ಡಿಜಿಟಲ್ ಅರೆಸ್ಟ್- ಸೈಬರ್ ಅಪರಾಧಗಳ ಹೊಸ ಭೂತ

Upayuktha
0



ತಂತ್ರಜ್ಞಾನ ಬೆಳೆದಂತೆ ಹಾಗೂ ಆ ತಂತ್ರಜ್ಞಾನ ನಮ್ಮೆಲ್ಲರ ಜೀವನದ ಭಾಗವಾದಂತೆ ಸೈಬರ್ ಅಪರಾಧಗಳು ಕೂಡ ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್ ಹಾಗೂ ಇತರ ಮೊಬೈಲ್ ಅಪ್ಲಿಕೇಶನ್‌ಗಳನ್ನು ಯಥೇಚ್ಛವಾಗಿ ಬಳಸುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ಫೋನ್ ಇದೀಗ ನೂರಾರು ಬೇರೆ ವಿಷಯಗಳಿಗೆ ಬಳಕೆಯಾಗುವುದರೊಂದಿಗೆ ಮೊಬೈಲ್ ತಂತ್ರಜ್ಞಾನದ ವಿಸ್ತಾರ ಹಾಗೂ ಸಾಧ್ಯತೆಗಳು ಯೋಚಿಸಿದಷ್ಟೂ ಗಾಬರಿಗೊಳಿಸುವಂತಿವೆ.


ಮೊಬೈಲ್ ಫೋನಿನ ಜೊತೆಗೆ ಸೇರಿಕೊಂಡಂತಹ ಇಂಟರ್ನೆಟ್ ಸೌಲಭ್ಯವು ಸಂವಹನ, ವ್ಯವಹಾರ, ಆನ್ಲೈನ್ ಬ್ಯಾಂಕಿಂಗ್, ಶಾಪಿಂಗ್, ಇತ್ಯಾದಿ ವಿಷಯಗಳಲ್ಲಿ ನಮ್ಮನ್ನು ಆವರಿಸಿಕೊಂಡಿರುವುದರಲ್ಲಿ ಸಂಶಯವೇ ಇಲ್ಲ.


ಮೊಬೈಲ್ ಕಂಪನಿಗಳು ಹಾಗೂ ಆಪ್ ಅಭಿವೃದ್ಧಿಪಡಿಸುವ ಸಂಸ್ಥೆಗಳು ಕೊಡಮಾಡುವ ವಿವಿಧ ರೀತಿಯ ಅಪ್ಲಿಕೇಶನ್ಗಳು ಇಂದು ಬಳಕೆದಾರರ ಅನುಭವವನ್ನು, ಸೇವೆಗಳನ್ನು, ಉಪಯೋಗಗಳನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿವೆ ಎಂಬುದರಲ್ಲಿ ಎರಡು ಮಾತಿಲ್ಲ. ತೀವ್ರ ಸ್ಪರ್ಧೆಗೆ ಬಿದ್ದ ಕಂಪನಿಗಳು ಗ್ರಾಹಕರ ಅನುಕೂಲಕ್ಕಾಗಿ, ಆರಾಮಕ್ಕಾಗಿ ನೀಡುತ್ತಿರುವ ಸೇವೆಗಳು ಗ್ರಾಹಕರಿಗೆ ಅರಿವೇ ಇಲ್ಲದಂತೆ ಅವರನ್ನು ಶೋಷಣೆ ಮಾಡುವ ಸೈಬರ್ ಅಪರಾಧಿಗಳಿಗೆ ದಿನಂಪ್ರತಿ ವೇದಿಕೆಯನ್ನು ಒದಗಿಸುತ್ತಿರುವುದು ದುರದೃಷ್ಟವೇ ಸರಿ.


ಡಿಜಿಟಲ್ ಅಪರಾಧವು ಕಂಪ್ಯೂಟರ್ ಅಥವಾ ಮೊಬೈಲ್ ಡೇಟಾವನ್ನು ಗುರಿಯಾಗಿಟ್ಟುಕೊಂಡು ನಡೆಸುವ ಅಪರಾಧವಾಗಿದ್ದು, ಇದಕ್ಕೆ ಸಂಬಂಧಿತ ಡಿಜಿಟಲ್ ವ್ಯವಸ್ಥೆಗಳಿಗೆ ಅನಧಿಕೃತ ಪ್ರವೇಶ, ಕಳ್ಳತನ, ಮಾರ್ಪಾಡು, ಭ್ರಷ್ಟಾಚಾರ, ಅಥವಾ ಡೇಟಾ ಮತ್ತು ಸಿಸ್ಟಮ್‌ಗಳ ಸಹಜ ಕಾರ್ಯಕ್ಕೆ ಅಡ್ಡಿಪಡಿಸುವುದಾಗಿರುತ್ತದೆ.


