ಶಕ್ತಿದೇವತೆಯ ಉಪಾಸನೆ- ನವರಾತ್ರಿ ಸಂಭ್ರಮ

Upayuktha
0


ನವರಾತ್ರಿಯು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯುತ್ತಾರೆ. ಪಶ್ಛಿಮ ಬಂಗಾಲದಲ್ಲಿ ಈ ಹಬ್ಬವನ್ನು ದುರ್ಗಾಪೂಜೆ ಎಂದು ಆಚರಿಸಲಾಗುತ್ತದೆ. ನವರಾತ್ರಿಯ ನವ ಅಂದರೆ ಒಂಬತ್ತು ದಿನ ಒಂಬತ್ತು ವಿವಿಧ ದೇವತಾ ರೂಪವನ್ನು ಆರಾಧಿಸುತ್ತೇವೆ. ಹತ್ತನೇಯ ದಿನ ವಿಜಯದಶಮಿ ಆ ದಿನ ಶಮೀವೃಕ್ಷ ಅಥವಾ ಬನ್ನೀಮರಕ್ಕೆ ಪೂಜೆ ಸಲ್ಲಿಸಿ ಆ ಬನ್ನಿಯನ್ನು ದೇವರಿಗೆ ಅರ್ಪಿಸಿ ಹಿರಿಯರಿಗೆ ಆತ್ಮೀಯರಿಗೆ ನೀಡಿ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರೆ ಆತ್ಮೀಯರು, ಬಂಧು, ಬಳಗ, ಸ್ನೇಹಿತರಿಗೆ ನೀಡಿ ಬನ್ನಿ ತೊಗೊಂಡು ಬಂಗಾರದಂಗ ಕೊನೆಯವರೆಗೂ ಇರೋಣವೆಂದು ಕೇಳುತ್ತೇವೆ. ಬನ್ನಿ ಎಲೆಗಳು ಬಂಗಾರದ ಸಮಾನ ಎನ್ನುವ ವಾಡಿಕೆ ನಮ್ಮಲ್ಲಿದೆ. ಇನ್ನೂ ಕೆಲವರು ಬನ್ನಿ ವೃಕ್ಷದಲ್ಲಿ ಗಣೇಶನಿರುತ್ತಾನೆ ಎಂದು ಪೂಜಿಸುವ ಪದ್ಧತಿ ಇಟ್ಟುಕೊಂಡಿದ್ದಾರೆ. ಇದೇ ಹಬ್ಬದಂದು ಮೈಸೂರಿನಲ್ಲಿ ಆನೆಯ ಮೇಲೆ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ. ಈ ಮೈಸೂರು ದಸರಾ ಉತ್ಸವ ಜಗತ್ಪ್ರಸಿದ್ಧಿ ಪಡೆದಿದೆ. ಈ ಹಬ್ಬ ಆಶ್ವೀಜ ಮಾಸ ಪಾಡ್ಯದಿಂದ ದಶಮಿಯವರೆಗೆ ನಡೆಯುತ್ತದೆ. ಆಂDಧ್ರಪ್ರದೇಶ, ಮಹಾರಾಷ್ಟ್ರದಲ್ಲೂ ವಿಜೃಂಭಣೆಯಿಂದ ಆಚರಿಸುತ್ತಾರೆ.



ವೈಶಿಷ್ಟ್ಯ- ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯವಾಗಿದೆ. 9 ದಿನಗಳ ಕಾಲ ಆಚರಿಸಿ ವಿಜಯೋತ್ಸವವನ್ನು ಆಚರಿಸುವ ಈ ಹಬ್ಬವನ್ನು ನವರಾತ್ರಿ, ದುರ್ಗೋತ್ಸವ ಎಂದು ಕರೆಯಲಾಗುತ್ತದೆ. 9 ದಿನ ಆದಿಶಕ್ತಿಯನ್ನು ನವವಿಧದಲ್ಲಿ ಪೂಜಿಸಲಾಗುತ್ತದೆ.


1. ಪಾಡ್ಯದಂದು ಯೋಗನಿದ್ರಾ ದುರ್ಗಾಪೂಜೆ.

