ಬತ್ತ ಸ್ವಕೀಯ ಪರಾಗಸ್ಪರ್ಶದ ಒಂದು ಏಕದಳ ಸಸ್ಯ. ಅಪರೂಪದಲ್ಲಿ ಕೆಲವೊಮ್ಮೆ ಪರಕೀಯ ಪರಾಗಸ್ಪರ್ಶವಾದರೂ ಇದು ಬಹಳ ವಿರಳ. ಹೆಚ್ಚು ಸ್ವಕೀಯ ಪರಾಗಸ್ಪರ್ಶದ ಸಸ್ಯಗಳಲ್ಲಿ ವಿವಿಧತೆ ಕಡಿಮೆ ಇರುತ್ತದೆ ಎಂದು ಸಸ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಬತ್ತದ ತಳಿಗಳಲ್ಲಿ ವಿವಿಧತೆ ಕಡಿಮೆ ಇರಬೇಕಿತ್ತು. ಆದರೆ ಜನರ ಹಸಿವನ್ನು ನೀಗಿಸುವ ಹೊಣೆ ಹೊತ್ತ ಬತ್ತ ಈ ಸಿದ್ಧಾಂತವನ್ನು ಸುಳ್ಳು ಮಾಡಿತು. ಭಾರತದಲ್ಲಿಯೇ ಸುಮಾರು ಎರಡು ಲಕ್ಷದಷ್ಟು ದೇಶಿ ಬತ್ತದ ತಳಿಗಳು ಇದ್ದವೆಂದು ಅಧ್ಯಯನಗಳು ಹೇಳುತ್ತದೆ.
ಕಟ್ಮಂಡೆ : ಹಿಂದೆ ತುಳುನಾಡಿನಲ್ಲಿ ಕಟ್ಮಂಡೆ ಎಂಬ ವಿಶಿಷ್ಟ ಬತ್ತದ ತಳಿ ಇತ್ತು. ಏಣೆಲ್ ಬೆಳೆ ಬೆಳೆಯುವಾಗ ಕಾಯಮೆ ಬೀಜದ ಜೊತೆ ಈ ಕಟ್ಮಂಡೆ ಬೀಜವನ್ನು ಸಮಪ್ರಮಾಣದಲ್ಲಿ ಬೆರೆಸಿ ನೇಜಿ ಹಾಕಬೇಕು.ನೇಜಿ ನೆಡುವಾಗ ಎಂಟತ್ತು ಸಸಿಗಳ ಹಿಡಿ ಮಾಡಿ ನಾಟಿ ಮಾಡಬೇಕು. ಕಾಯಮೆ ಬೇಗ ತೆನೆ ಬಿಡುತ್ತದೆ ಕಟ್ಮಂಡೆ ತೆನೆ ಬಿಡದಿದ್ದರೂ, ತೆನೆ ಬಿಟ್ಟು ಹಸಿಯಾಗಿದ್ದರೂ ಕಾಯಮೆಯ ಒಟ್ಟಿಗೆ ಇದನ್ನೂ ಕೊಯ್ಯಬೇಕು. ಆಮೇಲೆ ಗದ್ದೆಗೆ ಹಲಗೆ ಮಾತ್ರ ಹಾಕಿದರೆ ಸಾಕು ಆಗ ಕಟ್ಮಂಡೆ ಚಿಗುರೊಡೆದು ಸುಗ್ಗಿಯ ಕಾಲಕ್ಕೆ ತೆನೆ ಬಿಡುತ್ತದೆ. ಹೀಗೆ ಕಟ್ಮಂಡೆ ಉತ್ತುವ, ಬಿತ್ತುವ ಶ್ರಮ ಇಲ್ಲದೆ ಕೃಷಿಕರಿಗೆ ಸುಗ್ಗಿಯ ಫಸಲು ನೀಡುತ್ತದೆ.
ಬತ್ತದ ಒಂದು ಜನಪದ ಕಥೆ.