ಇತ್ತೀಚೆಗೆ ವರದಿಯಾದ ಕೆಲವು ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸುವುದಾದರೆ, 90 ವರ್ಷದ ಗುಜರಾತ್‌ನ ವ್ಯಕ್ತಿಯೊಬ್ಬರು ಇತ್ತೀಚೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸುವ ವಂಚಕರಿಂದ ಹಗರಣಕ್ಕೆ ಬಲಿಯಾದರು. ಮಾದಕವಸ್ತು ಕಳ್ಳಸಾಗಣೆ ಮತ್ತು ಮನಿ ಲಾಂಡರಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ವಯೋವೃದ್ಧ ವ್ಯಕ್ತಿಯನ್ನು ಅವರು "ಡಿಜಿಟಲ್ ಬಂಧನ" ದಲ್ಲಿದ್ದಾರೆ ಎಂದು ನಂಬುವಂತೆ ವಂಚಿಸಿದರು. ಹಗರಣದ ಅವಧಿಯಲ್ಲಿ, ವಂಚಕರಿಗೆ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ವರ್ಗಾಯಿಸಲು  ಆ ಹಿರಿಯ ನಾಗರಿಕನನ್ನು ಒತ್ತಾಯಿಸಲಾಯಿತು.

ಇನ್ನೊಂದು ಘಟನೆಯಲ್ಲಿ, 72 ವರ್ಷದ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ಕರೆ ಸ್ವೀಕರಿಸಿದರು, ಕರೆ ಸ್ವೀಕರಿಸಿದ ಆಕೆಗೆ, ಆಕೆಯ ವಿರುದ್ಧ ಕಾನೂನು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು. ಬಂಧನವನ್ನು ತಪ್ಪಿಸಲು ಸಹಾಯ ಮಾಡುವ ನೆಪದಲ್ಲಿ, ಅವರು ಗಣನೀಯ ಪ್ರಮಾಣದ ಹಣವನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.


ಹೆಸರಾಂತ ವೈದ್ಯೆಯಾಗಿರುವ ಡಾ.ಅನ್ವಿತಾ ಅವರಿಗೆ ತಡರಾತ್ರಿ ಯಾರೋ ಸಿಬಿಐ ಅಧಿಕಾರಿಯಂತೆ ಪೋಸು ಕೊಡುವ ಕರೆ ಬಂದಿದ್ದು, ತಮ್ಮ ವಿರುದ್ಧ ಮನಿ ಲಾಂಡರಿಂಗ್ ವಾರೆಂಟ್ ಹೊರಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆಕೆ ಡಿಜಿಟಲ್ ಬಂಧನದಲ್ಲಿದ್ದಾಳೆ ಮತ್ತು ವೀಡಿಯೊ ಕರೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಲಾಯಿತು. ಇದರಿಂದ ಗಾಬರಿಗೊಂಡ ಡಾ.ಅನ್ವಿತಾ ವಂಚಕರ ಖಾತೆಗೆ ₹70 ಲಕ್ಷ ವರ್ಗಾವಣೆ ಮಾಡಿದ್ದಾರೆ. 

ಇದಲ್ಲದೆ, ಕಳೆದ ತಿಂಗಳು ಮುಂಬೈನಲ್ಲಿ 26 ವರ್ಷದ ಮಹಿಳೆಯೊಬ್ಬರನ್ನು ವೀಡಿಯೊ ಕರೆಯಲ್ಲಿ ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು ಮತ್ತು ಮನಿ ಲಾಂಡರಿಂಗ್ ತನಿಖೆಯಲ್ಲಿ ಆಕೆಯ ಹೆಸರು ಸೇರಿಕೊಂಡಿದೆ ಎಂದು ಹೇಳಿದ ವಂಚಕರು ₹ 1.7 ಲಕ್ಷವನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಬೊರಿವಲಿ ಪೂರ್ವದಲ್ಲಿ ವಾಸಿಸುವ ಮತ್ತು ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ತನ್ನ ದೂರಿನಲ್ಲಿ ವಂಚಕರು ನವೆಂಬರ್ 19 ರಂದು ತನಗೆ ಕರೆ ಮಾಡಿ ತಮ್ಮನ್ನು ದೆಹಲಿ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಜೆಟ್ ಏರ್‌ವೇಸ್‌ನ ಸಂಸ್ಥಾಪಕ-ಅಧ್ಯಕ್ಷ ನರೇಶ್ ಗೋಯಲ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಯ ಸಮಯದಲ್ಲಿ ಆಕೆಯ ಹೆಸರು ಹೊರಹೊಮ್ಮಿದೆ ಎಂದು ಅವರು ಆಕೆಗೆ ತಿಳಿಸಿದರು. ಈ ಸಂದರ್ಭ ವಂಚಕರು ಮಹಿಳೆಯನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಸಂಭಾಷಣೆ ನಂತರ ವಿಡಿಯೋ ಕರೆಗೆ ಬದಲಾಯಿಸಿ, ಆಕೆಯನ್ನು ಡಿಜಿಟಲ್ ಬಂದರದಲ್ಲಿರಿಸಿದ್ದಾಗಿಯೂ,‌ ಮುಂದಿನ ವಿಚಾರಣೆಯನ್ನು ನಡೆಸಲು ಹೋಟೆಲ್ ಕೋಣೆಯನ್ನು ಕಾಯ್ದಿರಿಸುವಂತೆ ಕೇಳಿಕೊಂಡರು.


