ಭಾರತವು ಸಾಂಸ್ಕೃತಿಕ ವೈವಿದ್ಯತೆಯ ಪರಂಪರೆಯಾಗಿದೆ. ಭಾರತೀಯರು ಅನೇಕ ಹಬ್ಬಗಳನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆ. ಪ್ರತಿಯೊಂದು ಹಬ್ಬವು ತನ್ನದೇ ಆದ ಹಿನ್ನಲೆಗಳಿಂದ ಕೂಡಿರುತ್ತದೆ. ಹೀಗೆ ತನ್ನದೇ ಆದ ಹಿನ್ನಲೆಯಲ್ಲಿ ಧಾರ್ಮಿಕವಾಗಿ ದೇವಿಯನ್ನು ಪೂಜಿಸಲ್ಪಡುವ ಹಬ್ಬ ದಸರಾ. ನಾಡ ಹಬ್ಬ ಎಂದೇ ಪ್ರಸಿದ್ದಿಯನ್ನು ಪಡೆದು ಇಂದಿಗೂ ಭಕ್ತಿಯಿಂದ ಆರಾಧಿಸಲ್ಪಡುವ ಪಾವಿತ್ರತೆಯ ಹಬ್ಬ ದಸರವಾಗಿದೆ. ಕೆಟ್ಟದರ ಮೇಲೆ ವಿಜಯದ ಹಬ್ಬವೆಂದು ಆಚರಿಸುವ ಈ ಹಬ್ಬವು ಶ್ರೀ ದುರ್ಗಾ ದೇವಿಯು ದುಷ್ಟ ಮಹಿಷಾಸುರನನ್ನು ಸಂಹಾರಿಸಿದ ದಿನವಾಗಿದೆ. ಈ ಮೂಲಕ ದೇವಿಯು ಮಹಿಷಮರ್ದಿನಿಯಾಗಿ ಲೋಕವನ್ನು ಕಾಪಾಡುತ್ತಿದ್ದಾಳೆ. ಇದೊಂದು ಹಿನ್ನಲೆಯಾದರೆ ತ್ರೇತಾಯುಗದಲ್ಲಿ ಶ್ರೀರಾಮನು ರಾವಣನ ಮೇಲೆ ವಿಜಯವನ್ನು ಸಾಧಿಸಿದ ದಿನವಾಗಿದೆ. ಹೀಗೆ ವಿಜಯದಶಮಿ ಎಂದು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಹೀಗೆ ನವರಾತ್ರಿಯ ಒಂಬತ್ತು ದಿನ ಪ್ರತಿಯೊಂದು ದಿನವು ಒಂದೊಂದು ದೇವಿಯನ್ನು ಆಕೆಯ ಹಿನ್ನಲೆಯ ರೀತಿಯಲ್ಲಿ ಆಕೆಗೆ ಉಡುಪನ್ನು ಧರಿಸಿ, ಅಲಂಕರಿಸಿ ಭಕ್ತಿಯಿಂದ ಪೂಜಿಸುತ್ತಾರೆ.
ಮೊದಲನೇಯ ದಿನ ಶಿವನ್ನು ಮರಳಿ ಪಡೆಯಬೇಕೆಂದು ಹದಿನಾರು ವರ್ಷ ದುಸ್ತರ ತಪಸ್ಸನ್ನು ಮಾಡಿದ "ಶೈಲಪುತ್ರಿ"ಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಎರಡನೇಯ ದಿನ ಪರಮೇಶ್ವರನನ್ನು ಪತಿಯಾಗಿಸಬೇಕೆಂದು ನಾರದರ ಉಪದೇಶವನ್ನು ಅನುಸರಿಸಿ ಕಠಿಣ ತಪಸ್ಸನ್ನು ಮಾಡಿದ ದೇವಿ ಸ್ವರೂಪಿಣಿ "ಬ್ರಹ್ಮಚಾರಿಣಿ"ಯನ್ನು ಪ್ರೀತಿಯಿಂದ ಪೂಜಿಸುತ್ತಾರೆ.
ಮೂರನೇಯ ದಿನ ಭಕ್ತಿ ಭಾವದಿಂದ ಅಂಬೆಯ ರೂಪಿ "ಚಂದ್ರಘಂಟಾ" ದೇವಿಯು ರೌದ್ರ ಸ್ವರೂಪಿಣಿಯಾಗಿ ಜಗತ್ತನ್ನು ಕಾಯುವ ಈಕೆಯನ್ನು ಶ್ರದ್ದೆಯಿಂದ ಪೂಜಿಸುತ್ತಾರೆ.
ನಾಲ್ಕನೇಯ ದಿನ ಭೂಮಿಯ ಸೃಷ್ಟಿಕರ್ತೆ ಎಂದೇ ಪ್ರಸಿದ್ಧಿ ಪಡೆದು ಅಷ್ಟಭುಜಾದೇವಿಯಾಗಿರುವ "ಕೂಷ್ಮಾಂಡಿನಿ" ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಐದನೇಯ ದಿನ ಕಾರ್ತಿಕೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಜಗತ್ತಿಗೆ ಬೆಳಕಾಗಿರುವ ದೇವತೆಯ ಸ್ವರೂಪಿಣಿಯಾದ "ಸ್ಕಂದಮಾತೆ"ಯನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ.