ಆ ಕಾಲಸತ್ಯದ ಕಾಲ ಆಗ ಭೂಮಿ ತಾಯಿ ತುಂಬಾ ಕರುಣಾಮಯಿಯಾಗಿದ್ದಳು. ಮರಗಳೆಲ್ಲಾ ತುಂಬಾ ಎತ್ತರಕ್ಕೆ ಬೆಳೆಯುತ್ತಿದ್ದವು. ಹಣ್ಣುಗಳು ಹೆಚ್ಚು ರಸವತ್ತಾಗಿ ಸಿಹಿಯಾಗಿ ಇರುತ್ತಿದ್ದವು. ಹೂಗಳು ವರ್ಣರಂಜಿತಾವಾಗಿ ಅತ್ಯಂತ ಪರಿಮಳಯುಕ್ತವಾಗಿದ್ದವು.ಆಕಾಶ ಕಡು ನೀಲಿ ಬಣ್ಣದಿಂದಿತ್ತು. ಅನ್ನ ಜನರ ಮುಖ್ಯ ಆಹಾರವಾಗಿತ್ತು ಮತ್ತು ಜನರು ಸತ್ಯವಂತರಾಗಿದ್ದರು. ಜನರು ಯಾವುದಾದರೂ ಹಣ್ಣನ್ನು ತಿನ್ನಲು ಬಯಸಿದರೆ ಆ ಹಣ್ಣೇ ಜನರ ಬಳಿ ಬರುತ್ತಿತ್ತು. ಮಹಿಳೆಯರು ಯಾವುದಾದರೂ ಹೂವನ್ನು ಮುಡಿಯಲು ಆಸೆ ಪಟ್ಟರೆ ಆ ಹೂಗಳೇ ಮುಡಿಯೇರಲು ಹಾತೊರೆಯುತ್ತಿದ್ದವು. ಭತ್ತ ಆಗ ತುಂಬಾ ದೊಡ್ಡದಾಗಿ ಇರುತ್ತಿತ್ತು. ಒಬ್ಬ ಮನುಷ್ಯನಿಗೆ ಒಂದು ಹೊತ್ತು ಊಟ ಮಾಡಲು ಒಂದೇ ಭತ್ತದ ಒಂದೇ ಅಕ್ಕಿ ಸಾಕಾಗುತ್ತಿತ್ತು ಮತ್ತು ಭತ್ತ ಕಳಿತು ನೆಲದ ಮೇಲೆ ಬಿದ್ದ ಕೂಡಲೇ ಅದೇ ನೇರವಾಗಿ ಕಣಜಕ್ಕೆ ಬಂದು ತುಂಬಿಕೊಳ್ಳುತ್ತಿತ್ತು.
ಹೀಗಿರಲು ಒಂದು ವರ್ಷ ಒಳ್ಳೆ ಫಸಲು ಬಂದು ಸಮೃದ್ಧವಾಗಿ ಗಿಡದ ತುಂಬಾ ಭತ್ತ ಬೆಳೆಯಿತು. ಆ ಬೆಳೆ ನೋಡಿ ಒಬ್ಬ ದಾರಿಹೋಕ ಊರಿಗೆ ಬಂದು ಎಲ್ಲರಿಗೆ ಸುದ್ದಿ ಕೊಟ್ಟ ಈ ಸಲ ತುಂಬಾ ಬತ್ತ ಬೆಳೆದಿದೆ ನಮ್ಮ ಕಣಜಗಳು ಅದಕ್ಕೆ ಚಿಕ್ಕದಾಗಬಹುದು. ಆದ್ದರಿಂದ ನಾವು ಈಗ ಇದ್ದ ಕಣಜ ಕೆಡವಿ ದೊಡ್ಡ ಕಣಜ ಕಟ್ಟೋಣ ಎಂದ. ಜನರೂ ಒಪ್ಪಿದರು ಮತ್ತು ಕೆಲಸ ಪ್ರಾರಂಭಿಸಿದರು.