ಒಮ್ಮೆ ಅವಳು ಹೋಟೆಲ್‌ಗೆ ಚೆಕ್ ಇನ್ ಮಾಡಿದ ನಂತರ, ಆಕೆಯ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಲು ₹ 1,78,000 ಮೊತ್ತವನ್ನು ವರ್ಗಾವಣೆ ಮಾಡಬೇಕಾಗಿದೆ ಎಂದು ವಂಚಕರು ಹೇಳಿದರು. ದೇಹ ಪರಿಶೀಲನೆಯ ಅಗತ್ಯವಿದೆ ಎಂದು ಹೇಳುವ ಮೂಲಕ ಅವರು ವೀಡಿಯೊ ಕರೆ ಸಮಯದಲ್ಲಿ ಆಕೆಯನ್ನು ವಿವಸ್ತ್ರಗೊಳಿಸಿಯೂ ವಿಕೃತಿ ಮೆರೆದಿದ್ದಾರೆ. ಮಹಿಳೆ ಮೊತ್ತವನ್ನು ವರ್ಗಾಯಿಸಿದರು ಮತ್ತು ಹಗರಣಗಾರರ ಸೂಚನೆಗಳನ್ನು ಅನುಸರಿಸಿದರು. ಬಳಿಕ ತಾನು ಸಿಕ್ಕಿಬಿದ್ದಿರುವುದನ್ನು ಅರಿತ ಆಕೆ ಪೊಲೀಸರನ್ನು ಸಂಪರ್ಕಿಸಿ ನವೆಂಬರ್ 28ರಂದು ದೂರು ದಾಖಲಿಸಿದ್ದಳು. 

ಈ ದುರಂತಗಳ ಸರಣಿಗೆ ಸೇರ್ಪಡೆಗೊಂಡ ಇತ್ತೀಚಿನ ಘಟನೆ ಎಂದರೆ ಬೆಂಗಳೂರಿನಲ್ಲಿ ಬೆಸ್ಕಾಂ ಉದ್ಯೋಗಿಯಾಗಿದ್ದು ಡಿಜಿಟಲ್ ಬಂಧನಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ 48 ವರ್ಷದ ಕುಮಾರ ಎಂಬುವವರ ಘಟನೆ. ವಿಕ್ರಂ ಗೋಸ್ವಾಮಿ ಎಂಬ ಹೆಸರಿನಲ್ಲಿ, ಸಿಬಿಐ ಅಧಿಕಾರಿಯ ಸೋಗಿನಲ್ಲಿ ಕುಮಾರ್ ಅವರಿಗೆ ಕರೆ ಮಾಡಿ ತಮ್ಮ ವಿರುದ್ಧ ಬಂಧನ ಆದೇಶವು ಬಾಕಿ ಇದ್ದು, ಬಂಧನದಿಂದ ತಪ್ಪಿಸಿಕೊಳ್ಳಲು 1,95,000ವನ್ನು ನೀಡಬೇಕೆಂದು ತಿಳಿಸುತ್ತಾನೆ. ಇದೇ ರೀತಿ ಮುಂದುವರಿದು ಎರಡು ವಾರಗಳ ಅವಧಿಯಲ್ಲಿ ಸರಿಸುಮಾರು 11 ಲಕ್ಷ ಹಣವನ್ನು ಈ ಸೈಬರ್ ಅಪರಾಧಿಗೆ ಕುಮಾರ್ ಅವರು ಹಸ್ತಾಂತರ ಮಾಡಿದ್ದಲ್ಲದೇ, ಇನ್ನೂ 2,75,000ವನ್ನು ಕೇಳಿದಾಗ ಅದನ್ನು ಹೊಂದಿಸಲಾಗದೆ ಹತಾಶರಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.


ಡಿಜಿಟಲ್ ಅರೆಸ್ಟ್ ಎಂಬ ಮಹಾ ಮೋಸ:

ಆನ್ಲೈನ್ ವಂಚನೆಗಳ ಕುರಿತು ಜನಸಾಮಾನ್ಯರಿಗೆ ಅರಿವನ್ನು ಮೂಡಿಸಿ, ಅವರು ಅದನ್ನು ಅರಿಯುವ ಪ್ರಯತ್ನದಲ್ಲಿ ಇರುವಾಗಲೇ, ಧಡಕ್ಕನೆ ಎದ್ದು ಬಂದಿರುವ ಇನ್ನೊಂದು ಭೂತ ಡಿಜಿಟಲ್ ಅರೆಸ್ಟ್. ಇತ್ತೀಚೆಗೆ ನಡೆದ ಕೆಲವು ಘಟನೆಗಳು ಆನ್ಲೈನ್ ನಲ್ಲಿ ನಾವು ಅದೆಷ್ಟು ಸುರಕ್ಷಿತ, ನಮ್ಮ ಜವಾಬ್ದಾರಿಗಳೇನು‌ ಮತ್ತು ಇಂಥಹ ಆನ್ ಲೈನ್ ವಂಚನೆಗಳಿಂದ ಪಾರಾಗುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅಗತ್ಯ ಉತ್ತರವನ್ನು ಕಂಡುಕೊಳ್ಳಲೇ ಬೇಕಾದ ಅನಿವಾರ್ಯತೆಯ ಸಂದರ್ಭವನ್ನು ತಂದಿರಿಸಿದೆ. ಡಿಜಿಟಲ್ ಅರೆಸ್ಟ್ ಎಂದರೆ, ಸೈಬರ್ ಅಪರಾಧಿಗಳು ತಮ್ಮ ಬಲಿಪಶುಗಳಿಂದ ಹಣವನ್ನು ಸುಲಿಗೆ ಮಾಡಲು ಕಾನೂನು ಜಾರಿ ಅಧಿಕಾರಿಗಳು ಅಥವಾ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಅವರಿಂದ ಹಣವನ್ನು ಕಸಿಯುವ ಸೈಬರ್ ವಂಚನೆಯ ಅತ್ಯಾಧುನಿಕ ರೂಪ. ಡಿಜಿಟಲ್ ಅರೆಸ್ಟ್ ಎಂಬ ಹೊಸ ಸೈಬರ್ ವಂಚನೆಯ ಜಾಲಕ್ಕೆ ಬಲಿಯಾದ ಭಾರತೀಯರ ಸಂಖ್ಯೆ ಈ ವರ್ಷ 92,000 ಎಂದರೆ ನೀವು ನಂಬಲೇಬೇಕು!!!


