ಕಾಪು: ದಿ. ಡಾ.ಎಸ್.ಎಲ್. ಭೈರಪ್ಪನವರ ಶ್ರೇಷ್ಠ ಕೃತಿಗಳು ಅನುಭವ ಜನ್ಯವಾದ ವಿಷಯಗಳಿಂದ ಕೂಡಿರುವುದು ಮಾತ್ರವಲ್ಲ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ವಿಷಯಾಧಾರಿತ ನಿರೂಪಣಾ ಶೈಲಿಯಿಂದ ಕೂಡಿರುವ ಕಾರಣದಿಂದಲೇ ಜನಮಾನಸದಲ್ಲಿ ಅಳಿಯುವುವಿಲ್ಲದೆ ಸದಾಕಾಲ ಜೀವಂತಾಗಿಯೇ ಓದುಗರನ್ನು ಸೆಳೆಯುತ್ತದೆ. ಹಾಗಾಗಿಯೇ ಅವರ ಮೇರು ಕೃತಿಗಳಾದ ಆವರಣ, ದಾಟು, ವಂಶವೃಕ್ಷ, ಸಾರ್ಥ, ಪರ್ವ ಮುಂತಾದ ಕೃತಿಗಳು ನಮ್ಮ ಬದುಕಿನ ವಾಸ್ತವಿಕತೆಗೆ ಹಿಡಿದ ಕೈಗನ್ನಡಿಯಂತೆ ಸದಾ ಜೀವಂತವಾಗಿ ನಿಲ್ಲುತ್ತದೆ. ಭಿನ್ನತೆಯನ್ನು ಒಪ್ಪಿಕೊಳ್ಳುತ್ತಿದ್ದ ಭೈರಪ್ಪನವರು ಪರ ವಿರೇೂಧಿಗಳ ಹೃದಯವನ್ನು ಗೆದ್ದ ಸಾಹಿತ್ಯ ಕ್ಷೇತ್ರದಲ್ಲಿ ಸಾಮ್ರಾಟರಾದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಡತನದಲ್ಲಿಯೇ ಬೆಂದು ಅರಳಿ ಬಂದ ಸ್ಪೂರ್ತಿಯ ಚಿಲುಮೆ ಅವರು. ಇಂದಿನ ಯುವ ಪೀಳಿಗೆಗೆ ಡಾ. ಭೈರಪ್ಪನವರ ಬದುಕು ಪ್ರೇರಣೆಯಾಗಬೇಕು" ಎಂದು ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಪರಿಷತ್ತು ಕಾಪು ಘಟಕ ಹಾಗೂ ಕಾಪು ಸರಕಾರಿ ಪ್ರಥಮ ದಜೆ೯ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 14ರಂದು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಡಾ. ಎಸ್.ಎಲ್. ಭೈರಪ್ಪ ನವರ ನುಡಿನಮನ ಸಲ್ಲಿಸಿ ಮಾತನಾಡಿದರು.
ನುಡಿ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಲೇಜಿನ ಪ್ರಾಂಶುಪಾಲ ಪ್ರೊ. ಗೇೂಪಾಲಕೃಷ್ಣ ಎಂ. ಗಾಂವ್ಕರ್ ನುಡಿ ನಮನ ಸಲ್ಲಿಸಿ ಮಾತನಾಡಿದರು.
ಕಾಪು ಸಾಹಿತ್ಯ ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಪ್ರಾಸ್ತಾವನೆಗೈದರು. ಗೌರವ ಕೇೂಶಾಧ್ಯಕ್ಷ ವಿದ್ಯಾಧರ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕಿ ದೀಪಿಕಾ ಸುವಣ೯ ವಂದಿಸಿದರು. ಕಾಪು ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


