ಸೋಲೇ ಗೆಲುವಿನ ಸೋಪಾನ

Upayuktha
0


ಜೀವನ ತಿರುವು ತಿರುವಿನ ಪಯಣ. ಈ ಪಯಣದಲ್ಲಿ ಪ್ರತಿಯೊಬ್ಬರಿಗೂ ತನ್ನದೇ ಆದಂತಹ ಆಸೆ, ಆಕಾಂಕ್ಷೆಗಳು ಹಾಗೂ ಹಲವಾರು ಬಗೆಯ ಸಿಹಿಗನಸುಗಳಿರುತ್ತದೆ. ಈ ಕನಸುಗಳತ್ತ ದಿಟ್ಟ ಹೆಜ್ಜೆನಿಟ್ಟು ನನಸಾಗಿಸಬೇಕೆಂದು ಪ್ರತಿಯೊಬ್ಬರು ಪರಿತಪಿಸುತ್ತಾರೆ. ಆದರೆ ಈ ಕನಸು ನನಸಾಗುವುದು ಮುಖ್ಯವಾಗಿ ಗೆಲುವಿನಿಂದ.


ಹೌದು, ನಾವೇನಾದರೂ ಸಾಧಿಸಿದಾಗ ಗೆಲುವನ್ನು ಪ್ರತಿಫಲವಾಗಿ ಬಯಸುತ್ತೇವೆ . ನಾವು ಬಯಸುವುದು ಕೇವಲ ಗೆಲುವನ್ನು ಮಾತ್ರ. ಆದರೆ ಬದುಕಿನ ನಿಜವಾದ ಪಾಠವನ್ನು ಕಲಿಸುವುದೇ ಸೋಲು. ಜೀವನ ಅಂದಮೇಲೆ ಸೋಲು ಗೆಲುವುಗಳು ಇದ್ದೇ ಇರುತ್ತದೆ. ಅದು ಹರಿಯುವ ನೀರಿನಂತೆ. ಬದುಕಿನ ಹಾದಿಯಲ್ಲಿ ನಮ್ಮೆಲ್ಲರ ಬೆನ್ನೆಟ್ಟುವುದಂತು ಖಂಡಿತ. ಹೆಚ್ಚಾಗಿ ಎಲ್ಲರೂ ಗಮನಿಸಿರಬಹುದು, ಈ ಸಮಾಜದಲ್ಲಿರುವ ವ್ಯಕ್ತಿಗಳನ್ನು ನೋಡುವುದಾದರೆ ಪ್ರತಿಯೊಬ್ಬರಲ್ಲೂ ಈ ಮಾತು ಸರ್ವೇಸಾಮಾನ್ಯವಾಗಿದೆ. ಅದೇನೆಂದರೆ, ಎಷ್ಟೇ ಪ್ರಯತ್ನಿಸಿದರು ನನಗೆ ಗೆಲುವಿನ ಫಲವು ದೊರೆಯಲೇ ಇಲ್ಲವೆಂದು. ಗೆಲುವು ಎಂದಿಗೂ ಶಾಶ್ವತವಲ್ಲ, ಹಾಗಂತ ಸೋಲು ಅಂತ್ಯವಲ್ಲ. ನಾವು ನಮ್ಮ ಮೇಲೆ ಭರವಸೆ ಇಟ್ಟುಕೊಂಡು, ದೃಢಸಂಕಲ್ಪ ಮಾಡಿ ನಿರಂತರವಾಗಿ ಕಾರ್ಯ ಚಟುವಟಿಕೆಯನ್ನು ಪೂರ್ಣಗೊಳಿಸಿದಾಗ ಮಾತ್ರವೇ ಗೆಲುವಿನ ಮೆಟ್ಟಿಲೇರಲು ಸಾಧ್ಯ.


