ಹಿಂದೂಗಳು ಆಚರಿಸುವ ಅನೇಕ ಹಬ್ಬಗಳಲ್ಲಿ ದೀಪಾವಳಿ ಹಬ್ಬವು ಒಂದು. ಈ ಹಬ್ಬಕ್ಕೆ ಅದರದೇ ಆದ ಇತಿಹಾಸವಿದ್ದು, ಬಹಳ ಅದ್ದೂರಿಯಾಗಿ ಐದು ದಿನಗಳವರೆಗೆ ಆಚರಿಸುವ ಹಬ್ಬವೇ ದೀಪಾವಳಿ.
ಪುರಾಣಗಳ ಪ್ರಕಾರ ವಿಷ್ಣುವಿನ ಅವತಾರವಾದ ಭಗವಾನ್ ರಾಮ, ಅವನ ಸಹೋದರ ಲಕ್ಷ್ಮಣ ಮತ್ತು ಹೆಂಡತಿ ಸೀತೆ ಎಲ್ಲರೂ ವನವಾಸದಲ್ಲಿದ್ದ ಸಮಯದಲ್ಲಿ ರಾಕ್ಷಸ ರಾಜ ರಾವಣನು ಸೀತೆಯನ್ನು ಅಪಹರಿಸಿ ತನ್ನ ಭೂಮಿ ಲಂಕಾಕ್ಕೆ ಕರೆದೊಯ್ಯುತ್ತಾನೆ. ನಂತರ ಭಗವಾನ್ ರಾಮ, ಸಹೋದರ ಲಕ್ಷ್ಮಣ ಮತ್ತು ಅಪ್ರತಿಮ ಸಾಮರ್ಥ್ಯವನ್ನು ಹೊಂದಿದ್ದ ಹನುಮಂತ ಎಂಬ ಅದ್ಭುತ ವಾನರ ಲಂಕಾರಾಜ ರಾವಣನ ಮೇಲೆ ಯುದ್ಧವನ್ನು ಹೂಡಿ, ಅವನನ್ನು ನಾಶಪಡಿಸುತ್ತಾರೆ. ಹದಿನಾಲ್ಕು ವರ್ಷಗಳ ವನವಾಸದ ನಂತರ ರಾಮನು ತನ್ನ ದೇಶಕ್ಕೆ ಹಿಂದಿರುಗಿದಾಗ, ರಾಜ್ಯದಾದ್ಯಂತ ಮಣ್ಣಿನ ದೀಪಗಳನ್ನು ಬೆಳಗಿಸಿ ದೀಪಾವಳಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು.
ದೀಪಾವಳಿಯು ವಿಶೇಷವಾಗಿ ದೀಪಗಳ ಹಬ್ಬವಾಗಿರುವುದರಿಂದ ಪ್ರತಿಯೊಂದು ಮನೆಗಳಲ್ಲೂ ಆಚರಿಸುತ್ತಾರೆ. ಮನೆ ಮಂದಿ ಎಲ್ಲರೂ ಜೊತೆಯಾಗಿ ಸಂಭ್ರಮಿಸುವುದೆಂದರೆ ಏನೋ ಒಂದು ರೀತಿಯ ಖುಷಿ.
ಬಾಲ್ಯದ ದಿನಗಳಲ್ಲಿ ದೀಪಾವಳಿ ಎಂದರೆ ಎಲ್ಲಿಲ್ಲದ ಸಂಭ್ರಮ. ಆದರೆ ಇಂದು ಆ ಸಂಭ್ರಮವಿಲ್ಲ. ಬದಲಾವಣೆಯತ್ತ ಸಾಗುತ್ತಿರುವ ನಮ್ಮ ಮನಸ್ಥಿತಿಗಳು ಆಧುನಿಕ ಯುಗದೊಂದಿಗೆ ಬೆಸೆದುಕೊಂಡಿದೆ. ಆಚರಣೆಗಳು ಕೂಡ ಆಡಂಬರವಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಹಬ್ಬಗಳ ಆಚರಣೆಯಲ್ಲಿ ಅಷ್ಟೊಂದು ಸಂಸ್ಕೃತಿಗಳು ಕಾಣುವುದಿಲ್ಲ. ದೀಪಗಳಿಗಿಂತ ಹೆಚ್ಚಾಗಿ ಪಟಾಕಿಗಳಿಗೆ ಹೆಚ್ಚು ಮಹತ್ವಗಳನ್ನು ನೀಡುತ್ತಿದ್ದಾರೆ.
