• ಟಿ. ದೇವಿದಾಸ್
ಕನಕಪುರದ ಬಂಡೆಯೆಂದೇ ಕರ್ನಾಟಕದಲ್ಲಿ ಜನಮಾನ್ಯರಾದ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅಂದರೆ ಡಿ.ಕೆ. ಶಿವಕುಮಾರ್ ಅವರು ಭಾರತೀಯ ಶ್ರೀಮಂತ ರಾಜಕಾರಣಿಗಳಲ್ಲಿ ಎರಡನೆಯವರು. ಭೂಗತ ಪಾತಕಿಯೆಂದೇ ಕುಖ್ಯಾತಿ ಪಡೆದ ಕೊತ್ವಾಲ ರಾಮಚಂದ್ರನ ಶಿಷ್ಯ, ರೌಡಿಸಂ ಹಿನ್ನೆಲೆ, ಭ್ರಷ್ಟಾತಿಭ್ರಷ್ಟ, ಕನಕಪುರದ ಬಂಡೆ, ಟ್ರಬಲ್ ಶೂಟರ್, ಮಹಾನಾಯಕ ಅಂತ ರಾಜಕೀಯ ವಲಯದಲ್ಲಿ ನಿತ್ಯ ಚಲಾವಣೆಯ ಮಾತಿದೆಯಾದರೂ ರಾಜ್ಯ ರಾಜಕೀಯದಲ್ಲಿ ಯಶಸ್ವೀ ಮಾಸ್ ಲೀಡರ್ ಆಗಿ ಕಾಂಗ್ರೆಸ್ಸಿನಲ್ಲಿ ನಾಕು ದಶಕಗಳಲ್ಲಿ ಈಗ್ಗೆ ಕಾಂಗ್ರೆಸ್ಸಿನ ಮುಂಚೂಣಿ ನಾಯಕರಿಗೇ ಕಣ್ಣು ಕೋರೈಸುವಂತೆ ಬೆಳೆದವರು ಡಿ.ಕೆ. ಶಿವಕುಮಾರ್ ಮಾತ್ರ. ಇವರ ಪಕ್ಷನಿಷ್ಠೆ ಮತ್ತು ಬದ್ಧತೆಯನ್ನು ಕಾಂಗ್ರೆಸ್ಸಿನ ಯಾವ ನಾಯಕರಲ್ಲೂ ಕಾಣಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಪ್ರಖರವಾಗಿದೆ. ನಿಚ್ಚಳವೂ ಆಗಿದೆ. ಸೋನಿಯಾ ಗಾಂಧಿ ಕುಟುಂಬ ಏನೇ ಹೇಳಿದರೂ ವೇದವಾಕ್ಯ ಎಂದು ತಲೆಮೇಲೆ ಹೊತ್ತು ನಡೆಸಿ ಕೊಟ್ಟವರು ಡಿ.ಕೆ ಶಿವಕುಮಾರ್ ಮಾತ್ರ. ತೀರಾ ಕಷ್ಟಕಾಲದ ಸಂದರ್ಭದಲ್ಲಿ ಪಕ್ಷದ ನೊಗಲನ್ನು ಹೆಗಲಿಗೆ ಹೊತ್ತು ಎದುರಾದ ಆಪತ್ತನ್ನು ಒಂಟಿ ಸಲಗದಂತೆ ಎದುರಿಸಿಯೇ ಪಕ್ಷವನ್ನು ಕಾಪಾಡಿದ್ದನ್ನು ಕರ್ನಾಟಕದ ಕಾಂಗ್ರೆಸ್ಸು ಮಾತ್ರವಲ್ಲ ಎಲ್ಲ ರಾಜಕೀಯ ಪಕ್ಷಗಳ ಹೈಕಮಾಂಡ್ ಪ್ರತ್ಯಕ್ಷವಾಗಿಯೇ ನೋಡಿದೆ. ಆಫ್ ಕೋರ್ಸ್ ಈ ವಿಚಾರದಲ್ಲಿ ಕನ್ನಡಿಗರಂತೂ ಪ್ರತ್ಯಕ್ಷ ಸಾಕ್ಷಿಯೇ ಆಗಿ ಬಿಟ್ಟಿದ್ದಾರೆ.
ಡಿಕೆಶಿಯವರಿಗೆ ಸರಿಸಮವಾದ ವ್ಯಕ್ತಿತ್ವವನ್ನು ಉಳ್ಳ ಒಬ್ಬೇ ಒಬ್ಬ ನಾಯಕ ಕರ್ನಾಟಕ ರಾಜಕೀಯದಲ್ಲೇ ಇಲ್ಲವೆಂದರೂ ಉತ್ಪ್ರೇಕ್ಷೆಯಾಗದು! ಅಷ್ಟೇ ಅಲ್ಲ, ಅವರ, ಪಕ್ಷನಿಷ್ಠೆ ಮತ್ತು ಬದ್ಧತೆಯನ್ನು ಯಾರೂ ಯಾವ ಸಂದರ್ಭದಲ್ಲೂ ಪ್ರಶ್ನಿಸುವಂತಿಲ್ಲ. ಅವರ ಪಕ್ಷನಿಷ್ಥೆ ಮತ್ತು ಬದ್ಧತೆಯೆಂಬುದು ಸಾರ್ವಕಾಲಿಕ ನೆಲೆಯಲ್ಲೂ ಪ್ರಶ್ನಾತೀತ! ಡಿಕೆಶಿಯವರು ಪ್ರಸಕ್ತ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಯೂ, ಬೆಂಗಳೂರು ಅಭಿವೃದ್ಧಿ, ಬೆಂಗಳೂರು ನಗರ ಯೋಜನೆ, ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯಾಗಿದ್ದಾರೆ. 2008 ರಿಂದ 2010 ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾಗಿದ್ದ ಅವರು, ಅವರು 2013 ರಿಂದ 2018 ರವರೆಗೆ ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಅವರು 2020ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2008ರಿಂದ ಅವರು ಕರ್ನಾಟಕ ವಿಧಾನಸಭೆಯಲ್ಲಿ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದ ಅವರು 1989 ರಿಂದ 2004 ರವರೆಗೆ ಸಾತನೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಡಿ.ಕೆ.ಶಿವಕುಮಾರ್ ಅವರು 1980ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ೧೯೮೩ ರಿಂದ ೮೫ರ ನಡುವೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ದುಡಿದ ಇವರು ೧೯೮೭ರಲ್ಲಿ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದರು. ಕಾರ್ಯಕರ್ತನ ನೆಲೆಯಲ್ಲಿ ದುಡಿಯುತ್ತಲೇ ಪಕ್ಷದ ಹಿರಿಯರ ಗಮನವನ್ನು ಸೆಳೆದರು. ಕಾಲಕ್ರಮೇಣ ಹಂತಹಂತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುತ್ತಲೇ ಬಂದರು. ಈ ಹಂತದಲ್ಲಿ ಅವರ ಶಕ್ತಿ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಿದವರು ಎಸ್ಸೆಂ ಕೃಷ್ಣ ಅವರು. ಕಾಲಗತಿಯಲ್ಲಿ ಡಿಕೆಶಿಯವರು ಪಕ್ಷದಲ್ಲಿ ಉನ್ನತ ಸ್ಥಾನವನ್ನು ಏರುತ್ತೇರುತ್ತ ಹೈಕಮಾಂಡಿಗೆ ಆಪ್ತರಾಗುತ್ತ ಬೆಳೆದರು. ಮುಖ್ಯವಾಗಿ, ಗಾಂಧಿ ಕುಟುಂಬಕ್ಕೆ ಆಪ್ತರಾದರು. ನಿಷ್ಠರಾದರು. ತಾನೂ ಬೆಳೆಯುತ್ತ ಪಕ್ಷವನ್ನು ಬೆಳೆಸಿದರು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೆಸರನ್ನು ಸಂಪಾದಿಸಿದರು. 