ಗೆಲುವಿಗಾಗಿ ಪರಿತಪಿಸುವ ಹಂಬಲದಲ್ಲಿ ಅದೆಷ್ಟೇ ಬಾರಿ ಸೋಲು ಎದುರಾದರು ಪುನಃ ಪ್ರಯತ್ನ ಪಟ್ಟು ಸೋಲನ್ನೇ ಗೆಲುವಿನ ಹಾದಿಯನ್ನಾಗಿ ಪರಿವರ್ತಿಸಬೇಕು. ಅದಕ್ಕೆ ಮೊದಲನೆಯದಾಗಿ ಬೇಕಾಗಿರುವುದೇ ನಮ್ಮ ಛಲ. ಅದರಂತೆಯೇ ನಮ್ಮ ಮನಸ್ಸು ಕೂಡ ಕಾದ ಕಬ್ಬಿಣದಂತಿರಬೇಕು. ಗುಂಡಿಗೆ ಬಲಶಾಲಿಯಾಗಿರಬೇಕು. 


ಬದುಕಿನ ತಿರುವಿನಲ್ಲಿ ಗೆಲುವು ಮತ್ತು ಸೋಲೆಂಬ ಮಿತ್ರರು ಎಲ್ಲರಲ್ಲೂ ಬೇಕೇ ಬೇಕು. ಒಂದು ಇಲ್ಲದಿದ್ದರೆ ಬದುಕು ಸಂಪೂರ್ಣವಾಗಿ ಪೂರ್ಣಗೊಂಡಂತೆ ಕಾಣುವುದಿಲ್ಲ. ಹಾಗಂತ ಎಷ್ಟೇ ಪ್ರಯತ್ನ ಪಟ್ಟರು ನನಗೆ ಸೋಲೇ ಅಪ್ಪಳಿಸಿ ಬರುತ್ತಿದೆ ಎಂಬ ಕಾರಣಕ್ಕಾಗಿ ಮಾನಸಿಕವಾಗಿ ಕುಗ್ಗಿ ಹೋಗುವುದು, ಪ್ರಾಣ ಕಳೆದುಕೊಳ್ಳುವುದು ಇಂತಹ ಯಾವುದೇ ರೀತಿಯ ತಪ್ಪು ದಾರಿಗೆ ಹೆಜ್ಜೆಯನಿಡದೆ ಛಲದಿಂದ ಮುಂದುವರಿಯಬೇಕಾಗಿದೆ.             


ಮನುಷ್ಯ ಪ್ರತಿಯೊಂದು ಸೋಲಿನಲ್ಲಿಯೂ ಹೊಸ ಪಾಠವನ್ನು ಕಲಿಯುತ್ತಾನೆ. ಯಾಕೆಂದರೆ ಇದರಿಂದ ಸೋಲಿನ ಅನುಭವ ಗೆಲುವನ್ನು ಮತ್ತಷ್ಟು ಮೌಲ್ಯಯುತವಾಗಿ ಮಾಡುತ್ತದೆ. ಹಾಗೂ ಇನ್ನಷ್ಟು ಪ್ರಯತ್ನಿಸಲು ಪ್ರೇರಣೆ ನೀಡಲು ಸ್ಪೂರ್ತಿದಾಯಕವಾಗಿದೆ. ಸೋಲಿನಿಂದಲೇ ನಾವು ನಮ್ಮ ತಪ್ಪುಗಳನ್ನು ಅರಿತುಕೊಳ್ಳುತ್ತೇವೆ. ಅದನ್ನು ಪುನಃ ತಿದ್ದಿಕೊಳ್ಳಲು ಅವಕಾಶ ಸಿಗುತ್ತದೆ. 


ಸೋಲೇ ಇಲ್ಲದ ಗೆಲುವಿಗೆ ಅರ್ಥವೇ ಇಲ್ಲ. ಹಾಗಾಗಿ ನಾವೆಲ್ಲರೂ ಸೋತರೂ ಸರಿ ಸೋಲನ್ನು ಹೆದರದೆ ಅದನ್ನು ಸ್ವೀಕರಿಸಿ ನಮ್ಮ ಗುರಿಯತ್ತ ನಿರಂತರ ಪ್ರಯತ್ನಪಟ್ಟು ಹೆಜ್ಜೆಯ ಹಾಕುತ್ತಾ ಗೆಲುವಿನ ಹಾದಿಗೆ ಸೋಪಾನವಾಗೋಣ.


 


           

- ಅಶಾದಾಸಪ್ಪ ನಾಯ್ಕ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top