ಇತ್ತ ಜನರ ಕಣಜ ಕಟ್ಟುತ್ತಿದ್ದ ಕೆಲಸ ಮುಗಿದಿರಲಿಲ್ಲ. ಅತ್ತ ಬೆಳೆದ ಭತ್ತ ಬಿದ್ದು ಎಲ್ಲಾ ಕಣಜದತ್ತ ಬರಲು ಶುರುಮಾಡಿದವು. ಇದನ್ನು ನೋಡಿ ನರಮನುಷ್ಯನಿಗೆ ಸಿಟ್ಟು ಬಂತು. "ನಾವು ಕಷ್ಟ ಪಡುವುದು ಕಾಣಲ್ವ ನಿಮಗೆ ಇನ್ನೂ ಕಣಜ ಕಟ್ಟಿ ಆಗ್ಲಿಲ್ಲ ಇಷ್ಟು ಅವಸರ ಏನಿತ್ತು ನಿಮಗೆ ಇನ್ನೂ ಸ್ವಲ್ಪ ಸಮಯ ಗಿಡದಲ್ಲೇ ಇರಬಹುದಿತ್ತಲ್ಲ" ಎಂದು ಮುಂತಾಗಿ ಭತ್ತಕ್ಕೆ ಬೈಯತೊಡಗಿದರು. ಮತ್ತೆ ಕೆಲವರು ವಾಪಾಸ್ಸು ಹೋಗು ನಾವು ಕರೆಯುತ್ತೇವೆ ಆಗ ಬಾ ಎಂದು ಜರಿದರು.
ಭತ್ತಕ್ಕೆ ತುಂಬಾ ದುಃಖವಾಯಿತು. ಜನರ ಹೊಟ್ಟೆ ತುಂಬಿಸುವ ಸಲುವಾಗಿ ಕಣಜ ಸೇರಲು ಖುಷಿ ಖುಷಿಯಿಂದ ಬಂದಿದ್ದ ಅದಕ್ಕೆ ಜನರ ಮೂದಲಿಕೆ ಸಹಿಸಲಸಾಧ್ಯವಾಯಿತು. ಅದು ತನ್ನನ್ನು ತಾನೆ ಒಡೆದುಕೊಂಡು ನುಚ್ಚು ನೂರಾಯಿತು. ಅಂದಿನಿಂದ ಭತ್ತ ಧಾನ್ಯದ ಗಾತ್ರಕ್ಕೆ ಬಂತು. ಆಗ ಭೂಮಿ ತಾಯಿ ಪ್ರತ್ಯಕ್ಷಳಾಗಿ ಇನ್ನು ಮುಂದೆ ಭತ್ತವೂ ಸೇರಿದಂತೆ ಯಾವುದೇ ಧಾನ್ಯ ಕಾಳು ಹಣ್ಣು ಹಂಪಲು ಗೆಡ್ಡೆ ಗೆಣಸು ಕಾಯಿ ಪಲ್ಲೆ ಏನು ಬೇಕಾದರೂ ಮನುಷ್ಯನೇ ಕಷ್ಟ ಪಟ್ಟು ಬೆಳೆಯಬೇಕು ಮತ್ತು ಈಗ ಮಾಡಿದ ತಪ್ಪಿಗಾಗಿ ಮನುಷ್ಯ ಬೆಳೆ ಬರುವವರೆಗೆ ಕಾಯಬೇಕು ಮತ್ತು ಅದನ್ನು ತರಲು ಅವನೇ ಬೆಳೆ ಬೆಳೆದ ಕಡೆ ಹೋಗಬೇಕು ಎಂದು ಅಪ್ಪಣೆ ಕೊಟ್ಟಳು.
- ಸುರೇಶ್ ರಾಜ್ ಭಟ್ ಕೋಡು