ಡಿಸ್‌ಕ್ಲೈಮರ್‌ಗಳಿಂದ ಏನೂ ಪ್ರಯೋಜನ ಇಲ್ಲ; ಡಾ ಆಳ್ವ

Upayuktha
0

ಆಳ್ವಾಸ್‍ನಲ್ಲಿ 2000ನೇ ಮದ್ಯವರ್ಜನ ಶಿಬಿರ



ಮೂಡುಬಿದಿರೆ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಮಿಜಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕು  ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಮತ್ತು ಮದ್ಯವಿಮುಕ್ತಿ ಚಿಕಿತ್ಸಾ ಕೇಂದ್ರ, ಮಿಜಾರು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದಲ್ಲಿ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನೆ ಕೇಂದ್ರ ಲಾಯಿಲ, ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 2000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಿಜಾರಿನ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.


ಕಾರ್ಯಕಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ನಾನೇ ಸ್ವತಃ ಮದ್ಯವ್ಯಸನದ ವಿರುದ್ಧ ಸದಾ ಹೋರಾಡುತ್ತ ಬಂದವನು. ಸುಖದಲ್ಲಾಗಲಿ ದುಃಖದಲ್ಲಾಗಲಿ ನಾನು ಎಂದಿಗೂ ಮದ್ಯವನ್ನು ಸ್ಪರ್ಶಿಸಿದವನಲ್ಲ. ಮದ್ಯಪಾನ ಮಾಡಿದವನ ಮನಸ್ಸು ಅವನ ಸ್ವಾಧೀನದಲ್ಲಿರುವುದಿಲ್ಲ. ನಮ್ಮ ರಾಜ್ಯದಲ್ಲಿ 11,700 ಕ್ಕೂ ಹೆಚ್ಚು ಮದ್ಯದಂಗಡಿಗಳು ಇರುವುದೇ ಒಂದು ವಿಷಾದಕರ ಸ್ಥಿತಿ ಎಂದರು.


ನಮ್ಮನ್ನು ಆಳುವ ಸರ್ಕಾರಗಳು ಮದ್ಯಪಾನ ಅಥವಾ ದುಶ್ಚಟಗಳನ್ನು ನಿರ್ಬಂಧಿಸಲು ಟಿವಿ ಅಥವಾ ಪತ್ರಿಕೆಗಳಲ್ಲಿ ಡಿಸ್‌ಕ್ಲೈಮರ್ ಹಾಕುವುದರಿಂದ ಏನೂ ಪ್ರಯೋಜನ ಇಲ್ಲ.  ಪಾನ ಮುಕ್ತ ಮಾಡುತ್ತೇವೆ ಎಂಬುದು ಸ್ಲೋಗನ್‍ಗಳಿಗೆ ಮಾತ್ರ ಸೀಮಿತವಾಗಬಾರದು. ಪೂಜ್ಯರ ಮಾರ್ಗದರ್ಶನದಲ್ಲಿ ರಾಜ್ಯವ್ಯಾಪಿ ನಡೆಯುತ್ತಿರುವ  ಮದ್ಯವರ್ಜನ ಶಿಬಿರಗಳಿಂದ ಮದ್ಯವ್ಯಸನಿಗಳ ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿದೆ ಎಂದರು.   


ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ ಪಿ. ಜಿ. ಮಾತನಾಡಿ, ನಮ್ಮ ಸಮುದಾಯದಲ್ಲಿ ಇಂತಹ ಮದ್ಯವರ್ಜನ ಶಿಬಿರಗಳು ನಡೆಯುವುದರಿಂದ ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ದೊಡ್ಡ ಸಹಕಾರ ನೀಡಿದಂತೆ.  ಮದ್ಯವ್ಯಸನಿಗಳು ತಮ್ಮ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಕಂಟಕರಾಗಿ ವರ್ತಿಸುತ್ತಾರೆ. ಈ ರೀತಿಯ ಶಿಬಿರಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಮತ್ತು ಮದ್ಯವಿಮುಕ್ತಿ ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ ವಿನಯ ಆಳ್ವ, ನಾವು ನಮ್ಮ ಶರೀರಧರ್ಮವನ್ನು ಮರೆತಿದ್ದೇವೆ. ಹೃದಯ, ಶ್ವಾಸಕೋಶ, ಕಿಡ್ನಿ, ಅನ್ನನಾಳಗಳ ನೈಜ ಕಾರ್ಯವೈಖರಿಯನ್ನು ಅಲಕ್ಷ್ಯ ಮಾಡುತ್ತಿದ್ದೇವೆ. ಶರೀರಧರ್ಮವನ್ನು ಪಾಲಿಸದೇ ಅವುಗಳನ್ನು ಹಾಳು ಮಾಡುತ್ತಿದ್ದೇವೆ. ಈ ನೆಲೆಯಲ್ಲಿ ಆಳ್ವಾಸ್ ಈ ನಾಡಿನ ಧರ್ಮ ಕ್ಷೇತ್ರದ ಸಹಯೋಗದಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು. 


ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿ ಶಿಬಿರಾಧಿಕಾರಿ ನಂದಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ (ರಿ.) ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿದರು. 


ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಶ್ರೀ ಸುಭಾಶ್ಚಂದ್ರ ಚೌಟ, ತೆಂಕಮಿಜಾರು ಗ್ರಾಮ ಪಂಚಾಯತಿನ ಅಧ್ಯಕ್ಷೆ  ಶಾಲಿನಿ ಕೆ ಸಾಲಿಯಾನ್, ಚೌಟರ ಅರಮನೆಯ ಕುಲದೀಪ್ ಎಂ, ಡಾ ಹನಾ ಆಳ್ವ, ಕೌನ್ಸಿಲರ್ ಸುಮನಾ ಪಿಂಟೋ ಹಾಗೂ ಇನ್ನಿತರರು ಇದ್ದರು. 


ಯೋಜನಾಧಿಕಾರಿ ಧನಂಜಯ ಸ್ವಾಗತಿಸಿ, ವಿದ್ಯಾ ಕಾರ್ಯಕ್ರಮ ನಿರೂಪಿಸಿ, ಆಪ್ತಸಮಾಲೋಚಕ ಲೋಹಿತ್ ವಂದಿಸಿದರು. 



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top