ಮಂಗಳೂರು: ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೋಜಿಸಿರುವುದರಿಂದ ಭರತನಾಟ್ಯದ ವಿವಿಧ ಬಾಣಿ (ಶೈಲಿ)ಗಳು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಿದೆ. ದೇಶದ ನಾನಾ ಭಾಗದಲ್ಲಿನ ಗುರುಗಳ ಭರತನಾಟ್ಯ ಶೈಲಿಯು ಒಂದೇ ವೇದಿಕೆಯಲ್ಲಿ ಪ್ರಸ್ತುತವಾಗುವ ಮೂಲಕ ನೃತ್ಯನಂದನವನದ ಅನಾವರಣಗೊಂಡಿತು ಎಂದು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು.
ನಗರದ ಕೊಟ್ಟಾರದ ಭರತಾಂಜಲಿಯ ಕಿಂಕಿಣಿ ತ್ರಿಂಶತ್ ಸಂಭ್ರಮದ ಹಿನ್ನೆಲೆಯಲ್ಲಿ ನಡೆದ ನೃತ್ಯ ರತ್ನಶೋಧದ 2025ಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸ್ತ್ರೀಯತೆ ಹಾಗೂ ಯುವಪ್ರತಿಭೆಗಳ ಸ್ಪರ್ಧಾತ್ಮಕ ಮತ್ತು ಪ್ರದರ್ಶನಾತ್ಮಕ ವಿಚಾರಗಳಲ್ಲಿ ಒಂದು ಪ್ರಮುಖ ಘಟನೆಯಾಗಿ ಹೊರಹೊಮ್ಮಿದೆ. ರಾಷ್ಟ್ರಮಟ್ಟದ ಸ್ಪರ್ಧೆಯು ಕಲಾವಿದರಿಗೆ ತಮ್ಮ ನೈಪುಣ್ಯವನ್ನು ಪ್ರಸ್ತುತ ಪಡಿಸಲು ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಪಾಡಿ ಮುಂದುವರಿಸಲು ಪ್ರೇರಣೆಯಾಗಿದೆ. ಈ ಸ್ಪರ್ಧೆಯು ರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಗಳು ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ನಿರ್ಮಿಸಿದೆ ಎಂದು ತೀರ್ಪುಗಾರರಾಗಿ ಆಗಮಿಸಿದ ಬೆಂಗಳೂರಿನ ನೃತ್ಯ ಗುರು ವಿದುಷಿ ರಾಧಿಕಾ ರಾಮಾನುಜಂ ಅಭಿಪ್ರಾಯ ಪಟ್ಟರು.
ದೇಶದ ವಿವಿಧ ರಾಜ್ಯಗಳಿಂದ ಬಂದ ಯುವ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಈ ವೇದಿಕೆ ಅತ್ಯುತ್ತಮ ಅವಕಾಶ. ಅನೇಕರು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸುತ್ತಾರೆ. ಈ ಪ್ರಶಸ್ತಿಯು ಭವಿಷ್ಯದಲ್ಲಿ ಅವರ ಸಾಧನೆಗೆ ಬಾಗಿಲು ತೆರೆದಂತಾಗಲಿದೆ. ಇದು ನೃತ್ಯ ಸಂಸ್ಥೆಗಳಿಗೂ, ಗುರುಗಳಿಗೂ ಗೌರವದ ಸಂಗತಿ. ಹಲವಾರು ವರ್ಷಗಳ ಬಳಿಕ ನಾಟ್ಯಕ್ಷೇತ್ರದಲ್ಲಿ ಇಂತಹ ಒಂದು ಶಿಸ್ತುಬದ್ಧ ಸ್ಪರ್ಧೆ ನಡೆದಿದೆ ಎಂದು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿತ್ಯಾನಂದ ರಾವ್ ಅಭಿಪ್ರಾಯಪಟ್ಟರು.
ಇಂತಹ ಸ್ಪರ್ಧೆಗಳು ಶಾಸ್ತ್ರೀಯ ನೃತ್ಯಶೈಲಿಯ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುತ್ತವೆ. ಯುವ ಪೀಳಿಗೆಗೆ ಈ ಕಲೆಯ ಮೌಲ್ಯವನ್ನು ಪರಿಚಯಿಸುತ್ತವೆ ಮತ್ತು ಸಮಾಜದ ಸಾಂಸ್ಕೃತಿಕ ಬಾಹುಳ್ಯವನ್ನು ಬಲಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಭರತಾಂಜಲಿಯ ನೃತ್ಯ ಗುರುಗಳಾದ ಗುರು ಶ್ರೀಧರ ಹೊಳ್ಳ ಹಾಗೂ ವಿದುಷಿ ಪ್ರತಿಮಾ ಶ್ರೀಧರ್ ಅಭಿನಂದನಾರ್ಹರು ಎಂದು ಹಿರಿಯ ನೃತ್ಯ ಗುರುಗಳಾದ ಉಡುಪಿಯ ಪ್ರತಿಭಾ ಸಾಮಗ ಹೇಳಿದರು.
ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆ ಒಂದು ಕಲೆಯ ಹಬ್ಬ. ಅದು ಕೇವಲ ಪ್ರಶಸ್ತಿಗೆ ಸೀಮಿತವಲ್ಲ. ಅದು ಭಾವನೆ, ಅಭ್ಯಾಸ, ಸಂಸ್ಕೃತಿ ಮತ್ತು ಶ್ರದ್ಧೆಯ ಸಂಯೋಜನೆ. ಇಲ್ಲಿ ಸಂಘಟಕರು, ಗುರುಗಳು ಮತ್ತು ಕಲಾವಿದರು ತಾವು ಹೊಂದಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ ಎಂದು ತೀರ್ಪುಗಾರರಾಗಿ ಭಾಗವಹಿಸಿದ್ದ ವಿದುಷಿ ರಾಜಶ್ರೀ ಉಳ್ಳಾಲ್ ಹೇಳಿದರು.
ವಿದುಷಿ ಲಕ್ಷ್ಮೀ ಗುರುರಾಜ್, ವಿದುಷಿ ಪ್ರಕ್ಷಿಲಾ ಜೈನ್, ಸಹ ಸಂಚಾಲಕಿ ವಿದುಷಿ ಮಧುರಾ ಕಾರಂತ್, ವಿದುಷಿ ಮಾನಸ ಕುಲಾಲ್, ವಿದುಷಿ ಅನ್ನಪೂರ್ಣ ರಿತೇಶ್ ಉಪಸ್ಥಿತರಿದ್ದರು. ಶ್ರೀಧರ ಹೊಳ್ಳ ಸ್ವಾಗತಿಸಿ ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ನೃತ್ಯ ಗುರುಗಳಾದ ವಿದುಷಿ ಶಾರದಾ ಮಣಿ ಶೇಖರ್, ವಿದ್ವಾನ್ ಚಂದ್ರಶೇಖರ ನಾವಡ ವಿದುಷಿ ರಾಧಿಕಾ ಶೆಟ್ಟಿ, ವಿದುಷಿ ಶ್ರೀಲತಾ ನಾಗರಾಜ್, ಮೊದಲಾದವರು ಉಪಸ್ಥಿತರಿದ್ದರು. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೃತ್ಯ ರತ್ನ ಶೋಧ 2025 ವಿಜೇತರು
ಹಿರಿಯ ವಿಭಾಗದಲ್ಲಿ ಪ್ರಥಮ ಉಡುಪಿ ಜಾನಕಿ ಡಿ.ವಿ. (ಗುರುಗಳು-ಡಾ. ಮಂಜರಿ ಚಂದ್ರ), ದ್ವಿತೀಯ ಮುಂಬಯಿಯ ಸಾಕ್ಷಿ ಪೈ (ಗುರುಗಳು-ಪವಿತ್ರಾ ಭಟ್ ಮತ್ತು ಅಪರ್ಣಾ ಶಾಸ್ತ್ರಿ ಭಟ್), ತೃತೀಯ ಕುಂದಾಪುರದ ಯುಕ್ತಿ ಉಡುಪ (ಗುರುಗಳು-ಪವಿತ್ರಾ ಅಶೋಕ್)
ಕಿರಿಯರ ವಿಭಾಗ
ಪ್ರಥಮ: ಬೆಂಗಳೂರಿನ ವಿಭಾ ರಾಘವೇಂದ್ರ (ಗುರುಗಳು-ಪಾರ್ಶ್ವನಾಥ ಉಪಾಧ್ಯೆ, ಶ್ರುತಿ ಗೋಪಾಲ್, ಆದಿತ್ಯ ಪಿ.ವಿ.), ದ್ವಿತೀಯ ಉಡುಪಿಯ ಸಾನ್ವಿ ರಾಜೇಶ್ ತೃತೀಯ ಉಡುಪಿಯ ಮಾನ್ಸಿ ಕೆ. ಕೋಟ್ಯಾನ್ (ಗುರುಗಳು-ಡಾ.ಮಂಜರಿ ಚಂದ್ರ).
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