1989ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಅವರು ತಮ್ಮ ಮೊದಲ ಚುನಾವಣೆಯಲ್ಲೇ ಗೆದ್ದರು. ಆಗ ಅವರಿಗೆ ಕೇವಲ ೨೭ ವರ್ಷ ವಯಸ್ಸು. 1994, 1999, 2004ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಮರುಚುನಾವಣೆಯಲ್ಲಿ ಗೆದ್ದರು. ಆನಂತರ 2008, 2013, 2018 ಮತ್ತು 2023ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು.
2002ರಲ್ಲಿ ಶ್ರೀ ವಿಲಾಸರಾವ್ ದೇಶಮುಖ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಹೊಲಸು ಅಧಿಕಾರ ರಾಜಕೀಯದ ಓಟದಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುವ ಅನಿವಾರ್ಯತೆ ಅವರ ಪಕ್ಷಕ್ಕೆ ಬಂದಿತ್ತು. ಆಗ ವಿಲಾಸರಾವ್ ದೇಶಮುಖ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದವರು ಡಿಕೆಶಿಯವರು. ಮತದಾನ ದಿನಾಂಕದವರೆಗೂ ಅಂದರೆ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ರೆಸಾರ್ಟಿನಲ್ಲಿ ಪಕ್ಷದ ಮಹಾರಾಷ್ಟ್ರದ ಶಾಸಕರಿಗೆ ಆತಿಥ್ಯದ ಹೊಣೆಗಾರಿಕೆ ವಹಿಸಿದ್ದರು. ಇದೇನೂ ಸಾಮಾನ್ಯವಾದ ಕೆಲಸವಾಗಿರಲಿಲ್ಲ. ಮಹಾರಾಷ್ಟ್ರ ಸರ್ಕಾರವನ್ನು ಉಳಿಸುವ ಬಹುಮುಖ್ಯ ಹೊಣೆಗಾರಿಕೆಯಾಗಿತ್ತು. ಇನ್ನೊಮ್ಮೆ, 2017ರಲ್ಲಿ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ ಅವರು ನಲವತ್ತೆರಡು ಗುಜರಾತ್ ಕಾಂಗ್ರೆಸ್ ಶಾಸಕರು ಮತ್ತೊಂದು ರಾಜಕೀಯ ಪಕ್ಷಕ್ಕೆ ಹೋಗುವುದನ್ನು (ಅಂದರೆ ರಾಜಕೀಯದಲ್ಲಿ ಕುದುರೆ ವ್ಯಾಪಾರ) ತಪ್ಪಿಸಲು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟಿಗೆ ಸ್ಥಳಾಂತರಿಸಲು ತಮ್ಮ ಪಕ್ಷದ ನಾಯಕತ್ವಕ್ಕೆ ಡಿಕೆಶಿ ಸಹಾಯ ಮಾಡಿದ್ದರು. ಆ ಮೂಲಕ ಇದು ರಾಜ್ಯಸಭೆಯ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವಿಗೆ ನೇರ ಸಹಾಯವಾಯಿತು. ಕರ್ನಾಟಕದ 2018ರ ಚುನಾವಣೆಯ ಅನಂತರ ಕಾಂಗ್ರೆಸ್ ಮತ್ತು ಜೆಡಿಎಸ್ (ಜಾತ್ಯತೀತ) ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಲು ಬಹುದೊಡ್ಡದಾಗಿ ಶ್ರಮವಹಿಸಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ 136 ಎಂಎಲ್ಲೆಗಳ ಗೆಲುವಿನ ಬಲದೊಂದಿಗೆ ಬಹುಮತ ಪಡೆದು ಪಕ್ಷ ಸರ್ಕಾರ ರಚಿಸುವಲ್ಲಿ ಡಿಕೆಶಿಯವರ ಶ್ರಮವೇ ಬಹುದೊಡ್ಡಾಗಿತ್ತು ಎಂಬುದರಲ್ಲಿ ಸಂದೇಹವೇನಿಲ್ಲ. ಅನ್ಯಾನ್ಯ ಬಗೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ಸಿನ ರಾಜಕೀಯ ವಲಯದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಆಪ್ತರಾದವರೂ ಹಲವರಿದ್ದಾರೆ. ಆ ಹಲವರಲ್ಲಿ ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ ಎಂಬುದು ಪಬ್ಲಿಕ್ ಸೀಕ್ರೆಟ್ಟು. ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಹಲವು ಆಯಾಮಗಳಲ್ಲಿ ಈ ಆಪ್ತತೆ ರಾಜ್ಯ ಕಾಂಗ್ರೆಸ್ಸಿನ ಬಲವರ್ಧನೆಗೂ ಮತ್ತು ಪಕ್ಷ ಅಧಿಕಾರ ಹಿಡಿಯುವಲ್ಲಿ ಪೂರಕವಾಗಿಯೂ ಪ್ರೇರಕವಾಗಿಯೂ ಬೆಂಬಲವಾಗಿಯೂ ಪರಿಣಾವನ್ನು ನೀಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆಯಾದರೂ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಸ್ತಿತ್ವ ಗಟ್ಟಿಯಾಗಿದೆ. ಇದಕ್ಕೆ ರಾಜಕೀಯವಾಗಿ ಬೇರೆ ಬೇರೆ ಕಾರಣಗಳಿದ್ದರೂ ಡಿಕೆಶಿಯವರ ಸಾರಥ್ಯವನ್ನು ಸಾಮರ್ಥ್ಯವನ್ನು ಕಾರಣವಾಗಿ ಯಾರೂ ಅಲ್ಲಗಳೆಯುವಂತಿಲ್ಲ.
