರು. ಸಭೆಯಲ್ಲಿ ದ.ಕ ಮತ್ತು ಕಾಸರಗೋಡು ಜಿಲ್ಲೆಯ ಅನೇಕ ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರುಗಳು, ಗ್ರಾಮಸ್ಥರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top