'ದೀಪಾವಳಿ' ಎಂಬುದು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ದೇಶದೆಲ್ಲೆಡೆ ಅದ್ಧೂರಿಯಿಂದ ಆಚರಿಸಲಾಗುತ್ತದೆ. ದೀಪಗಳನ್ನು ಹಚ್ಚಿ ಆಚರಿಸುವ ಹಬ್ಬವೇ ದೀಪಾವಳಿ ಅಥವಾ ಬೆಳಕಿನ ಹಬ್ಬವಾಗಿದೆ. ಈ ಹಬ್ಬವನ್ನು ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹಬ್ಬದ ಆಚರಣೆಯು ನೆನ್ನೆ ಮೊನ್ನೆಯಿಂದ ಆರಂಭಗೊಂಡಿರುವುದಲ್ಲ, ಬದಲಾಗಿ ಪೌರಾಣಿಕ ಇತಿಹಾಸವನ್ನೇ ಹೊಂದಿದೆ. ಈ ಹಬ್ಬವನ್ನು 'ನರಕ ಚತುರ್ದಶಿ' ಎಂದು ಕರೆಯಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ದಿನ. ಹಾಗೆಯೇ ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದ ದಿನ. ಕೆಟ್ಟದರ ಮೇಲೆ ಒಳ್ಳೆಯದು ವಿಜಯವನ್ನು ಸೂಚಿಸುವ ದಿನವಾಗಿದೆ.
ದೀಪಾವಳಿ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಧನತ್ರಯೋದಶಿ, ನರಕ ಚತುರ್ದಶಿ, ದೀಪಾವಳಿ (ಅಮಾವಾಸ್ಯೆ), ಬಲಿಪಾಡ್ಯಮಿ ಮತ್ತು ಯಮದ್ವಿತೀಯ ಎಂದು ವಿಭಿನ್ನ ಆಚರಣೆಗಳಿವೆ. ಈ ಹಬ್ಬದಂದು ಜನರು ತಮ್ಮ ಮನೆಗಳಲ್ಲಿ ರಂಗೋಲಿ ಬಿಡಿಸಿ ಮನೆ ತುಂಬಾ ಹಣತೆಗಳನ್ನು ಹಚ್ಚಿ ಅಲಂಕರಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶ ದೇವರನ್ನು ಪೂಜಿಸಲಾಗುತ್ತದೆ. ಹಾಗೆಯೇ ಗೋಪೂಜೆಯನ್ನು ಸಹ ಮಾಡಲಾಗುತ್ತದೆ.
ದೀಪಾವಳಿಯ ಹಿಂದಿನ ದಿನವಾದ ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಈ ಬೆಳಕಿನ ಹಬ್ಬವನ್ನು ಕುಟುಂಬದವರೆಲ್ಲರೂ ಒಂದುಗೂಡಿ, ಬಂಧು-ಮಿತ್ರರಿಗೆ ಉಡುಗೊರೆಗಳನ್ನು ನೀಡಿ ಸಿಹಿತಿಂಡಿಯ ಜೊತೆಗೆ ಹೊಸ ಬಟ್ಟೆಯನ್ನು ಧರಿಸಿ ಮತ್ತು ಪ್ರೀತಿಯನ್ನು ಹಂಚುತ್ತಾ ಹಬ್ಬವನ್ನು ಆಚರಿಸುತ್ತಾರೆ.
ಈ ಹಬ್ಬದ ವಿಶಿಷ್ಟವಾದ ಆಕರ್ಷಣೆ ಎಂದರೆ ಅದು ಪಟಾಕಿಗಳು. ವಿವಿಧ ತರಹದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಹಾಗೆಯೇ ದೀಪಾವಳಿ ಧಾರ್ಮಿಕ ಮೌಲ್ಯಗಳನ್ನು ಒಳಗೊಂಡಿದೆ. ಈ ವರ್ಷದ ಹಬ್ಬವು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಆಶಿಸೋಣ.
ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
- ಹರ್ಷಿಣಿ ಕಾಂಚನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