ರಾಜ್ಯ ಕಾಂಗ್ರೆಸ್ಸಲ್ಲಿ ಡಿಕೆಶಿಯವರದ್ದು ವರ್ಣಮಯ ವ್ಯಕ್ತಿತ್ವ ಅಂತ ಅನಿಸುವುದು ಸಮಯ, ಸಂದರ್ಭ, ಸನ್ನಿವೇಶ, ವ್ಯಕ್ತಿಗೆ ಅನುಗುಣವಾಗಿ ಅವರಾಡುವ ಮಾತು, ವಿಭಿನ್ನ ಅಭಿವ್ಯಕ್ತಿ, ವೇಷಭೂಷಣ, ಆಂಗಿಕ ಹಾವಭಾವ, ಸ್ನೇಹಪರತೆ, ಹೊಂದಿಕೊಳ್ಳುವ ಗುಣಸ್ವಭಾವ, ರಾಜಕೀಯವನ್ನು ಬಿಟ್ಟು ಅವರು ವೈಯಕ್ತಿಕ ಬದುಕಲ್ಲಿ ಘನತೆಯಿಂದ ಉಳಿಸಿಕೊಂಡು ಬಂದ ಸಾಂಪ್ರದಾಯಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ! ತಮ್ಮ ಮಕ್ಕಳನ್ನು ಬೆಳೆಸಿದ ರೀತಿಯಿಂದ! ದಾರಿ ಯಾವುದೇ ಆದರೂ ಅಂದುಕೊಂಡಿದ್ದನ್ನು ಸಾಧಿಸುವ ಮತ್ತು ಗುರಿ ಮುಟ್ಟುವ ಪರಿಯಿಂದ! ಇವೆಲ್ಲವೂ ಅವರನ್ನೊಬ್ಬ ಕೇವಲ ರಾಜಕಾರಣಿ ಎನ್ನುವಂತೆ ಮಾತ್ರ ಬಿಂಬಿಸಲಾರದು. ಗೆಲ್ಲುವ ಕುದುರೆಯಾಗಿ ಕಾಣುವಂತೆ ಪ್ರತಿ ಚುನಾವಣೆಗೆ ಅವರು ಸಿದ್ಧರಾಗುವ ಮತ್ತು ಎದುರಿಸುವ ಪರಿಯೇ ರೋಚಕವೆನಿಸುತ್ತದೆ. ಚುನಾವಣೆಯನ್ನು ಗೆಲ್ಲುವ ಲೆಕ್ಕಾಚಾರದಲ್ಲಿ ಅವರಿಗೆ ಎಷ್ಟೋ ಸಂದರ್ಭಗಳಲ್ಲಿ ನಿರೀಕ್ಷಿತ ಗೆಲುವನ್ನು ತಂದುಕೊಟ್ಟಿದೆ. ನಿಶ್ಚಿತವೂ ಆಗಿಬಿಟ್ಟಿದೆ. ತಾನೂ ಗೆಲ್ಲುತ್ತ ಪಕ್ಷವನ್ನೂ ಗೆಲ್ಲಿಸುವಲ್ಲಿ ಅವರದ್ದು ಮಹತ್ವದ ಪಾತ್ರವೆಂದರೆ ಉಳಿದ ಕಾಂಗ್ರೆಸ್ ನೇತಾರರು ಒಪ್ಪದಿರಲಾರರು. ಹಾಗಂತ, ಭ್ರಷ್ಟಾಚಾರ, ಸೇಡು, ದ್ವೇಷ, ಸಮಯ ಸಾಧಕತನ, ಧಾರ್ಷ್ಟ್ಯದ ನಿಲುವುಗಳು, ಗೆಲುವಿಗಾಗಿ ತುಳಿವ ಹಾದಿ- ಇತ್ಯಾದಿಯೆಲ್ಲವೂ ಡಿಕೆಶಿಯವರ ಬಗ್ಗೆ ಜನರಲ್ಲಿ ನೆಗೆಟಿವ್ ಆದ ಇಂಪ್ರೆಷನ್ ಅನ್ನು ಶಾಶ್ವತವಾದ ನೆಲೆಯಲ್ಲಿ ಹುಟ್ಟಿಸಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅದು ಅಪ್ಪಟ ಸತ್ಯ! ಆದರೆ, ನಿಷ್ಪಾಪಿಯಾಗಿ ಯಾರೂ ರಾಜಕೀಯವನ್ನು ಮಾಡಲಾರರು ಎಂಬುದನ್ನು ಯಾರೂ ಮರೆಯಬಾರದು.