ದೀಪಾವಳಿ ಪ್ರಾರಂಭವಾಗುವ ಎರಡು ವಾರಗಳ ಮೊದಲೇ ಪಟಾಕಿಗಳ ಸದ್ದು ಎಲ್ಲಾ ಕಡೆಗಳಿಂದ ಕೇಳುತ್ತಿರುತ್ತವೆ. ಆದರೆ ಪಟಾಕಿಯು ಮನುಷ್ಯನ ಅರೋಗ್ಯದ ದೃಷ್ಟಿಯಲ್ಲಿಯೂ ಹಾಗೆಯೇ ಪರಿಸರಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೂ ಅನೇಕ ರೀತಿಯ ತೊಂದರೆಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅರಿತಿರಬೇಕು.
ಆದ್ದರಿಂದ ನಾವುಗಳೆಲ್ಲಾ ಹೆಚ್ಚಾಗಿ ಪಟಾಕಿಯ ಬಳಕೆಯನ್ನು ಮಾಡದೇ, ಮಣ್ಣಿನ ದೀಪಗಳನ್ನು ಹಚ್ಚಿಸಿ ಕತ್ತಲಿನ ಅಂಧಕಾರವನ್ನು ದೂರ ಮಾಡಿ ದೀಪದ ಬೆಳಕಿನಿಂದ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡೋಣ.
ನಮ್ಮ ಸಂಸ್ಕೃತಿಯಲ್ಲಿ ಆಚರಿಸುವ ದೀಪಾವಳಿ ಹಬ್ಬವು ಅನೇಕ ರೀತಿಯ ಸಂಪ್ರದಾಯಗಳನ್ನು ಹೊಂದಿದೆ. ಅದರಲ್ಲಿ ಗೋಪೂಜೆ, ಬಲೀಂದ್ರ ಪೂಜೆ ಮುಂತಾದವುಗಳನ್ನು ಕಾಣಬಹುದು. ಬಲೀಂದ್ರ ಪೂಜೆ ಎಂಬುದು, ತುಳಸಿ ಕಟ್ಟೆಯ ಮುಂದೆ ಹಾಳೆಯ ಗಿಡವನ್ನು ಇಟ್ಟು ಅದನ್ನು ಹೂವಿನಿಂದ ಶೃಂಗಾರ ಮಾಡಿ, ಬಲಿಂದ್ರ ಮರದ ಅಡಿಯಲ್ಲಿ ಅಕ್ಕಿ, ತೆಂಗಿನಕಾಯಿ, ಅವಲಕ್ಕಿ ಇಟ್ಟು ದೀಪವನ್ನು ಬೆಳಗಿಸಲಾಗುತ್ತದೆ. ಬಲೀಂದ್ರ ಪೂಜೆಯನ್ನು ಮಾಡಿ ಮೂರು ಬಾರಿ ಕೂ ಎಂದು ಬಲಿಯಂದ್ರನನ್ನು ಕರೆಯಲಾಗುತ್ತದೆ. ನಂತರ ಗೋವಿನ ಹಟ್ಟಿಗೆ ತೆರಳಿ ಗೋ ಪೂಜೆಯನ್ನು ಮಾಡಿ ಗೋವಿಗೆ ಬಾಳೆಹಣ್ಣು, ಹಾಗೂ ಅಕ್ಕಿಯಲ್ಲಿ ಮಾಡಿದ ದೋಸೆಯನ್ನು ನೀಡುವುದು ಸಂಪ್ರದಾಯವಾಗಿದೆ. ಇದು ಒಂದೊಂದು ಪ್ರದೇಶದಲ್ಲಿ ಭಿನ್ನ-ಭಿನ್ನವಾದ ಆಚರಣೆಗಳನ್ನು ಹೊಂದಿದೆ.
ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. ನಾವೆಲ್ಲರೂ ಪರಿಸರ ರಕ್ಷಣೆಯನ್ನು ಮಾಡಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಣೆ ಮಾಡೋಣ.
- ನಿಖಿತಾ ಎಸ್.ರೈ
ಸೇರ್ತಾಜೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