‘ಡಿಜಿಟಲ್ ಬಂಧನ' ಎಂಬುದು ಒಂದು ಹೊಸ ರೀತಿಯ ವಂಚನೆಯಾಗಿದ್ದು, ಇದರಲ್ಲಿ ವಂಚಕರು ಅಮಾಯಕರನ್ನು, ಹಿರಿಯರನ್ನು, ಗುರಿಯಾಗಿಸಿ ವೀಡಿಯೊ ಅಥವಾ ಆಡಿಯೊ ಕರೆ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸುತ್ತಾರೆ. ಅಲ್ಲದೆ, ತಾವೀಗಾಗಲೇ, 'ಡಿಜಿಟಲ್' ಅಥವಾ 'ವರ್ಚುವಲ್' ಬಂಧನದಲ್ಲಿದ್ದೀರ ಮತ್ತು ಅವರು ಡಿಜಿಟಲ್ ಬಂಧನದಲ್ಲಿದ್ದೀರಿ ಎಂದು ಇತರರೊಂದಿಗೆ  ಹೇಳಲು ಸಾಧ್ಯವಿಲ್ಲವೆಂದು, ಮತ್ತು ವಂಚಕರ ಖಾತೆಗಳಿಗೆ ಹಣವನ್ನು ವರ್ಗಾಯಿಸುವವರೆಗೆ ಕಣ್ಗಾವಲು ಕೊನೆಗೊಳ್ಳುವುದಿಲ್ಲ ಎಂದು ಅವರಿಗೆ ತಿಳಿಸಲಾಗಿರುತ್ತದೆ. 'ಡಿಜಿಟಲ್ ಅರೆಸ್ಟ್' ಅಥವಾ 'ವರ್ಚುವಲ್ ಅರೆಸ್ಟ್' ಎಂದು ಯಾವುದೂ ಇಲ್ಲ ಎಂದು ಪೊಲೀಸರು ಹಲವಾರು ಸಲಹೆಗಳಲ್ಲಿ ಒತ್ತಿಹೇಳಿದ್ದಾರೆ, ಆದರೆ ಅಂತಹ ಘಟನೆಗಳ ಹೆಚ್ಚಳವು, ಈ ರೀತಿಯ ಸಂದೇಶವು ಹೆಚ್ಚು ಜನರನ್ನು ತಲುಪಿಲ್ಲ ಎಂದು ತೋರಿಸುತ್ತದೆ. ಅಂತಹ ವಂಚಕರ ಸಾಮಾನ್ಯ ಗುರಿಗಳಾರೆಂದರೆ, ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರದ ಹಿರಿಯ ನಾಗರಿಕರು ಮತ್ತು ಅವರ ಸೂಚನೆಗಳನ್ನು ಅನುಸರಿಸಲು ಮೊದಲ್ಗೊಂಡು ಸಮಾಜದಲ್ಲಿನ ಗೌರವ, ಪ್ರತಿಷ್ಠೆಗೆ ಅಂಜುವ ಜನರು. ಇಂತಹವರು ವಂಚಕರಿಂದ ಸುಲಭವಾಗಿ ಮೋಸ ಹೋಗುತ್ತಾರೆ. ಆದರೆ ತಡವಾಗಿ, ವಂಚಕರು ಕಿರಿಯ ವಯಸ್ಕರನ್ನೂ ಗುರಿಯಾಗಿಸಲು ಪ್ರಾರಂಭಿಸಿದ್ದಾರೆ.