ಪಕ್ಷದ ಸಾರಥ್ಯವನ್ನು ವಹಿಸಿಕೊಂಡು ಪಕ್ಷ ಸಂಘಟನೆಯನ್ನೂ ಮಾಡಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುತಿರುಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬಹುದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಡಿಕೆಶಿಯವರ ಅವ್ಯಾಹತ ಪ್ರಯತ್ನವಿದೆ! ಆದ್ದರಿಂದ ಡಿಕೆಶಿಯವರೇ ಮುಖ್ಯಮಂತ್ರಿಯಾಗಬೇಕೆಂಬ ಸದಾಗ್ರಹ ಮತ್ತು ಒಳಮುನಿಸು ಪ್ರಮಾಣ ವಚನ ಸ್ವೀಕಾರದ ಸಂದರ್ಭದವರೆಗೂ ಪಕ್ಷದ ವಲಯದಲ್ಲಿತ್ತು. ಆಫ್ ಕೋರ್ಸ್ ಈಗದು ತಾರಕದಲ್ಲಿದೆ. ಸುದೀರ್ಘ ಇತಿಹಾಸವುಳ್ಳ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಸುಮಾರು ಹದಿನಾರು ವರ್ಷಗಳ ಹಿಂದೆ ಸಿದ್ಧರಾಮಯ್ಯನವರು ಅಹಿಂದ ಅಜೆಂಡಾ ಸಹಿತ ಕಾಲಿಟ್ಟರು. ಪ್ರಾಯಃ ಅವರು ಕಾಲಿಟ್ಟ ಗಳಿಗೆ ಚೆನ್ನಾಗಿರಬೇಕೇನೋ! ರಾಜ್ಯದಲ್ಲಿ ಎರಡು ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಎರಡು ಸಲವೂ ಅವರೇ ಮುಖ್ಯಮಂತ್ರಿಯಾದರು. ಇದನ್ನು ಕಾಂಗ್ರೆಸ್ಸಿನ ಯಾವ ನಾಯಕನಿಗೂ ತಡೆಯಲಾಗಲಿಲ್ಲವೋ ಅಥವಾ ಸಿದ್ಧರಾಮಯ್ಯನವರಿಗೆ ಇರುವ ವ್ಯಕ್ತಿಗತವಾದ ವರ್ಚಸ್ಸು ಬೇರೆ ಯಾವ ನಾಯಕನಿಗೂ ಇಲ್ಲವೋ ಅಥವಾ ಹೈಕಮಾಂಡ್ ಒಲವೋ ಅಥವಾ ಸಿದ್ಧರಾಮಯ್ಯನವರ ಚಾಣಾಕ್ಷ ರಾಜಕೀಯ ನಡೆಯೋ ಅಥವಾ ಡಿಕೆಶಿಯವರಿಗಿದ್ದ ನೆಗೆಟಿವ್ ಆದ ವರ್ಚಸ್ಸೋ, ಅಥವಾ ಸಿದ್ಧರಾಮಯ್ಯನವರ ಅದೃಷ್ಟವೋ, ಜಾತಿ ಬೆಂಬಲವೋ, ಏನೋ ಏನೇನೋ ಅಂತೂ ಅದೃಷ್ಟ ಅವರಿಗೊಲಿದು ಮುಖ್ಯಮಂತ್ರಿ ಗಾದಿಯ ಮೇಲೆ ಕೂರಿಸಿದೆ.
ಐದು ವರ್ಷಗಳ ಅವಧಿಗೆ ತಾನೇ ಪೂರ್ಣಾವಧಿ ಮುಖ್ಯಮಂತ್ರಿಯೆಂದು ಸಿದ್ಧರಾಮಯ್ಯನವರು ಸಿಕ್ಕಿದ ಅವಕಾಶ ಮತ್ತು ಸಂದರ್ಭಗಳಲ್ಲಿ ನಿತ್ಯವೂ ಎಂಬಂತೆ ಹೇಳುತ್ತಲೇ ಬಂದಿದ್ದಾರೆ. ಮಂತ್ರದಂತೆ ಪಠಿಸುತ್ತಲೇ ಇದ್ದಾರೆ. ತನ್ನ ಬೆಂಬಲಿಗರ ಮೂಲಕ ಹೇಳಿಸಿಕೊಂಡೂ ಬರುತ್ತಿದ್ದಾರೆಂಬ ಗುಸುಗುಸು, ಗುಮಾನಿ ಲಾಗಾಯ್ತಿನಿಂದಲೂ, ಈಗದು ಬಹಿರಂಗವಾಗಿವಾಗಿ ರಾಜ್ಯ ಕಾಂಗ್ರೆಸ್ಸಲ್ಲಿದೆ. ಅದಕ್ಕೆ ಪೂರಕವೋ ಎಂಬಂತೆ ಆಗಾಗ ಅವರ ಬಣದಲ್ಲಿ ಕಾಣಿಸಿಕೊಳ್ಳುವ ಬೆಂಬಲಿಗ ಶಾಸಕರು ತಾವು ಡಿಸಿಎಂ ಹುದ್ದೆಯ ಆಕಾಂಕ್ಷಿಯೆಂದೂ, ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯೆಂದೂ ಹೇಳಿಕೆಗಳನ್ನು ಕೊಡುವುದನ್ನು ಕಂಡಿದ್ದೇವೆ. ಕೆಲವರಂತೂ ದಿಲ್ಲಿಯಲ್ಲಿ ಕಸರತ್ತು ಮಾಡುತ್ತಿರುವ ವದಂತಿಯಂತೂ ಏನೋ ಬಹುದೊಡ್ದ ರಾಷ್ಟ್ರೀಯ ವಿದ್ಯಮಾನ ಅಥವಾ ಬೆಳವಣಿಗೆಯೆಂಬಂತೆ ಮಾಧ್ಯಮದಲ್ಲಿ ಬ್ರೇಕಿಂಗ್ ನ್ಯೂಸ್ ಗಳಾಗಿ ಆವಾಗಾವಾಗ ಬಂದಿತ್ತು. ದೆಹಲಿಯ ಭೇಟಿ ಮತ್ತು ಬೇಟೆ ಈಗಲೂ ನಡೆಯುತ್ತಲೇ ಇದೆ.
