ದೀಪಾವಳಿ- ಗೋಪೂಜೆ

Upayuktha
0


ದೀಪಾವಳಿಯ ಅಮವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿದೆ. ಈ ದಿನದಂದು ಕೇವಲ ಬಲೀಂದ್ರನನ್ನಷ್ಟೇ ಪೂಜಿಸುವುದಲ್ಲ, ಗೋವುಗಳನ್ನೂ ಕೂಡಾ ಪೂಜಿಸುತ್ತಾರೆ. ಇದು ಗೋಪೂಜೆಯ ಮತ್ತು ಗೋವರ್ಧನ ಗಿರಿ ಪೂಜೆಯ ದಿನವೂ ಹೌದು. ಮಹಾಭಾರತ ಕಾಲದಲ್ಲಿ ಇಂದ್ರನು ಅತಿವೃಷ್ಟಿಯನ್ನು ಸೃಷ್ಟಿಸಿದಾಗ, ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ ವೃಂದಾವನದಲ್ಲಿ ಇರುವ ಗೋವುಗಳನ್ನೂ ಗೋಪಾಲಕರನ್ನೂ ರಕ್ಷಿಸಿದ ದಿನ ಇದಾಗಿದೆ. ಹೀಗಾಗಿ ಈ ಬಲಿ ಪಾಡ್ಯದ ದಿನದಂದು ಗೋವುಗಳನ್ನು ಶೃಂಗರಿಸಿ ಪೂಜಿಸುತ್ತಾರೆ.


ಪ್ರತಿದಿನವೂ ನಮಗೆ ಕಣ್ಣಿಗೆ ಕಾಣುವ ದೇವರೆಂದರೆ ಅದು ಹಸು. ಹಸುವನ್ನು ನಾವು ಗೋಮಾತೆ ಎಂದೇ ಕರೆಯುತ್ತೇವೆ. ಹಸುವು ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆ ನಮ್ಮಲ್ಲಿದೆ. ಹೀಗಾಗಿ ಸಂಸ್ಕೃತದಲ್ಲಿ “ಸರ್ವೇ ದೇವಾಃ ಸ್ಥಿತಾ ದೇಹೇ ಸರ್ವದೇವಮಯೀ ಹಿ ಗೌಃ” ಎಂದು ಗೋಮಾತೆಯನ್ನು ಬಣ್ಣಿಸಿದ್ದಾರೆ. ಅಂದರೆ ಗೋವಿನ ದೇಹದಲ್ಲಿ ಸರ್ವ ದೇವಾನುದೇವತೆಗಳು ನೆಲೆಸಿದ್ದಾರೆ ಎಂದರ್ಥ. “ಗೋಪೂಜಾಂ ಕಾರ್ತಿಕೇ ಕುರ್ಯಾತ್” ಅಂದರೆ ಕಾರ್ತಿಕ ಮಾಸದಲ್ಲಿ ಗೋಪೂಜೆಯನ್ನು ಮಾಡಬೇಕು ಎಂಬುದು ಶಾಸ್ತ್ರ ಲಿಖಿತ. ಅದಕ್ಕನುಗುಣವಾಗಿ ಕಾರ್ತಿಕ ಮಾಸದ ಮೊದಲ ದಿನ ಅಂದರೆ ದೀಪಾವಳಿಯ ಮರುದಿನವಾದ ಬಲಿಪಾಡ್ಯದಂದು ಎಲ್ಲರೂ ಗೋಪೂಜೆಯನ್ನು ಮಾಡುವುದು ಸಂಪ್ರದಾಯವಾಗಿದೆ. ಆ ದಿನ ಬೆಳಿಗ್ಗೆ ಗೋವುಗಳನ್ನು ಸ್ನಾನ ಮಾಡಿಸಿ ಹೂಮಾಲೆ ಹಾಕಿ, ಮೈಮೇಲೆ ಜೇಡಿಮಣ್ಣಿನ ಮುದ್ರೆಗಳನ್ನು ಇರಿಸಿ, ಶೃಂಗರಿಸಿ ತಿನ್ನಲು ಗೋಗ್ರಾಸವಿಟ್ಟು ಪೂಜೆ ಮಾಡುವುದು ರೂಢಿಯಲ್ಲಿದೆ. 


ಗೋಪೂಜೆಯ ದಿನದಂದು ಗೋವುಗಳನ್ನು, ಎತ್ತು ಮತ್ತು ಕೋಣಗಳನ್ನು ಬಂಡಿ, ಉಳುಮೆ, ಗಾಣ ಇತ್ಯಾದಿ ಯಾವುದೇ ಕೆಲಸಗಳಿಗೆ ಬಳಸಬಾರದು ಹಾಗೂ ಅವುಗಳ ಮೇಲೆ ಭಾರವನ್ನು ಹೊರಿಸಬಾರದು. ಅಲ್ಲದೇ ಈ ದಿನದಂದು ಗೋವುಗಳಿಂದ ಹಾಲನ್ನು ಕೂಡಾ ಕರೆಯದೇ ಪೂರ್ಣವಾಗಿ ಕರುವಿಗೇ ಉಣಲು ಬಿಡಬೇಕು ಎಂಬ ನಿಯಮ ಇದೆಯಾದರೂ ಅದನ್ನು ಪಾಲಿಸುವುದು ಕಷ್ಟವಾಗುತ್ತದೆ. 