ಡಿಜಿಟಲ್ ಅರೆಸ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸುವುದಾದರೆ, ಸೈಬರ್ ಅಪರಾಧಿಗಳು ಫೋನ್ ನ ಮೂಲಕ ತಾವು ಈಗಾಗಲೇ ಗುರುತಿಸಿರುವ, ಸಂಪರ್ಕಗಳನ್ನು ವಾಟ್ಸಪ್ ಅಥವಾ ಇನ್ನಿತರ ವೇದಿಕೆಗಳಲ್ಲಿ ವಿಡಿಯೋ ಕರೆಗಾಗಿ ವಿನಂತಿಸುತ್ತಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತ ವಿಡಿಯೋ ಕಾಲ್ಗೆ ಉತ್ತರಿಸುವ ವ್ಯಕ್ತಿಗೆ, ಅಪರಾಧಿಗಳು ಡಿಜಿಟಲ್ ಬಂದನದ ವಾರೆಂಟ್ ಮೂಲಕ ಬೆದರಿಕೆಯನ್ನು ಹಾಕುತ್ತಾರೆ ಮತ್ತು ತಾವು ಗಂಭೀರವಾದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರ ಎಂದು ಬೆದರಿಸುತ್ತಾರೆ.‌ ಕಾನೂನಿಗೆ ಭಯಪಡುವ ಇಂತಹ ಜನರನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅವರು ತಮ್ಮ ಸ್ನೇಹಿತರ ಅಥವಾ ಕುಟುಂಬವನ್ನು ಸಂಪರ್ಕಿಸಿದಂತೆ ಇವರನ್ನು ವಿಡಿಯೋ ಕರೆಯಲ್ಲಿಯೇ ನಿರತರಾಗಿರಿಸುತ್ತಾರೆ.  ಇದಾದ ನಂತರ ತಾವು ಹೇಳಿದ ನಿರ್ದಿಷ್ಟ ಬ್ಯಾಂಕು ಖಾತೆ ಅಥವಾ ಯುಪಿಐ ಐಡಿಗೆ ಹಣವನ್ನು ವರ್ಗಾಯಿಸಲು ಬೆದರಿಕೆಯ, ಬಂಧನದ, ಮಾತುಗಳಿಂದ ಮನವೊಲಿಸುತ್ತಾರೆ.‌ ಈ ರೀತಿ ಬಲಿಯಾದ ಸಂತ್ರಸ್ತರಿಂದ ಹಣವನ್ನು ವಂಚಿಸಿದ ಬಳಿಕ ಇಂತಹ ಅಪರಾಧಿಗಳು ಕಣ್ಮರೆಯಾಗುತ್ತಾರೆ. 


ಭಾರತದಲ್ಲಿ ಡಿಜಿಟಲ್ ಬಂಧನಗಳು ಕಾನೂನುಬದ್ಧವಾಗಿಲ್ಲ. ಆದುದರಿಂದ, ಸಂತ್ರಸ್ತರು ಸಾಧ್ಯವಾದಷ್ಟು ಬೇಗ ಸೈಬರ್ ಅಪರಾಧಗಳನ್ನು ವರದಿ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ.


ಸೈಬರ್ ಅಪರಾಧಗಳ ಜಗತ್ತು ಮತ್ತು ನಮ್ಮ ತಿಳುವಳಿಕೆ:

ಮೊಬೈಲ್ ಹಾಗೂ ಕಂಪ್ಯೂಟರ್ ಗಳಲ್ಲಿ ನಾವು ಬಳಸುವ ವಿವಿಧ ವೆಬ್ಸೈಟ್ಗಳು ಹಾಗೂ ಅಪ್ಲಿಕೇಶನ್‌ಗಳಿಗೆ ಕೆಲವೊಮ್ಮೆ ನಾವು ನೀಡುವ ನಮ್ಮ ಮೊಬೈಲ್ ಫೋನಿನ ಸಂಖ್ಯೆ, ಇಮೇಲ್ ಐಡಿ ಹಾಗೂ ನಮ್ಮ ಇನ್ನಿತರ ಮಾಹಿತಿಗಳು ನಮಗೆ ಗೊತ್ತಿಲ್ಲದೆ ಸೈಬರ್ ಅಪರಾಧ ಮಾಡುವ ಕ್ರಿಮಿನಲ್‌ಗಳ ಹಣದಾಹಕ್ಕೆ ನೀರೆಯುತ್ತಿರುವುದು ಇತ್ತೀಚಿನ ಬೆಳವಣಿಗೆಗಳಲ್ಲಿ ಗಮನಾರ್ಹ ವಿಷಯ.


ಸೈಬರ್ ಅಪರಾಧಗಳಲ್ಲಿ ಗಮನಿಸಲೇಬೇಕಾದ ಕೆಲವು ಅಪರಾಧಗಳೆಂದರೆ, ಒಂದು ರಾನ್ಸಮ್ವೇರ್. ಇದರಲ್ಲಿ, ಬಳಕೆದಾರರ ವೈಯಕ್ತಿಕ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಒಂದು ರೀತಿಯ ಮಾಲ್‌ವೇರ್ ನಮ್ಮ ಡಿಜಿಟಲ್ ಯಂತ್ರಗಳಿಗೆ ಸೇರಿಸಿ ನಾವು ಪುನಃ ನಮ್ಮ ಮೊಬೈಲ್ ಅಥವಾ ಅಪ್ಲಿಕೇಶನ್ಗಳನ್ನು ಬಳಸಲು ಹಣದ ಬೇಡಿಕೆಯನ್ನು ಇಡಲಾಗುತ್ತದೆ.‌ ಅನಿವಾರ್ಯವಾಗಿ, ಕೆಲವೊಮ್ಮೆ ವಿವೇಚನೆ ಬಳಸದೆ, ಬೇರೆ ದಾರಿ ಕಾಣದೆ ಹಣವನ್ನು ನೀಡಿ ನಾವು ನಮ್ಮ ಮೊಬೈಲ್ ಅಥವಾ ಅಕೌಂಟ್ಗಳ ಬಳಕೆಯನ್ನು ಮಾಡಬೇಕಾಗುತ್ತದೆ.