2. ಬಿದಿಗೆಯಂದು ದೇವಜಾತ ದುರ್ಗಾಪೂಜೆ.

3. ತದಿಗೆಯಂದು ಮಹಿಷಾಸುರ ಮರ್ಧಿನಿ ದುರ್ಗಾಪೂಜೆ.

4. ಚತುರ್ದಶಿ ಶೈಲಜಾತಾ ದುರ್ಗಾಪೂಜೆ.

5. ಪಂಚಮಿ- ದೂರ್ಮಹಾ ದುರ್ಗಾಪೂಜಾ.

6. ಶಷ್ಟಿ- ಚಂಡಮುಂಡ ಹಾ ದುರ್ಗಾಪೂಜಾ.

7. ಸಪ್ತಮಿ- ರಕ್ತಬೀಜ ದುರ್ಗಾಪೂಜಾ.

8.ಅಷ್ಟಮಿ- ದುರ್ಗಾಷ್ಟಮಿ

9. ಮಹಾನವಮಿ- ಶುಂಬ ಹಾ ದುರ್ಗಾಪೂಜಾ.


ಸಪ್ತಮಿಯಿಂದ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ ಪವಿತ್ರಗ್ರಂಥಗಳನ್ನು ಚಿನ್ನ, ಬೆಳ್ಳಿ ಇಟ್ಟು ಪೂಜೆ ಮಾಡಲಾಗುತ್ತದೆ. ನವಮಿಯಂದು ಆಯುಧ ಪೂಜೆ, ದುರ್ಗಾಷ್ಟಮಿಯಂದು ದುರ್ಗೆಯ ಪೂಜೆ ಮಾಡಲಾಗುತ್ತದೆ.


ಪುರಾಣಗಳಲ್ಲಿ ನವರಾತ್ರಿ- ದುರ್ಗೆಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿ ಒಂಬತ್ತು ದಿನಕ್ಕೆ ಸೀಮಿತವಾಗಿದ್ದರೂ ಹತ್ತನೇಯ ದಿನ ದಶಮಿಯಂದು ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ದಿನವೆಂದೂ, ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ್ದು ವಿಜಯದಶಮಿಯೆಂದು, ಪಾಂಡವರು ಅಜ್ಞಾತವಾಸದಲ್ಲಿ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟು ದಶಮಿಯ ದಿನ ಬನ್ನಿಗಿಡದಲ್ಲಿ ಇಟ್ಟ ಆಯುಧದೊಂದಿಗೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ವಿರುದ್ಧ ವಿಜಯ ಸಾಧಿಸಿದ್ದರು ಎಂದು ಹೇಳುತ್ತಾರೆ. ಹೀಗಾಗಿ ವಿಜಯವನ್ನು ಸಾಧಿಸಿದ ವಿಜಯದಶಮಿಯಂದು ಕರೆದು ಆಚರಿಸುವ ಪದ್ಧತಿ ರೂಢಿಯಲ್ಲಿದೆ.


ದಸರಾ ಶಬ್ದದ ಉತ್ಪತ್ತಿ- ದಸರಾ ಎನ್ನುವ ಶಬ್ದ ದಶಹರಾ ಎಂದೂ ಇದೆ. ದಸರಾದ ಮೊದಲ ಒಂಬತ್ತು ದಿನಗಳೂ ಎಲ್ಲ ದಿಕ್ಕುಗಳೂ ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ. ಎಲ್ಲ ದಿಕ್ಕುಗಳಿಂದಲೂ ವಿಜಯ ದೊರಕಿರುತ್ತದೆ.