ಈ ಪಾಡ್ಯದ ದಿನದಂದು ಗೋಪೂಜೆ ಮತ್ತು ಬಲೀಂದ್ರನ ಪೂಜೆಗಳ ಜೊತೆಯಲ್ಲಿ ದೀಪೋತ್ಸವ ವಷ್ಟಿಕಾಕರ್ಷಣ (ಹಗ್ಗಜಗ್ಗಾಟ), ನವವಸ್ತ್ರಧಾರಣ, ದ್ಯೂತ (ಜೂಜಾಟ) ಮೊದಲಾದ ಆಚರಣೆಗಳನ್ನು ಮಾಡಬೇಕು ಎಂಬುದಾಗಿ ಗ್ರಂಥಗಳಲ್ಲಿ ತಿಳಿಸಿದೆ. ನಮ್ಮ ಕುಂದಾಪುರದ ಕಡೆಯಲ್ಲಿ ಜೂಜಾಟದ ಅಂಗವಾಗಿ ಸಾರ್ವಜನಿಕ ಕೋಳಿಪಡೆಯನ್ನು ಆಯೋಜಿಸುವ ಕ್ರಮ ಈಗಲೂ ಚಾಲ್ತಿಯಲ್ಲಿದೆ. ಮನೆಗಳಲ್ಲಿ ನೆಂಟರಿಷ್ಟರೆಲ್ಲ ಸೇರಿ ಪಗಡೆ ಮತ್ತು ಚೆನ್ನೆಮಣೆ ಆಟ ಆಡುವ ಕ್ರಮ ಇದ್ದಿತ್ತು. ಈ ಜೂಜಾಟದಲ್ಲಿ ಯಾರಿಗೆ ಜಯವಾಗುವುದೋ ಅವರಿಗೆ ಮುಂದಿನ ಒಂದು ವರ್ಷಪೂರ್ತಿ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಲಭಿಸಲಿದೆ ಎಂಬ ನಂಬಿಕೆ ಇದೆ.


ಯಮದ್ವಿತೀಯಾ


ಗೋಪೂಜೆ ಮತ್ತು ಬಲಿಪಾಡ್ಯದ ಮರುದಿನವೇ ಬಿದಿಗೆಯ ದಿನ. ಈ ದಿನದಂದು ಯಮನ ತಂಗಿಯಾದ ಯಮುನೆಯು ತನ್ನ ಅಣ್ಣನನ್ನು ಮನೆಗ ಆಹ್ವಾನಿಸಿ ಅವನಿಗೆ ಊಟ ಬಡಿಸಿದಳು ಎಂಬುದು ಪುರಾಣದ ಕಥೆ. ಅದಕ್ಕಾಗಿ ಈ ಬಿದಿಗೆಗೆ ‘ಯಮದ್ವಿತೀಯಾ’ ಎನ್ನುತ್ತಾರೆ. ಹೀಗಾಗಿ ಈ ದಿನದಂದು ಪುರುಷರು ತಮ್ಮ ಸ್ವಂತ ಮನೆಯಲ್ಲಿ ಊಟಮಾಡದೇ ಸಹೋದರಿಯರ ಮನೆಯಲ್ಲಿ ಅವರ ಕೈ ಅಡುಗೆಯನ್ನು ಉಣ್ಣಬೇಕು. ದೀಪಾವಳಿ ಹಬ್ಬಕ್ಕೆಂದು ಆಹ್ವಾನಿಸಿದ್ದ ಅಕ್ಕ ತಂಗಿಯರನ್ನು ಈ ಯಮದ್ವಿತೀಯಾ ದಿನದಂದು ವಸ್ತ್ರಾಲಂಕಾರ ಆಭರಣಾದಿ ಉಡುಗೊರೆಗಳಿಂದ ಸತ್ಕರಿಸಿ ಅವರ ಗಂಡನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಅಲ್ಲಿ ಅವರ ಕೈಯ ಅಡುಗೆಯನ್ನು ಉಂಡು ಬರಬೇಕು. ಸ್ವಂತ ಭಗಿನಿ ಇಲ್ಲದವರು ಮಿತ್ರಾದಿಗಳ ಭಗಿನಿಯರನ್ನು ಮತ್ತು ಸ್ವಂತ ಸಹೋದರ ಇಲ್ಲದವರು ಮಿತ್ರಾದಿಗಳ ಸಹೋದರರನ್ನು ಸತ್ಕರಿಸಬಹುದು. ಇದರಿಂದ ಆ ಸಹೋದರರಿಗೆ ಧನ ಧಾನ್ಯಾದಿ ಸುಖ ಮತ್ತು ದೀರ್ಘ ಆಯುಸ್ಸು ಪ್ರಾಪ್ತಿಯಾಗುತ್ತದೆ ಹಾಗೂ ಆ ಸಹೋದರಿಯರಿಗೆ ವೈಧವ್ಯ ಉಂಟಾಗುವುದಿಲ್ಲ ಎಂಬುದಾಗಿ ಶಾಸ್ತ್ರಗಳಲ್ಲಿ ಹೇಳಲಾಗಿದೆ. 


- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top