ಇನ್ನೊಂದು ರೀತಿಯ ಅಪರಾಧವೆಂದರೆ ಅದು, ಗುರುತಿನ ಕಳ್ಳತನ. ಹಣವನ್ನು ಕದಿಯಲು, ಗೌಪ್ಯ ಮಾಹಿತಿಯನ್ನು ಪಡೆಯಲು ಅಥವಾ ವಂಚನೆಯಲ್ಲಿ ಭಾಗವಹಿಸಲು ಒಬ್ಬ ಅಪರಾಧಿಯು ಬಳಕೆದಾರರ ವೈಯಕ್ತಿಕ ಮಾಹಿತಿಗೆ ಪ್ರವೇಶವನ್ನು ಪಡೆಯುತ್ತಾನೆ. ತದನಂತರ, ನಮ್ಮ ಹೆಸರಲ್ಲಿ ಇತರರಿಂದ ಹಣವನ್ನು ಎಗರಿಸುವ ಪ್ರಯತ್ನ ಮಾಡಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇರೆ ಬೇರೆ ಕಂಪನಿಗಳ, ಬ್ಯಾಂಕ್‌ಗಳ ಮಾರುಕಟ್ಟೆ ಕೊಡುಗೆಗಳ ಹೆಸರಿನಲ್ಲಿ .ಎಪಿಕೆ ಫೈಲ್‌ಗಳನ್ನು ಕಳಿಸಿ, ಬಳಕೆದಾರರ ಫೋಟೋವನ್ನು ಬಳಸಿ ಅವರ ಅಕೌಂಟನ್ನೇ ಹ್ಯಾಕ್ ಮಾಡಿ ಪರಿಚಯಸ್ತರಿಂದ ಹಣ ಕೇಳುವ ವಂಚನೆ ಅವ್ಯಾಹತವಾಗಿ ಕೇಳಿ ಬರುತ್ತಿದೆ.


ಫಿಶಿಂಗ್ ಎಂಬ ಇನ್ನೊಂದು ಸೈಬರ್ ಅಪರಾಧ, ಒಬ್ಬ ವ್ಯಕ್ತಿಯಿಂದ ಅವರ ಜ್ಞಾನ ಅಥವಾ ಅನುಮತಿಯಿಲ್ಲದೆ ವೈಯಕ್ತಿಕ ಮಾಹಿತಿಯನ್ನು ಅವರ ಕಂಪ್ಯೂಟರ್ನಿಂದ ಪಡೆದು ಅದನ್ನು ದುರುಪಯೋಗ ಮಾಡುವ ವಿಧಾನ.


ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರು ತಮ್ಮ ಹಣವನ್ನು ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರುವುದು ಆನ್ಲೈನ್ ವಂಚನೆಗಳಿಗೆ, ಇದರಲ್ಲಿ, ಸೈಬರ್ ಅಪರಾಧಿಯು ತಾನು ನಿರ್ಧರಿಸಿದ ವ್ಯಕ್ತಿಗಳಿಂದ ಆರ್ಥಿಕ ಲಾಭ ಪಡೆಯಲು ಅಥವಾ ಆರ್ಥಿಕ ನಷ್ಟವನ್ನು ಉಂಟುಮಾಡಲು ಕಂಪ್ಯೂಟರ್ ವ್ಯವಸ್ಥೆಯನ್ನು, ಅಕೌಂಟ್ ಮಾಹಿತಿಯನ್ನು, ಪಾಸ್ವರ್ಡ್ ಗಳನ್ನು ಬಳಸುತ್ತಾನೆ.


ಸೈಬರ್ ಭಯೋತ್ಪಾದನೆ ಎಂಬ ಅಪರಾಧದಲ್ಲಿ ಮೂಲಸೌಕರ್ಯ ಹಾನಿ ಅಥವಾ ಗೌಪ್ಯ ಮಾಹಿತಿಯನ್ನು ಕದಿಯುವಂತಹ ಭಯೋತ್ಪಾದಕ ಕೃತ್ಯಗಳನ್ನು ಕೈಗೊಳ್ಳಲು ಇಂಟರ್ನೆಟ್ ಅಥವಾ ಕಂಪ್ಯೂಟರ್ ತಂತ್ರಜ್ಞಾನದ ಬಳಕೆಯನ್ನು ಮಾಡಲಾಗುತ್ತದೆ.


ಸ್ಪೈವೇರ್ ಎಂಬ ಇನ್ನೊಂದು ವಂಚನಾ ವಿಧಾನದಲ್ಲಿ, ಸಂತ್ರಸ್ತನ ಅರಿವಿಲ್ಲದೆ ಅವನ ಕಂಪ್ಯೂಟರ್ ಅಥವಾ ಹ್ಯಾಂಡ್ಹೆಲ್ಡ್ ಸಾಧನದಲ್ಲಿ ತನ್ನ ಇರುವಿಕೆಯನ್ನು ಸ್ಥಾಪಿಸಿ, ಅವರ ಡೇಟಾವನ್ನು, ಪಾಸ್ವರ್ಡ್ ಗಳನ್ನು ಸಂಗ್ರಹಿಸುವ ಮೂಲಕ ಬ್ಯಾಂಕಿಂಗ್ ವಂಚನೆಯನ್ನು ಮಾಡಲಾಗುತ್ತಿದೆ. 

ಇವೆಲ್ಲವೂ ಕೂಡ ವ್ಯವಸ್ಥಿತವಾಗಿ, ಕಣ್ಣಿಗೆ ಕಾಣದ, ಸಾಮಾನ್ಯ ತಂತ್ರಗಳಿಂದ ಕಂಡುಹಿಡಿಯಾಲಾಗದ ಜಾಗದಲ್ಲಿ ಕುಳಿತು ಅಮಾಯಕರನ್ನು ಹಾಗೂ ಅಸಹಾಯಕ ರನ್ನು ವಂಚಿಸುವ ನಿರಂತರ ಸೈಬರ್ ಅಪರಾಧದ ತರಹೇವಾರಿ ವಿಧಾನಗಳಾಗಿವೆ.