ಸ್ವಭಾವತಃ ಸಿರಿವಂತಿಕೆಯ ಅಹಂಭಾವ ತುಂಬಿದೆಯೆನಿಸಿದರೂ ಬದುಕಿನ ವಿಭಿನ್ನ ಆಕೃತಿಗಳಲ್ಲಿ ಭಾವುಕತೆಯನ್ನು ವಾಸ್ತವದ ಮೂಸೆಯಲ್ಲಿಯೇ ನೋಡುವ ಡಿಕೆಶಿಯವರ ವೈಯಕ್ತಿಕವಾದ ಬದುಕು ಮಾತ್ರ ಸಂಪೂರ್ಣವಾಗಿ ಭಾವಪ್ರಧಾನವಾದುದು ಎಂದೇ ನಾನು ಭಾವಿಸಿದ್ದೇನೆ. ಈ ಭಾವುಕತೆಯೇ ಅವರ ಮಾತುಗಳಲ್ಲಿ ಕಾಣುತ್ತದೆ. ಮುಖದಲ್ಲಿ ಯಾವುದೋ ರೋಷಾವೇಶದಿಂದ ಉಚಿತ, ನಿಶ್ಚಿತ, ಖಚಿತ ಎನ್ನುವಾಗಲೂ, ನುಡಿದಂತೆ ನಡೆದಿದ್ದೇವೆ, ನುಡಿದಂತೆ ನಡೆಯುತ್ತೇವೆ ಎನ್ನುವಾಗಲೂ, ಅಥವಾ ಸಹಜವಾದ ನೆಲೆಯಲ್ಲಿ ಮಾತನಾಡುವಾಗಲೂ ತಾನು ಭಾವಪ್ರಧಾನ ಮನುಷ್ಯ ಎಂಬುದನ್ನು ತನ್ನ ಮಾತುಗಳಿಂದಲೇ ಸೃಷ್ಟಿಸಿಕೊಳ್ಳುವ ಮತ್ತು ಸಾಬೀತುಮಾಡಿಕೊಳ್ಳುವ ಶಕ್ತಿ ಅವರಲ್ಲಿದೆ ಎಂಬುದಂತೂ ಸುಸ್ಪಷ್ಟ. ಸಾಂದರ್ಭಿಕವಾಗಿ ಅವರು ಭಾವೋದ್ವೇಗದಿಂದ ಮಾತನಾಡುತ್ತಾರೆ. ಎಂಥಾ ಪರಿಸ್ಥಿತಿಯನ್ನೂ ತೀರಾ ಎಂಬಷ್ಟು ಹಗುರವಾಗೇ ಸ್ವೀಕರಿಸುವ ಡಿಕೆಶಿಯವರ ಎಷ್ಟೋ ರಾಜಕೀಯದ ವರಸೆಗಳು, ಪಟ್ಟುಗಳು, ಅಭಿವ್ಯಕ್ತಿಗಳು ಕಾಂಗ್ರೆಸ್ಸಿನ ನಿಷ್ಠೆ ಮತ್ತು ಬದ್ಧತೆಯನ್ನು ಪ್ರಖರವಾಗೇ ಅಭಿವ್ಯಕ್ತಿಸಿದೆ. ಹಂಚಿ ತಿನ್ನಬೇಕೆನ್ನುವ ಸಮಭಾವದಲ್ಲೂ ತಾನು ಹೆಚ್ಚು ತಿನ್ನಬೇಕೆನ್ನುವ ಸದ್ಯದ ವ್ಯವಸ್ಥೆಯಲ್ಲೇ ಇದ್ದು ಅದನ್ನೇ ನಂಬಿರುವ, ಅಥವಾ ಬೃಹತ್ ಯೋಜನೆಗಳಲ್ಲಿ ಸರ್ವೋದ್ಧಾರದ ಕನಸು ಕಾಣುವ ಎಲ್ಲ ರಾಜಕೀಯ ಪಕ್ಷಗಳೂ ನೈತಿಕವಾಗಿ ಟೊಳ್ಳಾಗಿವೆ ಎಂಬುದನ್ನು ಡಿಕೆಶಿಯವರು ಒಪ್ಪುವಾಗಲೂ ಕಾಂಗ್ರೆಸ್ಸನ್ನು ಹೊರತುಪಡಿಸಿಯೇ ಒಪ್ಪುತ್ತಾರೆ ಎಂದು ಭಾವಿಸುವುದಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ. ಅಂಥದ್ದರಲ್ಲಿ ಅಧಿಕಾರ ಪ್ರಾಪ್ತಿಗಾಗಿ ಜನರಿಗೆ ಫ್ರೀ ಕೊಡುವ ಯೋಜನೆಗಳನ್ನು ಕಾಂಗ್ರೆಸ್ಸಿನ ಸಿದ್ಧಾಂತದ ಮೂಲಕವೇ ಸಮರ್ಥಿಸಿಕೊಳ್ಳುವಾಗಲೂ ಕಾಂಗ್ರೆಸ್ಸಿನ ಜಾಯಮಾನವೇ ಇದು ಎಂಬಂತೆ ಅವರು ಮಾತಾಡುತ್ತಾರೆ ಎಂದು ಭಾವಿಸುವುದಕ್ಕೂ ಸಾಧ್ಯವಿಲ್ಲ. ಹಾಗಂತ ಹಾಗೆಲ್ಲ ಮಾತಾಡುವಾಗ ಅವರಲ್ಲಿ ವೈಚಾರಿಕತೆ ಇಲ್ಲವೆನ್ನಲು ಸಾಧ್ಯವಿಲ್ಲ. ಆದರೆ ಅಂಥ ಮಾತುಗಳಲ್ಲಿ ಅಂಥಾ ಪರಿಯ ಉನ್ನತ ವಿಚಾರಗಳೇನೂ ಇರುವುದಿಲ್ಲ. ವೈಚಾರಿಕತೆಯೂ ಇರುವುದಿಲ್ಲ. ಹಾಗಂತ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಇಂಥ ತಂತ್ರಗಳನ್ನು ಹೀಗೂ ಹೆಣೆಯಬಹುದು ಎಂಬುದು ಗೊತ್ತಾದದ್ದು ಇದೇ ಮೊದಲೇನಲ್ಲ. ದೇವೀಲಾಲರ ಕಾಲದಿಂದಲೂ ಇದು ನಡೆಯುತ್ತ ಬಂದಿದೆ. ಆದರೆ, ಅತ್ಯಾಸೆಗೆ ಬಿದ್ದು ಮತದಾನ ಮಾಡಿದವರು ಮಾತ್ರವಲ್ಲ, ಜನಸಾಮಾನ್ಯರು ಈಗ ಕುದಿಯತೊಡಗಿದ್ದಾರೆ. ಹಾಗಂತ ಇದನ್ನೆಲ್ಲ ತೀರಾ ತಲೆಗೆ ತುಂಬಿಕೊಳ್ಳುವ ಜಾಯಮಾನದವರಂತೂ ಡಿಕೆಶಿ ಅಲ್ಲವೇ ಅಲ್ಲ! ಯಾಕೆಂದರೆ, ಸರ್ಕಾರವೊಂದು function ಆಗುವ ಒಟ್ಟೂ ವೇಗದಲ್ಲಿ ಮಧ್ಯೆ ಹರ್ಡಲ್ಸ್ ಗಳನ್ನು ಇಟ್ಟ ಹಾಗೆ ಗ್ಯಾರಂಟಿಗಳು ಅಭಿವೃದ್ಧಿಗೆ ಪೆಟ್ಟು ಕೊಡುತ್ತದೆಂಬ ಅಗ್ನಿಯಂಥ ಎಚ್ಚರದ ಪ್ರಜ್ಞೆ ಡಿಕೆಶಿಯವರಿಗೆ ಇಲ್ಲವೆನ್ನುತ್ತೀರಾ? ನೋ ಚಾನ್ಸ್!