ಆರನೇಯ ದಿನ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ದುಷ್ಟರನ್ನು ಸಂಹರಿಸಲೆಂದು ಅವತರಿಸಿದ ದೇವಿ "ಕಾತ್ಯಾಯಿನಿ"ಯನ್ನು ಪೂಜಿಸುತ್ತಾರೆ.
ಏಳನೇಯ ದಿನ ದೇವಿಯ ಉಗ್ರ ರೂಪಿಣಿಯಾದ "ಕಾಲರಾತ್ರಿಯನ್ನು" ಆರಾಧಿಸುತ್ತಾರೆ. ಎಂಟನೇಯ ದಿನ ಶಂಕರನನ್ನು ವಿವಾಹವಾಗಲು ಬಯಸಿ ಆಹಾರವನ್ನು ತ್ಯಜಿಸಿ ಕಠಿಣವಾದ ತಪಸ್ಸನ್ನು ಮಾಡಿದ್ದರಿಂದ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಲ್ಪಡುತ್ತವೆ. ನಂತರ ಸಾವಿರಾರು ವರ್ಷಗಳ ಬಳಿಕ ಶಿವನು ಗಂಗೆಯನ್ನು ಹರಿಯಲು ಬಿಟ್ಟನಂತರ ಶ್ವೇತವರ್ಣದಿಂದ ತನ್ನ ಭಕ್ತರನ್ನು ಹರಸುತ್ತಿರುವ ತಾಯಿ "ಮಹಾಗೌರಿ"ಯನ್ನು ಆರಾಧಿಸುತ್ತಾರೆ. ಅಂತಿಮವಾಗಿ ಕೊನೆಯ ದಿನ ದೇವಿ ಸ್ವರೂಪಿಣಿ "ಸಿದ್ಧಿಧಾತ್ರಿ"ಯನ್ನು ಭಕ್ತಿಯಿಂದ ವೈಭವದಿಂದ ಪೂಜಿಸುತ್ತಾರೆ. ಹೀಗೆ ನವರಾತ್ರಿಯ ಒಂಬತ್ತು ದೇವಿಗಳನ್ನು ಕಣ್ತುಂಬಿಸಿಕೊಳ್ಳಲು ಭಕ್ತಾದಿಗಳು ಹಾತೋರೆಯುತ್ತಿರುತ್ತಾರೆ.
ಶಾರದಾ ದೇವಿಯನ್ನು ಊರಿನ ದೇವಾಲಯಗಳಲ್ಲಿ ಕೂರಿಸಿ ಪೂಜೆ, ಹೋಮ, ಭಜನೆಗಳ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ದೇವಿ ಮಂಗಳಾ ದೇವಿಯನ್ನು ಆರಾಧಿಸುತ್ತಾರೆ. ಈ ದಸರಾ ಉತ್ಸವದಲ್ಲಿ ಹುಲಿ ವೇಷ, ಶಾರ್ದೂಲ ವೇಷ, ಕರಡಿ ವೇಷ ಗಳನ್ನು ಕಾಣಬಹುದು. ಇದೊಂದು ದೇವಿಗೆ ಭಕ್ತಿಯಿಂದ ಸಮರ್ಪಿಸುವ ಸೇವೆಯಾಗಿದೆ. ಕೊನೆಯ ದಿನ ಶಾರದೆಯನ್ನು ನೀರಿಗೆ ಹಾಕುವ ಮೆರವಣಿಗೆಯಲ್ಲಿ ಅನೇಕ ಭಕ್ತಾದಿಗಳು ಸೇರಿಕೊಳ್ಳುತ್ತಾರೆ. ಜೊತೆಗೆ ಕುಣಿತ ಭಜನೆ, ವೇಷಗಳ ಸಾಲುಗಳನ್ನು ಕಾಣಬಹುದು. ಹಿಂದೆ ಈ ಸೇವೆಯು ಸರಿಸುಮಾರು ಮಧ್ಯರಾತ್ರಿಯವರೆಗೆ ನಡೆಯುತ್ತಿತ್ತು. ಆದರೆ ಈಗ ಕಾನೂನು ವ್ಯವಸ್ಥೆ ಇದಕ್ಕೆ ನಿಗದಿತ ಸಮಯವನ್ನು ವಿಧಿಸಿದೆ. ಇದರಿಂದ ಭಕ್ತರ ಆರಾಧನೆಗೆ ಅಡ್ಡಿ ಪಡಿಸಿದಂತಾಗುತ್ತಿದೆ.
- ಚೈತನ್ಯ ಚಂದಪ್ಪ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಯತ್ತಾ) ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