ಡಿಜಿಟಲ್ ಬಂಧನದ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು


ಡಿಜಿಟಲ್ ಅರೆಸ್ಟ್ ಹಗರಣವನ್ನು ತಪ್ಪಿಸಲು ಕೆಲವು ಎಚ್ಚರಿಕೆಗಳನ್ನು ಗುರುತಿಸುವುದು ಪ್ರಮುಖವಾಗಿದೆ. ಗಮನಹರಿಸಬೇಕಾದ ಕೆಲವು ಎಚ್ಚರಿಕೆಯ ಸೂಚನೆಗಳು ಇಲ್ಲಿವೆ:


ಅಪೇಕ್ಷಿಸದ ಸಂಪರ್ಕ: ತೀರಾ ಅಪರೂಪಕ್ಕೆಂಬಂತೆ ಕಾನೂನು ಜಾರಿ ಅಥವಾ ಪೊಲೀಸ್ ಇಲಾಖೆಯು ಫೋನ್ ಅಥವಾ ಇಮೇಲ್ ಮೂಲಕ ವ್ಯಕ್ತಿಗಳನ್ನು ಸಂಪರ್ಕಿಸುತ್ತದೆ. ಹಾಗಾಗಿ ಯಾವುದೇ ಅನಪೇಕ್ಷಿತ ಕರೆ ಬಂದರೆ ಅವುಗಳಿಗೆ ಉತ್ತರಿಸಬಾರದು, ಅಥವಾ ಅಂಥ ಸಂಖ್ಯೆಗಳನ್ನು ಬ್ಲಾಕ್ ಮಾಡಬೇಕು ಅಥವಾ ರಿಪೋರ್ಟ್ ಮಾಡಬೇಕು.


ತಕ್ಷಣದ ಬೆದರಿಕೆಗಳು: ನಿಜವಾದ ಅಧಿಕಾರಿಗಳು ಸರಿಯಾದ ಪ್ರಕ್ರಿಯೆಯಿಲ್ಲದೆ ಬಂಧನ ಅಥವಾ ಬೇಡಿಕೆಯ ಪಾವತಿಗೆ ಬೆದರಿಕೆ ಹಾಕುವುದಿಲ್ಲ. ಹಾಗಾಗಿ ಇಂತಹ ಯಾವುದೇ ಸಂವಹನಗಳಿಗೆ ತಕ್ಷಣವೇ ಉತ್ತರಿಸುವ ಕೆಲಸ ಮಾಡಬಾರದು. 


ಪತ್ತೆ ಹಚ್ಚಲಾಗದ ಪಾವತಿ ವಿಧಾನಗಳು: ಕ್ರಿಪ್ಟೋಕರೆನ್ಸಿ ಅಥವಾ ಉಡುಗೊರೆ ಕಾರ್ಡ್ ಪಾವತಿಗಳಿಗಾಗಿ ವಿನಂತಿಗಳು ವಂಚನೆಯ ಸ್ಪಷ್ಟ ಸೂಚಕಗಳಾಗಿವೆ.


ಕಳಪೆ ವ್ಯಾಕರಣ: ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ಹೊಂದಿರುವ ಇಮೇಲ್‌ಗಳು ಅಥವಾ ಸಂದೇಶಗಳು ಸಾಮಾನ್ಯವಾಗಿ ಮೋಸದಿಂದ ಕೂಡಿರುತ್ತವೆ. ಇಂಥ ಸಂದರ್ಭಗಳಲ್ಲಿ ವಿವೇಚನೆ ಬಳಸಿ ಮುಂದುವರೆಯುವುದು ಇಂದಿನ ಅಗತ್ಯ. ಇದರೊಂದಿಗೆ, ಒಂದು ವೇಳೆ ನೀವು ಡಿಜಿಟಲ್ ಬಂಧನ ಹಗರಣಕ್ಕೆ ಬಲಿಯಾಗಿದ್ದರೆ, ನಿಮ್ಮ ಬ್ಯಾಂಕ್ ಅನ್ನು ತಕ್ಷಣವೇ ವರದಿ ಮಾಡುವುದು ಮತ್ತು ನಿಮ್ಮ ಖಾತೆಯನ್ನು ಫ್ರೀಜ್ ಮಾಡುವುದು ಮೊದಲ ಹಂತವಾಗಿದೆ. ಸರ್ಚ್ ಇಂಜಿನ್ ಫಲಿತಾಂಶಗಳು ಅಥವಾ ಕಾಲರ್ ಐಡಿ  ಒದಗಿಸಿದ ಮಾಹಿತಿಯನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಬಳಸಿಕೊಂಡು ಕಾನೂನು ಜಾರಿಯಿಂದ ಬಂದವರು ಎಂದು ಹೇಳಿಕೊಳ್ಳುವ ವ್ಯಕ್ತಿಗಳ ಗುರುತನ್ನು ಯಾವಾಗಲೂ ಪರಿಶೀಲಿಸಿ.


