ಮಂಗಳೂರು: ಇತ್ತೀಚೆಗೆ ನಮ್ಮನ್ನು ಅಗಲಿದ ಗಣ್ಯರಾದ ಎಸ್ ಎಲ್. ಭೈರಪ್ಪ, ಕೆ.ಜಿ ವಸಂತಮಾಧವ, ನಂದಳಿಕೆ ಬಾಲಚಂದ್ರ ರಾವ್, ನರೇಂದ್ರಕುಮಾರ್ ಉಜಿರೆ, ಗುರುರಾಜ ಆಚಾರ್ಯ ಹೊಸಬೆಟ್ಟು, ಶ್ರೀಮತಿ ಲಲಿತಾ ರೈ ಮತ್ತು ದಿನೇಶ್ ಅಮ್ಮಣ್ಣಾಯ ಇವರಿಗೆ ಕನ್ನಡ ಭವನ, ಬಿ.ಸಿ. ರೋಡು ಇಲ್ಲಿ ನುಡಿ ನಮನ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು ಮಾತನಾಡಿ ಏಳು ಮಹನೀಯರು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದವರು. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಪ್ರತಿಯೊಬ್ಬರ ಬಗ್ಗೆ ನುಡಿನಮನ ಸಲ್ಲಿಸಿದರು.
ಕನ್ನಡ ಸಾರಸ್ವತ ಲೋಕದಲ್ಲಿ ವ್ಯಕ್ತಿಯಾಗಿ, ಸಾಹಿತಿಯಾಗಿ ಮತ್ತು ನಿಜವಾದ ಅರ್ಥದಲ್ಲಿ ಒಬ್ಬ ಪ್ರಗತಿಪರ ಬುದ್ಧಿಜೀವಿ ಎನಿಸಿಕೊಂಡವರು ಎಸ್ ಎಲ್ ಭೈರಪ್ಪನವರು; ಸಾಹಿತ್ಯದಿಂದ ಪಡೆದ ಹಣವನ್ನು ಸಂಪೂರ್ಣವಾಗಿ ಸಮಾಜಕ್ಕೆ ಹಿಂತಿರುಗಿಸಿದ ಕೀರ್ತಿ ಭೈರಪ್ಪನವರಿಗೆ ಸಲ್ಲುತ್ತದೆ. ಬಾಲ್ಯದಿಂದಲೇ ಕಷ್ಟದ ಬದುಕನ್ನು ಬಾಳಿದವರು. ಜೀವನಾನುಭವ, ಪ್ರವಾಸ ಮತ್ತು ಅಧ್ಯಯನದಿಂದ ಗಟ್ಟಿ ಸಾಹಿತ್ಯವನ್ನು ರಚಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು ಬೈರಪ್ಪನವರು ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್ ನುಡಿನಮನ ಸಲ್ಲಿಸಿದರು.
ಕೆ.ಜಿ ವಸಂತ ಮಾಧವ ಅವರು ದಕ್ಷಿಣ ಭಾರತದ ಇತಿಹಾಸ, ಕರಾವಳಿಯ ಇತಿಹಾಸ ಅಲ್ಲದೆ, ಭಾರತದ ವೈದ್ಯ ಇತಿಹಾಸ, ವಿಜ್ಞಾನದ ಇತಿಹಾಸ ಇತ್ಯಾದಿ ವಿಷಯಗಳ ಬಗೆಗೂ ಕೃತಿ ರಚಿಸಿದ್ದಾರೆ; ಅವರನ್ನು ಸಾಹಿತ್ಯ ಪರಿಷತ್ತು ಗುರುತಿಸಿದೆಯಾದರೂ ಒಬ್ಬ ಇತಿಹಾಸಕಾರರಾಗಿ ಅವರಿಗೆ ಸಿಗಬೇಕಾದಷ್ಟು ಮನ್ನಣೆ ಸಿಕ್ಕಿಲ್ಲ ಎಂದರು. ನಂದಳಿಕೆ ಬಾಲಚಂದ್ರ ರಾವ್ ಮತ್ತು ದಿನೇಶ್ ಅಮ್ಮಣ್ಣಾಯ ಅವರ ಜೊತೆಗಿನ ತಮ್ಮ ಅನುಭವವನ್ನೂ ಹಂಚಿಕೊಂಡರು.
ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ಈ ಏಳು ಗಣ್ಯರು ಅನರ್ಘ್ಯ ರತ್ನಗಳು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ದಿನೇಶ ಅಮ್ಮಣ್ಣಾಯರು ಪರಂಪರೆಯ ಶೈಲಿಯ ಭಾಗವತರು; ಅವರದೇ ಶೈಲಿಯಲ್ಲಿ ಅನೇಕ ಮಂದಿ ಅಭಿಮಾನಿಗಳನ್ನು ಹೊಂದಿದ್ದರು. ಯಕ್ಷಗಾನ ರಂಗಭೂಮಿಯಲ್ಲಿ ಅಮ್ಮಣ್ಣಾಯ ಅವರ ಸಾಧನೆಯನ್ನು ಬಣ್ಣಿಸಿ ಅವರೊಂದಿಗಿನ ತಮ್ಮ ಒಡನಾಟವನ್ನು ತಿಳಿಸಿದರು.
ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಹೆಚ್ ತನ್ನ ತಂದೆ ಗುರುರಾಜ ಆಚಾರ್ಯ ಅವರ ಬಗ್ಗೆ ಮೆಲುಕು ಹಾಕಿದರು. ಜೀವನದಲ್ಲಿ ಯಾವ ರೀತಿ ಶಿಸ್ತನ್ನು ಮೈಗೂಡಿಸಿಕೊಂಡಿದ್ದರು ಕಳೆದ ಮೂರು ದಶಕಗಳಿಗಿಂತ ಹೆಚ್ಚು ಕಾಲ ರಾಜ್ಯದಾದ್ಯಂತ ಯಕ್ಷಗಾನದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ಯಾವ ರೀತಿ ಕೊಡುಗೆಯನ್ನು ನೀಡಿದ್ದಾರೆ ಎಂಬುದರ ಬಗ್ಗೆ ಉಲ್ಲೇಖ ಮಾಡಿದರು. ಅಮ್ಮಣ್ಣಾಯರ ನೇರ ನಡೆ ನುಡಿ, ಸ್ವಾಭಿಮಾನದ ಬಗೆಗೆ ತಿಳಿಸಿದರು. ಮಾನಿಷಾದ, ವಸ್ತ್ರಾಪಹಾರ, ಸೀತಾ ಪರಿತ್ಯಾಗಗಳಂತಹ ಪ್ರಸಂಗಗಳನ್ನು ಆಡಿಸಿದ ರೀತಿಯನ್ನು ನೆನಪಿಸಿದರು. ನಂದಳಿಕೆ ಬಾಲಚಂದ್ರ ರಾಯರು ಮುದ್ದಣ್ಣನ ಹೆಸರುಳಿಸಲು ಕೊಡುಗೆ ನೀಡಿದ್ದನ್ನು ಸ್ಮರಿಸಿದರು. ಎಲ್ಲರಿಗೂ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ಮಾಧವ ಎಂ.ಕೆ., ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಪೂವಪ್ಪ ನೇರಳಕಟ್ಟೆ ಮತ್ತು ಸನತ್ ಕುಮಾರ ಜೈನ್, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ ಉಡುಪ, ಮೂಡಬಿದ್ರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಕೋಶಾಧ್ಯಕ್ಷ ಅಬ್ದುಲ್ ರಹಿಮಾನ್ ಡಿ ಬಿ, ಬಂಟ್ವಾಳ ತಾಲೂಕು ಪಾಣೆಮಂಗಳೂರು ಹೋಬಳಿ ಘಟಕದ ಅಧ್ಯಕ್ಷರಾದ ಪಿ. ಮುಹಮ್ಮದ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

