ಉತ್ತರ ಕರ್ನಾಟಕದಲ್ಲಿ ದಸರಾ ಸಂಭ್ರಮ

Upayuktha
0


ದಸರಾ ಹಬ್ಬ ಬಂತೆಂದರೆ ಸಂಭ್ರಮವೋ ಸಂಭ್ರಮ, ಉತ್ತರ ಕರ್ನಾಟಕದ ಬಹುತೇಕ ಮನೆಗಳ ಕುಲದೇವತೆ ಶ್ರೀ ಶ್ರೀನಿವಾಸ ಆಗಿದ್ದಾನೆ. ಮನೆ ಮನೆಗಳಲ್ಲಿ ಶ್ರೀ ಶ್ರೀನಿವಾಸ ದೇವರ ಹೆಸರಲ್ಲಿ ಒಂದು ತೈಲ ದೀಪ, ಒಂದು ತುಪ್ಪದ ನಂದಾದೀಪಗಳನ್ನಿಟ್ಟು, ವಿಶೇಷ ಪೂಜೆ ಅರ್ಚನೆ ಮಾಡುತ್ತಾರೆ. ಹೆಚ್ಚು ಮನೆಗಳಲ್ಲಿ ಈ ಆಚರಣೆ ಇದೆ. 


ಇನ್ನೊಂದು ವಿಶೇಷತೆ ಏನೆಂದರೆ, ಶ್ರೀ ಶ್ರೀನಿವಾಸನು ಪದ್ಮಾವತಿಯನ್ನು ಪಾಣಿಗ್ರಹಣ ಮಾಡಿದ್ದು ವೈಶಾಖ ಮಾಸದಲ್ಲಿ. ಮದುವೆಯಾದ ಹೊಸದರಲ್ಲಿ ಬೆಟ್ಟ ಏರಬಾರದು ಎಂಬ ಸಂಪ್ರದಾಯದಂತೆ ಬೆಟ್ಟವೇರಿ ತಿರುಮಲಕ್ಕೆ ಹೋಗದೆ ಅಗಸ್ತ್ಯ ಋಷಿಗಳ ಆಶ್ರಮದಲ್ಲಿ ತಂಗುತ್ತಾರೆ. ಆರು ತಿಂಗಳ ನಂತರ ತಿರುಮಲಕ್ಕೆ ಹೋಗುತ್ತಾರೆ.


ಪೊಡವಿಗೊಡೆಯನ ಆಗಮನಕ್ಕಾಗಿ ಕಾಯುತ್ತಿದ್ದ ದೇವಾನುದೇವತೆಗಳೆಲ್ಲ ಸಂಭ್ರಮದಿಂದ ಅವನನ್ನು ಸ್ವಾಗತಿಸಲು ಯೋಚಿಸಿದಾಗ ಬ್ರಹ್ಮದೇವನೇ ಖುದ್ದಾಗಿ ಬ್ರಹ್ಮೋತ್ಸವ ಮಾಡಿ ಸಾಕ್ಷಾತ್ ವಿಷ್ಣುವನ್ನು ಸ್ವಾಗತಿಸುತ್ತಾನೆ.


ಆ ಕುರುಹಾಗಿ ಇಂದಿಗೂ ತಿರುಮಲದಲ್ಲಿ ಬ್ರಹ್ಮೋತ್ಸವ ನಡೆಸುತ್ತಾರೆ. ವಿವಿಧ ವಾಹನಗಳಲ್ಲಿ ಶ್ರೀ ಶ್ರೀನಿವಾಸ ದೇವರನ್ನು ಶ್ರೀ ಶ್ರೀದೇವಿ ಭೂದೇವಿ ಸಮೇತ ಮೆರವಣಿಗೆ ಮಾಡುತ್ತ ವೈಭವೋಪೇತ ಆಚರಣೆ ಮಾಡುತ್ತಾರೆ. ಹನುಮಂತ ವಾಹನ, ಗರುಡ ವಾಹನ, ಸೂರ್ಯಪ್ರಭಾ, ಚಂದ್ರಪ್ರಭಾ ವಾಹನ, ಸರ್ವಭೂಪಾಲವಾಹನ, ಅಶ್ವವಾಹನ, ಪೆದ್ದ ಶೇಷವಾಹನ ಗಜವಾಹನಗಳು, ಸಿಂಹ ವಾಹನ, ಕಲ್ಪವೃಕ್ಷ ವಾಹನ ಅಲ್ಲದೇ ಉತ್ಸವ ಮೂರ್ತಿಗಳನ್ನು ಮುತ್ತಿನ ಮಂಟಪದಲ್ಲಿಟ್ಟು ಮೆರೆಸುತ್ತಾರೆ, ಕೊನೆಯ ದಿನ ಚಿನ್ನದ ರಥದಲ್ಲಿ ರಥೋತ್ಸವ ನಡೆಸುತ್ತಾರೆ.


ಈ ವೈಭವ ನೋಡಲು ಕಣ್ಣುಗಳೆರಡು ಸಾಲದು. ಅಂಥ ವೈಭವ ತಿರುಮಲದಲ್ಲಿರುತ್ತದೆ. ಭಕ್ತರು ಸ್ವಾಮಿಯ ವಿವಿಧ ಅಲಂಕಾರಗಳನ್ನು ಕಣ್ತುಂಬಿಕೊಂಡು ಕೃತಾರ್ಥರಾಗುತ್ತಾರೆ.