ನೀವು ಹೊಂದಿರುವ ಈ ಕರೆಗಳ ಸಂಬಂಧಿತ ಯಾವುದೇ ಪುರಾವೆಗಳನ್ನು ಯಾವಾಗಲೂ ಇರಿಸಿಕೊಳ್ಳಿ ಮತ್ತು ಕರೆ ವಿವರಗಳು, ವಹಿವಾಟಿನ ವಿವರಗಳು, ಸಂದೇಶಗಳು ಇತ್ಯಾದಿಗಳನ್ನು ಸೇರಿಸಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (cybercrime.gov.in) ನಲ್ಲಿ ದೂರು ಸಲ್ಲಿಸಿ.

ಇಷ್ಟೆಲ್ಲದರ ನಡುವೆ, ನಾವೆಲ್ಲರೂ ನಗುವಂತ ಒಂದು ತಮಾಷೆಯ ಘಟನೆಯು ನಡೆದಿದೆ. ಇಂತಹ ಒಬ್ಬ ವಂಚಕ ಪೊಲೀಸ್ ದಿರಿಸನ್ನು ಧರಿಸಿ,‌ ತಾನು ಮುಂಬೈಯ ಪೊಲೀಸ್ ಆಫೀಸರ್ ಎಂದು ಒಬ್ಬ ವ್ಯಕ್ತಿಗೆ ಬೆದರಿಸಿ, ವಂಚಿಸುವ ಉದ್ದೇಶದಿಂದ ಕರೆ ಮಾಡಲಾಗಿ, ತಾನು ಕರೆ ಮಾಡಿದ್ದು ತ್ರಿಶೂರಿನ ಸೈಬರ್ ಕ್ರೈಂ ವಿಭಾಗದ ಒಬ್ಬ ನಿಜವಾದ ಪೊಲೀಸ್ ಅಧಿಕಾರಿಗೆ ಎಂದು ಮನವರಿಕೆಯಾಗಿ ರೆಡ್ ಹ್ಯಾಂಡ್ ಆಗಿ ಪೇಚಿಗೆ ಸಿಲುಕಿ ಇಂಗು ತಿಂದ ಮಂಗನಂತಾಗಿದ್ದು.‌ ಸಹೃದಯಿ ಪೊಲೀಸ್ ಆಫೀಸರ್ ಇಂಥದ್ದನ್ನು ಮುಂದುವರಿಸ ಬೇಡ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದು ಆ ವಿಡಿಯೋದಲ್ಲಿ ದಾಖಲಾಗಿದೆ.


ಇಂತಹ ಡಿಜಿಟಲ್ ಅಪರಾಧಗಳು ಸಾಮಾನ್ಯವಾಗಿ ಸೂಕ್ಷ್ಮ ಮನಸ್ಸಿನ, ಲಾಭದಾಸೆಗೆ ಬಿದ್ದ, ಕಾನೂನನ್ನು ಗೌರವಿಸುವ, ಅಸಹಾಯಕರ ಗುರಿಯಾಗಿಸಿ ನಡೆಯುವ ವಂಚನೆಗಳಾಗಿದ್ದು, ಇಂತಹ  ಸಂದರ್ಭಗಳು ನಿಮ್ಮ ಅನುಭವಕ್ಕೇನಾದರೂ ಬಂದರೆ, ಶಾಂತವಾಗಿರಿ ಮತ್ತು ಭಯಪಡಬೇಡಿ. ಕರೆ ಮಾಡುವವರ ಗುರುತನ್ನು ವಿವಿಧ ರೀತಿಯಲ್ಲಿ ಪರಿಶೀಲಿಸಿ, ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ, ಅಪೇಕ್ಷಿಸದ ಸಂವಹನಗಳ ಬಗ್ಗೆ ಜಾಗರೂಕರಾಗಿರಿ, ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಿ, ನೀವು ತಪ್ಪೆಸಗಿಲ್ಲವೆಂದ ಸಂದರ್ಭದಲ್ಲಿ ಇಂತಹ ಕರೆ ಮಾಡಿದವರ ಮಾಹಿತಿಯನ್ನು ಪೊಲೀಸರಿಗೆ ನೀಡುವುದಾಗಿ ಧೈರ್ಯವಾಗಿ ತಿಳಿಸಿ. ನಿಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ಇತರರಿಗೂ ಈ ವಿಚಾರದಲ್ಲಿ ಶಿಕ್ಷಣ ನೀಡಿ.  ಇಲ್ಲವಾದಲ್ಲಿ ಕೆಲವು ನಿಮಿಷಗಳ ಬೇಜಾಬ್ದಾರಿ ಅಥವಾ ಮೈ ಮರೆಯುವಿಕೆಯಿಂದ ಜೀವಮಾನದ ಗಳಿಕೆಯನ್ನೆಲ್ಲ ಒಂದೇ ಕರೆಯಲ್ಲಿ ಕಳೆದುಕೊಳ್ಳಬೇಕಾದೀತು, ಕಳೆದುಕೊಳ್ಳುವಂತೆ ಮಾಡಿತು ಜೋಕೆ!!!





- ಡಾ. ಲಕ್ಷ್ಮೀನಾರಾಯಣ ಕೆ. ಎಸ್

ಸಹಾಯಕ ಪ್ರಾಧ್ಯಾಪಕರು 

ವಾಣಿಜ್ಯ ವಿಭಾಗ 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top