ಪಕ್ಷಕ್ಕಾಗಿ ಎಂಥ ರಿಸ್ಕುಗಳನ್ನೂ ಹೆಗಲ ಮೇಲೆ ಹೊತ್ತು, ಸವಾಲುಗಳನ್ನೂ ಎದುರಿಸಿ ಪಕ್ಷವನ್ನು ಕಷ್ಟಗಳಿಂದ ಪಾರುಮಾಡಿದ ಡಿಕೆಶಿಯವರು ಮುಖ್ಯಮಂತ್ರಿಯಾಗಲೇಬೇಕೆಂಬ ಒತ್ತಾಸೆ ಮತ್ತು ಹಠದಲ್ಲಿ ಮುನ್ನುಗ್ಗುತ್ತಿದ್ದಾರೆ. ಅದಕ್ಕೆ ಬೇಕಾಗಿ ತಂತ್ರಗಳನ್ನು ಪಟ್ಟುಗಳನ್ನು ತೆರೆಯ ಹಿಂದೂ ಮುಂದೂ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಇದು ತಪ್ಪೇನಲ್ಲ. ಸವೆಸಿದ್ದು ಸಿದ್ಧಿಯಾಗಬೇಕೆನ್ನುವ ಮಹತ್ತರ ವಾಂಛೆ ಅವರದ್ದು. ಅಧಿಕಾರ ರಾಜಕೀಯದ ಮೂಸೆಯಲ್ಲಿ ಅವಲೋಕಿಸಿದರೆ ನಿಜವಾಗಿಯೂ ಅವರು ಪಕ್ಷಕ್ಕಾಗಿ ಸವೆಸಿದ್ದು ಸಿದ್ಧಿಯಾಗಬೇಕಿದೆ ಅಂತ ಅನಿಸದೇ ಇರಲಾರದು. ಪ್ರಯತ್ನ ವಿಫಲವಾಗಬಹುದು; ಪ್ರಾರ್ಥನೆ (ಪ್ರಯತ್ನ ವಿಫಲವಾಗಬಹುದು; ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ಅವರದೇ ಮಾತು) ಯೂ ತಾತ್ಕಾಲಿಕವಾಗಿ ವಿಫಲ ಅಂತ ಅನ್ನಿಸಬಹುದು. ಆದರೆ, ಪಕ್ಷದ ಸಿದ್ಧಾಂತವನ್ನು ಡಿಕೆಶಿಯವರು ವೈಯಕ್ತಿಕ ಬದುಕಿಗೆ ತೀರಾ ಎಂಬಷ್ಟು ಅಳವಡಿಸಿಕೊಂಡವರಲ್ಲ. ದೇವರು, ದೈವ, ಭಕ್ತಿ, ನಂಬಿಕೆ, ಪ್ರಾರ್ಥನೆ, ಪವಿತ್ರ ನದಿ ಸಂಗಮದಲ್ಲಿ ಸ್ನಾನ, ಮಳೆಗಾಗಿ ಪ್ರಾರ್ಥನೆ, ಸಾಧು ಸಂತರ ಬಗ್ಗೆ ಡಿಕೆಶಿಯವರಲ್ಲಿ ಅಪಾರ ಪ್ರೀತಿ ಭಯ ಭಕ್ತಿಯಿದೆ. ನಿಜ ಮನಸಿನ ಆದರದ ಗೌರವವಿದೆ. ಒಳಮನಸಿನಲ್ಲಿ ಏನೇ ಇದ್ದರೂ ಹೊರ ಜಗತ್ತಿಗೆ ಇವೆಲ್ಲವೂ ಅನೇಕ ಸಂದರ್ಭಗಳಲ್ಲಿ ಜನತೆಗೆ ಪ್ರತ್ಯಕ್ಷವಾಗಿ ಕಂಡಿದೆ. ಡಿಕೆಶಿಯವರು ಇವೆಲ್ಲವನ್ನೂ ಗೌರವಿಸುತ್ತಲೇ ಪಕ್ಷವನ್ನು ವೈಯಕ್ತಿಕ ಬದುಕಿಗೆ ಹೊರತಾಗಿಯಲ್ಲದೆ ಜತನವಾಗಿ ಉಳಿಸಿಕೊಂಡು, ತನ್ನ ರಾಜಕೀಯ ಅಸ್ತಿತ್ವವನ್ನೂ, ಪಕ್ಷವನ್ನೂ ಬೆಳೆಸುತ್ತ ಬಂದವರು ಎಂಬುದನ್ನು ವಿವರಿಸಬೇಕಿಲ್ಲ. ಇನ್ನಷ್ಟು ವಿಶ್ಲೇಷಿಸಬೇಕಿಲ್ಲ. ಜಾತಿಯನ್ನು ಹೊರತುಪಡಿಸಿ ಹೇಳುವುದಾದರೆ, ನಿಜಾರ್ಥದಲ್ಲಿ ಪಕ್ಷಕ್ಕಾಗಿ ಈವರೆಗೆ ಸವೆಸಿದ್ದಷ್ಟೂ ಅವರಿಗೆ ಸಿದ್ಧಿಯಾಗದೇ ಇದ್ದುದು ಅವರ ಪಾಲಿಗೆ ದುರದೃಷ್ಟವೇ ಸರಿ!