ಶ್ರೀ ವೆಂಕಟೇಶ್ವರ ದೇವಸ್ಥಾನದ ಬಗ್ಗೆ ಕೆಲವು ಮಾಹಿತಿ


ಭೂವೈಕುಂಠವೆಂದು ಕರೆಸಿಕೊಳ್ಳುವ ಶ್ರೀ ತಿರುಮಲೇಶನ ಸನ್ನಿಧಾನಕ್ಕೆ 1200 ವರ್ಷಗಳ ಇತಿಹಾಸವಿದೆ. ತಿರುಮಲ ದೇವಸ್ಥಾನವು ಸುಮಾರು ಕ್ರಿ.ಶ 830 ರಲ್ಲಿ ನಿರ್ಮಾಣವಾಯಿತು.


ಪಲ್ಲವ ಸಂಸ್ಥಾನದ ದೊರೆ ವಿಜಯದಂತಿ ವಿಕ್ರಮವರ್ಮ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಗುಡಿಯ ಎತ್ತರ 65.2 ಅಡಿಗಳು. ಅನಂತರದಲ್ಲಿ ಅನೇಕ ರಾಜರುಗಳು ಗೋಪುರಕ್ಕೆ ಚಿನ್ನದ ಲೇಪನ ಮಾಡಿಸಿದರು. ಸುಮಾರು 430 ವರ್ಷಗಳ ನಂತರ ಚಿನ್ನದ ಲೇಪನ ಕಾರ್ಯ ಪೂರ್ತಿಯಾಯಿತು. ವಿಜಯನಗರದ ಅರಸು ಕೃಷ್ಣದೇವರಾಯ ಕೂಡ ಈ ಕಾರ್ಯಕ್ಕೆ 30000 ಚಿನ್ನದ ವರಹಗಳನ್ನು ಅರ್ಪಿಸಿದ.


ತಿರುಮಲದ ಗರ್ಭಗುಡಿಯಲ್ಲಿ ಭಕ್ತರು ದರ್ಶಿಸುವುದು ತಿಮ್ಮಪ್ಪನ ಪ್ರಧಾನವಾದ ಒಂದು ವಿಗ್ರಹ ಮಾತ್ರ. ಆದರೆ ಗುಡಿಯ ಇತರ ಕಡೆಗಳಲ್ಲಿ ತಿಮ್ಮಪ್ಪನ 4 ವಿಗ್ರಹಗಳಿವೆ.


ಉತ್ಸವ ಮೂರ್ತಿಗಳು:

ಈಗ ಸ್ವಪ್ನ ಭೈರಂ ಮೂರ್ತಿ ಮತ್ತು ಭೋಗ ಶ್ರೀನಿವಾಸಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ.


ಕ್ರಿ ಶ.1330 ರಲ್ಲಿ ಮಲಯಪ್ಪ ಮೂರ್ತಿಯನ್ನೇ ಉತ್ಸವಮೂರ್ತಿಯಾಗಿ ಬಳಸಲಾಗುತ್ತಿತ್ತು. ಆ ಮೂರ್ತಿ ಎಷ್ಟು ಶಕ್ತಿಯುತವಾಗಿತ್ತೆಂದರೆ ಅದರ ಪ್ರತಿರೋಧ ಶಕ್ತಿಯನ್ನು ಮಾನವರು ತಡೆದುಕೊಳ್ಳಲಾಗಲಿಲ್ಲ. ಊಹಿಸಿಕೊಳ್ಳಲಾಗದ ಅನೇಕ ಘಟನೆಗಳು ನಡೆದವು. ಈಗ ಆ ಮೂರ್ತಿಗೆ ಕಾರ್ತೀಕಮಾಸದಲ್ಲಿ ವರ್ಷಕ್ಕೊಮ್ಮೆ ಮಾತ್ರ ಸೂರ್ಯೋದಯಕ್ಕೆ ಮುಂಚೆ ಪೂಜೆ ಸಲ್ಲಿಸಲಾಗುತ್ತದೆ.


ಕರ್ನಾಟಕದಲ್ಲಿ ದಸರಾ

ಕರ್ನಾಟಕದಲ್ಲಿ ದಸರೆಯ ವಿಶೇಷವೇ ಬೇರೆ. ಮಹಿಷಾಸುರನನ್ನು ವಧಿಸಿದ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯ ಮೇಲೆ ಕೂಡಿಸಿ ಮೆರೆಸುತ್ತಾರೆ. ಜಂಬೂ ಸವಾರಿ ಎಂದು ಕರೆಯುತ್ತಾರೆ. ಆನೆಯ ಮೇಲೆ 800 ಕೆಜಿಯ ಚಿನ್ನದ ಅಂಬಾರಿಯಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಕೂಡಿಸಿ ವಿಶೇಷ ವಾದ್ಯಗಳನ್ನು ನುಡಿಸುತ್ತಾ ಮೈಸೂರಿನ ರಾಜಬೀದಿಗಳಲ್ಲಿ ಮತ್ತು ಅನೇಕ ಕಡೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇದಕ್ಕಾಗಿ ಆನೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.


ಮನೆ ಮನೆಗಳಲ್ಲಿ ಅನೇಕ ವಿಧದ ಬೊಂಬೆಗಳನ್ನಿಟ್ಟು ಪೂಜಿಸಿ ವೈಭವದಿಂದ ಆಚರಣೆ ಮಾಡುತ್ತಾರೆ. ಪಾಂಡವರು ಅಜ್ಞಾತವಾಸ ಕಾಲದಲ್ಲಿ ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿಟ್ಟ ಕಾರಣ ಶಮೀ ವೃಕ್ಷವನ್ನು ಪೂಜಿಸಿ ಅಂದು ಶಮೀ ಪತ್ರಳನ್ನು ಎಲ್ಲರಿಗೂ ಕೊಟ್ಟು ಸಂಭ್ರಮಿಸುತ್ತಾರೆ.


- ರೇಖಾ ಮುತಾಲಿಕ್, ಬಾಗಲಕೋಟ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top