ಆಯುಧ ಪೂಜೆ- ಮೊದಲು ರಾಜರು, ಸಾವಂತರು, ಸರದಾರರು ತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ ಸಂಭ್ರಮದಿಂದ ಪೂಜಿಸುತ್ತಿದ್ದರು. ಈಗ ರೈತಾಪಿ ಜನ,ಉಳಿದ ಜನ ತಾವು ಉಪಯೋಗಿಸುವ ವಾಹನಗಳು, ಮನೆಯಲ್ಲಿಯ ಗೃಹೋಪಯೋಗಿ ವಸ್ತುಗಳನ್ನು ಪೂಜಿಸುವ ಪದ್ಧತಿಯಲ್ಲದೇ, ತಾವು ಕೆಲಸ ಮಾಡುವ ಕಾರ್ಯಾಲಯದಲ್ಲಿ ಅಲ್ಲಿಯ ವಸ್ತುಗಳನ್ನು ಪೂಜಿಸಿ ಆರಾಧಿಸುವ ವಾಡಿಕೆ ನಮ್ಮಲ್ಲಿ ಬೆಳೆದು ಬಂದಿದೆ. ನವರಾತ್ರಿಯ ಒಂಬತ್ತು ದಿನ ಶಕ್ತಿಯ ಉಪಾಸನೆ ಮಾಡಿ ದಶಮಿಯಂದು ವಿಜಯೋತ್ಸವ ಆಚರಿಸಬೇಕು. ಇದನ್ನೇ ದಸರಾ, ವಿಜಯದಶಮಿ, ನವರಾತ್ರಿ ಎಂದು ಕರೆಯುತ್ತಾರೆ.


ನವರಾತ್ರಿ ವೃತ ಆಚರಿಸುವ ಪದ್ಧತಿ- ಅಖಂಡ ಎಣ್ಣೆ, ತುಪ್ಪದ ದೀಪದ ಪ್ರಜ್ವಲನೆ, ಒಂಬತ್ತು ದಿನಗಳವರೆಗೆ ಸತತ ದೀಪ ಇಡುವುದು, ದೇವಿ ಮಹಾತ್ಮೆ, ವೆಂಕಟೇಶ್ವರ ಮಹಾತ್ಮೆ ಸಪ್ತಶತಿಪಾಠ, ದೇವಿಭಾಗವತ, ಲಲಿತಾ ಪೂಜೆ, ಕುಂಕುಮಾರ್ಚನೆ, ಸರಸ್ವತಿಪೂಜೆ, ಅವರವರ ಶಕ್ತಾನುಸಾರ ನವರಾತ್ರಿ ಮಹೋತ್ಸವ ಆಚರಿಸುತ್ತಾರೆ.


ನವರಾತ್ರಿ ಆಚರಣೆಯ ಫಲ- ದೇವಿಯ ಉಪಾಸನೆ, ಶ್ರದ್ಧೆಯಿಂದ ಮಾಡಿದರೆ ದೇವಿತತ್ವದ ಲಾಭವಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನಗಳಂದು ತಮೋಗುಣ ಕಡಿಮೆ ಮಾಡಲು ತಮೋಗುಣಿಯ ಮಹಾಕಾಳಿಯನ್ನು ನಂತರದ ಮೂರುದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರಮಾಡಲು ಸತ್ವಗುಣಿ ಮಹಾಸರಸ್ವತಿಯ ಪೂಜೆ ಮಾಡುತ್ತಾರೆ.


ಎಲ್ಲ ದೇವಸ್ಥಾನಗಳಲ್ಲಿ ಒಂದೊಂದು ದಿನ ಒಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಈ ವರ್ಷವೂ ಸಂಭ್ರಮದಿಂದ ನವರಾತ್ರಿ ಆಚರಿಸಿ ಭಕ್ತಿಪೂರ್ವಕ ನಮಸ್ಕರಿಸಿ ಬನ್ನಿಯನ್ನು ವಿಜಯದಶಮಿಯಂದು ದೇವರಿಗೆ ಬಂಗಾರವೆಂದು ಅರ್ಪಿಸಿ ಹಿರಿಯರ, ಆತ್ಮೀಯರ ಆಶೀರ್ವಾದ ಬೇಡೋಣ. ನಾಡಿನ ಜನತೆಗೆ ನವರಾತ್ರಿಯ ಶುಭಾಶಯಗಳು.




- ಗಿರಿಜಾ.ಎಸ್.ದೇಶಪಾಂಡೆ, ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top