ಅಹುದು, ಎಲ್ಲಕ್ಕಿಂತ ಮುಖ್ಯವಾಗಿ ಡಿಕೆಶಿ ಕೇವಲ ಮಾತಿನಲ್ಲಿ ಮಾತ್ರವಲ್ಲ, ಆಂತರ್ಯದಲ್ಲಿ ಬದಲಾಗಬೇಕು. ಒಳಮನಸಿನಿಂದಲೂ ಬದಲಾಗಬೇಕಿದೆ. ಮಾತು ವಿನಯದಿಂದಲೂ, ಅಭಿವ್ಯಕ್ತಿ ವಿಧೇಯತೆಯಿಂದಲೂ, ದೃಷ್ಟಿಕೋನ ಮತ್ತು ವರ್ತನೆ ನಿಷ್ಕಲ್ಮಶದಿಂದಲೂ ನಿಜದ ಮನಸ್ಸಿನಲ್ಲಿ ಪ್ರತಿಯೊಬ್ಬರ ಬಗ್ಗೆಯೂ ಪ್ರತಿಯೊಂದರ ಬಗ್ಗೆಯೂ ಗೌರವ ಭಾವವನ್ನು ಇದ್ದುದಕ್ಕಿಂತ ಮತ್ತಷ್ಟು ಹೆಚ್ಚೆಚ್ಚು ಭರಿಸಿಕೊಳ್ಳಬೇಕಿದೆ. ಗದ್ದುಗೆಗಾಗಿ ಮಾತ್ರವಲ್ಲ, ನಿತ್ಯ ಬದುಕಿನ ಎಲ್ಲ ರಾಜಕೀಯ ಸಂದರ್ಭದಲ್ಲೂ ಡಿಕೆಶಿಯವರು ಇದನ್ನೆಲ್ಲ ಆರೋಪಿಸಿಕೊಳ್ಳಬೇಕಿದೆ. ಆವಾಹಿಸಿಕೊಳ್ಳಬೇಕಿದೆ. ತನ್ನದಾಗಿಸಿಕೊಳ್ಳಬೇಕಿದೆ. ಎಲ್ಲ ತರದ ರಾಜಕೀಯವಾದ ಸೇಡು, ಒಳಮಸಲತ್ತು, ದ್ವೇಷ, ನಟ್ಟು ಬೋಲ್ಟು ಟೈಟು, ಟ್ರೀಟ್ ಮೆಂಟ್, ದೊಡ್ಡಸ್ಥಿಕೆ, ದರ್ಪ, ದುರಹಂಕಾರದ ಅಭಿವ್ಯಕ್ತಿ- ಇಂಥ ನಿತ್ಯದ ರಾಜಕೀಯ ವರಸೆಗಳು ನಿಜವಾಗಿಯೂ ಡಿಕೆಶಿಯವರಲ್ಲಿ ಕೊನೆಯಾಗಬೇಕು. ಜನಮಾನಸದಲ್ಲಿ ಶಾಶ್ವತವಾದ ಗುಡ್ ಇಂಪ್ರೆಷನ್ ಹುಟ್ಟಿಕೊಳ್ಳುವಂತೆ ಸಮಾಜಮುಖಿ ಕಾರ್ಯಗಳು ಒಬ್ಬ ನಿಜ ರಾಜಕಾರಣಿಯ ನೆಲೆಯಲ್ಲಿ ಅವರಿಂದ ಆಗಬೇಕಿದೆ. ಅಧಿಕಾರ ಬರುವುದು ಸೇವೆಗಾಗಿ; ಸಂಪತ್ತು ಬರುವುದು ದಾನಕ್ಕಾಗಿ ಎಂಬ ವಿನೀತದ ವಿಧೇಯದ ಮಾತನ್ನು ಈವರೆಗಿನ ಡಿಕೆಶಿಯವರಲ್ಲಿ ಸಂಪೂರ್ಣವಾಗಿ ಕಾಣಲಿಲ್ಲ ಎಂಬ ಮಾತು ಸಾರ್ವಜನಿಕ ನೆಲೆಯಲ್ಲಿದೆ. ಇದು ಸುಳ್ಳಾಗಬೇಕು. ಇಲ್ಲಿಂದ ಮುಂದೆ ಜನತೆ ಅದನ್ನೇ ಕಾಣುವಂತೆ ಅವರು ಬದಲಾಗಬೇಕು. ವೈಚಾರಿಕವಾಗಿ ಮಾನಸಿಕವಾಗಿ ಅವರಲ್ಲಿ ಬದಲಾವಣೆಯಾಗಬೇಕು. ರಾಜಕೀಯವನ್ನು ಬಿಟ್ಟು ಕೊನೆಯಪಕ್ಷ ಗದ್ದುಗೆಯ ಸಿದ್ಧಿಗಾಗಿಯಾದರೂ ಅವರು ಬದಲಾಗಬೇಕು. ಯಾಕೆಂದರೆ, ಡಿಕೆಶಿಯವರು ಅಧಿಕಾರ ರಾಜಕೀಯದಲ್ಲಿ ಪಳಗಿದವರು, ನಿಸ್ಸೀಮರು.
ತನ್ನ ೨೫ನೆಯ ವಯಸ್ಸಿನಲ್ಲಿ ದೇವೇಗೌಡರ ವಿರುದ್ಧವೇ ಸಾತನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರೂ ಅದೇ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಡಿ.ಕೆ.ಶಿವಕುಮಾರ್ ೧೯೮೯ರ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ದೇವೇಗೌಡರ ವಿರುದ್ಧ ಸೋತರೂ ಬೆಂಗಳೂರಿಗೆ ಹೊಂದಿಕೊಂಡಂತೆ ಗ್ರಾಮಾಂತರ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನೂ ಸರಿಹೊತ್ತಿನವರೆಗೂ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ತಳಮಟ್ಟದಿಂದ ಬೆಳೆದು ಬಂದಿರುವ ಶಿವಕುಮಾರ್ ಪಕ್ಷವನ್ನು ಬೆಳೆಸಿದರು. ತಾನೂ ಬೆಳೆದರು. ಅಧಿವೇಶನದಲ್ಲಿ ಅಶೋಕ ಅವರ ಮಾತಿಗೆ ಪ್ರತಿಕ್ರಿಯಿಸುವಾಗ, ನಮಸ್ತೆ ಸದಾ ವತ್ಸಲೇ ಮಾತೃಭೂಮಿ…(ಇದು ಭೂಮಿಯನ್ನು ತಾಯಿ ಎಂದು ಅಂದರೆ ಭಾರತಮಾತೆಯನ್ನು ಪ್ರಾರ್ಥಿಸುವ ಪ್ರಾರ್ಥನೆಯೇ ಹೊರತು ಆರೆಸ್ಸೆಸ್ ಅನ್ನು ಪ್ರಾರ್ಥಿಸುವ ಪ್ರಾರ್ಥನೆಯಲ್ಲ) ಎಂದು ಲಯಬದ್ಧವಾಗೇ ಹೇಳಿದ ಡಿಕೆಶಿವಕುಮಾರ್, ನಾನು ಧರ್ಮವನ್ನು ಬಿಟ್ಟರೂ ಧರ್ಮ ನನ್ನ ಬಿಡುವುದಿಲ್ಲ. ಜನ್ಮತಃ ನಾನು ಹಿಂದೂ…ಇದೆಲ್ಲ ನನ್ನ ವೈಯಕ್ತಿಕ ಇಚ್ಛೆ. ಇದನ್ನು ಯಾರೂ ತಡೆಯಲಾಗದು. ಮಾನವಧರ್ಮವೇ ಶ್ರೇಷ್ಠ ಎಂದು ರಾಜಾರೋಷವಾಗಿ ಮಾತಾಡಿದ್ದು ಕಾಂಗ್ರೆಸ್ಸಿನ ಅಧಿಕಾರ ರಾಜಕೀಯದ ಜಾಯಮಾನಕ್ಕೆ ವಿರುದ್ಧವಾಗೇ ಕಾಣುತ್ತದೆ. ಆಮೇಲೆ ಕ್ಷಮೆಯನ್ನು ಕೇಳಲು ನಾನು ಸಿದ್ಧ ಅಂತ ಹೇಳಿದ್ದು ಕೂಡ ರಾಜಕೀಯದ ಒಳಪಟ್ಟೇ ಆಗಿದೆ.
ದೇವರು ಧರ್ಮ ಮತ ಸಿದ್ಧಾಂತಗಳ ಬಗ್ಗೆ ಡಿಕೆಶಿಯವರಲ್ಲಿ ಎಷ್ಟರಮಟ್ಟಿಗೆ ಯಾವ ಭಾವ ಇದೆ ಅಂತ ಪಕ್ಷಕ್ಕೆ ಗೊತ್ತಿರುವ ವಿಷಯವೇ ಆಗಿದೆ. ಅದೇನು ಹೊಸ ವಿಷಯವಲ್ಲ. ಅದನ್ನು ಮತ್ತೆಮತ್ತೆ ಅವರು ಅಭಿವ್ಯಕ್ತಿಸಬೇಕು ಅಂತೇನಿಲ್ಲ. ಮತ್ತು ಅದನ್ನು ನೋಡಿ ಅವರು ಹೀಗೆ ಅಂತ ಅರ್ಥೈಸುವುದು, ನಿರ್ಧರಿಸುವುದು ತಪ್ಪು. ಆಫ್ ಕೋರ್ಸ್ ಅದು ಕೂಡ ಒಂಥರಾ ರಾಜಕೀಯವೇ!
ಮುಸ್ಲಿಮರನ್ನು ಸದಾ ತುಷ್ಟೀಕರಣಗೊಳಿಸುವ ಕಾಂಗ್ರೆಸ್ಸಿನ ಜಾಯಮಾನವನ್ನು ಮೈಗೂಡಿಸಿಕೊಳ್ಳದೆ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ಕಪಾಲಿ ಬೆಟ್ಟ ನಾಮಕರಣ, ಮುಸ್ಲಿಮರು ನನ್ನ ಅಣ್ಣತಮ್ಮಂದಿರು ಎಂಬ ಹೇಳಿಕೆ- ಇಂಥವುಗಳೆಲ್ಲ ತನ್ನ ರಾಜಕೀಯ ಮತ್ತು ಸಾರ್ವಜನಿಕ ಜೀವನಕ್ಕೆ ಎರವಾಗುವುದರ ಬದಲು ಮುಳ್ಳಾಗುತ್ತದೆ ಎಂಬ ಅರಿವು ಡಿಕೆಶಿಗಿಲ್ಲ ಎಂದು ಭಾವಿಸಿದರೆ ಶುದ್ಧ ಪೆದ್ದುತನವಾದೀತು. ಆದರೂ ಬಿಜೆಪಿಯ ಮೇಲಿನ ವ್ಯಂಜನಕ್ಕೋಸ್ಕರ, ಅಧಿಕಾರ ರಾಜಕೀಯದ ತೆವಲಿಗಾಗಿ ಅಂಥ ಹೇಳಿಕೆಗಳನ್ನು ಕೊಡುವುದು ಮಾತ್ರ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತದೆಂಬ ಅರಿವು ತಕ್ಷಣಕ್ಕೆ ಯಾರಲ್ಲೂ ಹುಟ್ಟಲಾರದು. ಡಿಕೆಶಿ ಇದಕ್ಕೆ ಹೊರತಾಗಿಲ್ಲ ಎಂಬುದು ಸ್ಪಷ್ಟ. ಹಿಂದುತ್ವದೊಲವು ಡಿಕೆಶಿಯವರಲ್ಲಿ ಢಾಳವಾಗಿಯೇ ಇದೆ. ಅದನ್ನು ಮತ್ತಷ್ಟು ಬಲಪಡಿಸಿಕೊಂಡು ಗಮ್ಯದತ್ತ ದೃಷ್ಟಿ ನೆಟ್ಟರೆ ಸವೆಸಿದ್ದು ಸಿದ್ಧಿಯಾದೀತು! ಆಫ್ ಕೋರ್ಸ್ ಸಿದ್ಧಿಯಾಗಲಿ.
ಕೊನೆಯ ಮಾತು: ತಾನೊಬ್ಬ ಫ್ಯಾಷನೇಟ್ ಪೊಲಿಟಿಷಿಯನ್ ಎಂದು ಕರೆದುಕೊಳ್ಳುವ ಮೂಲಕ ಆಕರ್ಷಣೀಯ ಬಾಹ್ಯಚರ್ಯೆಯನ್ನು ಹೊಂದಿರುವ ಡಿ.ಕೆ.ಶಿವಕುಮಾರ್ ಬಹುಕಾಲದಿಂದ ಪಕ್ಷಕ್ಕೆ ಸವೆಸಿದ್ದಷ್ಟು ಯಾರೂ ಸವೆಸಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ಮಾತ್ರ ಪ್ರಧಾನವಾಗಿ ಗ್ರಹಿಸಿ ಅರ್ಹತೆಯ ಮಾನದಂಡವನ್ನಾಗಿಸಿದ್ದರೆ ಅವರು ಈವರೆಗೆ ಸವೆಸಿದ್ದಷ್ಟೂ ಸಿದ್ಧಿಯಾಗಿರುತ್ತಿತ್ತು! ಅಥವಾ ಸಿದ್ಧಿಯಾಗಿರಬೇಕಿತ್ತು! ಆಫ್ ಕೋರ್ಸ್ ಅಂಥ ಸಿದ್ಧಿ ಅವರಿಗೆ ಸಿದ್ಧಿಸಬೇಕಿತ್ತು. ಮಾತು ಕೊಟ್ಟು ತಪ್ಪದ, ಉರುಳಬೇಕಾದಲ್ಲಿ ಉರುಳುವ ಬಂಡೆಯಾಗಿಯೂ, ನಿಲ್ಲಬೇಕಾದಲ್ಲಿ ಸೆಟೆಯುವ ಬಂಡೆಯಾಗಿಯೂ ಬದಲಾಗಬೇಕು ಈ ಕನಕಪುರದ ಬಂಡೆ! ಆಗ, ಸವೆಸಿದ್ದು ಸಿದ್ಧಿಯಾಗುತ್ತದೆ! ಆಫ್ ಕೋರ್ಸ್ ಆಗುತ್ತದೆ. ಆಗಲೇಬೇಕು!
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

